ಹ್ಯಾಟ್ರಿಕ್ ಹೀರೋ, ಸೆಂಚುರಿಸ್ಟಾರ್, ಎವರ್ ಗ್ರೀನ್ ಯಂಗ್ ಬಾಯ್, ಕರುನಾಡ ಚಕ್ರವರ್ತಿ, ಸ್ಯಾಂಡಲ್ ವುಡ್ ಕಿಂಗ್… ಹೀಗೆ ಹಲವು ಹೆಸರುಗಳಿಂದ ಗುರುತಿಸಿಕೊಂಡು ಬಂದಿರುವ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಡಾ. ಶಿವರಾಜ್ ಕುಮಾರ್. ಕಳೆದ ಮೂರೂವರೆ ದಶಕದಲ್ಲಿ ಶಿವಣ್ಣ ಸ್ಯಾಂಡಲ್‌ವುಡ್ ಮಟ್ಟಕ್ಕೆ ನಿಜಕ್ಕೂ ಕಿಂಗ್ ಥರಾ ಮೆರೆದವರು. ರಜನಿಕಾಂತ್ ಅವರ ಜೈಲರ್ ಮತ್ತು ಧನುಷ್ ಜೊತೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಳಲ್ಲಿ ನಟಿಸಿದ್ದೇ ಬಂತು, ತಮಿಳು ಜನ ಥೇಟು ರಜನಿಯಂತೇ ಇವರನ್ನೂ ಹೆಗಲ ಮೇಲೆ ಹೊತ್ತು ಕೊಂಡಾಡುತ್ತಿದ್ದಾರೆ.

ವಯಸ್ಸು ಅರವತ್ತೆರಡಾದರೂ ಅಪಾರ ಚಟುವಟಿಕೆಯಿಂದ ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಾ ಬಂದವರು. ಯಾವುದೇ ವೇದಿಕೆಯಲ್ಲಿ ಇವರ ಎನರ್ಜಿ ಬಗ್ಗೆ ಚರ್ಚೆಯಾಗದೇ ಇರೋದಿಲ್ಲ. ಅದ್ಯಾರ್ಯಾರ ಕೇಡುಗಣ್ಣು ಇವರಿಗೆ ತಾಕಿತೋ ಗೊತ್ತಿಲ್ಲ. ಶಿವಣ್ಣ ಈಗ ಏಕಾ ಏಕಿ ಮಂಕಾಗಿದ್ದಾರೆ. ತಿಂಗಳಿಂದೀಚೆಗೆ ಕಳಾಹೀನರಾಗಿಬಿಟ್ಟಿದ್ದಾರೆ. ಹೊರಗೆಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಮಾಧ್ಯಮದವರನ್ನು ಮೀಟ್ ಮಾಡಬೇಕೆಂದರೂ ಮನೆಗೆ ಕರೆಸಿಕೊಳ್ಳುತ್ತಾರೆ. ಶಿವಣ್ಣ ಯಾಕೆ ಹೀಗೆ ಮಾಡ್ತಾರೆ. ಮೀಡಿಯಾದವರನ್ನು ಅಷ್ಟು ದೂರವಿರುವ ಅವರ ಮನೆಗೆ ಬರಲು ಹೇಳುತ್ತಾರೆ… ಅಂತೆಲ್ಲಾ ಅಂದುಕೊಂಡಿದ್ದೇವೆ..
ಹೌದು… ಶಿವಣ್ಣನ ಆರೋಗ್ಯ ಮೊದಲಿನಂತಿಲ್ಲ. ಯಾವತ್ತೋ ಬಿದ್ದಿದ್ದ ಪೆಟ್ಟೊಂದು ತಲೆಯಲ್ಲಿ ಬ್ಲಡ್ ಕ್ಲಾಟ್ ಮಾಡಿತ್ತು. ವಿದೇಶಕ್ಕೆ ಹೋಗಿ ಸರಿ ಮಾಡಿಸಿಕೊಂಡು ಬಂದರು. ೨೦೧೫ರ ಅಕ್ಟೋಬರ್ ತಿಂಗಳಲ್ಲಿ ಶಿವರಾಜ್ ಕುಮಾರ್ ಅವರಿಗೆ ಲಘು ಹೃದಯಾಘಾತವಾಗಿತ್ತು. ಹೃದಯದ ರಕ್ತನಾಳದಲ್ಲಿ ಇದ್ದ ಬ್ಲಾಕ್ ತೆಗೆಯಲು ಆಂಜಿಯೋಪ್ಲಾಸ್ಟ್ ಮಾಡಿದ್ದರು.
ಇದಾದ ನಂತರ ಆಗಾಗ ಆರೋಗ್ಯ ತಪಾಸಣೆ ಮಾಡಿಕೊಂಡು ತಮ್ಮ ಪಾಡಿಗೆ ತಾವು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು. ಈ ನಡುವೆ ತಾಯಿ ಪಾರ್ವತಮ್ಮ ಮತ್ತು ಸಹೋದರ ಪುನೀತ್ ರಾಜ್ ಕುಮಾರ್ ನಿಧನದ ಕಾರಣಕ್ಕೆ ಶಿವಣ್ಣ ಮಾನಸಿಕವಾಗಿ ನೊಂದಿದ್ದರು. ಹಿರೀ ಮಗಳ ಅನಾರೋಗ್ಯ ಕೂಡಾ ಶಿವಣ್ಣನನ್ನು ಕಂಗಾಲು ಮಾಡಿತ್ತು.

ಇವೆಲ್ಲ ನೋವುಗಳಿಂದ ಹೊರಬಂದವರಂತೆ ಕಾಣುತ್ತಿದ್ದ ಶಿವಣ್ಣ ಈ ಹಿಂದಿಗಿಂತಾ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಲು ಶುರು ಮಾಡಿದರು. ಚುನಾವಣೆಗೆ ಸ್ಪರ್ಧಿಸಿದ್ದ ಪತ್ನಿ ಗೀತಾ ಅವರ ಪರವಾಗಿ ಊರೂರು ಸುತ್ತಿ ಪ್ರಚಾರ ಕೂಡಾ ಮಾಡಿದರು. ಒಬ್ಬ ವ್ಯಕ್ತಿ ರೆಸ್ಟ್ ಲೆಸ್ ಆಗಿ ಎಷ್ಟೂಂತ ದುಡಿಯಲು ಸಾಧ್ಯ? ಕಳೆದ ಏಪ್ರಿಲ್ ಹೊತ್ತಿಗೆ ಶಿವರಾಜ್ ಕುಮಾರ್ ತೀರಾ ಬಸವಳಿದುಹೋಗಿದ್ದರು. ಆರೋಗ್ಯ ಕೈಕೊಟ್ಟಿತ್ತು. ಇನ್ನು ದೇಹಕ್ಕೆ ವಿಶ್ರಾಂತಿ ಬೇಕೇಬೇಕು ಅಂತಾ ವೈದ್ಯರು ತಿಳಿಸಿದ್ದರು. ಸದ್ಯ ಚಿತ್ರೀಕರಣ ಮುಗಿಸಿರುವ ಸಿನಿಮಾಗಳ ಹೊರತಾಗಿ ಯಾವೆಲ್ಲಾ ಚಿತ್ರಗಳಿಗಾಗಿ ಅಡ್ವಾನ್ಸ್ ಪಡೆದಿದ್ದರೋ, ಆ ಸಿನಿಮಾಗೆ ಸಂಬಂಧಪಟ್ಟವರನ್ನು ಕರೆಸಿಕೊಂಡು ಮುಂಗಡ ಹಣವನ್ನು ವಾಪಾಸು ಕೊಡಲು ಮುಂದಾದರು. ಅಷ್ಟೊತ್ತಿಗಾಗಲೇ ಶಿವಣ್ಣನ ಆರೋಗ್ಯದಲ್ಲಿ ಗಂಭೀರವಾದ ಸಮಸ್ಯೆಯೇ ಎದುರಾಗಿರಬೇಕು ಅಂತಾ ಜನ ಅಂದಾಜಿಸಿದ್ದರು.
ಈಗ ಆ ಅನುಮಾನ ನಿಜವಾಗಿದೆ. ಶಿವರಾಜ್ ಕುಮಾರ್ ಅವರ ಪಿತ್ಥಕೋಶದಲ್ಲಿ (gallbladder) ಸೋಂಕು ಶುರುವಾಗಿರುವುದು ಖಚಿತಗೊಂಡಿದೆಯಂತೆ. ಈ ಕಾರಣಕ್ಕೇ ಗೀತಾ ಶಿವರಾಜ್ ಕುಮಾರ್ ಅವರು ಡೇಟ್ಸ್‌ಗಾಗಿ ಸರತಿಯಲ್ಲಿ ಕಾದಿದ್ದವನ್ನು ಕರೆಸಿ ಅಡ್ವಾನ್ಸ್ ವಾಪಾಸು ಕೊಟ್ಟಿದ್ದು. ಸದ್ಯ ಶಿವಣ್ಣ ಮನೆ ಬಿಟ್ಟು ಹೆಚ್ಚಾಗಿ ಹೊರಬರುತ್ತಿಲ್ಲ. ತೆರೆಗೆ ಬರಲು ರೆಡಿಯಾಗಿರುವ ಭೈರತಿ ರಣಗಲ್ ಚಿತ್ರದ ಪ್ರಚಾರಕ್ಕಾಗಿ ಕೆಲವಾರು ಟೀವಿ ವಾಹಿನಿಗಳನ್ನು ಕರೆದು ಸಂದರ್ಶನ ನೀಡುತ್ತಿದ್ದಾರೆ. ದಿನಕ್ಕೆ ಎರಡೇ ಸಂದರ್ಶನ. ನಡುವಿನಲ್ಲಿ ಎರಡೆರಡು ಗಂಟೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಭೈರತಿ ರಣಗಲ್ ಚಿತ್ರಕ್ಕೆ ಬೇಕಿರುವ ಒಂದು ಮಟ್ಟದ ಪಬ್ಲಿಸಿಟಿ ಕೆಲಸ ಮುಗಿಸಿದ ನಂತರ ಶಿವಣ್ಣ ಸೀದಾ ಅಮೆರಿಕಕ್ಕೆ ಹೋಗಲಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆದು ಬಂದು ಒಂದಿಷ್ಟು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಆ ನಂತರ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದರ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನುತ್ತಿದೆ ಮೂಲ!
ಅನಾರೋಗ್ಯ ಯಾರನ್ನೂ ಹೇಳಿಕೇಳಿ ಬರುವಂಥದ್ದಲ್ಲವಲ್ಲಾ… ಯಾವೂರ ದೊರೆಯೇ ಆಗಲಿ, ಎಷ್ಟೇ ದೊಡ್ಡ ಸೂಪರ್ ಸ್ಟಾರೇ ಆಗಲಿ ಆರೋಗ್ಯ ಕೈಕೊಟ್ಟಾಗ ಎಚ್ಚರ ವಹಿಸಲೇಬೇಕು. ಪುಣ್ಯಕ್ಕೆ ಶಿವಣ್ಣ ಮತ್ತು ಅವರ ಸುತ್ತಲಿನವರು ಆ ಎಚ್ಚರವನ್ನು ವಹಿಸಿದ್ಧಾರೆ. ಈ ಅನಾರೋಗ್ಯದ ಸಮಸ್ಯೆಗಳನ್ನೆಲ್ಲಾ ಗೆದ್ದು, ಎಂದಿನಂತೆ ಗೆಲುವಾಗಿ ಬಂದು ನಿಲ್ಲಲಿ ರಾಜವಂಶದ ಈ ಹಿರೀಮಗ. ಕನ್ನಡಿಗರು ಮಾತ್ರವಲ್ಲ, ಭಾರತೀಯ ಚಿತ್ರರಂಗದ ಪ್ರತಿಯೊಬ್ಬರ ಹರಕೆ, ಹಾರೈಕೆ ನಿಮ್ಮೊಂದಿಗಿರುತ್ತದೆ… ಎಲ್ಲಾ ಒಳ್ಳೇದಾಗ್ಲಿ ಶಿವಣ್ಣ…!












































