
ಪಾರ್ವತಮ್ಮ ರಾಜ್‌ಕುಮಾರ್ ಅವರ ತಂಗಿ ಮಗ ಸಂತೋಷ್ ಕುಮಾರ್ ಮತ್ತೊಂದು ಚಿತ್ರದೊಂದಿಗೆ ಮರಳಿದ್ದಾರೆ. ಈ ಹಿಂದೆ ಸ್ಟೂಡೆಂಟ್ಸ್, ಬಿಂದಾಸ್ ಗೂಗ್ಲಿ ಎಂಬ ಯುವ ಕಥನಗಳನ್ನು ಚಿತ್ರವಾಗಿಸಿದ್ದ ಸಂತೋಷ್, ಇದೀಗ ಹಾರರ್ ಥ್ರಿಲ್ಲರ್ ಕಥಾನಕದೊಂದಿಗೆ ಬರಲು ತಯಾರಾಗಿದ್ದಾರೆ.
ಸಂತೋಷ್ ಕುಮಾರ್ ಅವರ ಹೊಸಾ ಚಿತ್ರಕ್ಕೆ ‘ಮೃತ್ಯುಲಿಪಿ ಪುರಾಣಂ’ ಎಂಬ ಶೀರ್ಷಿಕೆಯೂ ಫೈನಲ್ ಆಗಿದೆ. ಈ ಚಿತ್ರವನ್ನು ಅದ್ದೂರಿಯಾಗಿಯೇ ತಯಾರಿಸಲು ರೆಡಿಯಾಗಿರೋ ಅವರು, ಏಕಕಾಲದಲ್ಲಿಯೇ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿಯೂ ಈ ಚಿತ್ರವನ್ನು ರೂಪಿಸಲಿದ್ದಾರೆ. ದಕ್ಷಿಣ ಭರತೀಯ ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿರೋ ತಂತ್ರಜ್ಞರೇ ಈ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ. ನಟ ನಟಿಯರೂ ಕೂಡಾ ಬಾಲಿವುಡ್‌ನವರೇ ಆಗಿರಲಿದ್ದಾರೆಂಬುದು ವಿಶೇಷ. ಇದೀಗ ಬಾಲಿವುಡ್‌ನ ಕೆಲ ಖ್ಯಾತ ನಟರಿಗೆ ಕಥೆ ಹೇಳೋ ಕಾರ್ಯ ಚಾಲ್ತಿಯಲ್ಲಿದೆ.

ಹೆಸರಲ್ಲಿಯೇ ನಿಗೂಢವಾದುದೇನನ್ನೋ ಅಡಕವಾಗಿಸಿಕೊಂಡಿರುವ ಮೃತ್ಯು ಲಿಪಿ ಪುರಾಣಂ ಅದಕ್ಕೆ ತಕ್ಕುದಾದಂಥಾ ಕಥೆ ಹೊಂದಿದೆಯಂತೆ. ಇದೊಂದು ಮೀಡಿಯಾ ಬೇಸ್ಡ್ ಚಿತ್ರ. ಇಡೀ ವಿಶ್ವವನ್ನೇ ಬೆಕ್ಕಸ ಬೆರಗಾಗಿಸಿರುವ ಬರ್ಮುಡಾ ಟ್ರಯಾಂಗಲ್ ಇದೆಯಲ್ಲಾ? ಅದರಿಂದ ಸ್ಫೂರ್ತಿ ಪಡೆದೇ ಈ ಕಥೆ ರಚಿಸಲಾಗಿದೆಯಂತೆ. ಮೀಡಿಯಾದಲ್ಲಿ ಕೆಲಸ ಮಾಡೋ ಹುಡುಗರಿಗೆ ವಿಚಿತ್ರ ಪ್ರದೇಸವೊಂದಕ್ಕೆ ತೆರಳಿ ವರದಿ ಮಾಡೋ ಅಸೈನ್‌ಮೆಂಟ್ ಸಿಗುತ್ತೆ. ಅದು ಭಯಾನಕ ಪ್ರದೇಶ. ಅಲ್ಲಿ ಹೋಗಿ ವಾಪಾಸು ಬಂದವರೇ ಇಲ್ಲ. ಇಂಥಾ ಪ್ರದೇಶಕ್ಕೆ ಮೀಡಿಯಾ ಹುಡುಗರು ಭೇಟಿ ನೀಡಿದಾಗ ಅದರ ಸುತ್ತ ತೆರೆದುಕೊಳ್ಳೋ ಹಾರರ್ ಥ್ರಿಲ್ಲರ್ರ ಕಥೆಯನ್ನು ಈ ಚಿತ್ರ ಹೊಂದಿದೆ.
ವಿನು ಮನಸು ಸಂಗೀತ, ರಾಜಾ ಶಿವಶಂಕರ್ ಛಾಯಾಗ್ರಹಣ, ಲಕ್ಕಿ ಜಾಫರ್ ವಿನ್ಯಾಸ ಈ ಚಿತ್ರಕ್ಕಿರಲಿದೆ. ಏಕಕಾಲದಲ್ಲಿಯೇ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಲಿರೋ ಈ ಚಿತ್ರವನ್ನು ವಿಶ್ವಾಧ್ಯಂತ ಬಿಡುಗಡೆ ಮಾಡುವ ಮಹತ್ವಾಕಾಂಕ್ಷೆ ಸಂತೋಷ್‌ರದ್ದು.
#












































