ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಭಾನುವಾರ (ಮಾರ್ಚ್ 30, 2025) ರಾತ್ರಿ 7:30ಕ್ಕೆ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸೂಪರ್ ಹಿಟ್ ಚಿತ್ರ ‘ಭೀಮ’ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ. ಇದು ಯುಗಾದಿ ಹಬ್ಬದ ವಿಶೇಷ. ‘ಭೀಮ’ 2024 ರಲ್ಲಿ ಬಿಡುಗಡೆಯಾದ ಕನ್ನಡದ ಆಕ್ಷನ್ ಥ್ರಿಲ್ಲರ್ ಚಿತ್ರ. ದುನಿಯಾ ವಿಜಯ್ ನಿರ್ದೇಶಿಸಿ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾ ಶಟಮರ್ಷನ, ಅಶ್ವಿನಿ, ಕಲ್ಯಾಣಿ ರಾಜು, ಬ್ಲ್ಯಾಕ್ ಡ್ರ್ಯಾಗನ್ ಮಂಜು, ಗಿಲಿ ಗಿಲಿ ಚಂದ್ರು, ರಂಗಾಯಣ ರಘು , ಅಚ್ಯುತ್ ಕುಮಾರ್ , ಗೋಪಾಲ ಕೃಷ್ಣ ದೇಶಪಾಂಡೆ ಮತ್ತು ರಮೇಶ್ ಇಂದಿರಾ ಅವರು ನಟಿಸಿದ್ದಾರೆ. ಸಂಗೀತ ಸಂಯೋಜನೆಯನ್ನು ಚರಣ್ ರಾಜ್ , ಛಾಯಾಗ್ರಹಣ ಮತ್ತು ಸಂಕಲನವನ್ನು ಶಿವಸೇನಾ ಮತ್ತು ದೀಪು. ಎಸ್. ಕುಮಾರ್ ನಿರ್ವಹಿಸಿದ್ದಾರೆ.

ತನ್ನ ಪ್ರದೇಶದಲ್ಲಿ ಮಾದಕ ದ್ರವ್ಯಗಳನ್ನು ಪೂರೈಸುವ ಮತ್ತು ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುತ್ತಿರುವ ಮಹತ್ವಾಕಾಂಕ್ಷಿ ರಾಜಕಾರಣಿ ಮತ್ತು ಮಾದಕ ದ್ರವ್ಯ ವ್ಯಾಪಾರಿ ಡ್ರ್ಯಾಗನ್ ಮಂಜು ವಿರುದ್ಧ ಭೀಮ ಯುದ್ಧ ಹೂಡುತ್ತಾನೆ. ಈ ಹೋರಾಟದಲ್ಲಿ ದುನಿಯಾ ವಿಜಯ್ ಅಭಿಮಾನಿಗಳಿಗೆ ಇಷ್ಟವಾಗುವ ಹೊಡೆದಾಟ, ಮಾಸ್ ಡಯಲಾಗ್ ಗಳು, ಹಾಡುಗಳು ಬಂದು ಹೋಗುತ್ತವೆ. ಕಲರ್ಸ್ ಕನ್ನಡದ ‘ಲಕ್ಷಣ’ ಧಾರಾವಾಹಿಯಲ್ಲಿ ಲೇಡಿ ವಿಲನ್ ಪಾತ್ರ ನಿರ್ವಹಿಸಿದ್ದ ಪ್ರಿಯಾ ಶಟಮರ್ಷನ ‘ಭೀಮ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಜನರ ಗಮನ ಸೆಳೆದಿದ್ದರು. ಚರಣ್ ರಾಜ್ ರ ಸಂಗೀತದಲ್ಲಿ “ಬ್ಯಾಡ್ ಬಾಯ್ಸ್” “ಬೂಮ್ ಬೂಮ್ ಬೆಂಗಳೂರು” “ಚಿಂತಿಸಬೇಡಿ ಬೇಬಿ ಚಿನ್ನಮ್ಮ” ಈ ಚಿತ್ರದ ಸೂಪರ್ ಹಿಟ್ ಹಾಡುಗಳಾಗಿದ್ದವು. ಆಕ್ಷನ್ ಥ್ರಿಲ್ಲರ್ ಬಯಸುವವರಿಗೆ ಇಷ್ಟವಾಗುವ ಈ ಚಿತ್ರವನ್ನು ಈ ಯುಗಾದಿಯಂದು ತಪ್ಪದೇ ನೋಡಿ.












































