ಸಿದ್ಧರಾಮಯ್ಯ ಪಾತ್ರ ಬೇಡ ಅಂದರು ಡಾಲಿ ಧನಂಜಯ!

Picture of Cinibuzz

Cinibuzz

Bureau Report

ಗೆಲುವು, ಸೋಲು, ವ್ಯಾಪಾರ, ವ್ಯವಹಾರಗಳು ಏನೇ ಇರಲಿ ಸತತವಾಗಿ ಸಿನಿಮಾ ಮಾಡುತ್ತಾ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ. ಧನಂಜಯ ತಮ್ಮ ಕೈಲಿ ಸಾಕಷ್ಟು ಸಿನಿಮಾಗಳನ್ನಿಟ್ಟುಕೊಂಡಿದ್ದಾರೆ. ಒಬ್ಬ ನಟನ ಸಿನಿಮಾ ಬಾಕ್ಸಾಫೀಸಲ್ಲಿ ವರ್ಕೌಟ್ ಆಗುತ್ತಿಲ್ಲ ಅಂತಾ ಗೊತ್ತಾಗುತ್ತಿದ್ದಂತೇ ಪ್ರೊಡ್ಯೂಸರುಗಳು ಅವರತ್ತ ಸುಳಿಯೋದಿಲ್ಲ. ಆದರೆ ಈ ವಿಚಾರದಲ್ಲೂ ಈತ ಲಕ್ಕಿ. ಧನು ಅವರಿಗಾಗಿ ಸಾಕಷ್ಟು ಜನ ಕಥೆ ರೆಡಿಮಾಡಿಟ್ಟುಕೊಂಡಿದ್ದಾರೆ. ಡಾಲಿ ಕಾಲ್ ಶೀಟ್ ಕೊಟ್ಟರೆ ಸಾಕು ಅಂತಾ ಕಾದಿರುವ ನಿರ್ಮಾಪಕರೂ ಇದ್ದಾರೆ.

ಅದ್ಯಾವ ಘಳಿಗೆಯಲ್ಲಿ ದುನಿಯಾ ಸೂರಿ ಟಗರು ಅನ್ನೋ ಸಿನಿಮಾಗೆ ʻಡಾಲಿʼ ಎನ್ನುವ ಪಾತ್ರವನ್ನು ಬರೆದರೋ? ಅದಕ್ಕೆ ಧನಂಜಯಾನೇ ಬೇಕು ಅಂತಾ ಚಾಯ್ಸ್ ಮಾಡಿದರೋ ಗೊತ್ತಿಲ್ಲ. ನುಗ್ಗಿಬಂದ ʻಟಗರುʼ ಜೊತೆ ಡಾಲಿಯ ನಸೀಬೇ ಬದಲಾಗಿಹೋಯ್ತು. ಕನ್ನಡ ಮಾತ್ರವಲ್ಲದೆ, ನೆರೆಯ ತಮಿಳು, ತೆಲುಗು ಚಿತ್ರರಂಗದಿಂದಲೂ ಅವಕಾಶಗಳು ಅರಸಿಬಂದವು. ಟಗರು ಬರುವ ಮುಂಚೆ ಇದೇ ಧನಂಜಯ ಎಂಟು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದರು. ಆರಂಭದ ಡೈರೆಕ್ಟರ್ ಸ್ಪೆಷಲ್ ಸಿನಿಮಾದಿಂದ ಹ್ಯಾಪಿ ನ್ಯೂ ಇಯರ್ ತನಕ ಎಲ್ಲ ಚಿತ್ರಗಳಲ್ಲೂ ಧನಂಜಯ ನಟನೆಯ ಬಗ್ಗೆ ಅತ್ಯದ್ಭುತ ಪ್ರತಿಕ್ರಿಯೆ ಬಂದವು. ಆದರೆ ಕಮರ್ಷಿಯಲ್ಲಾಗಿ ಯಾವುದೂ ʻಧನಾʼತ್ಮಕವಾಗಲಿಲ್ಲ. ಎಂಟು ಸಿನಿಮಾ ಮುಗಿಸಿ ಒಂಭತ್ತಕ್ಕೆ ಕಾಲಿಡೋ ಹೊತ್ತಿಗೆ ಧನಂಜಯನಿಗೆ ಹಿಡಿದಿದ್ದ ಸಾಡೇಸಾತ್ ಕೂಡಾ ಕೊನೆಯಾಗಿತ್ತು. ಡಾಲಿಯಾಗಿ ಮಾರ್ಪಟ್ಟು ಹೊಸಾ ಲುಕ್ಕಲ್ಲಿ ದಿಗ್ದರ್ಶನ ನೀಡಿದ್ದ ಧನಂಜಯನನ್ನು ಜನ ಅಪ್ಪಿ ಮುದ್ದಾಡಿದರು. ವಿಲನ್ ರೋಲಲ್ಲಿ ಕಾಣಿಸಿಕೊಂಡ ನಟನ ಫೋಟೋಗಳು ಆಟೋಗಳ ಹಿಂದೆ ರಾರಾಜಿಸಿದವು.

ಕಳೆದ ನಾಲ್ಕು ವರ್ಷಗಳಲ್ಲಿ ಧನಂಜಯ ನಟನೆಯ ಸಾಕಷ್ಟು ಸಿನಿಮಾಗಳು ಸೆಟ್ಟೇರಿವೆ; ಬಿಡುಗಡೆಯಾಗಿವೆ. ಈ ಅವಧಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಏಕಮಾತ್ರ ನಟ ಡಾಲಿ ಅನ್ನೋದಕ್ಕೆ ಲೆಕ್ಕವಿದೆ. ಬೇರೆ ಹೀರೋಗಳ ಜೊತೆಗೆ ಪೋಷಕ ಪಾತ್ರಗಳಲ್ಲಿಯೂ ನಟಿಸುತ್ತಾ, ಹೀರೋ ಆಗಿಯೂ ಮುಂದುವರೆಯುತ್ತಿರುವ ಕಲಾವಿದ ಕೂಡಾ ಇವರೇ. ಹೆಚ್ಚೂ ಕಮ್ಮಿ ವಿಜಯ್ ಸೇತುಪತಿ ಮತ್ತು ಡಾಲಿ ಇಬ್ಬರ ಆಯ್ಕೆ ಒಂದೇ ರೀತಿ ಇದೆ. ಒಮ್ಮೆ ಹೀರೋ ಆದನಂತರ ಮತ್ತೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಾರದು ಎನ್ನುವ ಅಘೋಷಿದ ನಿಯಮವನ್ನು ಈ ಇಬ್ಬರೂ ನಟರು ಎಡಗಾಲಲ್ಲಿ ಒದ್ದು ಮುಂದೆ ಸಾಗುತ್ತಿದ್ದಾರೆ.

ಸದ್ಯದ ವಿಚಾರವೆಂದರೆ, ವಿಜಯ್ ಸೇತುಪತಿ ನಟಿಸುತ್ತಾರೆ ಎನ್ನಲಾಗುತ್ತಿರುವ, ಸಿ.ಎಂ. ಸಿದ್ಧರಾಮಯ್ಯ ಅವರ ಬದುಕಿನ ಕಥಾನಕವಾದ ʻಲೀಡರ್ ರಾಮಯ್ಯʼ ಚಿತ್ರವನ್ನು ಡಾಲಿ ಧನಂಜಯ ರಿಜೆಕ್ಟ್ ಮಾಡಿದ್ದಾರಂತೆ. ವಿಜಯ್ ಸೇತುಪತಿ ಸಿದ್ಧು ಅವರ ಈಗಿನ ಪಾತ್ರವನ್ನು ನಿಭಾಯಿಸುತ್ತಾರಂತೆ. ನಡುವಯಸ್ಸಿನ ಪಾತ್ರಕ್ಕೆ ಡಾಲಿ ಧನಂಜಯ ಅವರನ್ನು ಕೇಳಲಾಗಿ ʻನಾನು ಈ ಪಾತ್ರ ಮಾಡಲ್ಲʼ ಅಂತಾ ನೇರವಾಗೇ ಹೇಳಿಬಿಟ್ಟಿದ್ದಾರಂತೆ. ಸಿಎಂ ಸಿದ್ಧರಾಮಯ್ಯ ಅವರ ಪಾತ್ರದಲ್ಲಿ ನಟಿಸಲು ಡಾಲಿ ಒಲ್ಲೆ ಅಂದಿರೋದು ಯಾವ ಕಾರಣಕ್ಕೆ ಅನ್ನೋ ನಿಖರ ಕಾರಣವಂತೂ ಗೊತ್ತಿಲ್ಲ!

ಇನ್ನಷ್ಟು ಓದಿರಿ

Scroll to Top