ಬಾದ್‌ಶಾ ಬದಲಾದರೆ ಬಿಗ್‌ಬಾಸ್ ಬರ್ಬಾದ್!

ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋ ಕರ್ನಾಟಕದಲ್ಲಿ ಈ ವರೆಗೂ ಜೀವಂತವಾಗಿ ಉಳಿದಿದೆ ಅಂದರೆ ಅದಕ್ಕೆ ಬಹುಮುಖ್ಯ ಕಾರಣ ಬಾದ್‌ಶಾ ಕಿಚ್ಚ ಸುದೀಪ. ಇದು ಜಗತ್ತಿಗೇ ಗೊತ್ತಿರುವ ಸತ್ಯ. ಕಳೆದ ಹತ್ತು ವರ್ಷಗಳಿಂದ ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ ಯಶಸ್ವಿಯಾಗಿ ಮುಂದುವರೆಯುತ್ತಿದೆ; ಅದರಲ್ಲೂ ಹತ್ತನೇ ಸೀಜನ್ ಕಿರುತೆರೆ ಇತಿಹಾಸದಲ್ಲಿ ದೊಡ್ಡ ಮಟ್ಟದ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಮೊದಲು ಈ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ವಾಹಿನಿ ಬದಲಾಗಿ ಮತ್ತೊಂದು ಚಾನೆಲ್ಲಿನಲ್ಲಿ ಶೋ ಮುಂದುವರೆಯಿತು. ಆದರೆ ಸುದೀಪ್ ಮಾತ್ರ ಶೋ ನಿರೂಪಣೆಯನ್ನು ಯಥಾಪ್ರಕಾರವಾಗಿ ಮುಂದುವರೆಸಿದರು. ಭಾರತದ ಇತರೆ ಭಾಷೆಗಳಲ್ಲಿ ಬಿಗ್‌ಬಾಸ್ ಹೋಸ್ಟ್‌ಗಳು ಬದಲಾಗಿದ್ದಾರೆ. ಆದರೆ, ಕನ್ನಡದಲ್ಲಿ ಮಾತ್ರ ಕಿಚ್ಚ ಒಬ್ಬರೇ ಬ್ರೇಕ್ ಕೊಡದೆ ನಿಭಾಯಿಸುತ್ತಾ ಬಂದಿದ್ದಾರೆ. ವಾರದ ಕೊನೆಯಲ್ಲಿ ಸುದೀಪ್ ಅವರು ಬರೋದನ್ನೇ ಕಾದು ಜನ ಪ್ರೋಗ್ರಾಮು ನೋಡುತ್ತಾ ಬಂದಿದ್ದಾರೆ. ಹೀಗಿರುವಾಗ ಈಗ ಏಕಾಏಕಿ ಕಿಚ್ಚ ಸುದೀಪ್ ಬಿಗ್‌ಬಾಸ್ ಶೋನಿಂದ ಹೊರಬರುತ್ತಾರೆ ಎಂದು ಸುದ್ದಿಯಾಗಿದೆ. ನಿಜಕ್ಕೂ ವಾಹಿನಿ ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಂಡರೆ ಅಲ್ಲಿಗೆ ಬಿಗ್‌ಬಾಸ್ ಬರ್ಬಾದಾಗೋದು ಗ್ಯಾರೆಂಟಿ!
ಅಸಲೀಯತ್ತೆಂದರೆ, ಕಿಚ್ಚ ಸುದೀಪ್ ಅವರಿಗೆ ಈ ಶೋನಲ್ಲಿ ಭಾಗಿಯಾಗಲೇಬೇಕು ಎನ್ನುವ ಯಾವ ದರ್ದೂ ಇಲ್ಲ. ಇದೇ ಸಮಯವನ್ನು ಸಿನಿಮಾಗಾಗಿ ಮೀಸಲಿಟ್ಟರೆ ಅವರಿಗೆ ಆಗುವ ಲಾಭವೇ ಬೇರೆ. ಈ ಕೆಲಸಕ್ಕಾಗಿ ಕಾರ್ಯಕ್ರಮ ರೂಪಿಸುತ್ತಿರುವ ಕಂಪೆನಿ ಕಿಚ್ಚನಿಗೆ ಕೈತುಂಬಾ ಸಂಭಾವನೆ ಕೊಟ್ಟಿರಬಹುದು. ಆದರೆ, ಸುದೀಪ್ ಅವರು ಈ ಪ್ರೋಗ್ರಾಮಿಗಾಗಿ ದುಡ್ಡನ್ನು ಮೀರಿದ ಡೆಡಿಕೇಷನ್, ಶ್ರಮವನ್ನು ಧಾರೆಯೆರೆದಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಿಚ್ಚ ಸುದೀಪ್ ಭಾಷೆ, ದೇಶಗಳ ಗಡಿ ದಾಟಿ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿರುತ್ತಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಬಿಗ್‌ಬಾಸ್ ಸೀಸನ್ನಿನ ಶೂಟಿಂಗ್‌ನಲ್ಲಿ ಬಂದು ತೊಡಗಿಸಿಕೊಳ್ಳುತ್ತಾರೆ. ನಿದ್ರೆಯನ್ನು ಮರೆತು ದುಡಿಯುತ್ತಾರೆ. ಸಿನಿಮಾಗಳ ಶೂಟಿಂಗಲ್ಲಿ ಪಾಲ್ಗೊಂಡು ಎನರ್ಜಿಯೆಲ್ಲಾ ಬಸಿದುಹೋಗಿರುತ್ತದೆ. ಆದರೂ, ಎಲ್ಲಿದ್ದರೂ ಫ್ಲೈಟು ಹತ್ತಿಕೊಂಡು ಬಂದು, ಕಾಲುಗಳನ್ನು ಬಿಸಿನೀರಲ್ಲಿಟ್ಟುಕೊಂಡು ಸುಧಾರಿಸಿಕೊಂಡು ಕೆಲಸ ಮಾಡಿದ ಉದಾಹರಣೆಗಳಿವೆ. ಎಷ್ಟೇ ಡಿಗ್ರಿ ಜ್ವರ ಬಂದು ಹೈರಾಣಾಗಿದ್ದರೂ, ಏನೇ ಬಾಧೆಯಿದ್ದರೂ ಯಾವುದನ್ನೂ ತೋರಿಸಿಕೊಳ್ಳದೆ ರಿಯಾಲಿಟಿ ಶೋವೊಂದರ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ. ಅದಕ್ಕೇ ಹೇಳಿದ್ದು ಕಿಚ್ಚನ ಶ್ರಮ ಹಣ, ಸಂಪಾದನೆಯನ್ನು ಮೀರಿದ್ದು ಅಂತಾ!
ಯಾವುದೇ ಒಬ್ಬ ಸೂಪರ್ ಸ್ಟಾರ್ ಈ ಮಟ್ಟಿಗಿನ ಕಷ್ಟಗಳನ್ನು ಮೈಮೇಲೆಳೆದುಕೊಂಡು ಒಪ್ಪಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ಕಷ್ಟ ಸಾಧ್ಯ. ಆದರೆ ಸುದೀಪ್ ಅವರು ಬಿಗ್‌ಬಾಸ್ ಭಾರವನ್ನು ತಮ್ಮ ಹೆಗಲಿಗೇರಿಸಿಕೊಂಡು ಹತ್ತು ವರ್ಷಗಳ ಕಾಲ ಹೊತ್ತು ತಂದಿದ್ದಾರೆ. ಈ ಹೊತ್ತಲ್ಲಿ ವಾಹಿನಿ ಅವರ ಬದಲಿಗೆ ಬೇರೊಬ್ಬರನ್ನು ತಂದು ಕೂರಿಸುತ್ತದೆ ಅನ್ನೋದನ್ನು ನಂಬೋದಾದರೂ ಹೇಗೆ? ಒಂದು ವೇಳೆ ಸುದೀಪ್ ಅವರು ತಮ್ಮ ದುಡಿಮೆಗೆ ತಕ್ಕ ಪ್ರತಿಫಲವನ್ನು ಬಯಸಿದರು ಅನ್ನೋ ಕಾರಣಕ್ಕೆ ಬದಲಿ ವ್ಯವಸ್ಥೆ ಮಾಡುವುದಾಗಿ ವಾಹಿನಿ ಯೋಚಿಸಿದರೆ, ಅಥವಾ ಇಂಥದ್ದೊಂದು ಗಾಳಿ ಸುದ್ದಿಯನ್ನು ಹರಿಯಬಿಟ್ಟರೆ ಅಲ್ಲಿಗೆ ಕಾರ್ಯಕ್ರಮ ಕಣ್ಣು ಮುಚ್ಚಿ ಮೈಮೇಲೆ ಮಣ್ಣೆಳೆದುಕೊಳ್ಳೋದರಲ್ಲಿ ಯಾವ ಡೌಟೂ ಇಲ್ಲ!
ಹಾಗೆ ನೋಡಿದರೆ, ʻಸುದೀಪ್ ಬಿಗ್‌ಬಾಸ್ ಬಿಟ್ಟು ಹೊರಬರುತ್ತಾರೆʼ ಎನ್ನುವ ಗುಸುಗುಸು ಪ್ರತೀ ಸೀಜನ್ ಶುರುವಿಗೆ ಮುಂಚೆ ಹರಿದಾಡುವುದು ನಡೆದುಕೊಂಡೇ ಬಂದಿದೆ. ಖುದ್ದು ವಾಹಿನಿಯೇ ಇಂಥಾ ಗಾಸಿಪ್ಪನ್ನು ಹರಿಯಬಿಡತ್ತಾ ಗೊತ್ತಿಲ್ಲ. ಆದರೆ, ಯಥಾ ಪ್ರಕಾರವಾಗಿ ಅನೌನ್ಸ್‌ಮೆಂಟ್ ಹೊರಬಿದ್ದಾಗ ಕಿಚ್ಚ ಹೊಸದೊಂದು ಲುಕ್‌ನಲ್ಲಿ ಅನಾವರಣಗೊಂಡಿರುತ್ತಾರೆ. ಈ ಸಲವೂ ಅದೇ ಆಗಬಹುದು…
ಸದ್ಯದ ಮಾಹಿತಿಯ ಪ್ರಕಾರ ಇನ್ನೊಂದು ವಾರದಲ್ಲಿ ಬಿಗ್‌ಬಾಸ್ ಶೋಗೆ ಸಂಬಂಧಪಟ್ಟಂತೆ ಅಧಿಕೃತವಾದ ಮಾಹಿತಿ ಹೊರಬೀಳಲಿದೆ. ಆಗ ಬಾದ್‌ಶಾ ಬಿಗ್ ಬಾಸಲ್ಲಿ ಇರ್ತಾರಾ ಇಲ್ಲವಾ ಅನ್ನೋದು ಜಗಜ್ಜಾಹೀರಾಗಲಿದೆ!!












































