ಅದು 2006 ನೇ ಇಸವಿ, ಸತತ ಸೋಲುಗಳಿಂದ ಕಂಗೆಟ್ಟಿದ್ದ ಕನ್ನಡ ಚಿತ್ರರಂಗಕ್ಕೆ ಗೆಲುವಿನ ಬಂಗಾರದ ಬೆಳೆ ತಂದುಕೊಟ್ಟಿದ್ದು ಮುಂಗಾರು ಮಳೆ ಸಿನೆಮಾ.. ಯಾರೂ ನಿರೀಕ್ಷಿಸದ ಯಾರೂ ಊಹಿಸಿರದ ಗೆಲುವು ಅದು! ಸ್ವತಃ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ E.ಕೃಷ್ಣಪ್ಪ & ಕಾರ್ಯಕಾರಿ ನಿರ್ಮಾಪಕ G.ಗಂಗಾಧರ್ ಸಹ ಆ ಗೆಲುವನ್ನು ನಿರೀಕ್ಷಿಸಿರಲಿಲ್ಲ.

ಅಂದು ಕಾಮಿಡಿ ಟೈಮ್ ಗಣೇಶ್ ಭಟ್ಟರನ್ನು E.ಕೃಷ್ಣಪ್ಪ ಅವರ ಬಳಿ ಕರೆದುಕೊಂಡು ಹೋದಾಗ ನಮ್ಮೂರ ಹುಡುಗನಿಗಾಗಿ ಹಣ ಹಾಕುತ್ತೇನೆ ವಾಪಾಸ್ ಬಂದರೆ ಬರಲಿ ಎಂದು ಬಂಡವಾಳ ಹೂಡಿದವರು ಕೃಷ್ಣಪ್ಪ, ಬಂಡವಾಳದ ಜೊತೆಗೆ “ಮುಂಗಾರು ಮಳೆ” ಎಂಬ ಶೀರ್ಷಿಕೆಯನ್ನೂ ನೀಡಿ ಗೆಲುವಿನ ಪಯಣಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಪ್ರೀತಂ ಗುಬ್ಬಿ ಬರೆದ ಕಥೆ ಬಹಳ ನವಿರಾಗಿ, ಆಪ್ತವಾಗಿ ನಮ್ಮ ನಡುವೆಯೇ ನಡೆಯುವ ಸಹಜತೆಯಿಂದ ಕೂಡಿತ್ತು. ಅದಕ್ಕೆ ಚಿತ್ರಕಥೆ ಸಂಭಾಷಣೆ ಮೂಲಕ ತಮ್ಮದೇ ವಿಶಿಷ್ಟ ಪ್ರತಿಭಾ ಮೆರುಗನ್ನು ನೀಡಿದ್ದ ಭಟ್ಟರು ಒಂದು ಅದ್ಭುತ ಸ್ಕ್ರಿಪ್ಟ್ ಹಿಡಿದು ಚಿತ್ರೀಕರಣಕ್ಕೆ ಸಿದ್ದರಾಗಿದ್ದರು. ಸಾಮಾನ್ಯವಾಗಿ ಸಿನೆಮಾದವರು ಚಿತ್ರೀಕರಣಕ್ಕೆ ಅಡ್ಡಿಯಾಗುತ್ತದೆಂದು ಮಳೆಯನ್ನು ತಪ್ಪಿಸಿ ಶೆಡ್ಯೂಲ್ ಪ್ಲ್ಯಾನ್ ಮಾಡಿದರೆ ಭಟ್ಟರು ಮಳೆಯನ್ನೇ ಹುಡುಕಿಕೊಂಡು ಶೂಟಿಂಗ್ ಗೆ ಹೊರಟರು!
ಇತ್ತ ಸಂಗೀತ ನಿರ್ದೇಶಕ ಮನೋಮೂರ್ತಿ ಅದ್ಯಾವ ಮೂಡಲ್ಲಿ ಹಾಡುಗಳನ್ನು ಸಂಯೋಜಿಸಿದರೋ, ಕಾಯ್ಕಿಣಿ ಭಟ್ಟರು ಸೇರಿದಂತೆ ವಿ.ನಾಗೇಂದ್ರ ಪ್ರಸಾದ್, ಕವಿರಾಜ್ & ಹೃದಯ ಶಿವ ಅದ್ಯಾವ ಮಾಯೆಯಲ್ಲಿ ಹಾಡುಗಳನ್ನು ರಚಿಸಿದರೋ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್! ಮೊದಲ ಬಾರಿಗೆ ಅನ್ಯಭಾಷಿಕರ ಮನೆ, ಅಂಗಡಿಗಳಲ್ಲೂ ಮುಂಗಾರು ಮಳೆ ಹಾಡುಗಳು ರಿಪೀಟ್ ಮೋಡಲ್ಲಿ ಪ್ಲೇ ಆಗತೊಡಗಿತ್ತು!
ಛಾಯಾಗ್ರಾಹಕ ಕೃಷ್ಣ ಅವರ ಕ್ಯಾಮೆರಾ ಕೈಚಳಕ ಅಕ್ಷರಶಃ ನೋಡುಗರ ಕಣ್ಣುಗಳನ್ನು ತಂಪಾಗಿಸಿತ್ತು. ಅದಕ್ಕೆ ಪೂರಕವಾದ ಆಧುನಿಕ ಕ್ಯಾಮೆರಾ ಉಪಕರಣಗಳನ್ನು ಒದಗಿಸಿದ E.ಕೃಷ್ಣಪ್ಪ & G.ಗಂಗಾಧರ್ ಅವರ ಅಭಿರುಚಿ, ಪ್ಯಾಶನ್ ಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು. ಮುಂಗಾರು ಮಳೆ ಎನ್ನುವ ಒಂದು ಸಿನೆಮಾ ಹಲವಾರು ದಾಖಲೆಗಳಿಗೆ, ಸಾಧನೆಗಳಿಗೆ ಸಾಕ್ಷಿಯಾಗಿತ್ತು. ನಾಯಕ ನಟ ಕಾಮಿಡಿ ಟೈಂ ಗಣೇಶ್ ಗೋಲ್ಡನ್ ಸ್ಟಾರ್ ಆದರು, ನಾಯಕ ನಟಿ ಪೂಜಾ ಗಾಂಧಿ ಮಳೆ ಹುಡುಗಿಯಾಗಿ ಇಂದು ನಟಿ ಅಷ್ಟೇ ಅಲ್ಲದೆ ನಿರ್ಮಾಪಕಿ, ರಾಜಕಾರಣಿಯಾಗಿಯೂ ಫೇಮಸ್ ಆಗಿದ್ದಾರೆ. ಜೊತೆಗೆ ಅನಂತ್ ನಾಗ್ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿದ್ದ ಎಲ್ಲಾ ಪೋಷಕ ನಟ ನಟಿಯರು ಸಿಕ್ಕಾಪಟ್ಟೆ ಬ್ಯುಸಿಯಾಗಿ ಹೋದರು.
ಹದಿನೆಂಟು ವರ್ಷಗಳ ಹಿಂದೆಯೇ ನೂರು ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರ ಮುಂಗಾರು ಮಳೆಯ ಯಶಸ್ಸನ್ನು ಕಂಡು ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಕೊಂಡವರೆಲ್ಲಾ ಚಿತ್ರರಂಗದ ಕಡೆ ಮುಖ ಮಾಡಿದರು ಕನ್ನಡ ಚಿತ್ರರಂಗ ಇನ್ನಿಲ್ಲದ ಹಾಗೆ ಬ್ಯಸಿಯಾಗಿ ಹೋಯ್ತು! ಸಾಮಾನ್ಯವಾಗಿ ವರ್ಷಕ್ಕೆ ಸರಾಸರಿ 50 ರಿಂದ 60 ಸಿನೆಮಾಗಳು ಬರುತ್ತಿದ್ದುದು, ಮುಂಗಾರು ಮಳೆ ನಂತರ ವರ್ಷಕ್ಕೆ 100 ರಿಂದ 120 ಸಿನೆಮಾಗಳು ಬರುವಂತಾಯಿತು. ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಪ್ರವಾಹವೇ ಆಯಿತು. ಅದರಲ್ಲಿ ಅನೇಕರು ಗೆದ್ದು ನಿಂತರು.
ಹೀಗೆ ಮುಂಗಾರು ಮಳೆ ಎಂಬ ಒಂದು ಚಿತ್ರದ ಮೂಲಕ ಒಂದು ಸಾಂಸ್ಕೃತಿಕ ಪಲ್ಲಟಕ್ಕೇ ಕಾರಣರಾದ ಯೋಗರಾಜ್ ಭಟ್, E.ಕೃಷ್ಣಪ್ಪ & G.ಗಂಗಾಧರ್ ತಂಡ “ಮನದ ಕಡಲು” ಚಿತ್ರದ ಮೂಲಕ ಹೊಸ ಕಲಾವಿದರ ತಂಡ ಕಟ್ಟಿಕೊಂಡು ಮತ್ತೊಮ್ಮೆ ಕ್ರಾಂತಿ ಸೃಷ್ಟಿಸಲು ಹೊರಟಿದ್ದಾರೆ. ಚಿತ್ರದ ಟೈಟಲ್, ಪೋಸ್ಟರ್ & ತಾಂತ್ರಿಕ ವರ್ಗದ ಲಿಸ್ಟ್ ನೋಡುತ್ತಿದ್ದರೆ ಮನದ ಕಡಲು ಚಿತ್ರದ ಮೇಲೆ ಇನ್ನಿಲ್ಲದ ನಿರೀಕ್ಷೆ ಮತ್ತು ಕಾತುರತೆ ಹೆಚ್ಚುತ್ತಿದೆ. ಚಿತ್ರದ ಮುಂದಿನ ಅಪ್ಡೇಟ್ ಗಳಿಗಾಗಿ ತುದಿಗಾಲಲ್ಲಿ ನಿಲ್ಲುವಂತಾಗಿದೆ.












































