4 n 6 ಈ ಹೆಸರು ಕೇಳುತ್ತಿದ್ದಂತೇ ಇದೊಂದು ಥ್ರಿಲ್ಲರ್ ಜಾನರಿನ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಹೌದು ಇದೊಂದು ಸಸ್ಪೆನ್ಸ್ ಹಾಗೂ ಪೊಲೀಸ್ ಇನ್ವೆಸ್ಟಿಗೇಷನ್ ಸುತ್ತ ಬೆಸೆದುಕೊಂಡಿರುವ ಕಥಾಹಂದರ ಹೊಂದಿರುವ ಸಿನಿಮಾ. ಎರಡು ಕೊಲೆಗಳ ಸುತ್ತ ಸುತ್ತುವ ಕೌತುಕಮಯ ವಿಚಾರಗಳು ಇಲ್ಲಿವೆ.
ಸಿನಿಮಾದ ಮೊದಲಾರ್ಧ ಹೇಗಿದೆ..?
ನಾಯಕಿ ತುಂಬಾ ಬುದ್ದಿವಂತೆ, ಚುರುಕು ಸ್ವಭಾವದವಳು, ಯಾವುದೇ ವಿಚಾರವನ್ನು ಬಹುಬೇಗ ಅರ್ಥಮಾಡಿಕೊಳ್ಳಬಲ್ಲ ಇಂಟಲಿಜೆಂಟ್ ಅನ್ನೋದನ್ನು ಆಕೆಯ ಬಾಲ್ಯವನ್ನು ಪರಿಚಯಿಸುತ್ತಲೇ ಹೇಳಿಬಿಡಿತ್ತಾರೆ. ಇದು ಸಿನಿಮಾದ ಮುಂದಿನ ದೃಶ್ಯಗಳಿಗೆ ಪೂರಕವಾಗಿವೆ. ರಚನಾ ಇಂದರ್ ಇಲ್ಲಿ ಫೊರೆನ್ಸಿಕ್ ಸ್ಪೆಷಲಿಸ್ಟ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾದ ಮೊದಲಾರ್ಧ ಚೂರು ನಿಧಾನ ಅನ್ನಿಸುತ್ತದೆ. ಅನಗತ್ಯ ದೃಶ್ಯಗಳಿಗೆ ಕಡಿವಾಣ ಹಾಕಿದ್ದಿದ್ದರೆ ಸ್ಪೀಡ್ ಅನ್ನಿಸುತ್ತಿತ್ತು. ರಜನಾ ಇಂದರ್ ನಟನೆ ಇವೆಲ್ಲವನ್ನೂ ಮರೆಸಿಬಿಡುತ್ತದೆ.
ಮಧ್ಯಂತರದ ನಂತರ….
ಮೊದಲ ಭಾಗದಲ್ಲಿ ನಡೆದ ಎರಡು ಕೊಲೆಗಳನ್ನು ಯಾರು ಮಾಡಿರಬಹುದು? ಅದಕ್ಕೆ ಕಾರಣ ಏನಿರಬಹುದು? ಅನ್ನೋ ಪ್ರಶ್ನೆಗಳ ಜೊತೆಯಲ್ಲೇ ಒಬ್ಬನ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಹಾಗೆ ಅಂದುಕೊಳ್ಳುವ ಹೊತ್ತಿಗೇ ಮತ್ತೊಂದು ಘಟನೆ ನಡೆದು ಮತ್ತೊಂದು ಅನುಮಾನ ಹುಟ್ಟಿಸುತ್ತಾರೆ. ಹೀಗೆ ಆರಂಭದಿಂದ ಕೊನೆಯವರೆಗೂ ಒಂದಲ್ಲಾ ಒಂದು ತಿರುವುಗಳನ್ನು ನೀಡುತ್ತಾ ಕೂರಿಸಿಡುವ ಚಿತ್ರ 4 ಎನ್ 6.
ಚಿತ್ರ ಪ್ರಮುಖವಾಗಿ ನಾಲ್ಕು ಪಾತ್ರಗಳ ಸುತ್ತ ಬೆಸೆದುಕೊಂಡಿದೆ. ರಚನಾ ಇಂದರ್ ಮತ್ತು ಭವಾನಿ ಪ್ರಕಾಶ್ ಹೊರತಾಗಿ ಬಹುತೇಕರು ಹೊಸಬರೇ. ಭವಾನಿ ಪ್ರಕಾಶ್ ಸಖತ್ ಅನುಭವಿಯಂತೆ ಧಮ್ ಎಳೆದು ಹೊಗೆ ಬಿಡುತ್ತಾರೆ. ರಚನಾ ಎಂದಿನಂತೆ ಚುರುಕಾಗಿ ನಟಿಸಿದ್ದಾರೆ. ನಿರ್ದೇಶಕ ದರ್ಶನ್ ಶ್ರೀನಿವಾಸ್ ಹಲವು ಲಿಮಿಟೇಷನ್ನುಗಳ ನಡುವೆಯೂ ಅಚ್ಚುಕಟ್ಟಾದ ಸಿನಿಮಾವೊಂದನ್ನು ರೂಪಿಸಲು ಶ್ರಮಿಸಿದ್ದಾರೆ.
-ಶಿವು ಅರಿಸಿನಗೆರೆ












































