ಬೇರೆಲ್ಲಾ ಭಾಷೆಗಳಿಗೆ ಹೋಲಿಕೆ ಮಾಡಿ ನೋಡಿದರೆ ಕನ್ನಡ ಚಿತ್ರರಂಗದಲ್ಲಿ ಹೀರೋಗಳ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಮಾಸ್ ಹೀರೋಗಳಿರೋದು ಬೆರಳೆಣಿಕೆಯ ಮಂದಿ ಮಾತ್ರ. ದೊಡ್ಡ ಮಟ್ಟದ ಸ್ಟಾರ್ ಡಮ್ ಇರೋ ಹೀರೋಗಳಿದ್ದರೆ ಮತ್ತು ಅವರ ಸಿನಿಮಾಗಳು ಒಂದರ ಹಿಂದೊಂದು ರಿಲೀಸ್ ಆದರೆ ಮಾತ್ರ ಚಿತ್ರರಂಗ ಏಳಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ನೋಡಿದರೆ, ಪುನೀತ್ ರಾಜ್ ಕುಮಾರ್ ರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಭಾರೀ ನಷ್ಟ ಅನುಭವಿಸಿತ್ತು.

ಈಗ ದರ್ಶನ್ ಕೂಡಾ ಮರ್ಡರ್ ಕೇಸಲ್ಲಿ ಜೈಲುಪಾಲಾಗಿದ್ದಾರೆ. ಈತನಿಗೆ ಬೇಲ್ ಸಿಕ್ಕಿ ಹೊರಬಂದು ಕೈಲಿರುವ ಸಿನಿಮಾಗಳನ್ನು ಮುಗಿಸೋದು ಇನ್ನು ಯಾವ ಕಾಲಕ್ಕೋ ಗೊತ್ತಿಲ್ಲ. ರಾಕಿಂಗ್ ಸ್ಟಾರ್ ಯಶ್ ಅವರನ್ನಿನ್ನು ಕನ್ನಡದ ಹೀರೋ ಅಂತಾ ಪರಿಗಣಿಸಲು ಸಾಧ್ಯವೇ ಇಲ್ಲ. ಸಧ್ಯಕ್ಕವರು ʻಪ್ಯಾನ್ ಇಂಡಿಯಾ ಹೀರೋʼ ಎನ್ನುವ ಭಾರವಾದ ಕಿರೀಟವನ್ನು ತಲೆಮೇಲಿರಿಸಿಕೊಂಡು ಓಲಾಡುತ್ತಿದ್ದಾರೆ. ಧೃವಾ ಸರ್ಜಾ ಅವರದ್ದೇನಿದ್ದರೂ ಪಂಚ ವಾರ್ಷಿಕ ಯೋಜನೆಗಳೇ. ಉಪೇಂದ್ರ ಕೂಡಾ ಸಿಂಬಲ್ಲುಗಳಲ್ಲಿ ಸಿಲುಕಿ ʻತಡʼವರಿಸುತ್ತಿದ್ದಾರೆ. ಡಾಲಿ ಧನಂಜಯ ಥರದವರು ಮಾಸೋ, ಕ್ಲಾಸೋ ʻಕೋಟಿʼ ಬಂದರೆ ಸಾಕು ಅಂಥಾ ಸಾಗುತ್ತಿದ್ದಾರೆ.

ಹಾಗಾದರೆ ಕನ್ನಡಕ್ಕೆ ಅಂತಾ ಉಳಿದಿರುವ ಮಾಸ್ ಹೀರೋಗಳು ಯಾರು? ಸೆಂಚುರಿ ಸ್ಟಾರ್ ಶಿವಣ್ಣ, ದುನಿಯಾ ವಿಜಯ್ ಮತ್ತು ಬಾದ್‌ಷ ಸುದೀಪ್ ಮಾತ್ರ. ಅದರಲ್ಲೂ ಬಹುಭಾಷೆಯ ಹೈ ಬಜೆಟ್ ತೂಕವನ್ನು ಹೊರೋ ಶಕ್ತಿ ಇರುವ ಏಕೈಕ ಹೀರೋ ಸುದೀಪ್ ಮಾತ್ರ. ಕಿಚ್ಚ ಸುದೀಪ್ ಅವರಿಗೆ ಕನ್ನಡದ ಗಡಿ ದಾಟಿ ದೇಶವ್ಯಾಪಿ ಮಾರುಕಟ್ಟೆ ಇದೆ. ಹೊರದೇಶಗಳಲ್ಲೂ ಸುದೀಪ ಅವರ ಸಿನಿಮಾಗಳಿಗಾಗಿ ಕಾಯುವ ಪ್ರೇಕ್ಷಕರಿದ್ದಾರೆ. ಕ್ಲಾಸ್ ಮತ್ತು ಮಾಸ್ ಎರಡೂ ವರ್ಗವನ್ನು ಸೆಳೆದಿರುವ ಅದ್ಭುತ ನಟ ಕಿಚ್ಚ ಸುದೀಪ. ಸದ್ಯಕ್ಕೆ ಗೆಲುವಿನ ಮುಖವನ್ನೇ ಕಾಣದೆ ಕಳಾಹೀನವಾಗಿರುವ ಕನ್ನಡ ಚಿತ್ರರಂಗಕ್ಕೆ ಜೀವಕಳೆ ಬರಬೇಕೆಂದರೆ, ಅದಕ್ಕಿರೋದು ಒಂದೇ ದಾರಿ. ಕಿಚ್ಚ ಸುದೀಪ ಅವರ ʻಮ್ಯಾಕ್ಸ್ʼ ಚಿತ್ರ ಮಾಕ್ಸಿಮಮ್ ರೇಂಜಲ್ಲಿ ಗೆಲ್ಲಬೇಕು. ಸದ್ಯ ಮ್ಯಾಕ್ಸ್ ಚಿತ್ರದ ಕಡೆಯಿಂದ ಬರುತ್ತಿರುವ ಅಪ್‌ಡೇಟುಗಳನ್ನು ನೋಡಿದರೆ ಆ ಎಲ್ಲ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ. ಭಾರತದ ಎಲ್ಲ ಮುಖ್ಯ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದ ಬಗ್ಗೆ ಕನ್ನಡ ಪ್ರೇಕ್ಷಕರ ಹೊರತಾಗಿ ಇಡೀ ಇಂಡಿಯಾ ಕುತೂಹಲದ ಕಣ್ಣರಳಿಸಿದೆ. ಇನ್ನೇನು ದಿನದೊಪ್ಪತ್ತಿನಲ್ಲಿ ಲೋಕಾರ್ಪಣೆಗೊಳ್ಳಲಿರುವ ಮ್ಯಾಕ್ಸ್ ಟೀಸರ್ ಆ ಎಲ್ಲ ಕುತೂಹಲಕ್ಕೂ ಉತ್ತರ ನೀಡಲಿದೆ.

ಅಂದುಕೊಂಡಂತೇ ಮ್ಯಾಕ್ಸ್ ಹಿಟ್ ಆದರೆ ಬಾದ್ಷ ಗೆಲುವಿನ ವೇಗವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಮ್ಯಾಕ್ಸ್ ಸಿನಿಮಾವನ್ನು ಹೇಗಾದರೂ ಮಾಡಿ ಮಣಿಸಬೇಕು ಅಂತಾ ಆನ್ ಲೈನ್ ಅಡ್ಡಕಸುಬಿಗಳು ಥರಹೇವಾರಿ ಸ್ಕೆಚ್ಚು ರೂಪಿಸುತ್ತಿದ್ದಾರೆ. ನಕಲಿ ಐಡಿಗಳನ್ನು ಹೊಂದಿರುವ ಫೇಕ್ ಗಿರಾಕಿಗಳು ಏನೇ ತಿಪ್ಪರಲಾಗ ಹಾಕಿದರೂ ಒಂದು ಗುಣಮಟ್ಟದ ಸಿನಿಮಾಗೆ ಅಡ್ಡಗಾಲಾಕಲು ಸಾಧ್ಯವಿಲ್ಲ. ಈ ಸಲ ಪೈರಸಿ ಮಾಡುವವರನ್ನು ಮಟ್ಟ ಹಾಕಲು ʻಮ್ಯಾಕ್ಸ್ʼ ತಂಡ ಕರಾರುವಕ್ಕಾದ ಯೋಜನೆಗಳನ್ನು ರೂಪಿಸಿದೆ. ಪೈರಸಿ ಮಾಡೋರನ್ನು ಮಾತ್ರವಲ್ಲ, ಅದರ ಲಿಂಕ್ ಹಂಚುವವರನ್ನು ಕೂಡಾ ಹಿಡಿದು ಬಗ್ಗುಬಡಿಯಲು ಸನ್ನದ್ದವಾಗಿದೆ.
ಕೈಲಾಗದವರ ಕುತಂತ್ರಗಳನ್ನೆಲ್ಲಾ ಮೀರಿ ಮ್ಯಾಕ್ಸ್ ಎದ್ದು ನಿಲ್ಲಲಿ. ಆ ಮೂಲಕ ಬಾದ್ಷ ಸುದೀಪ ಬಾಕ್ಸಾಫೀಸಲ್ಲಿ ಮತ್ತೊಮ್ಮೆ ದಾಖಲೆ ನಿರ್ಮಿಸುವಂತಾಗಲಿ…












































