ಸರಾಗವಾಗಿ ನೋಡಿಸಿಕೊಂಡು ಹೋಗುವ ನಾಟ್ ಔಟ್!

Picture of Cinibuzz

Cinibuzz

Bureau Report

ಆತ ಮಹಾನ್ ದುಷ್ಟ. ಲೇವಾದೇವಿ ವ್ಯವಹಾರ ಮಾಡಿಕೊಂಡು ಓಡಾಡುವವನು. ಅವನು ಒಂಟಿಕೊಪ್ಪಲ್ ದೇವರಾಜ! ಬಡ್ಡಿ ವ್ಯಾಪಾರಿ ಅಂದಮೇಲೆ ರೌಡಿ ಕೂಡಾ ಆಗಿರಲೇಬೇಕು ಅನ್ನೋದು ಜಗತ್ತಿನ ಅಘೋಷಿತ ನಿಯಮ. ಇಲ್ಲಿ ಸಾಲ ಕೊಟ್ಟವರು ಅಥವಾ ಈಸಿಕೊಂಡವರು ಇಬ್ಬರಲ್ಲಿ ಯಾರು ಔಟ್ ಆಗ್ತಾರೆ? ಮತ್ಯಾರು ನಾಟ್ ಔಟ್ ಅನ್ನೋದು ಸಿನಿಮಾದ ಕೊನೆಯ ಕುತೂಹಲ!

ಮಾಂಸ ಕತ್ತರಿಸೋನು ಕುರಿಯನ್ನು ಕಂಡು ಮರುಕಪಡಲು ಸಾಧ್ಯವೇ? ಹಾಗೆಯೇ ಸಾಲ ಕೊಡೋದನ್ನೇ ಕಸುಬಾಗಿಸಿಕೊಂಡವನಿಗೆ ಕರುಣೆ ಎಲ್ಲಿಂದ ಬರಬೇಕು? ಸಮಯಕ್ಕೆ ಸರಿಯಾಗಿ ಬಡ್ಡಿ, ಅಸಲು ಕೊಡದೇ ತಪ್ಪಿಸಿಕೊಂಡವರನ್ನು ಹುಡುಕಿಸಿ ತಂದು ತದುಕುತ್ತಿರುತ್ತಾನೆ. ಅದಕ್ಕೆಂದೇ ಗ್ಯಾಂಗನ್ನೂ ಸಾಕಿಕೊಂಡಿರುತ್ತಾನೆ. ಸಿನಿಮಾ ಹೀರೋ ಕೂಡಾ ಇದೇ ಹುಲಿಯ ಅಂಕೆಯಲ್ಲಿ ಸಿಕ್ಕಿಕೊಂಡಿರುತ್ತಾನೆ. ಸಾಲ ಪಡೆದು ಆಂಬುಲೆನ್ಸ್ ಖರೀದಿಸಿರುತ್ತಾನೆ. ಪಡೆದ ಹಣ ತೀರಿಸಲಾಗದೆ ತಲೆತಪ್ಪಿಸಿಕೊಂಡು ತಿರುಗುತ್ತಿರುತ್ತಾನೆ. ಅದಕ್ಕೆ ಪ್ರತಿಯಾಗಿ ಇವನ ಮತ್ತು ಈಕೆಯ ಗರ್ಲ್ ಫ್ರೆಂಡ್ ಪಾಸ್ ಪೋರ್ಟ್ ಇತ್ಯಾದಿ ಡಾಕ್ಯುಮೆಂಟುಗಳು ಫೈನಾನ್ಷಿಯರ್ ದೇವರಾಜನ ಬಳಿ ಸೇಫಾಗಿರುತ್ತವೆ. ಹುಡುಗ ಹುಡುಗಿ ಇಬ್ಬರೂ ಫಾರಿನ್ನಿಗೆ ಹೋಗಿ ಸೆಟಲ್ ಆಗಬೇಕೆಂದರೆ ಪಾಸ್ ಪೋರ್ಟ್ ಬೇಕು. ಅದು ಕೈಗೆ ಬರಬೇಕೆಂದರೆ ಸಾಲ ತೀರಬೇಕು… ಈ ನಡುವೆಯೇ ಅದೇ ಫೈನಾನ್ಷಿಯರಿಂದ ಏಟು ತಿಂದವರೂ ಎಂಟ್ರಿಯಾಗುತ್ತಾರೆ. ಒಬ್ಬೊಬ್ಬರ ಕೇಸು ಬೇರೆಯಾದರೂ, ಎಲ್ಲರ ಗುರಿ ಮಾತ್ರ ಫೈನಾನ್ಷಿಯರ್ ದೇವರಾಜ. ಜೊತೆಗೆ ಸ್ನೇಕ್ ಸೀನ ಕೂಡಾ ಹೀರೋ ಜೊತೆ ಸೇರುತ್ತಾನೆ. ಇವರೆಲ್ಲಾ ಸೇರಿ ದೇವರಾಜನನ್ನು ಏನು ಮಾಡುತ್ತಾರೆ? ದೇವರಾಜನನ್ನು ಕೊಂದು ಕೆಡವುತ್ತಾರಾ? ಹಾಗೊಮ್ಮೆ ಆದರೂ ಅದರು ಆಂಬುಲೆನ್ಸ್ ಚಾಲಕನ ವೃತ್ತಿಗೆ ಮಾಡುವ ಮೋಸವಲ್ಲವಾ? ಎಂಬಿದ್ಯಾತಿ ಪ್ರಶ್ನೆಗಳಿಗೆ ʻನಾಟ್ ಔಟ್ʼ ಉತ್ತರ ಕೊಡುತ್ತದೆ.

ಕೊರೋನಾ ಕಾಲದಲ್ಲಿ ಅಗಣಿತ ಕಥೆಗಳು ಹುಟ್ಟಿಕೊಂಡಿವೆ. ನಾಟ್ ಔಟ್ ಕೂಡಾ ಅಂತಿಮವಾಗಿ ಕೋವಿಡ್ ಕಾಲಘಟ್ಟಕ್ಕೆ ಕನೆಕ್ಟ್ ಆಗುತ್ತದೆ.

ಅಂಬರೀಶ್ ನಿರ್ದೇಶನದ ಈ ಚಿತ್ರ ಎಲ್ಲೂ ಬೋರು ಹೊಡೆಸದಂತೆ ನೋಡಿಸಿಕೊಂಡು ಹೋಗುತ್ತದೆ. ಚಿತ್ರದ ಹೀರೋ ಅಜಯ್ ಪೃಥ್ವಿ ತಮ್ಮ ಹಿಂದಿನ ಚಿತ್ರದಂತೆಯೇ ಇಲ್ಲೂ ಕೂಡಾ ಸಹಜವಾಗಿ ನಟಿಸಿದ್ದಾರೆ. ರಚನಾ ಇಂದರ್ ಪೃಥ್ವಿಗೆ ಹೇಳಿ ಮಾಡಿಸಿದ ಜೋಡಿಯಂತೆ ಕಾಣುತ್ತಾರೆ. ಕಾಕ್ರೋಜ್ ಸುಧೀ ಮತ್ತು ಕೊಕ್ಕರೆ ಕಾಂಬಿನೇಷನ್ನು ಸಖತ್ ವರ್ಕೌಟ್ ಆಗಿದೆ. ರವಿಶಂಕರ್ ಎಂದಿನಂತೆ ಗತ್ತಿನಿಂದ ಪಾತ್ರ ಪೋಷಣೆ ಮಾಡಿದ್ದಾರೆ. ಗೋಪಾಲ ದೇಶಪಾಂಡೆ ಎನ್ನುವ ಅದ್ಭುತ ನಟನ ಬಗ್ಗೆ ಪದೇಪದೇ ಹೇಳುವ ಅಗತ್ಯವೇ ಇಲ್ಲ. ಅವರು ಯಾವುದೇ ಪಾತ್ರ ಮಾಡಿದರೂ ಅದು ಚೆಂದವೇ್ ಅಶ್ವಿನ ಹಾಸನ್ ಕಡಿಮೆ ದೃಶ್ಯಗಳಲ್ಲಿ ಬಂದರೂ ಅದನ್ನು ನೀಟಾಗಿ ನಿಭಾಯಿಸಿದ್ದಾರೆ.

ಮಿಕ್ಕಂತೆ, ನಾಟ್ ಔಟ್ ಅಚ್ಚುಕಟ್ಟಾದ, ಯಾವುದೇ ಗೊಂದಲ, ಕಿರಿ ಕಿರಿಗಳಿಲ್ಲದೇ ನೋಡಿಸಿಕೊಂಡು ಹೋಗುವ ಸಿನಿಮಾ ಅಂತ ಹೇಳಬಹುದು…

ಇನ್ನಷ್ಟು ಓದಿರಿ

Scroll to Top