ತುಂಬಾ ಓದಿರುತ್ತಾರೆ, ಮನೆಯವರ ಬಲವಂತಕ್ಕೆ ಇಂಜಿನಿಯರಿಂಗ್, ಎಂಬಿಎ ಥರದ ಕಷ್ಟದ ಕೋರ್ಸುಗಳನ್ನು ಮುಗಿಸಿರುತ್ತಾರೆ. ಆದರೆ, ಅದಕ್ಕೆ ಸಂಬಂಧಿಸಿದ ನೌಕರಿಗೆ ಸೇರೋ ಮನಸ್ಸೇ ಇರೋದಿಲ್ಲ. ಹೇಗಾದೂ ಸರಿ ಸಿನಿಮಾದಲ್ಲಿ ನಟಿಸಬೇಕು, ನಿರ್ದೇಶನ ಮಾಡಬೇಕು ಅಂತಾ ಬಯಸಿರುತ್ತಾರೆ. ಲಕ್ಷಾಂತರ ರೂಪಾಯಿ ದುಡಿಯಬಹುದಾದ ಕ್ಷೇತ್ರವನ್ನು ಬಿಟ್ಟು ಬಣ್ಣದ ಜಗತ್ತಲ್ಲಿ ಬರಗೆಟ್ಟವರಂತೆ ಅಲೆಯುತ್ತಾರೆ. ಇಂಥವರಲ್ಲಿ ಕೆಲವರು ಅವಕಾಶ ಪಡೆಯುತ್ತಾರೆ. ಅದರಲ್ಲಿ ತೀರಾ ಕಡಿಮೆ ಸಂಖ್ಯೆಯ ಜನ ಗೆಲುವು ದಕ್ಕಿಸಿಕೊಳ್ಳುತ್ತಾರೆ. ಇದು ವಾಸ್ತವ!

ಹೀಗೆ ಬಣ್ಣದ ಸೆಳೆತಕ್ಕೆ ಬಿದ್ದ ಹುಡುಗ ಇಡೀ ಜಗತ್ತಿಗೆ ತಾನೊಬ್ಬ ಹೆಣ್ಣು ಅಂತಾ ನಂಬಿಸಿ ಹೇಗೆ ಅವಕಾಶ ಪಡೆಯುತ್ತಾನೆ? ಹಾಗೆ ಪಡೆದ ಅವಕಾಶ ಆತ(ಕೆ)ನನ್ನು ಯಾವ ಹಂತಕ್ಕೆ ಕರೆದುಕೊಂಡು ಹೋಗಿ ಕೂರಿಸುತ್ತೆ? ಒಂದು ಸಲ ದಕ್ಕಿದ ಪಟ್ಟವನ್ನು ಉಳಿಸಿಕೊಳ್ಳೋದು ಎಂಥಾ ಕಷ್ಟ? ಹೆಣ್ಣಾಗಿ ಗೆದ್ದ ಗಂಡಸಿನ ಸಂಕಟಗಳು, ಮಾನಸಿಕ ಸ್ಥಿತಿ ಹೇಗಿರುತ್ತದೆ? ಕಟ್ಟಕಡೆಯದಾಗಿ ಈ ಮುಖವಾಡದ ಬದುಕಿನಿಂದ ಆತ ಹೊರಬರುತ್ತಾನಾ? ಎನ್ನುವ ವಿಚಾರ-ವಿವರಗಳನ್ನು ತಿಳಿಸುವ ಸಿನಿಮಾ ಮಿಸ್ಟರ್ ರಾಣಿ!
ಗಂಡು ಹೆಣ್ಣಿನಂತೆ ನಟಿಸುವ ಒಂದಿಷ್ಟು ಸಿನಿಮಾಗಳು ಬಂದಿವೆ. ಕಮಲ್ ಹಾಸನ್ ಅವರ ಅವೈ ಷಣ್ಮುಖಿ ಚಿತ್ರ ಆ ಕಾಲಕ್ಕೇ ಸಾಕಷ್ಟು ಹೆಸರು ಮಾಡಿತ್ತು. ಆ ಚಿತ್ರದ ಪಾತ್ರವೇ ಇಲ್ಲಿ ಹೀರೋಗೆ ಹೀರೋಯಿನ್ ಆಗಲು ಪ್ರೇರಣೆ ನೀಡುತ್ತದೆ. ಹುಡುಗನೊಬ್ಬ ಹುಡುಗಿಯ ವೇಷದಲ್ಲಿ ಜಗತ್ತನ್ನು ಯಾಮಾರಿಸೋದು ಸಲೀಸಲ್ಲ. ಸಹಜವಾಗೇ ಅಲ್ಲಿ ಒಂದಷ್ಟು ಯಡವಟ್ಟುಗಳಾಗುತ್ತವೆ. ಅವು ನೋಡುಗರ ದೃಷ್ಟಿಯಲ್ಲಿ ತಮಾಷೆಯಂತೆ ಕಾಣುತ್ತದೆ. ಇಲ್ಲಿ ಮಿ. ರಾಣಿಯ ಪ್ರತಿಯೊಂದೂ ಹಾಔ ಭಾವ, ಎದುರಾಗುವ ಸಂದರ್ಭಗಳು ನೋಡುಗರನ್ನು ಸಿಕ್ಕಾಪಟ್ಟೆ ನಗಿಸುತ್ತದೆ. ದೀಪಕ್ ಸುಬ್ರಮಣ್ಯ ಪೂರ್ಣಪ್ರಮಾಣದಲ್ಲಿ ಹೆಣ್ಣಿನಂತೆಯೇ ವರ್ತಿಸಿದ್ದಾರೆ. ಅದ್ಭುತ ಎನ್ನುವಷ್ಟರ ಮಟ್ಟಿಗೆ ನಟಿಸಿದ್ದಾರೆ! ಮಂಜನ ಪಾತ್ರಧಾರಿಯ ನಟನೆ ಸ್ವಲ್ಪ ಓವರ್ ಅನ್ನಿಸುತ್ತದೆ. ಸ್ವತಃ ಚಿತ್ರದಲ್ಲಿ ಡೈರೆಕ್ಟರ್ ಪಾತ್ರದಲ್ಲಿ ಈ ಚಿತ್ರದ ನಿರ್ದೇಶಕ ಮಧುಚಂದ್ರ ನಟಿಸಿದ್ದಾರೆ. ಇವರು ನಿರ್ದೇಶನದ ಜೊತೆಗೆ ನಟನೆಯನ್ನೂ ಧಾರಾಳವಾಗಿ ಮುಂದುವರೆಸಬಹುದು. ಮಿಕ್ಕಂತೆ ಚಿತ್ರದಲ್ಲಿರುವ ಎಲ್ಲ ಪಾತ್ರಗಳೂ ಮಜಾ ಕೊಡುತ್ತವೆ.

ತುಂಬಾ ಸರಳವಾದ ಕಥೆಯೊಂದರಲ್ಲಿ ತಮಾಷೆಯ ಘಟನೆಗಳನ್ನು ಸೇರಿಸಿ, ರಂಜಿಸುವ ಚಿತ್ರ ಮಿಸ್ಟರ್ ರಾಣಿ. ಮನರಂಜನೆ ಪ್ರಧಾನ ಉದ್ದೇಶವಾದರೂ ಅದಲ್ಲಿ ಒಂದಿಷ್ಟು ಕಾಡುವ ಅಂಶಗಳೂ ಇವೆ. ಮಕ್ಕಳ ಇಷ್ಟ ಕಷ್ಟಗಳನ್ನು ಕೇಳದೇ ತಾವು ಹೇಳಿದ್ದೇ ನಡೆಯಬೇಕು ಎನ್ನುವ ಪೋಷಕರ ʻಪಾಪ ನಿವೇದನೆʼ, ಕಣ್ಮುಂದೆ ನಡೆಯುತ್ತಿರೋದೆಲ್ಲಾ ಸುಳ್ಳು, ಸೃಷ್ಟಿಸಿರೋದು ಅಂತಾ ಗೊತ್ತಿದ್ದರೂ ಎಲ್ಲರನ್ನೂ ಸೆಳೆದುಕೊಳ್ಳುವ, ನಗಿಸಿ, ಅಳಿಸಿ, ಭಾವುಕಗೊಳಿಸುವ ಶಕ್ತಿ ಸಿನಿಮಾಗಿದೆ ಅನ್ನೋದನ್ನು ಮಿ. ರಾಣಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನೀವೂ ಒಂದ್ಸಲ ನೋಡಿ!