ಭಾರ್ಗವ್ ಕೃಷ್ಣ ಅಭಿನಯದ “ಓಂ ಶಿವಂ” ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ .

Picture of Cinibuzz

Cinibuzz

Bureau Report

ಕನ್ನಡದಲ್ಲಿ ಹೊಸ ನಾಯಕನಟರ ಆಗಮನವಾಗುತ್ತಿರುತ್ತದೆ‌. ನೂತನ ನಾಯಕನಟರ ಪಟ್ಟಿಗೆ ಈಗ ಭಾರ್ಗವ್ ಕೃಷ್ಣ ಕೂಡ ಸೇರಿದ್ದಾರೆ. ಪ್ರಸ್ತುತ ಭಾರ್ಗವ್ ಕೃಷ್ಣ ಅಭಿನಯದ ಚೊಚ್ಚಲ ಚಿತ್ರ “ಓಂ ಶಿವಂ” ನ ಲಿರಿಕಲ್ ಸಾಂಗ್ ಇತ್ತೀಚಿಗೆ ಬಿಡುಗಡೆಯಾಯಿತು. ಭಾರ್ಗವ್ ಕೃಷ್ಣ ಅವರ ಅಜ್ಜಿ, ತಾತಾ ಈ ಹಾಡನ್ನು ಬಿಡುಗಡೆ ಮಾಡಿ ಮೊಮ್ಮಗನ ಮೊದಲ ಚಿತ್ರಕ್ಕೆ ಶುಭ ಹಾರೈಸಿದರು. ಭಾರ್ಗವ್ ಕೃಷ್ಣ ಅವರ ತಂದೆ ಕೃಷ್ಣ ಕೆ.ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ‌. ಹಾಡು ಬಿಡುಗಡೆಯ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ‌

ಆಲ್ವಿನ್ ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡು ಬಂದು ಕಥೆ ಹೇಳಿದರು. ನಾನು ಕಥೆ ಚೆನ್ನಾಗಿದೆ. ನಾಯಕನನ್ನು ಹುಡುಕಿ. ಚಿತ್ರ ಆರಂಭಿಸೋಣ ಎಂದೆ. ಅದಕ್ಕೆ ಆಲ್ವಿನ್ ಅವರು ನಿಮ್ಮ ಮಗ ಭಾರ್ಗವ್, ನನ್ನ ಕಥೆ ಗೆ ಸರಿ ಹೊಂದುತ್ತಾರೆ. ಅವರೆ ನಮ್ಮ ಚಿತ್ರದ ನಾಯಕ ಎಂದರು. ಈಗ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು ನಿರ್ಮಾಪಕ ಕೃಷ್ಣ.

“ರಾಜ್ ಬಹದ್ದೂರ್” ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು ಎಂದು ಮಾತನಾಡಿದ ನಿರ್ದೇಶಕ ಆಲ್ವಿನ್, “ಓಂ ಶಿವಂ” ಲವ್ ಜಾನರ್ ನ ಚಿತ್ರ. ಆದರೆ ಚಿತ್ರದಲ್ಲಿ ಬರೀ ಲವ್ ಮಾತ್ರ ಇಲ್ಲ. ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ನಮ್ಮ ಚಿತ್ರಕ್ಕೆ ಇಪ್ಪತ್ತೊಂದು ವಯಸ್ಸಿನ ನಾಯಕ ಬೇಕಾಗಿತ್ತು. ಭಾರ್ಗವ್ ಅವರಿಗೂ ಅಷ್ಟೇ ವಯಸ್ಸು. ಹಾಗಾಗಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಮೊದಲ ಪ್ರಯತ್ನದಲ್ಲೇ ಭಾರ್ಗವ್ ಚೆನ್ನಾಗಿ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳು, ಅದ್ದೂರಿ ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ಮೊದಲು ನಾನು ನನ್ನ ತಂದೆಗೆ ಧನ್ಯವಾದ ತಿಳಿಸುತ್ತೇನೆ. ಆಲ್ವಿನ್ ಅವರು ಉತ್ತಮ ಕಥೆ ಮಾಡಿಕೊಂಡಿದ್ದಾರೆ. ಮೊದಲ ಚಿತ್ರವಾಗಿರುವುದರಿಂದ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿರುವುದಾಗಿ ನಾಯಕ ಭಾರ್ಗವ್ ಕೃಷ್ಣ ತಿಳಿಸಿದರು.

ನಾಯಕಿ ವಿರಾಣಿಕ ಶೆಟ್ಟಿ ಅಂಜಲಿ ನನ್ನ ಪಾತ್ರದ ಹೆಸರು ಎಂದು ಹೇಳಿದರು. ನಟರಾದ ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ವರ್ಧನ್, ನಟಿಯರಾದ ಅಪೂರ್ವ, ಲಕ್ಷ್ಮೀ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ವಿಜಯ್ ಯಾರ್ಡ್ಲೆ, ಛಾಯಾಗ್ರಾಹಕ ವೀರೇಶ್ ಹಾಗೂ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.

ಇನ್ನಷ್ಟು ಓದಿರಿ

Scroll to Top