ಅದು ಕರಾವಳಿಯ ಒಂದು ಊರು, ಆ ಊರಿಗೆ ಅಂಟಿಕೊಂಡ ಕಾಡು. ಆ ಊರಿಗೊಂದು ಪತ್ರಿಕೆ, ಅದನ್ನು ನಡೆಸುವ ಸಂಪಾದಕ, ಅವನಿಗೊಬ್ಬ ಮಗಳು, ಜೊತೆಗೆ ಅಲ್ಲೊಂದು ಪೊಲೀಸ್ ಸ್ಟೇಷನ್ನು. ಊರ ತುಂಬಾ ನಿಗೂಢವಾಗಿ ವರ್ತಿಸುವ ಪಾತ್ರಗಳು. ಒಂದರ ಹಿಂದೊಂದು ಬೀಳುವ ಹೆಣಗಳು… ಇಂಥಾ ವಿಕ್ಷಿಪ್ತ ಊರಿನ, ನಿಗೂಢಗಳ ಬೆನ್ನುಹತ್ತಲು ಬಂದ ಪೊಲೀಸ್ ಅಧಿಕಾರಿ. ಅವನು ಇನ್ಸ್ಪೆಕ್ಟರ್ ಆತ್ರೇಯ.

ಆತ್ರೇಯ ಬರಿಯ ಕೊಲೆಗಾರರ ಜಾಡು ಹಿಡಿದು ಸುತ್ತುವುದಿಲ್ಲ. ತನ್ನ ಪೂರ್ವಾಪರವನ್ನು, ಕಳೆದುಕೊಂಡ ತನ್ನವರನ್ನೂ ಹುಡುಕಲು ಶರು ಮಾಡುತ್ತಾನೆ. ಅಸಲಿಗೆ ಈ ಪೊಲೀಸ್ ಆಫೀಸರಿಗೂ ಆ ಊರಿಗೂ ಇರುವ ನಂಟೇನು? ಅಲ್ಲಿ ನಡೆಯುವ ಕೊಲೆಗಳಿಗೂ ಈತನಿಗೂ ಏನಾದರೂ ಕನೆಕ್ಷನ್ ಇದೆಯಾ? ಎಂಬಿತ್ಯಾದಿ ಕೌತುಕಮಯ ವಿಚಾರಗಳ ಸುತ್ತ ಸವಿಸ್ತಾರವಾಗಿ ಹರಡಿಕೊಂಡಿರುವ ಕಥೆ ʻಅಧಿಪತ್ರʼದಲ್ಲಿದೆ!
ಈಗೆಲ್ಲಾ ಕರಾವಳಿ ಕಥೆ ಅಂದತಕ್ಷಣ ಅಲ್ಲಿ ಭೂತ-ಕೋಲಾಗಳೆಲ್ಲಾ ಇರಲೇಬೇಕು ಅನ್ನೋದು ಕಡ್ಡಾಯ ಎನ್ನುವಂತಾಗಿದೆ. ಅದು ಕಾಂತಾರಾ ಎಫೆಕ್ಟಾ? ಗೊತ್ತಿಲ್ಲ! ಅಧಿಪತ್ರದಲ್ಲೂ ಅಂಥದ್ದೇ ಒಂದಿಷ್ಟು ವಿಚಾರಗಳಿವೆ. ಭ್ರಹ್ಮರಾಕ್ಷಸ, ಭೂತ, ಕಾಡು ಎಲ್ಲವೂ ಇಲ್ಲಿವೆ. ಇಡೀ ಚಿತ್ರದಲ್ಲಿ ಪ್ರತಿಯೊಂದು ವಿಚಾರವನ್ನೂ ಗುಟ್ಟು ಗುಟ್ಟಾಗಿಟ್ಟು, ಕಟ್ಟ ಕಡೆಯದಾಗಿ ಎಲ್ಲವನ್ನೂ ರಟ್ಟು ಮಾಡುತ್ತಾರೆ!
ಇಂಥ ಮರ್ಡರ್ ಮಿಸ್ಟರಿ, ಥ್ರಿಲ್ಲರ್ ಸಬ್ಜೆಕ್ಟನ್ನು ಕೈಗೆತ್ತಿಕೊಂಡಾಗ ಹೇಳಬೇಕಾದ್ದನ್ನೆಲ್ಲಾ ಸ್ಪೀಡಾಗಿ ಹೇಳಿಬಿಡಬೇಕು. ಸುಖಾಸುಮ್ಮನೆ ಎಳೆದಾಡಿ ಹಿಂಸಿಸಬಾರದು. ಚಯನ್ ಶೆಟ್ಟಿ ವಿಪರೀತ ನಿಧಾನವಾಗಿ ಕಥೆ ಹೇಳಿದ್ದಾರೆ. ಕ್ಲೈಮ್ಯಾಕ್ಸ್ ಹೊತ್ತಿಗಿರುವ ಸ್ಪೀಡು ಇಡೀ ಚಿತ್ರದಲ್ಲಿ ಮೇಂಟೇನ್ ಆಗಿದ್ದಿದ್ದರೆ ಬಹುಶಃ ಅಧಿಪತ್ರ ನೋಡಿಸಿಕೊಂಡು ಹೋಗುವ ಸಿನಿಮಾ ಅನ್ನಿಸಿಕೊಳ್ಳುತ್ತಿತ್ತು. ಛಾಯಾಗ್ರಹಣ ಮತ್ತು ಸಂಕಲನ ಎರಡನ್ನೂ ಶ್ರೀಕಾಂತ್ ಒಬ್ಬರೇ ಮಾಡಿರುವುದರಿಂದ ಚಿತ್ರೀಕರಿಸಿದ ಎಲ್ಲವನ್ನೂ ತುಂಬಲು ಹೋಗಿ ಹೀಗಾಗಿರಲೂಬಹುದು!
ರೂಪೇಶ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಸಹಜವಾಗಿ ಅಭಿನಯಿಸಿದ್ದಾರೆ. ಜಾಹ್ನವಿಯ ಪಾತ್ರ ಮತ್ತು ಪೋಷಣೆ ಎರಡೂ ಟೊಳ್ಳು. ಮಠ ಕೊಪ್ಪಳ ಎಂದಿನಂತೆ ಗಂಭೀರವಾಗಿ ನಟಿಸಿ, ಸಿನಿಮಾಗೆ ತೂಕ ತಂದುಕೊಟ್ಟಿದ್ದಾರೆ. ಬೇರೆಲ್ಲರ ತಪ್ಪುಗಳನ್ನು ಋತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ ಒಂದು ಮಟ್ಟಕ್ಕೆ ಮುಚ್ಚಿಹಾಕಿದೆ. ಒಂದು ಕುಟುಂಬಕ್ಕಾದ ಅನ್ಯಾಯದ ಸುತ್ತ ಬೆಸೆದುಕೊಂಡಿರುವ ಕಾಡುವ ಕಥೆ ಇದರಲ್ಲಿದೆ. ಅದಕ್ಕೆ ಸರಿಯಾಗಿ ಗಟ್ಟಿಯಾದ ಚಿತ್ರಕತೆ ಬರೆದುಕೊಂಡಿದ್ದಿದ್ದರೆ ಅಧಿಪತ್ರ ನಿಜಕ್ಕೂ ಒಳ್ಳೆಯ ಚಿತ್ರವಾಗುತ್ತಿತ್ತು. ಒಟ್ಟಾರೆ ಸಿನಿಮಾ ಕರಾವಳಿ ಭಾಗದವರಿಗೆ ಹೆಚ್ಚು ಆಪ್ತವಾಗಬಹುದು. ಅಷ್ಟೇ..!