ಇದು ಬ್ಲೌಸ್‌ ಕೇಸ್!‌

Picture of Cinibuzz

Cinibuzz

Bureau Report

ಎಲ್ಲಿ ಕಂಡ ಕನಸು ನನಸಾಗೋದಿಲ್ಲವೋ? ತಾನೊಪ್ಪುವ, ತನ್ನನ್ನೊಪ್ಪುವ ಹುಡುಗ ಸಿಗೋದಿಲ್ಲವೋ ಅನ್ನೋದು ಆ ಹೆಣ್ಣುಮಗಳ ತಳಮಳ. ಸ್ಥೂಲಕಾಯದ ಹುಡುಗಿಯರಿಗೆ ಅಂಥದ್ದೊಂದು ಟೆನ್ಷನ್‌ ಯಾವತ್ತಿಗೂ ಇರುತ್ತದೆ. ಬರುವವರೆಲ್ಲಾ ಸಣ್ಣಗಿರುವ ತಂಗಿಯ ಕಡೆ ನೋಡಿದರೆ ಯಾರಿಗೆ ತಾನೆ ಸಂಕಟವಾಗೋದಿಲ್ಲ. ಒಂದೊಳ್ಳೆ ಸೀರೆಗೆ ಒಪ್ಪುವ ಡಿಸೈನರ್‌ ರವಿಕೆ ಒಲಿಸಲು ತನ್ನ ಊರಿನ ಚಂದ್ರಣ್ಣನ ಬಳಿ ಹೋಗುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ರವಿಕೆಯ ತಮಾಷೆ ಪ್ರಸಂಗ. ಕ್ರಮೇಣ ಅದು ವಿಕೋಪಕ್ಕೆ ಹೋಗಿ ಸೀರಿಯಸ್‌ ಪ್ರಸಂಗವಾಗಿಯೂ ಮಾರ್ಪಡುತ್ತದೆ.

ಇಲ್ಲಿ ರವಿಕೆ ಅನ್ನೋದು ಒಂದು ರೂಪಕವಷ್ಟೇ. ಹೊಂದಾಣಿಕೆ ಮಾಡಿಕೊಂಡು ಬದುಕು ಸಾಗಿಸದಿದ್ದರೆ, ಕೂತರೂ ನಿಂತರೂ ಏನಾದರೊಂದು ಸಮಸ್ಯೆ ಎದುರಾಗುತ್ತಲೇ ಇರುತ್ತವೆ. ಆಶಾಭಾವನೆ ಅತಿಯಾದರೆ ಏನೆಲ್ಲಾ ಆಗಬಹುದು, ನಿರೀಕ್ಷೆ ಅನ್ನೋದು ಅಳತೆ ಮೀರಿದರೆ ಆಗುವ ಅಪಾಯಗಳೇನು ಅನ್ನೋದು ʻರವಿಕೆʼಯ ಮೂಲಕ ನಿರೂಪಿತವಾಗಿದೆ.

ಗೀತಾ ಭಟ್‌ ಅವರಿಗೆಂದೇ ಸೃಷ್ಟಿಸಿದ ಕಥೆ ಇದೆನ್ನುವಂತೆ ಆಕೆ ನಟಿಸಿದ್ದಾರೆ. ಚಂದ್ರಣ್ಣನಾಗಿ ಸಂಪತ್‌ ಮೈತ್ರೇಯ ನಟನೆ ಅದ್ಭುತ. ಕೃಷ್ಣಮೂರ್ತಿ ಕವತ್ತಾರ್‌ ರಂಗಭೂಮಿಯ ನಟನೆಯನ್ನೇ ಕ್ಯಾಮೆರಾ ಮುಂದೆಯೂ ಮುಂದುವರೆಸಿದ್ದಾರೆ. ರಾಕೇಶ್‌ ಮಯ್ಯ ಅಭಿನಯ ಕೂಡಾ ವಂಡರ್‌ಫುಲ್.‌ ಚಂದ್ರೇಗೌಡ ಕೂಡಾ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾರೆ.

ಕಥಾಸಂಕಲನವೊಂದನ್ನು ಕೈಗೆತ್ತಿಕೊಂಡಾಗ, ಅದರ ನಡುವೆ ನವಿಲುಗರಿ ಸಿಕ್ಕಿಸಿದಂತಾ ಕಥೆ ಇದರಲ್ಲಿದೆ. ಅಕ್ಷರರೂಪದಲ್ಲಿ ಸರಾಗವಾಗಿ ಓದಿಬಿಡಬಲ್ಲ ಕತೆಯನ್ನು ಪಾವನಾ ಸಂತೋಷ್‌ ರಚಿಸಿದ್ದಾರೆ. ಅದನ್ನು ಯಥಾವತ್ತಾಗಿ ದೃಸ್ಯರೂಪಕ್ಕೆ ಕಟ್ಟಿಕೊಟ್ಟವರು ಸಂತೋಷ್‌ ಕೊಂಡಕೇರಿ. ಸಿನಿಮಾದ ಮೊದಲ ಭಾಗ ಸ್ವಲ್ಪ ಹೆಚ್ಚು ಹೊಲಿಗೆ ಬಿದ್ದ ಫೀಲು ಕೊಡುತ್ತದೆ. ಆದರೆ ಎರಡನೇ ಭಾಗ ಸಾಗೋದೇ ಗೊತ್ತಾಗೋದಿಲ್ಲ. ಪರ್ಫೆಕ್ಟ್‌ ಫಿಟ್‌ ಅನ್ನಿಸುವಂತೆ ಚೆಂದಗೊಳಿಸಿದ್ದಾರೆ. ಸೀಮಿತ ಚೌಕಟ್ಟಿನಲ್ಲಿ ಮುರಳೀಧರ್‌ ಕಟ್ಟಿಕೊಟ್ಟಿರುವ ದೃಶ್ಯಗಳು ಕೂಡಾ ಆಪ್ತವಾಗಿವೆ.

ಸಮಾಜದ ಮನಸ್ಥಿತಿ, ಹೆಣ್ಣಿನ ಪರಿಸ್ಥಿತಿಯನ್ನು ರವಿಕೆಯಲ್ಲಿ ಬಂಧಿಸಿ ರೂಪಿಸಿರುವ ಈ ಚೆಂದದ ಸಿನಿಮಾವನ್ನೊಮ್ಮೆ ನೋಡಿ. ಖಂಡಿತಾ ನಿಮಗಿಷ್ಟವಾಗುತ್ತದೆ.

 

ಇನ್ನಷ್ಟು ಓದಿರಿ

Scroll to Top