ರಾಕ್ ಸ್ಟಾರ್ ರೂಪೇಶ್ ಶೆಟ್ಟಿ `ಅಧಿಪತ್ರ’!

Picture of Cinibuzz

Cinibuzz

Bureau Report

ನಟ, ರಿಯಾಲಿಟಿ ಶೋ ಮೂಲಕ ಹೆಸರು ಮಾಡಿರುವ ರೂಪೇಶ್‌ ಶೆಟ್ಟಿ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಹೋದ ಸಲದ ಸೀಜನ್ನಿನ ಬಿಗ್‍ಬಾಸ್ ಶೋ ವಿನ್ನರ್ ರೂಪೇಶ್ ಶೆಟ್ಟಿ ನೆನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹೊತ್ತಿನಲ್ಲಿ ಅವರ ಸುತ್ತಲಿನವರೆಲ್ಲಾ ಸಂಭ್ರಮಿಸುವ ಸುದ್ದಿಯೊಂದು ಹೊರಬಿದ್ದಿದೆ. ಬಿಗ್ ಬಾಸ್ ಶೋ ಗೆದ್ದ ನಂತರದಲ್ಲಿ ರೂಪೇಶ್ ಶೆಟ್ಟಿಯ ಸಿನಿಮಾ ಕೆರಿಯರ್‌ ಏನಾಗಬಹುದು ಎನ್ನುವ ಕುತೂಹಲವಿತ್ತು. ಇತ್ತೀಚೆಗಷ್ಟೇ ʻಸರ್ಕಸ್‌ʼ ಎನ್ನುವ ತುಳು ಚಿತ್ರವೊಂದನ್ನು ನಿರ್ದೇಶನ ಮಾಡಿದ್ದ ರೂಪೇಶ್‌ ಈಗ ಕನ್ನಡದ ಸಿನಿಮಾವೊಂದರ ಟೈಟಲ್ ಅನಾವರಣಗೊಳಿಸಿದ್ದಾರೆ. ಅದಕ್ಕೆ `ಅಧಿಪತ್ರ’ ಎಂಬ ಹೊಸ ಬಗೆಯ ಹೆಸರಿಟ್ಟಿದ್ದಾರೆ.

ಚಿತ್ರಕ್ಕೆ ಇಟ್ಟ ಹೆಸರಿನಿಂದಲೇ ಕ್ರೇಜ್ ಕ್ರಿಯೇಟ್‌ ಮಾಡುವುದು ಮೊದಲಿನಿಂದಲೂ ಇರುವ ಟ್ರೆಂಡು. ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಕೂಡಾ ಅದೇ ಹಾದಿಯಲ್ಲಿದ್ದಂತಿದೆ. ಟೈಟಲ್ ಕೇಳಿದಾಕ್ಷಣವೇ ಅದರ ಅರ್ಥವೇನೆಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಅದೂ ಸೇರಿದಂತೆ ಬಹುತೇಕ ಅಂಶಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಅಂದಹಾಗೆ, ಈ ಚಿತ್ರ ಕೆ.ಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿದೆ. ಚಯನ್ ಶೆಟ್ಟಿ ಇದನ್ನ ನಿರ್ದೇಶನ ಮಾಡಲಿದ್ದಾರೆ. ಈ ಹೊತ್ತಿನಲ್ಲಿ ಚಿತ್ರತಂಡ ಇಷ್ಟÉೀ ಮಾಹಿತಿಯನ್ನು ಹಂಚಿಕೊಂಡಿದೆ. ಮಿಕ್ಕುಳಿದ ಕುತೂಹಲಕರ ವಿಚಾರಗಳು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರೇಕ್ಷಕರನ್ನು ಎದುರುಗೊಳ್ಳಲಿವೆ.‌

ತುಳು ಚಿತ್ರರಂಗದಲ್ಲಿ ನಾನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಾ, ನಟನಾಗಿ, ನಿರ್ದೇಶಕನಾಗಿ ನೆಲೆ ಕಂಡುಕೊಂಡಿದ್ದವರು ರೂಪೇಶ್ ಶೆಟ್ಟಿ. ಅಂಥಾ ಪರಿಶ್ರಮಗಳ ಫಲವೆಂಬಂತೆ ಬಿಗ್ ಬಾಸ್ ಶೋಗೆ ತೆರಳಿ, ವಿನ್ನರ್ ಆಗಿ ಹೊರಬಂದಿದ್ದೆಲ್ಲವೂ ಕಣ್ಣ ಮುಂದಿದೆ. ಹಾಗೆ ರೂಪೇಶ್ ಶೆಟ್ಟಿ ಆ ಶೋನಿಂದ ಹೊರ ಬರುತ್ತಲೇ ಕನ್ನಡ ಸಿನಿಮಾ ರಂಗದಲ್ಲಿ ನಾಯಕನಾಗಿ ಮಿಂಚುತ್ತಾರೆ ಎನ್ನುವ ಅಂದಾಜು ಸಿಕ್ಕಿತ್ತು. ಆದರೆ, ಸ್ವಲ್ಪ ತಡವಾದರೂ ಒಂದೊಳ್ಳೆ ಕಥೆಯೊಂದಿಗೆ, ಭಿನ್ನವಾದ ಪಾತ್ರದೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ರೂಪೇಶ್ ಶೆಟ್ಟಿ ತಯಾರಾಗಿದ್ದಾರೆ.

ಬಿಗ್ ಬಾಸ್‍ನಂಥಾ ದೊಡ್ಡ ರಿಯಾಲಿಟಿ ಶೋ ಗೆದ್ದರೂ ಕೂಡಾ ರೂಪೇಶ್ ಕನ್ನಡ ಸಿನಿಗಳನ್ನು ಒಪ್ಪಲು ಯಾಕೆ ತಡ ಮಾಡಿದರು? ಎನ್ನುವ ಪ್ರಶ್ನೆ ಅನೇಕರಲ್ಲಿದೆ.  ಅದಕ್ಕೆ ಉತ್ತರವೆನ್ನುವಂತೆ ನಿಲ್ಲುವುದು ಸರ್ಕಸ್ ಎಂಬ ತುಳು ಚಿತ್ರ. ಅದರ ನಿರ್ದೇಶನ, ನಿರ್ಮಾಣ ಸೇರಿದಂತೆ ನಾನಾ ಜವಾಬ್ದಾರಿ ಹೊತ್ತುಕೊಂಡಿದ್ದ ರೂಪೇಶ್ ಅದರತ್ತಲೇ ಪ್ರಧಾನವಾಗಿ ಗಮನ ಹರಿಸಿದ್ದರು. ಈ ಕಾರಣದಿಂದಲೇ ಬಿ ಬಾಸ್ ಮುಗಿದು ಅರ್ಧ ವರ್ಷ ಕಳೆದರೂ ಹೊಸಾ ಕನ್ನಡ ಚಿತ್ರ ಘೋಷಣೆ ತುಸು ವಿಳಂಬವಾಗಿತ್ತಷ್ಟೇ. ಇದೀಗ ಅವರು ನಾಯಕನಾಗಿ ನಟಿಸಲಿರುವ ಕನ್ನಡ ಸಿನಿಮಾ ಟೈಟಲ್ ಲಾಂಚ್ ಆಗುವ ಹೊತ್ತಿನಲ್ಲಿಯೇ, ರೂಪೇಶ್ ಶೆಟ್ಟಿ ದೊಡ್ಡ ಗೆಲುವೊಂದರ ಸಂಭ್ರಮದಲ್ಲಿದ್ದಾರೆ. ರೂಪೇಶ್ ನಿರ್ದೇಶನ ಮಾಡಿರುವ `ಸರ್ಕಸ್’ ಚಿತ್ರ ದೊಡ್ಡ ಮಟ್ಟದಲ್ಲಿಯೇ ಹಿಟ್ ಆಗಿದೆ.  ಈ ಚಿತ್ರ ವಿದೇಶಗಳಲ್ಲೂ ಅಪಾರ ಪ್ರದರ್ಶನ್‌ ಕಂಡು ದಾಖಲೆ ನಿರ್ಮಿಸಿದೆ. ನೂರೈವತ್ತಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೊಂಡ ತುಳುವಿನ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ ಆ ಚಿತ್ರಕ್ಕೆ ಸಿಕ್ಕಿದೆ. ಇನ್ನು `ಅಧಿಪತ್ರ’ ಚಿತ್ರದ ವಿಚಾರಕ್ಕೆ ಬರುವುದಾದರೆ, ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ.

ಜಯಸೂರ್ಯ, ಪಿ.ಆರ್.ಓ.

ಇನ್ನಷ್ಟು ಓದಿರಿ

Scroll to Top