ಯೋಗರಾಜ ಭಟ್ಟರು ಮನದ ಕಡಲು ಮೂಲಕ ತಮ್ಮ ಹಳೇಯ ಶೈಲಿಯನ್ನು ಮುಂದುವರೆಸುತ್ತಲೇ, ಹೊಸದೇನನ್ನೋ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಮನದ ಕಡಲು ಹೇಗಿದೆ? ಎನ್ನುವ ಒಂದಿಷ್ಟು ವಿವರ ಇಲ್ಲಿದೆ…
ಅಪ್ಪ ಖ್ಯಾತ ವೈದ್ಯ. ಮಗ ಕೂಡಾ ಅದೇ ಹಾದಿ ಹಿಡಿಯಲಿ ಅಂತಾ ಬಯಸಿರುತ್ತಾನೆ. ಎಂ.ಬಿ.ಬಿ.ಎಸ್. ಓದೋದನ್ನು ಅರ್ಧಕ್ಕೇ ನಿಲ್ಲಿಸಿ ತನ್ನದೇ ಆದ ವಿಚಿತ್ರ ಸಿದ್ದಾಂತಕ್ಕೆ ಕಟ್ಟುಬಿದ್ದು ವಿಲಕ್ಷಣವಾಗಿ ಬದುಕುವ ಹುಡುಗ. ಇಷ್ಟ ಪಟ್ಟವಳ ಬೆನ್ನತ್ತಿ ಹೋಗುತ್ತಾನೆ. ಅಲ್ಲಿ ಒಂದಿಷ್ಟು ಟ್ವಿಸ್ಟುಗಳಾಗುತ್ತವೆ. ಒಬ್ಬಳು ಪ್ರಾಚ್ಯಶಾಸ್ತ್ರ ಸಂಶೋಧಕಿ ಮತ್ತೊಬ್ಬಳು ಕ್ರಿಕೆಟ್ ಪಟು. ಇವನು ಇಷ್ಟ ಪಟ್ಟ ಹುಡುಗಿಗೆ ಅದೆಂಥದ್ದೋ ಖಾಯಿಲೆ. ಗೆಳತಿಯ ಆರೋಗ್ಯ ಸ್ಥಿತಿಯನ್ನೇ ಹಿಡಿದುಕೊಂಡು ಯದ್ವಾ ತದ್ವಾ ಕಿಂಡಲ್ ಮಾಡುವ ಅವಳ ಸ್ನೇಹಿತೆ. ಆಕೆ ಏನೇ ಅಂದರೂ ಬೇಸರಿಸಿಕೊಳ್ಳದ ಇವಳು. ನನ್ನ ಹಿಂದೆ ಬಂದಿರುವವನನ್ನು ನನ್ನ ಬದಲು ನೀನು ಲವ್ ಮಾಡು ಅಂತಾ ದಾರಿ ಮಾಡುಕೊಡುತ್ತಾಳೆ.
ಇಬ್ಬರು ಹುಡುಗಿಯರ ನಡುವೆ ಓಡಾಡಿಕೊಂಡಿದ್ದವನಿಗೆ ಧನ್ವಂತರಿ ವೈದ್ಯರೊಬ್ಬರು ಅದೊಂದು ಟಾಸ್ಕ್ ಕೊಡುತ್ತಾರೆ. ಹುಡುಗಿಯ ಆರೋಗ್ಯ ಸರಿ ಹೋಗಿ, ಅವಳು ಬದುಕುಳಿಯಬೇಕಾದರೆ ಆ ಮೂಲಿಕೆಯನ್ನವನು ತರಲೇಬೇಕು. ಅದನ್ನು ಹೇಗೆ ತರುತ್ತಾನೆ? ಅದರಿಂದ ಅವಳ ಅನಾರೋಗ್ಯ ಸುಧಾರಿಸುತ್ತಾ? ಹಾಗೇನಾದರೂ ಅವಳ ಬದುಕುಳಿದರೆ, ಮತ್ತೊಬ್ಬಳ ಗತಿ ಏನಾಗುತ್ತೆ? ಎಂಬಿತ್ಯಾದಿ ವಿಚಾರಗಳ ಜೊತೆಗೆ ಭಟ್ಟರು ತಮ್ಮ ಎಂದಿನ ಶೈಲಿಯ ಫಿಲಾಸಫಿಯನ್ನು ಹೇರಳವಾಗಿ ಬೆರೆಸಿ ಸೃಷ್ಟಿಸಿರುವ ಕಲಾಕೃತಿ ಮನದ ಕಡಲು!
ಯೋಗರಾಜ ಭಟ್ಟರು ತೀರಾ ಹೊಸದೇನನ್ನೋ ಕಲ್ಪಿಸಿಕೊಳ್ಳುವ, ಕಥೆ ಕಟ್ಟುವ ಗೋಜಿಗೆ ಯಾವತ್ತೂ ಹೋದವರಲ್ಲ. ಬದುಕನ್ನು ತೀರಾ ಹಗುರವಾಗಿ ತೆಗೆದುಕೊಂಡ ಉಡಾಫೆ ಹುಡುಗನ ಲೈಫ್ ಜರ್ನಿಯನ್ನೇ ಇಲ್ಲೂ ಮುಂದುವರೆಸಿದ್ದಾರೆ. ಇವಳನ್ನು ಇಷ್ಟ ಪಡುವ ಅವನು. ಅವನನ್ನು ಇಷ್ಟ ಪಡುವ ಮತ್ತೊಬ್ಬಳು – ಇದು ಎಷ್ಟು ಕೋನದ ಪ್ರೇಮಕತೆ ಅನ್ನೋದು ನೋಡಿದವರಿಗಷ್ಟೇ ಗೊತ್ತಾಗುತ್ತದೆ. ನಾಯಕ ಸುಮುಖ್ ಕೆಲವೊಂದು ದೃಶ್ಯಗಳಲ್ಲಿ ಇಷ್ಟವಾಗುತ್ತಾನೆ. ನಟನಾಗಿ ರಂಗಾಯಣ ರಘು ಈಗ ಒಂದು ಹಂತವನ್ನು ಧಾಟಿದ್ದಾರೆ. ಆರಂಭದ ಗಜಿಬಿಜಿ ಪಾತ್ರಗಳಿಂದ ದೂರವಾಗಿ ಗಂಭೀರ ಅನ್ನಿಸಿಕೊಳ್ಳುವ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಘು ಅವರಿಗೆ ಇಷ್ಟವಿತ್ತೋ ಇಲ್ಲವೋ ಗೊತ್ತಿಲ್ಲ. ಭಟ್ಟರು ಮಾತ್ರ ರಘು ಅವರನ್ನು ಮತ್ತೆ ಎಳೆದುಕೊಂಡು ಹೋಗಿ ಹಳೇ ಗೂಟಕ್ಕೇ ಕಟ್ಟಿ ಹಾಕಿದ್ದಾರೆ. ರಂಗಾಯಣ ಕೂಡಾ ಹಳೆಯದ್ದನ್ನೇ ನೆನಪಿಸಿಕೊಂಡು, ದೇಹವನ್ನು ಕುಣಿಸಿಕೊಂಡು ಅರಚಾಡಿದ್ದಾರೆ. ಓವರ್ ಆಕ್ಟಿಂಗ್ ಆದರೆ, ಕನ್ನಡ ಮಾತಾಡಿದರೇನೆ ಸಹಿಸಿಕೊಳ್ಳೋದು ಕಷ್ಟ. ಯೋಗರಾಜ ಭಟ್ಟರು ರಂಗಾಯಣ ರಘು ಅವರಿಂದ ಅದ್ಯಾವುದೋ ಹಳೇ ಶೈಲಿಯ ಹೊಸ ಭಾಷೆಯನ್ನು ಮಾತಾಡಿಸಿ, ತುರ್ರಾ, ಪರ್ರಾ ಅನ್ನಿಸಿ ರೇಜಿಗೆ ಹುಟ್ಟಿಸಿದ್ದಾರೆ. ರಂಗಾಯಣ ರಘು ಮತ್ತು ದತ್ತಣ್ಣ ಇಬ್ಬರೂ ಇಲ್ಲಿ ತುಂಬಾನೇ ಆಯಾಸಗೊಂಡಂತೆಯೂ ಕಾಣುತ್ತಾರೆ. ಶಿವಧ್ವಜ್ ಪಾತ್ರದಲ್ಲಿ ಧಮ್ ಇಲ್ಲ. ಇಬ್ಬರೂ ನಾಯಕಿಯರು ಚೆಂದಗೆ ಕಾಣಿಸುವುದು ಮಾತ್ರವಲ್ಲೆ, ಒಳ್ಳೆಯ ನಟನೆಯನ್ನೂ ನೀಡಿದ್ದಾರೆ. ಮನದ ಕಡಲು ಟೈಟಲ್ ಸಾಂಗ್ ಒಂದನ್ನು ಬಿಟ್ಟು ಮಿಕ್ಕ ಟ್ಯೂನುಗಳನ್ನು ಹರಿಕೃಷ್ಣ ಅರ್ಜೆಂಟಲ್ಲಿ ಹುಟ್ಟಿಸಿದಂತೆ ಅನ್ನಿಸುತ್ತದೆ. ಸಿನಿಮಾದಲ್ಲಿ ಬಳಸಿರುವ ಜಂಜೀರಾ ಕೋಟೆ ಕೂಡಾ ಒಂದು ಪಾತ್ರದಂತೆ ಚಿತ್ರಣಗೊಂಡಿದೆ. ಅದು ಬಿಟ್ಟು ಒಂದಿಷ್ಟು ಸೆಟ್ ಗಳನ್ನು ರೂಪಿಸಿದ್ದಾರೆ. ಶಿವಕುಮಾರ್ ಅವರ ಕಲಾ ನೈಪುಣ್ಯತೆ ಇಲ್ಲಿ ಎದ್ದು ಕಾಣುತ್ತದೆ. ಹಾಡಿನಲ್ಲಿ ಧನು ಮಾಸ್ಟರ್ ಕೆಲಸ ಕೂಡಾ ಗಮನ ಸೆಳೆಯುತ್ತದೆ. ಸಂತೋಷ್ ರೈ ಪತಾಜೆ ಕೆಲಸ ಎಂದಿನಂತೆ ಬ್ಯೂಟಿಫುಲ್!
ಒಟ್ಟಾರೆ ಮನದ ಕಡಲಿನಲ್ಲಿ ʻಏನೂ ಇಲ್ಲದಿದ್ದರೂ, ಏನೋ ಇದೆʼ ಎನ್ನುವ ಭ್ರಮೆ ಹುಟ್ಟಿಸಿದ್ದಾರೆ. ಬದುಕು ಅಂದರೆ ಹೇಗಿರಬೇಕು? ಹೇಗಿರಬಾರದು? ಒಬ್ಬರನ್ನೊಬ್ಬರು ಪ್ರೀತಿಸುವುದು, ಮದುವೆ, ಸಂಸಾರ ಅಂತೆಲ್ಲಾ ಕಟ್ಟಿಕೊಳ್ಳದೇ ಬೇರೆ ರೀತಿಯಲ್ಲಿ ಲೈಫ್ ಲೀಡ್ ಮಾಡಹುದು ಅಂತಾ ಹೇಳಿದ್ದಾರೆ. ಆ ಮೂಲಕ ಹೊಸ ವ್ಯಾಖ್ಯಾನವನ್ನು ಭಟ್ಟರಿಲ್ಲಿ ಮಂಡಿಸಿದ್ದಾರೆ!