ಕಷ್ಟ ಅನ್ನೋ ಪದದ ಅರ್ಥಾನೇ ಗೊತ್ತಿಲ್ಲದೆ ಬೆಳೆದ ಮಕ್ಕಳು ಅವರು. ಉಂಡು ಆಡಿ ಹೊದ್ದು ಮಲಗುವ ವಯಸ್ಸಲ್ಲೇ ಎಣ್ಣೆ, ಧಮ್ಮು ಇತ್ಯಾದಿಗಳ ಚಟಕ್ಕೆ ಬಿದ್ದವರು. ಅದಕ್ಕೆ ಕಾರಣ ಶ್ರೀಮಂತಿಕೆ. ಬೆಳೆಯುವ ಮಕ್ಕಳು ಬಯಸಿದ್ದನ್ನೆಲ್ಲಾ ಕೊಡಿಸುವ ಹೆತ್ತವರು. ರಾಜಕಾರಣಿ, ಪೊಲೀಸು, ನಟಿ, ಟೀವಿ ಚಾನೆಲ್ ಓನರ್… ಹೀಗೆ ಒಬ್ಬೊಬ್ಬರದ್ದೂ ಒಂದೊಂದು ಹಿನ್ನೆಲೆ. ಅನಾಮತ್ತಾಗಿ ಹಣ ಸಂಪಾದಿಸುವುದರ ಕಡೆಗೇ ಗಮನ ಕೊಟ್ಟವರು ತಮ್ಮ ಮಕ್ಕಳನ್ನು ಲಂಗೂಲಗಾಮಿಲ್ಲದೇ ಬೆಳೆಸಿಬಿಟ್ಟಿರುತ್ತಾರೆ. ಆ ಮಕ್ಕಳು ಓದಲು ಹೋಗುವ ಶಾಲೆಯಲ್ಲಿ ಮಾಡಬಾರದ ಅನಾಚಾರಗಳನ್ನೆಲ್ಲಾ ಮಾಡುತ್ತಾರೆ. ಅಸಲಿಗೆ ಈ ಮಕ್ಕಳಿಗೆ ಸರಿ ಯಾವುದು, ತಪ್ಪು ಯಾವುದು ಅನ್ನೋದರ ಪರಿವೆಯೇ ಇರೋದಿಲ್ಲ. ಒಂದು ಹಂತದಲ್ಲಿ ತೀರಾ ಹೀನ ಕೃತ್ಯವೊಂದರ ಪಾಲುದಾರರಾಗಿಬಿಡುತ್ತಾರೆ. ಇವೆಲ್ಲಾ ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಚಿತ್ರದ ವಿಚಾರ!
ನಿರ್ದೇಶಕ ಅರುಣ್ ಅಮುಕ್ತ ಈ ಸಿನಿಮಾಗೆ ಕಥೆ ಕಟ್ಟಿರುವ ರೀತಿಯೇ ಸೋಜಿಗ ಹುಟ್ಟಿಸುತ್ತದೆ. ಯಾರೂ ಕ್ಷಮಿಸಲು ಸಾಧ್ಯವೇ ಇಲ್ಲದಂತಾ ಪ್ರಕರಣವೊಂದನ್ನು ಹುಟ್ಟುಹಾಕಿ, ಮತ್ತೆ ಅದನ್ನು ಅವರು ಬಗೆಹರಿಸಿರುವ ರೀತಿ ನಿಜಕ್ಕೂ ಮೆಚ್ಚುಗೆಯಾಗುವಂಥದ್ದು. ಒಂದು ವೇಳೆ ಮಾಮೂಲಿ ಫಾರ್ಮುಲಾಗಳಿಗೆ ಈ ಸಿನಿಮಾದ ಕಥೆಯನ್ನು ಒಗ್ಗಿಸಿಕೊಂಡಿದ್ದಿದ್ದರೆ ಇದೊಂದು ರಿವೇಂಜ್ ಕಿಲ್ಲಿಂಗ್ ಸ್ಟೋರಿಯಾಗಿಬಿಡುತ್ತಿತ್ತು. ಆದರೆ ಅಂಥದ್ದೊಂದು ದುರಂತದಿಂದ ಪಾರುಮಾಡಿದ್ದಾರೆ!

ಈ ದೇಶದ ಕಾನೂನೇ ಹೇಳುತ್ತದೆ ಅಪರಾಧಿ ಯಾರೇ ಆಗಿದ್ದರೂ ಅವನ ಮನಪರಿವರ್ತನೆಗೆ ಕಾಲಾವಕಾಶ ಕೊಡಬೇಕು ಅಂತಾ. ನಿರ್ದೇಶಕ ಅರುಣ್ ಅಮುಕ್ತ ಕೂಡಾ ಬಹುಶಃ ಒಬ್ಬ ನ್ಯಾಯವಾಧಿ, ನ್ಯಾಯಾಧೀಶನಂತೆ ಚಿಂತಿಸಿದ್ದಾರೆ. ತಪ್ಪು ಸರಿಗಳ ಬಗ್ಗೆ ಜ್ಞಾನವಿಲ್ಲದೆ ತಾವು ಮಾಡಿದ್ದೇ ಸರಿ ಅಂದುಕೊಂಡವರನ್ನು ಸರಿ ದಾರಿಗೆ ತರಲು, ಕ್ಷಮಿಸಲು ಒಂದು ಗೇಮ್ ಅನ್ನು ರೂಪಿಸಿದ್ದಾರೆ. ಇದು ಯಾವ ಥರದ ಗೇಮು? ಇದನ್ನು ಆಡಿಸುವವರು ಯಾರು? ಎನ್ನುವ ಅನೇಕ ಕುತೂಹಲಗಳು ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಚಿತ್ರದಲ್ಲಿ ಅನಾವರಣಗೊಂಡಿದೆ.
ಚಂದನ್ ಶೆಟ್ಟಿ ಈ ಸಿನಿಮಾದ ಮೂಲಕ ಹೀರೋ ಆಗಿ ಪರಿಚಯಗೊಂಡಿದ್ದಾರೆ. ಇಡೀ ಸಿನಿಮಾದ ತುಂಬಾ ಚಂದನ್ ಇಲ್ಲದಿದ್ದರೂ, ಅವರ ಪಾತ್ರವೇ ಸಿನಿಮಾದ ಜೀವಾಳದಂತೆ ಆವರಿಸಿಕೊಳ್ಳುತ್ತದೆ. ಚಂದನ್ ಶೆಟ್ಟಿ ಕೂಡಾ ತೀರಾ ಅನುಭವಿಯಂತೆ ಅಭಿನಯಿಸಿದ್ದಾರೆ. ಎರಡೆರಡು ಶೇಡ್ ಗಳಲ್ಲಿ ಚೇಂಜ್ ಓವರ್ ಕೊಡುವ ಅವರ ಟ್ಯಾಲೆಂಟು ಇಷ್ಟವಾಗುತ್ತದೆ. ಚಂದನ್ ಶೆಟ್ಟಿಗಾಗಿಯೇ ಎಂಥಾ ಪಾತ್ರವನ್ನು ಬೇಕಾದರೂ ಸೃಷ್ಟಿಸಬಹುದು ಅನ್ನೋದನ್ನು ʻವಿದ್ಯಾರ್ಥಿಗಳುʼ ಋಜುವಾತು ಮಾಡಿದ್ದಾರೆ. ಚಂದನ್ ಶೆಟ್ಟಿಗೆ ತಂಗಿಯಂತೆ ಜೊತೆಯಾಗುವ ಹುಡುಗಿ ಸಿಂಚನಾ ಅದ್ಭುತವಾಗಿ ನಟಿಸಿದ್ದಾಳೆ. ಇನ್ನು ಸಿನಿಮಾದ ಕೇಂದ್ರ ಬಿಂದುಗಳಂತಿರುವ ಅಮರ್, ಭಾವನಾ, ಮನಸ್ವಿ ಮತ್ತು ವಿಹಾನ್ ಒಂದು ಮಟ್ಟಕ್ಕೆ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಮನಸ್ವಿಯ ಹೈಟು, ಫೀಚರೆಲ್ಲಾ ಹಳೇ ನಟಿ ಪ್ರೇಮಾರನ್ನು ಹೋಲುವಂತಿದೆ.
ದೃಶ್ಯಗಳಲ್ಲಿ ಕುಮಾರ್ ಗೌಡ ಛಾಯಾಗ್ರಹಣ ಪರವಾಗಿಲ್ಲ. ಜರ್ನಿ ಸಾಂಗಲ್ಲಿ ಬಳಸಿರುವ ಟೆಕ್ನಾಲಜಿ ಚನ್ನಾಗಿದೆ. ಪಾರ್ಟಿ ಸಾಂಗ್ ಅನ್ನು ಮಾತ್ರ ಮತ್ತೊಬ್ಬ ಛಾಯಾಗ್ರಾಹಕ ಅರುಣ್ ಸುರೇಶ್ ಚಿತ್ರೀಕರಿಸಿದ್ದು, ಅದು ಸಿನಿಮಾದ ಹೈಲೇಟ್ ಅನ್ನಿಸಿಕೊಳ್ಳುತ್ತದೆ.
ಉಳಿದಂತೆ ವಿಜೇತ್ ಕೃಷ್ಣ ಮ್ಯೂಸಿಕ್ಕು ಇಷ್ಟವಾಗುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಬೆಸೆದಿರುವ ನಿರ್ದೇಶಕ ಅರುಣ್ ಅಮುಕ್ತ ಸಿನಿಮಾ ಮೊದಲ ಭಾಗವನ್ನು ಮಾತ್ರ ಯಾಕೆ ವಿದ್ಯಾರ್ಥಿಗಳ ನಡೆಯಂತೇ ಯದ್ವಾತದ್ವಾ ಎಳೆದಾಡಿದ್ದಾರೆ ಅಂತಾ ಅನ್ನಿಸಬಹುದು. ಬಹುಶಃ ಅದು ಇಪ್ಪತ್ತು ವರ್ಷದ ಒಳಗಿನ ಮಕ್ಕಳಿಗೆ ಇಷ್ಟವಾಗಬಹುದು. ಚಿತ್ರದ ಮೊದಲ ಭಾಗವನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ದ್ವಿತೀಯ ಭಾಗವನ್ನು ಗಣನೆಗೆ ತೆಗೆದುಕೊಂಡರೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಒಂದೊಳ್ಳೆ ಮನರಂಜನೆ ಮತ್ತು ಮೆಸೇಜಿರುವ ಸಿನಿಮಾ ಆಗಿದೆ.
ಹಣದ ಅಮಲಿನಲ್ಲಿರುವ ಪೋಷಕರು, ಅಪ್ಪ ಅಮ್ಮನ ದುಡ್ಡಿನಲ್ಲಿ ಮಜಾ ಮಾಡುವ ಮಕ್ಕಳು ಮಾತ್ರವಲ್ಲ, ಪ್ರತಿಯೊಬ್ಬರೂ ನೋಡಬಹುದಾದ ಮತ್ತು ನೋಡಬೇಕಾದ ಚಿತ್ರ ಇದಾಗಿದೆ.












































