ರಾಜಧಾನಿ ನಿರ್ದೇಶಕನ ಹೊಸ ಪಟಾಲಂ!

Picture of Cinibuzz

Cinibuzz

Bureau Report

ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಮಹಾಪ್ರಭುಗಳ ಸಂಭ್ರಮವಾದರೆ ಬೆಂಗಳೂರಲ್ಲಿ ಪಟಾಲಂ ಸಂಭ್ರಮ…

ಆ ದಿನ ಇಡೀ ಭಾರತೀಯರು ಸಂಭ್ರಮದಲ್ಲಿದ್ದರು. ಸುಮಾರು ವರ್ಷಗಳ ಸುಧೀರ್ಘ ಕಾಯುವಿಕೆಗೆ ಉತ್ತರ ಸಿಕ್ಕ ದಿನ. ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಮಹಾಪ್ರಭುಗಳಿಗೆ ಅಯೋಧ್ಯೆಯಲ್ಲಿ ಮಹಾ ಸಂಭ್ರಮವಾದರೆ, ಬೆಂಗಳೂರಲ್ಲೂ ಸಹ ಒಂದು ಸಂಭ್ರಮದ ವಾತಾವರಣ… ರಾಜಧಾನಿ ಎಂಬ ಚೆಂದದ ಸಿನಿಮಾವನ್ನು ನಿರ್ದೇಶನ ಮಾಡಿದ್ದ ರಘು  ಈಗ ಎಸ್ ಎಲ್ ಭೈರವ್ ಆಗಿ ಹೆಸರು ಬದಲಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ರಾಜಧಾನಿ ಚಿತ್ರವನ್ನು ನಿರ್ದೇಶನ ಮಾಡಿದ್ದ ರಘು ಜಯ ಆ ನಂತರ ಗೋಲಿ ಸೋಡಾ ಎಂಬ ರಿಮೇಕ್ ಚಿತ್ರವನ್ನೂ ರೂಪಿಸಿದ್ದರು.

ಈಗ ಇದೇ ರಘು ಜಯ  ಹೊಸ ಹುಡುಗರನ್ನು ಹಾಕಿಕೊಂಡು ಪಟಾಲಂ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.. ಕಳೆದ ಹದಿನೈದು ವರ್ಷಗಳಲ್ಲಿ ರಘು ಜಯ ನಿರ್ದೇಶನ ಮಾಡಿರುವುದು ಎರಡೇ ಚಿತ್ರವಾದರೂ  ಚಿತ್ರರಂಗದಲ್ಲಿ ಈ ವರೆಗೂ ಅವರ ಮೇಲಿರುವ ಭರವಸೆ ಮಾತ್ರ ಹಾಗೇ ಚಾಲ್ತಿಯಲ್ಲಿದೆ. ಪಟಾಲಂ ಮೂಲಕ ಈಗಿನ ಪೀಳಿಗೆಯಯವರ ಮನಸ್ಥಿತಿ ಹಾಗೂ ಇನ್ನಿತರ ವಿಷಯಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಮೊನ್ನೆ ದಿನ ಬೆಂಗಳೂರಿನ ನಾಗರಬಾವಿ ಬಳಿ ಇರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತವನ್ನು ಮಾಡಲಾಯಿತು. ಮುಹೂರ್ತದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ರಘು ಜಯ  ಚಿತ್ರೀಕರಣವನ್ನು ಫೆಬ್ರುವರಿ ಮೊದಲ ವಾರದಿಂದ ಶುರು ಮಾಡುವುದಾಗಿ ಹೇಳಿದ್ದಾರೆ.

ಅಕ್ಷಿತ ಕುಮಾರ್, ಮೈಕೋ ನಾಗರಾಜ್ ಮಗ ಕಾರ್ತಿಕ್, ಅಜಯ್, ಪೃಥ್ವಿ,ಸಾಯಿ, ಪ್ರಗತಿ ಮೊದಲಾದವರ ತಾರಾಗಣವಿದೆ. ರಾಜಧಾನಿ ಸಂದರ್ಭದಲ್ಲಿ ಕೂಡಾ ಬಹುತೇಕ ಹೊಸಬರನ್ನೇ ಆಯ್ಕೆ ಮಾಡಿಕೊಂಡು ಚಿತ್ರ ರೂಪಿಸಿದ್ದರು. ಆ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದ್ದವರೆಲ್ಲಾ ಈಗ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ತಲೆಯೆತ್ತಿ ನಿಂತಿದ್ದಾರೆ. ಈಗ ಪಟಾಲಂ ಕೂಡಾ ಹೊಸಬರಿಗಾಗಿಯೇ ರೂಪುಗೊಳ್ಳುತ್ತಿದೆ. ಯಾರಿಗೆ ಗೊತ್ತು? ಈ ಚಿತ್ರದ ಮೂಲಕ ಅರಳುತ್ತಿರುವ ಹುಡುಗರೆಲ್ಲಾ ಮುಂದೊಂದು ದಿನ ಸ್ಟಾರ್‌ಗಳಾಗಿ ಮಿಂಚಬಹುದು!

ಸದ್ಯ ಅಮರನಾರಾಯಣ ರಾಜು ಅವರು ಆರ್. ಜೆ. ಫಿಲಂ ಫ್ಯಾಕ್ಟರಿ ಅಡಿಯಲ್ಲಿ ಪಟಾಲಂ ಮೇಲೆ ನಂಬಿಕೆ ಇಟ್ಟು ಹಣ ಹೂಡಿಕೆ ಮಾಡುತ್ತಿದ್ದಾರೆ. ಪ್ರಾಮಾಣಿಕವಾದ ಪ್ರಯತ್ನಕ್ಕೆ ಯಾವತ್ತೂ ಒಳಿತೇ ಆಗುತ್ತದೆ. ಪಟಾಲಂ ನಿರ್ಮಾಪಕ-ನಿರ್ದೇಶಕರ ಕೈ ಹಿಡಿಯಲಿ…

ಇನ್ನಷ್ಟು ಓದಿರಿ

Scroll to Top