ಸರಿಸುಮಾರು ಎರಡು ತಿಂಗಳ ಹಿಂದೆ ಪವಿತ್ರಾ ಗೌಡ ʻನನ್ನ ಮತ್ತು ದರ್ಶನ್ ನಡುವಿನ ಸಂಬಂಧ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿತುʼ ಅಂತಾ ಪೋಸ್ಟ್ ಹಾಕಿದ್ದಳು. ಅವತ್ತು ದರ್ಶನ್ ಅವರ ಒರಿಜಿನಲ್ ಹೆಂಡತಿ ವಿಜಯಲಕ್ಷ್ಮಿ ಕೆಂಡಾಮಂಡಲರಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನೇರಾನೇರವಾಗಿ ಉಗಿದು ಉಪ್ಪಾಕಿ ಪವಿತ್ರಾಳಿಗೆ ಮಂಗಳಾರತಿ ಎತ್ತಿದ್ದರು. ಅದಕ್ಕೆ ಪ್ರತಿಯಾಗಿ ಪವಿತ್ರಾ ಕೂಡಾ ಅದೇನೇನೋ ವಾಣೆ ಊದಿಕೊಂಡು ಪೋಸ್ಟ್ ಮಾಡಿದಳು. ಇವೆಲ್ಲ ನಡೆಯುವ ಹೊತ್ತಿಗೇ ದರ್ಶನ್ ಪುತ್ರ ತನ್ನ ಅಪ್ಪನ ಬಳಿ ಒಂದು ಪ್ರಶ್ನೆ ಕೇಳಿದ್ದ. ʻಪವಿತ್ರಾ ಎನ್ನುವ ಲೇಡಿ ನನಗೆ ಏನಾಗಬೇಕು? ಅವರ ಮಗಳು ನನಗೆ ಸಿಸ್ಟರಾ? ಎಲ್ಲರೂ ನನ್ನನ್ನು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆʼ ಅಂದುಬಿಟ್ಟಿದ್ದ.
ಆ ಸಂದರ್ಭದಲ್ಲಿ ಸ್ವತಃ ಡಿ ಬಾಸ್ ಮನಸ್ಸಲ್ಲಿ ಅದೇನೇನು ಪ್ರಶ್ನೆಗಳು ಹುಟ್ಟಿಕೊಂಡವೋ? ಎದೆಯೆತ್ತರಕ್ಕೆ ಬೆಳೆದ ಮಗನ ಮುಂದೆ ತಾನು ಮಾಡುತ್ತಿರುವ ಕೆಲಸ, ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ ಅನ್ನಿಸಿತೋ ಏನೋ… ಆ ಕ್ಷಣದಿಂದಲೇ ಪವಿತ್ರಾ ಮನೆಗೆ ಹೋಗೋದನ್ನು ನಿಲ್ಲಿಸಿಬಿಟ್ಟರು. ʻನಾನು ಆ ಕಡೆ ಬರೋದಿಲ್ಲ. ಅವಳಿಗೆ ಏನು ಬೇಕೋ ನೋಡಿಕೋʼ ಅಂತಾ ಪವನನ ಬಳಿ ಹೇಳಿ ಸುಮ್ಮನಾಗಿಬಿಟ್ಟಿದ್ದರು.
ತಿಂಗಳುಗಳು ಕಳೆದರೂ ದಾಸ ತನ್ನ ಮನೆಕಡೆ ಬರೋದನ್ನೇ ನಿಲ್ಲಿಸಿದ್ದು ಪವಿತ್ರಾಗೆ ಸಹಿಸಲಾಗಲಿಲ್ಲ. ಏನಾದರೂ ಮಾಡಿ, ಮತ್ತೆ ದರ್ಶನ್ ಅವರನ್ನು ತನ್ನತ್ತ ಸೆಳೆಯಲು ಪ್ಲಾನು ಮಾಡುತ್ತಿದ್ದಳು. ಆಗ ಶುರುವಾಗಿದ್ದೇ ಈ ರೇಣುಕಾಸ್ವಾಮಿ ಎಪಿಸೋಡು. ʻಅದ್ಯಾವನೋ ಚಿತ್ರದುರ್ಗದ ಹುಡುಗ ಪವಿತ್ರಾ ಅಕ್ಕನಿಗೆ ಕೆಟ್ಟದಾಗಿ ಮೆಸೇಜು ಮಾಡುತ್ತಿದ್ದಾನೆʼ ಅಂತಾ ಪವನ ಬಂದು ಯಜಮಾನನ ಕಿವಿ ಕಚ್ಚಿದ್ದ. ಎಷ್ಟೇ ಆದರೂ ಹತ್ತು ವರ್ಷದ ಸಖಿಯಲ್ಲವಾ? ಕಾಟೇರ ಕಟಕಟಕಟಕಟ ಅಂಥಾ ಹಲ್ಲು ಕಡಿದ.
ಜೊತೆಗಿದ್ದ ಪುಡುಂಗುಗಳೆಲ್ಲಾ ʻಎತ್ತಾಕಿಕೊಂಡು ಬಂದು ವರ್ಕ್ ಮಾಡೋಣ ಅಣ್ಣಾ…ʼ ಅಂತಾ ಕುಮ್ಮಕ್ಕು ಕೊಟ್ಟಿದ್ದರು. ಅಂದುಕೊಂಡಂತೇ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರಕೊಂಡು ಬಂದು, ಕ್ರೌರ್ಯ ಮೆರೆದರು. ರೇಣುಕಾ ನರಳಾಡಿ ಜೀವಬಿಟ್ಟ. ಹೀಗೆ ತನ್ನವರೆಲ್ಲಾ ಸೇರಿ ಅನಾಮತ್ತಾಗಿ ಒಂದು ಜೀವವನ್ನು ಕೊಂದು, ಮೋರಿ ಪಕ್ಕಕ್ಕೆ ಕೆಡವಿದ್ದರು. ಇಲ್ಲಿ ದರ್ಶನ್ ಮಾತ್ರ ತಮ್ಮ ಅಫಿಷಿಯಲ್ ವೈಫ್ ವಿಜಯಲಕ್ಷ್ಮಿ ಜೊತೆ ಹೊಸ ಮನೆ ಗೃಹಪ್ರವೇಶ ಮಾಡುತ್ತಿದ್ದರು.
ಹೌದು ಜೂನ್ 9ನೇ ತಾರೀಖು ಬೆಳಬೆಳಗ್ಗೆ ದರ್ಶನ್ ಹೊಸಕೆರೆಹಳ್ಳಿ ಕ್ರಾಸ್ ಬಳಿ ಇರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟಿನಲ್ಲಿ ಖರೀದಿಸಿದ ಹೊಸಾ ಫ್ಲಾಟಿನ ಗೃಹಪ್ರವೇಶದಲ್ಲಿ ತೊಡಗಿದ್ದರು. ಅಂದು ಬೆಳಿಗ್ಗೆ ಸೂರ್ಯೋದಯದ ಹೊತ್ತಿಗೇ ಫ್ಲಾಟ್ ನಲ್ಲಿ ಹೋಮ ಹವನಗಳೆಲ್ಲಾ ನೆರವೇರುತ್ತಿತ್ತು. ಇತ್ತ ಕೊಳೆಯಲು ಶುರುವಾಗಿದ್ದ ರೇಣುಕಾಸ್ವಾಮಿಯ ಶವವನ್ನು ಹೆಗ್ಗಣ, ನಾಯಿಗಳೆಲ್ಲಾ ಎಳೆದಾಡುತ್ತಿದ್ದವು.
ದರ್ಶನ್ ಜೊತೆ ಪದೇ ಪದೇ ಕಿತ್ತಾಟಗಳು ಶುರುವಾದಮೇಲೆ ವಿಜಯಲಕ್ಷ್ಮಿ ಪ್ರೆಸ್ಟೀಜ್ ಅಪಾರ್ಟ್ ಮೆಂಟಿನಲ್ಲಿ ಬಾಡಿಗೆ ಫ್ಲಾಟ್ ಪಡೆದು ಮಗನ ಜೊತೆಗೆ ಪ್ರತ್ಯೇಕವಾಗಿ ಜೀವನ ಆರಂಭಿಸಿದರು. ದರ್ಶನ್ ತಮ್ಮ ರಾಜರಾಜೇಶ್ವರಿ ನಗರದ ಮನೆಯಲ್ಲೇ ತಮ್ಮ ಸಹಚರರೊಂದಿಗೆ ಉಳಿದರು. ಮೊದಲು ಉತ್ತರಹಳ್ಳಿಯ ಅಪಾರ್ಟ್ಮೆಂಟಿನಲ್ಲಿದ್ದ ಪವಿತ್ರಾ ಗೌಡ ಕೂಡಾ ಆರ್ ಆರ್ ನಗರಕ್ಕೇ ಶಿಫ್ಟ್ ಆದಳು. ಬಾಸ್ ಮಾತ್ರ ಇಬ್ಬರನ್ನೂ ಬ್ಯಾಲೆನ್ಸ್ ಮಾಡಿಕೊಂಡು, ಒಬ್ಬ ಸೂಪರ್ ಸ್ಟಾರ್ ಹೇಗೆಲ್ಲಾ ಬದುಕಬಾರದೋ, ಅಷ್ಟು ಕೆಟ್ಟದಾಗಿ ಲೈಫ್ ಲೀಡ್ ಮಾಡುತ್ತಿದ್ದರು. ಒಂದು ಕಡೆ ಒಡಹುಟ್ಟಿದ ಸಹೋದರ ಕೂಡಾ ದೂರವಾಗಿದ್ದರು. ಮತ್ತೊಂದು ಕಡೆ ಹೆತ್ತ ತಾಯಿಯೊಂದಿಗೂ ಕಿತ್ತಾಡಿಕೊಂಡಿದ್ದರು.
ಹೀಗಿರುವಾಗ ತನ್ನವರು ಅಂತಾ ಉಳಿದಿದ್ದು ದಿಕ್ಕು ತಪ್ಪಿಸುವ ಬಾರ್ ನಾಗ, ಲಕ್ಷ್ಮಣ, ಸ್ಟೋನಿಬ್ರೂಕ್ ವಿನಯನ ಥರದ ತರಕಲಾಂಡಿಗಳು ಮಾತ್ರ. ಇನ್ನು ದರ್ಶನ್ ಥರದ ಹೆಸರಾಂತ ನಟ ತಮ್ಮ ಹೆಸರು ಉಳಿಸಿಕೊಳ್ಳುವುದಾದರೂ ಹೇಗೆ ಸಾಧ್ಯ ಎನ್ನುವಂತಾಗಿತ್ತು ಪರಿಸ್ಥಿತಿ. ಕಡೆಗೆ ಅವರ ಮನಸ್ಥಿತಿ ಎಷ್ಟು ಹಳ್ಳ ಹಿಡಿದಿತ್ತು ಅಂದರೆ, ಇಂಥದ್ದೊಂದು ಹೀನ ಕೃತ್ಯದ ಪಾಲುದಾರನಾಗಿ ಈಗ ಜೈಲು ಸೇರುವಂತಾಗಿದೆ….












































