ಘರ್ಜಿಸಲು ಬರುತ್ತಿರುವ ಹೆಬ್ಬುಲಿ : ಕಿಚ್ಚ ಅಭಿಮಾನಿಗಳಿಗೆ ಹಬ್ಬದ ಸಡಗರ!

Picture of Cinibuzz

Cinibuzz

Bureau Report

ಹೆಬ್ಬುಲಿ ಸಿನಿಮಾ ಮತ್ತೆ ತೆರಗಪ್ಪಳಿಸುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಸಿನಿಮಾ ರೀ ರಿಲೀಸ್ ಆಗುತ್ತಿರುವುದು ಬಾದ್‌ಷಾ ಅಭಿಮಾನಿಗಳಿಗಂತೂ ಹಬ್ಬದಂತಾಗಿದೆ. ಈ ಹೊತ್ತಿನಲ್ಲಿ ಕಿಚ್ಚ ಸುದೀಪ ಹೆಬ್ಬುಲಿ ಬಗ್ಗೆ ಏನೆಲ್ಲಾ ಮಾತಾಡಿದ್ದಾರೆ ನೋಡಿ…!

ಉದ್ದುದ್ದ ಕೂದಲಿಗೆ ಕತ್ತರಿ ಹಾಕಿದ್ದು ಹೇಗೆ?

ನಾನು ಹೇರ್ ಕಟ್ ಮಾಡಿಸಿ ತುಂಬಾನೇ ದಿನಗಳಾಗಿದ್ದವು. ಸಿನಿಮಾದಿಂದ ಸಿನಿಮಾಗೆ ಬೆಳೀತಾ ಬೆಳೀತಾ ಅದು ತುಂಬಾ ಉದ್ದ ಆಗಿಬಿಟ್ಟಿತ್ತು. ಇದೇ ಹೊತ್ತಿಗೆ ಹೆಬ್ಬುಲಿಯ ಪಾತ್ರಕ್ಕಾಗಿ ಹೇರ್ ಕಟ್ ಮಾಡಿಸುವಾಗ ಜುಟ್ಟು ಚೆನ್ನಾಗಿ ಕಾಣಿಸಿತ್ತು. ಇದನ್ನ ಹೀಗೇ ಬಿಟ್ರೆ ಹೇಗೆ ಕಿಟ್ಟಪ್ಪ? ಅಂತಾ ನಿರ್ದೇಶಕರನ್ನು ಕೇಳಿದೆ. ಅವರು ಹೋ ಬಿಡಬೋದು ಅಂದ್ರು. `ಮಾಡ್ತಿರೋದು ಪ್ಯಾರಾ ಕಮಾಂಡೋ ಪಾತ್ರ. ಈ ಥರ ಉದ್ದುದ್ದ ಜುಟ್ಟು ಬಿಟ್ರೆ ಯಾರೂ ಪ್ರಶ್ನೆ ಮಾಡಲ್ವಾ?’ ಅಂತಾ ಕೇಳಿದೆ. `ಪ್ರತೀ ಸಿನಿಮಾದಲ್ಲೂ ಒಂದೊಂದು ಹುಡುಗೀನ ಮದುವೆ ಆದ್ರೇನೇ ಯಾರೂ ಕೇಳಲ್ಲ. ಜುಟ್ಟನ್ನ ಯಾರು ಪ್ರಶ್ನಿಸ್ತಾರೆ’ ಅಂದ್ರು. ಜುಟ್ಟು ಉಳಕೊಂತು! ಆಮೇಲೇನಾಯ್ತು ನಿಮಗೇ ಗೊತ್ತಲ್ಲ… ಸಣ್ಣ ಮಕ್ಕಳಿಂದ ಹಿಡಿದು ದೊಡ್ಡೋರ ತನಕ ಇದೇ ಥರ ಹೇರ್ ಕಟ್ ಮಾಡಿಸಿಕೊಂಡು ಫಾಲೋ ಮಾಡಿದ್ರು…

ಸುಂದರಿ ಸುಂದರಿ ಹಾಡಲ್ಲಿ ಶೂ ಹಾಕ್ಕೊಂಡು ಭರತನಾಟ್ಯ ಮಾಡಿದೀರಲ್ಲ ಕಷ್ಟ ಆಗಲಿಲ್ವಾ?

ಡ್ಯಾನ್ಸ್ ಮಾಡೋದೂ ಅಂದ್ರೆನೇ ನನಗೆ ಮುಜುಗರ. `ಯಾವ ಸಾಂಗಲ್ಲೂ ಡ್ಯಾನ್ಸೇ ಮಾಡ್ತಿಲ್ಲ ನೀವು. ಈ ಹಾಡಲ್ಲಾದ್ರೂ ಒಂಚೂರು ಡ್ಯಾನ್ಸ್ ಮಾಡಿ’ ಅಂತಾ ನಿರ್ದೇಶಕ ಕೃಷ್ಣ ರಿಕ್ವೆಸ್ಟ್ ಮಾಡಿದ್ರು. ಹರ್ಷ ಮಾಸ್ಟರ್ ಸ್ಟೆಪ್ ಹೇಳಿಕೊಟ್ರು ಮಾಡಿದ್ದೀನಿ. ನಿಜ ಹೇಳಬೇಕು ಅಂದ್ರೆ, ಹೆಬ್ಬುಲಿಯಲ್ಲಿ ಅಷ್ಟೇ ಡ್ಯಾನ್ಸ್ ಮಾಡಿರೋದು ನಾನು.

ಹೊಸಾ ಗೆಟಪ್ಪು ಹೇಗೆ ಸೃಷ್ಟಿಯಾಯ್ತು?

ಪ್ರತಿಯೊಂದು ಪಾತ್ರಾನೂ ಒಂದು ಸ್ಕ್ರಿಪ್ಟ್ ಮೇಲೆ ಡಿಪೆಂಡ್ ಆಗಿರತ್ತೆ. ಈ ಪಾತ್ರಕ್ಕೆ ಹೇಗೆಲ್ಲಾ ಮಾಡಿದರೆ ಚೆಂದಾ ಅಂತಾ ಯೋಚಿಸುವಾಗ ಹುಟ್ಟಿಕೊಂಡಿದ್ದಿದು. ನನಗೆ ಗೊತ್ತಿರೋಹಾಗೆ ಪರದೆಮೇಲೆ ನಾವು ಚೆನ್ನಾಗಿ ಬರಬೇಕೆಂದರೆ, ಮೊದಲು ನಮ್ಮ ಸುತ್ತ ಇರೋ ಟೆಕ್ನಿಷಿಯನ್ಸ್ ನಮ್ಮನ್ನು ಪ್ರೀತಿಸಬೇಕು. ಒಬ್ಬ ನಟ ಈ ಥರ ನಡೆದರೆ ಚೆಂದ, ಹಾಡಿದರೆ ಚೆಂದ, ಈ ಥರಾ ಮಾತಾಡಿದ್ರೆ… ಹಾಗೇ ಕಲಾವಿದರೂ ಕೂಡಾ ತಮ್ಮ ಪಾತ್ರವನ್ನು ಪ್ರೀತಿಸಬೇಕು, ಆ ಪಾತ್ರಕ್ಕೆ ಜೀವ ಕೊಡಲು ಶ್ರಮ ವಹಿಸಬೇಕು. ಹೀಗೆ ಸಿನಿಮಾದ ಹಿಂದೆ ದುಡಿಯುವ ಪ್ರತಿಯೊಬ್ಬ ತಂತ್ರಜ್ಞ, ಕಲಾವಿದ ಕೂಡಾ ಯೋಚಿಸಿ ಪ್ರೇಕ್ಷರ ದೃಷ್ಟಿಯಲ್ಲಿ ಸಿನಿಮಾ ಮಾಡಿದಾಗ ಮಾತ್ರ ಆ ಚಿತ್ರ ಗೆಲ್ಲೋದಕ್ಕೆ ಸಾಧ್ಯ. ದುಡ್ಡು ಕೊಟ್ಟಿದ್ದೀವಿ ತಾನೆ ಮುಚ್ಕಂಡು ಬಂದು ಕೆಲಸ ಮಾಡು ಅನ್ನೋ ಪರಿಸ್ಥಿತಿ ಉದ್ಭವವಾಗತ್ತಲ್ಲಾ? ಆ ಸಿನಿಮಾ ಉದ್ಧಾರ ಆಗಲು ಸಾಧ್ಯವೇ ಇಲ್ಲ. ನನ್ನ ಕೆರಿಯರ್ ನಲ್ಲಿ ನಾನು ಅಂತಾ ಪರಿಸ್ಥಿತಿಗಳನ್ನು ಸಾಕಷ್ಟು ಸಾರಿ ಎದುರಿಸಿದ್ದೀನಿ. ದುಡ್ಡು ಕೊಟ್ಟಿದ್ದಾರಲ್ಲಾ ಅನ್ನೋ ಕಾರಣಕ್ಕೆ ಹೋಗಿ ಆಕ್ಟ್ ಮಾಡಿ ಬಂದಿದ್ದಿದೆ.

ತೆರೆ ಮೇಲೆ ಹೀರೋ ಹೀರೋಯಿನ್ ಸುಂದರವಾಗಿ ಕಾಣುವುದರ ಹಿಂದೆೆ ಸಾಕಷ್ಟು ಕೈಗಳು ಕೆಲಸ ಮಾಡಿರುತ್ತೆ. ನಿರ್ಮಾಪಕರ ಧಾರಾಳತನ ಕೂಡಾ ಮುಖ್ಯವಾಗಿರುತ್ತೆ. ಸಿನಿಮಾದ ಪಾತ್ರಗಳಿಗೆ ಬಟ್ಟೆ ಖರೀದಿಸಲು ಅಂಗಡಿಗೆ ಹೋದವರು ಅಲ್ಲಿ ಎಷ್ಟು ದುಡ್ಡು ಹೊಡ್ಕಳಕ್ಕಾಗತ್ತೆ? ಎಷ್ಟು ಉಳಿಸಬಹುದು? ಅಂತಾ ಯೋಚಿಸಿಲು ಶುರು ಮಾಡಿದಾಗ ಸಿನಿಮಾ ಸಪ್ಪೆ ಅನಿಸದೇ ಇರಲು ಸಾಧ್ಯವಾ?

ಆದರೆ, ಹೆಬ್ಬುಲಿಯಲ್ಲಿ ಹೀಗೆಲ್ಲಾ ಆಗಲು ಸಾಧ್ಯವೇ ಇರಲಿಲ್ಲ. ನಿರ್ಮಾಪಕರು ಕೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದರು. ಪ್ರತಿಯೊಂದು ವಿಚಾರದಲ್ಲೂ ಧಾರಾಳವಾಗಿ ಖರ್ಚು ಮಾಡಿದ್ದರ ಪ್ರತಿಫಲವಾಗಿ `ಹೆಬ್ಬುಲಿ’ ಇವತ್ತು ಇಷ್ಟೊಂದು ರಿಚ್ ಆಗಿ ಮೂಡಿಬರಲು ಸಾಧ್ಯವಾಗಿದೆ.

ರವಿಚಂದ್ರನ್ ಅವರೊಟ್ಟಿಗೆ ಮತ್ತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ರವಿ ಸರ್ ಕನಸುಗಾರ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ಸಿನಿಮಾಗಳನ್ನ ನೋಡಿಕೊಂಡು ಬೆಳೆದವನು ನಾನು. ಫಸ್ಟ್ ಟೈಮ್ ಅವರನ್ನು ನಾನು ನೋಡಿದ್ದು ನಮ್ಮ ಅಕ್ಕನ ಮದುವೇಲಿ. ಅವರು ಬರ್ತಾರೆ ಅಂತಾ ಇಡೀ ದಿನ ಕಾದುಕೊಂಡಿದ್ವಿ. ಅವರ ಸ್ಟೆöÊಲಲ್ಲೇ ಬಂದ್ರು. ಆಗ ಇನ್ ಶರ್ಟ್ ಮಾಡ್ತಿದ್ರು. ಒಂದೇ ಕೈಲಿ ಬೊಕೆ ಹಿಡ್ಕೊಂಡು ಬಂದೋರು ಹೀಗೆ ಕೊಟ್ಟು ಹಾಗೆ ಕಾರು ಹತ್ತಿ ಹೊರಟುಹೋದ್ರು. ಒಮ್ಮೆ ಅವರ ಮನೆಗೆ ಹೋಗಿ ಕಾಫಿ ಕುಡಿದಿದ್ದೆ. ಆವತ್ತಿನ ಮಟ್ಟಿಗೆ ಅದು ನನ್ನ ಬದುಕಿನ ಅತಿದೊಡ್ಡ ಅಚೀವ್’ಮೆಂಟ್ ಆಗಿತ್ತು. ಎಲ್ಲೋ ಒಂದಿನ ನಾವು ಅವರೊಟ್ಟಿಗೆ ಸಿನಿಮಾ ಮಾಡಬೇಕು ಅಂತಾ ಆಸೆ ಇತ್ತೇ ವಿನಃ ಅದು ಹೀಗೆ ಪದೇ ಪದೆ ನೆರವೇರತ್ತೆ ಅಂದುಕೊಂಡಿರಲಿಲ್ಲ.
ರವಿ ಸರ್ ನನ್ನನ್ನು ಯಾವತ್ತೂ ಬೇರೆಯವನು ಅಂತಾ ನೋಡಿಲ್ಲ, ಅವರು ನನ್ನನ್ನ ಮಗನ ಥರಾ ನೋಡಿದ್ದಾರೆ. ಅವರಿಗೆ ಯಾರನ್ನೋ ಮೆಚ್ಚಿಸೋಕೆ ಮುಖವಾಡ ಹಾಕಿಕೊಂಡು ಬದುಕೋದಕ್ಕೆ ಬರೋದಿಲ್ಲ. ಅವರ ಜೊತೆಗೆ ಕೆಲಸ ಮಾಡೋದು ಸುಲಭ. ಆದರೆ ಅವರನ್ನು ನಿಭಾಯಿಸೋದು ಕಷ್ಟ.

ಅರ್ಜುನ್ ಜನ್ಯ ಬಗ್ಗೆ…

ಅರ್ಜುನ್ ಜನ್ಯಾ ಬಗ್ಗೆ ೨೦೦೯ರಲ್ಲೇ ನಾನು ಹೇಳಿದ್ದೆ. ನನ್ನ ಮಾತು ನಿಜವಾಗಿದೆ. ಈಗ ಆತ ಎಲ್ಲಿರಬೇಕೋ ಅಲ್ಲಿದ್ದಾನೆ. ಇಷ್ಟೇ ಅಲ್ಲ, ಆ ಹುಡುಗ ಇನ್ನೂ ದೊಡ್ಡ ಎತ್ತರಕ್ಕೆ ರ‍್ತಾನೆ. ಇದಿಷ್ಟೇ ನಾನು ಅವನ ಕುರಿತಾಗಿ ಹೇಳೋದು.

ರವಿ ಶಂಕರ್ ಮತ್ತು ನೀವು ಒಟ್ಟಿಗೇ ನಿಂತಾಗ ಯಾರ ದನಿ ಹೆಚ್ಚು ಅನಿಸುತ್ತೆ?

ನನ್ನ ಮನೆಯಲ್ಲಿ ನನೊಬ್ಬನದ್ದೇ ವಾಯ್ಸ್! ಅವರದ್ದು ಹುಟ್ಟಿನಿಂದಲೇ ಬಂದಿರುವ ಕಂಠ. ಅವರ ತಂದೆ ಕೂಡಾ ಕಂಠದಾನ ಕಲಾವಿದರಾಗಿದ್ದವರು. ಅವರ ಮನೇಲೇ ಒಬ್ಬರಿಗೊಬ್ಬರಿಗೆ ಕಾಂಪಿಟೇಷನ್ ಇದೆ. ಅವರ ಮೂರೂ ಜನ ಅಣ್ಣ ತಮ್ಮಂದಿರ ದನಿ ದೊಡ್ಡದು. ಮೂರು ಜನರನ್ನು ಒಟ್ಟಿಗೇ ವೇದಿಕೆಯಲ್ಲಿ ನಿಲ್ಲಿಸಿದರೆ ನಿಜವಾದ ಅದ್ಭುತ ಸೃಷ್ಟಿಯಾಗತ್ತೆ. ರವಿಶಂಕರ್ ಯಾವಾಗಲೂ ಹೇಳ್ತಾ ರ‍್ತಾನೆ- `ಸುದೀಪ್ ಕೆಂಪೇಗೌಡದಲ್ಲಿ ಅವಕಾಶ ಕೊಟ್ಟಿದ್ರಿಂದ್ಲೇ ನಾನಿವತ್ತು ಇಷ್ಟು ಹೆಸರು ಮಾಡಲು ಸಾಧ್ಯವಾಗಿದ್ದು’ ಅಂತಾ. ಆದರೆ ಅವನಿಂದ ಎಷ್ಟು ಕಲಾವಿದರು ಬದುಕಿದ್ದಾರೆ ಗೊತ್ತಾ? ತೆಲುಗಿನಲ್ಲಿ ಅದೆಷ್ಟೋ ಕಲಾವಿದರಿಗೆ ಈತನೇ ಕಂಠದಾನ ಮಾಡೋದು. ಇವತ್ತಿಗೂ ರವಿಶಂಕರ್ ಬದಲಿಗೆ ಕಂಠದಾನ ಮಾಡಲು ಆಲ್ಪರ್ ನೇಟಿವ್ ಹುಟ್ಟಿಕೊಂಡಿಲ್ಲ. ಪ್ರತಿಭೆಯಲ್ಲಿ ರವಿಶಂಕರ್ ನಿಜಕ್ಕೂ ದೈತ್ಯ…

ಹೆಬ್ಬುಲಿ ಸಿನಿಮಾದ ನಿರ್ಮಾಪಕರ ಬಗ್ಗೆ ಹೇಳಿ…

ಈ ಸಿನಿಮಾಗೆ ಇಬ್ಬರು ನಿರ್ಮಾಪಕರು. ಒಬ್ಬರು ಉಮಾಪತಿ. ಈತ ನನ್ನ ಗೆಳೆಯ. ಇಷ್ಟು ಎತ್ತರದ ಅಜಾನುಬಾಹು ಉಮಾಪತಿ ನೋಡಲು ರಫ್ ಅಂಡ್ ಟಫ್ ಆಗಿ ಕಂಡರೂ ಎಲ್ಲರನ್ನೂ ಪ್ರೀತಿಸುವ ಗುಣ ಅವನದ್ದು. ಕರೆಕ್ಟಾಗಿ ಹೇಳಬೇಕೆಂದರೆ, ಕಡಿಮೆ ವಯಸ್ಸಿನ ವಯಸ್ಸಿನ ಓವರ್ ಗ್ರೋತ್ ಬೇಬಿ ಆತ. ಅಪಾರ ಜನರನ್ನು ಸಂಪಾದಿಸಿರುವ ಹುಡುಗ. ದುಡ್ಡಿದೆ ಅಂತಾ ಬಂದು ಸುಮ್ನೇ ಸುರಿದು ಸುರಿದೂ ಸಿನಿಮಾ ಮಾಡೋದಲ್ಲ. ಪ್ರತಿಯೊಂದನ್ನೂ ಕಲಿತು, ಸಿನಿಮಾವನ್ನು ಪ್ರೀತಿಸಿ ನಿರ್ಮಾಣ ಮಾಡಬೇಕು. ಉಮಾಪತಿಯಿಂದ ಆ ಕೆಲಸ ಆಗಿದೆ ಅನ್ನೋದು ನನಗೆ ಖುಷಿ. ಇನ್ನು ಮತ್ತೊಬ್ಬ ನಿರ್ಮಾಪಕರು ರಘುನಾಥ್. ಅವರು ಕೂಡಾ ಮಗುವಿನ ಮನಸ್ಸಿನ ವ್ಯಕ್ತಿ. ಅದ್ಭುತವಾದ ಮಾನವೀಯ ಮೌಲ್ಯಗಳನ್ನು ಹೊಂದಿರುವವರು. ಅವರಿಗೆ ನೋವನನು ಎಕ್ಸ್’ಪ್ರೆಸ್ ಮಾಡಿಕೊಳ್ಳಕ್ಕೆ ಬರಲ್ಲ. ಖುಷಿಯನ್ನು ತುಂಬಾ ಚನ್ನಾಗಿ ಶೇರ್ ಮಾಡಿಕೊಳ್ತಾರೆ. ಈ ಇಬ್ಬರೂ ಸೇರಿ ತುಂಬಾ ಪ್ರೀತಿ ಇಟ್ಟು `ಹೆಬ್ಬುಲಿ’ಯನ್ನು ತಯಾರು ಮಾಡಿದ್ದಾರೆ.

ನಿರ್ದೇಶಕ ಕೃಷ್ಣ ಅವರ ಕುರಿತಾಗಿ ನಿಮ್ಮ ಅನಿಸಿಕೆ..

ಕೃಷ್ಣನಲ್ಲಿ ನನಗೆ ಇಷ್ಟವಾಗುವ ಒಂದಿಷ್ಟು ಗುಣಗಳಿವೆ. ಆತನಿಗೆ ಹಿಂದೆ ಒಂದು ಮುಂದೆ ಒಂದು ಮಾತಾಡಲು ಬರೋದಿಲ್ಲ. ಯಾವತ್ತಿಗೂ ಯಾವ ಭ್ರಷ್ಟ ಕೆಲಸಕ್ಕೂ ಕೈ ಹಾಕುವ ವ್ಯಕ್ತಿಯಲ್ಲ. ಆತನ ಡೆಡಿಕೇಷನ್ ಬಗ್ಗೆ ನನಗೆ ಅಪಾರ ಒಲವು. ಒಟ್ಟಾರೆ ಕೃಷ್ಣ ನನ್ನ ದೃಷ್ಟಿಯಲ್ಲಿ ತೆರೆದ ಪುಸ್ತಕ ಇದ್ದಂತೆ. ನನ್ನೊಟ್ಟಿಗೆ ಕೆಲಸ ಮಾಡಿದ್ದಾನೆ ಅನ್ನೋ ಕಾರಣಕ್ಕೆ ನಾನು ಈ ಮಾತುಗಳನ್ನು ಹೇಳುತ್ತಿಲ್ಲ. ಮುಂದೆ ಆತ ಯಾವ ಹೀರೋ ಜೊತೆ ಕೆಲಸ ಮಾಡಿದರೂ ಇದಕ್ಕಿಂತ ದೊಡ್ಡ ಮಟ್ಟದಲ್ಲೇ ಇರುತ್ತದೆ ಅನ್ನೋದು ನನ್ನ ನಂಬಿಕೆ.

ಇನ್ನಷ್ಟು ಓದಿರಿ

Scroll to Top