ಹೊಂದಿಸಿಕೊಂಡರಷ್ಟೇ ಬದುಕು!

Picture of Cinibuzz

Cinibuzz

Bureau Report

ತುಂಬಾ ಜನರ ಲೈಫ್‌ ಹೀಗೇ ಅನ್ಸುತ್ತೆ… ನಮ್ಮನ್ನು ಯಾರೋ ಇಷ್ಟ ಪಡ್ತಾರೆ. ನಾವ್‌ ಯಾರನ್ನೋ ಇಷ್ಟ ಪಡ್ತೀವಿ. ಆದ್ರೆ, ಕೊನೆಗೆ ಇನ್ಯಾರನ್ನೋ ಮದುವೆಯಾಗ್ತೀವಿ.

  • ಇದು ʻಹೊಂದಿಸಿ ಬರೆಯಿರಿʼ ಸಿನಿಮಾದ ಮನಸಿಗತ್ತಿರವಾಗುವ ಮಾತು.

ಇನ್ನು ಎಷ್ಟೋ ಸಲ ಹೀಗೂ ಆಗತ್ತೆ. ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ಆಜನ್ಮ ಶತ್ರುಗಳಂತಾಡಲು ಶುರು ಮಾಡುತ್ತಾರೆ. ಮುಖ ನೋಡಿದರೂ ಉರಿದುರಿದು ಬೀಳುತ್ತಾರೆ. ಕೆಟ್ಟ ರೀತಿಯಲ್ಲಿ ಕಿತ್ತಾಡಿಕೊಂಡು ಬಿಟ್ಟು ನಡೆಯುವ ತೀರ್ಮಾನಕ್ಕೆ ಬರುತ್ತಾರೆ.

ಮತ್ತೊಂದು ವರ್ಗವಿರುತ್ತದೆ. ಈ ಜೀವಮಾನದಲ್ಲಿ ಯಾರೂ ತಮಗೆ ಹೊಂದಿಕೊಳ್ಳೋದೇ ಇಲ್ಲವಾ? ಅಥವಾ ನಾವೇ ಯಾರಿಗೂ ಸರಿಬರುತ್ತಿಲ್ಲವಾ? ಎನ್ನುವ ಗೊಂದಲದಲ್ಲೇ ದಿನಗಳನ್ನು ನೂಕಿಬಿಡುತ್ತಾರೆ.

ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ…

ಒಟ್ಟಾರೆ ಯಾವುದೂ ಇಲ್ಲಿ ಅಂದುಕೊಂಡಂತೇ ನಡೆದುಬಿಡೋದಿಲ್ಲ. ಹೀಗೇ ನಡೆಯುತ್ತದೆ ಅಂತಾ ಯಾರೂ ಅಂದಾಜಿಸಲೂ ಆಗುವುದಿಲ್ಲ. ಇಲ್ಲಿ ಒಬ್ಬೊಬ್ಬರ ಲೈಫೂ  ಒಂದೊಂದು ಡಿಸೈನು. ಬದುಕನ್ನು ಬಂದಂತೆ ಸ್ವೀಕರಿಸುತ್ತಾ, ಪ್ರತೀ ದಿನ, ಕ್ಷಣಗಳನ್ನು ಹೊಂದಿಸಿಕೊಂಡು ಹೋಗಬೇಕಷ್ಟೇ…

ಈ ಎಲ್ಲಾ ವಿವರಗಳನ್ನೂ ಒಂದೇ ಹಿಡಿಯಲ್ಲಿಡಿದು ಕೊಟ್ಟಿರುವ ಸಿನಿಮಾ ʻಹೊಂದಿಸಿ ಬರೆಯಿರಿʼ.!

ತೀರಾ ಹೊಸದೇನಲ್ಲ. ಕಾಲೇಜು, ನಾಲ್ಕು ಜನ ಹುಡುಗರು. ಅಲ್ಲೇ ಜೊತೆಯಾಗುವ ಹುಡುಗಿಯರು, ಅವರ ಚೇಷ್ಟೆ, ತಮಾಷೆ, ಲವ್ವು, ಬ್ರೇಕಪ್ಪು, ಬಡಿದಾಟ, ಸೂಸೈಡು… ಇವೇ ಎಲಿಮೆಂಟುಗಳು. ಆದರೆ ಅದನ್ನು ಪೋಣಿಸಿರುವ ರೀತಿ ಮಾತ್ರ ಬ್ಯೂಟಿಫುಲ್. ಫಸ್ಟ್‌ ಹಾಫಲ್ಲಿ ಕಾಲೇಜಿನ ಒಳಗೇ ಸುತ್ತಿಸಿ ಎರಡನೇ ಭಾಗದಲ್ಲಿ ಭಾವನೆಗಳ ಜಗತ್ತಿನಲ್ಲಿ ಜರ್ನಿ ಮಾಡಿಸುತ್ತದೆ.

ನಟನೆ ಅಂತಲೇ ಗೊತ್ತಾಗದಂತೆ ನೋಡುಗರನ್ನು ಯಾಮಾರಿಸುವ ಮೂವರು ಹುಡುಗರು ಸಿನಿಮಾದ ಜೀವಾಳ. ಪ್ರವೀಣ್‌ ತೇಜ್‌, ನವೀನ್‌ ಶಂಕರ್‌ ಮತ್ತು ಶ್ರೀ ಮಹದೇವ್‌. ಭವಿಷ್ಯದಲ್ಲಿ ಕನ್ನಡದ ಕೀರ್ತಿ ಹೆಚ್ಚಿಸಲಿರುವ ಈ ಮೂವರನ್ನೂ ಹಿಡಿದು ಒಂದೇ ಬುಟ್ಟಿಯಲ್ಲಿ ಕೂರಿಸಿರುವ ನಿರ್ದೇಶಕನ ಹೆಸರು ರಾಮೇನಹಳ್ಳಿ ಜಗನ್ನಾಥ. ಎಲ್ಲದರ ಜೊತೆಗೆ ಅನಿರುದ್ದ್‌ ಆಚಾರ್ಯ ಎನ್ನುವ ಹೊಸ ಫೇಸು ಆ ಪಾಟಿ ನಗಿಸುತ್ತೆ. ಐಶಾನಿ, ಅರ್ಚನಾ ಜೋಯಿಸ್‌, ಸಂಯುಕ್ತಾ ಮತ್ತು ಭಾವನಾ ಕೂಡಾ ಸಿನಿಮಾದ ಶಕ್ತಿ ಹೆಚ್ಚಿಸುವಲ್ಲಿ ಸಮತೂಕದ ಪ್ರಯತ್ನ ಹಾಕಿದ್ದಾರೆ. ನಾಲ್ಕೂ ಜನರ ಪಾತ್ರಗಳು ಕಾಡುತ್ತವೆ.

 ಧ್ಯಾನಸ್ಥ ಮನಸ್ಥಿತಿಯಲ್ಲಿ ಸಿನಿಮಾ ಕಟ್ಟುವವರು ಮಾತ್ರ ರೂಪಿಸಬಹುದಾದ ಚಿತ್ರ ʻಹೊಂದಿಸಿ ಬರೆಯಿರಿʼ. ರಾಮೇನಹಳ್ಳಿ ಜಗನ್ನಾಥ ಅಂಥದ್ದೊಂದು ಶ್ರದ್ದೆಯನ್ನಿಲ್ಲಿ ಕ್ರಿಯಾಶೀಲತೆಯೊಂದಿಗೆ ಹೊಂದಿಸಿಕೊಂಡಿದ್ದಾರೆ. ಇಷ್ಟೊಂದು ಪಾತ್ರಗಳನ್ನು ಸೃಷ್ಟಿಸಿ, ಎಲ್ಲೂ ಕಥೆ ಅಲುಗಾಡದೆ, ಅಂದಗೆಡದಂತೆ ನಿಗಾ ವಹಿಸೋದು ಕಷ್ಟದ ಕೆಲಸ. ಆದರೆ ಜಗನ್ನಾಥ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನೆಮಾಟೋಗ್ರಫರ್‌ ಶಾಂತಿ ಸಾಗರ್‌ ಕಲಾತ್ಮಕ ದೃಷ್ಟಿ ʻಹೊಂದಿಸಿ ಬರೆಯಿರಿʼಯನ್ನು ಅತಿಚೆಂದಗೊಳಿಸಿದೆ. ಎಲ್ಲೂ ಅಬ್ಬರವಿಲ್ಲದ, ಗದ್ದಲ ಮಾಡದ ಹಿನ್ನೆಲೆ ಸಂಗೀತ ಸಿನಿಮಾದ ಪ್ರಾಣಬಿಂದುವಾಗಿದೆ.

ಇಂಥ ಸಿನಿಮಾಗಳು ಗೆಲ್ಲಬೇಕು. ಗೆಲ್ಲಿಸಲೇಬೇಕು. ಮರೆಯದೇ ನೋಡಿ..

ಇನ್ನಷ್ಟು ಓದಿರಿ

Scroll to Top