ʻʻಯಾವ ನಟ ಅತಿ ಹೆಚ್ಚು ಮಕ್ಕಳು ಮತ್ತು ಮಹಿಳಾ ಅಭಿಮಾನಿಗಳನ್ನು ಹೊಂದಿರುತ್ತಾರೋ ಅವರ ಸಿನಿಮಾಗಳು ಮಾತ್ರ ಚಿತ್ರಮಂದಿರಗಳಲ್ಲಿ ಹೆಚ್ಚು ಲಾಭ ಕಾಣಲು ಸಾಧ್ಯʼʼ ಇಡೀ ಭಾರತೀಯ ಚಿತ್ರರಂಗ ನಂಬಿರುವ ಸತ್ಯ ಇದು. ಸಿನಿಮಾ ಬಿಡುಗಡೆಯಾದ ಮೊದಲ ವಾರ ಥೇಟರಿಗೆ ಬರುವವರಲ್ಲಿ ಹೆಚ್ಚಿನ ಸಂಖ್ಯೆ ಗಂಡಸರದ್ದಾಗಿರುತ್ತದೆ. ಅದಾದ ನಂತರ ಎರಡನೇ ವಾರದಿಂದ ಮಹಿಳೆಯರು ಮತ್ತು ಮಕ್ಕಳು ಚಿತ್ರಮಂದಿರದತ್ತ ಧಾವಿಸುತ್ತಾರೆ. ಅದೂ ಸಿನಿಮಾ ಅದ್ಭುತವಾಗಿದೆ ಎನ್ನುವ ಮಾತುಗಳು ಕೇಳಿಬಂದರೆ ಮಾತ್ರ. ಈ ವರೆಗೆ ಯಾವೆಲ್ಲಾ ಸಿನಿಮಾಗಳು ಬ್ಲಾಕ್ಬಸ್ಟರ್ ಅನ್ನಿಸಿಕೊಂಡವೆಯೋ ಅವೆಲ್ಲಾ ಚಿತ್ರಗಳ ಹಿಂದಿನ ಸೀಕ್ರೆಟ್ ಇದೇ!

ʻಪರವಾಗಿಲ್ಲ, ಸುಮಾರಾಗಿದೆʼ ಎನ್ನುವ ಮಾತುಗಳು ಕೇಳಿಬಂದರೂ ಕೂಡಾ ಮಹಿಳಾ ಪ್ರೇಕ್ಷಕರು ಚಿತ್ರಮಂದಿರಕ್ಕೆ ಕಾಲಿಡೋದಿಲ್ಲ. ಹೇಳಿ ಕೇಳಿ ಹೆಣ್ಮಕ್ಕಳದ್ದು ಲೆಕ್ಕಾಚಾರ ಸ್ವಲ್ಪ ಜಾಸ್ತಿ. ಕೊಟ್ಟ ಕಾಸಿಗೆ ದುಪ್ಪಟ್ಟು ಮನರಂಜನೆ ಸಿಗುತ್ತದೆ ಅಂದಾಗ ಮಾತ್ರ ಥೇಟರಿಗೆ ಬರೋ ಮನಸ್ಸು ಮಾಡುತ್ತಾರೆ. ಈ ನಿಟ್ಟಿನಲ್ಲಿ ನೋಡಿದರೆ, ಈಗ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬಾದ್ಶಾ ಕಿಚ್ಚ ಸುದೀಪ ಅಭಿನಯದ ಮ್ಯಾಕ್ಸ್ ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪ್ರತೀ ಚಿತ್ರಮಂದಿರದಲ್ಲಿ, ಅದರಲ್ಲೂ ಮಲ್ಟಿಪ್ಲೆಕ್ಸ್ಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಸಿನಿಮಾ ನೋಡಲು ಬರುತ್ತಿದ್ದಾರೆ. ʻಕನ್ನಡ ಸೆಂಟರ್ʼ ಅನ್ನಿಸಿಕೊಂಡಿರುವ ಪ್ರಸನ್ನ, ಜಿ.ಟಿ. ಮಾಲ್ಗಳಲ್ಲಿ ಕೂಡಾ ಶೇ 60ಕ್ಕಿಂತಾ ಹೆಚ್ಚು ಮಹಿಳಾ ಪ್ರೇಕ್ಷಕರು ಮ್ಯಾಕ್ಸ್ ನೋಡಲು ಬರುತ್ತಿರುವುದು ದಾಖಲಾಗಿದೆ.
ಸಾಮಾನ್ಯಕ್ಕೆ ತಮ್ಮ ನೆಚ್ಚಿನ ಸ್ಟಾರ್ ನಟರ ಹೆಸರು, ಚಿತ್ರಗಳನ್ನು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಪುರುಷ ಅಭಿಮಾನಿಗಳನ್ನು ನೋಡಿರುತ್ತೇವೆ. ಕಿಚ್ಚ ಸುದೀಪ್ ಅವರ ಭಾವಚಿತ್ರವನ್ನು ತನ್ನ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಮಹಿಳಾ ಅಭಿಮಾನಿಯ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿನಿಮಾವೊಂದು ಪರಿಪೂರ್ಣವಾಗಿ ಮನರಂಜಿಸಿದಾಗ ಅದಕ್ಕೆ ಭರಪೂರ ಗೆಲುವು ಕೂಡಾ ಪ್ರಾಪ್ತಿಯಾಗುತ್ತದೆ. ಮ್ಯಾಕ್ಸ್ ಅಂಥದ್ದೊಂದು ದಾಖಲೆಯ ಯಶಸ್ಸನ್ನು ದಕ್ಕಿಸಿಕೊಂಡಿದೆ. ಬೆಳಕನ್ನೇ ಕಾಣದೆ, ಕತ್ತಲೆಯಲ್ಲೇ ನಡೆಯುವ ʻಮ್ಯಾಕ್ಸ್ʼ ಕಥೆಯ ಕೊನೆಯಲ್ಲಿ ಸಂಕಟದಲ್ಲಿರುವವರ ಪಾಲಿಗೆ ಬೆಳಕು ನೀಡುತ್ತದೆ. ಸದ್ಯ ಕನ್ನಡ ಚಿತ್ರರಂಗ ಕೂಡಾ ಕಳಾಹೀನ ಸ್ಥಿತಿಯಲ್ಲಿತ್ತು. ಕನ್ನಡ ಚಿತ್ರರಂಗದ ಪಾಲಿಗೆ ʻಮ್ಯಾಕ್ಸ್ʼ ಭರವಸೆಯ ಬೆಳಕನ್ನು ನೀಡಿದೆ.
ಸಿನಿಮಾ ನೋಡಲು ಜನ ಥೇಟರಿಗೆ ಬರುತ್ತಿಲ್ಲ ಎನ್ನುವ ಕೊರಗಷ್ಟೇ ಕೇಳಿಬರುತ್ತಿದ್ದ ಹೊತ್ತಲ್ಲಿ, ಥೇಟರುಗಳ ಮುಂದೆ ಜನರನ್ನು ಸಾಲುಗಟ್ಟಿ ನಿಲ್ಲುವಂತೆ ಮಾಡಿರುವ ಮ್ಯಾಕ್ಸ್ಗೆ ಮನಃಪೂರ್ವಕವಾಗಿ ಥ್ಯಾಕ್ಸ್ ಹೇಳಬೇಕು!