ಎಂಭತ್ತು ತೊಂಭತ್ತರ ದಶಕದಲ್ಲಿ ಸಿಟಿಯಲ್ಲಿ ಬದುಕು ಕಟ್ಟಿಕೊಂಡ ಜನಕ್ಕೆ ಬಹುಶಃ ತುಂಬಾನೇ ಫಾರಿನ್ ವ್ಯಾಮೋಹವಿದ್ದಂತಿತ್ತು. ತಮ್ಮ ಮಕ್ಕಳು ಓದಿ , ವಿದೇಶಕ್ಕೆ ಹೋಗಿ ಕೆಲಸ ಹುಡುಕಿಕೊಂಡರು ಅನ್ನೋದೇ ಪ್ರತಿಷ್ಠೆ. ಹಾಗೆ ವಾಯುಮಾರ್ಗದಲ್ಲಿ ಹೋದವರು ಆರಂಭದಲ್ಲಿ ʻʻನಾನು ಕ್ಷೇಮ. ನೀವು ಕ್ಷೇಮವಾ?ʼʼ ಅಂತಾ ಪತ್ರ ಬರೆಯುತ್ತಿದ್ದರು. ಕ್ರಮೇಣ ಫೋನು, ಇಮೇಲು, ಸ್ಕೈಪು ಅಂತೆಲ್ಲಾ ಅಪ್ಡೇಟ್ ಆದರು. ಆಗೀಗ ರಜಾ ಅಂತಾ ಸಿಕ್ಕಾಗ ಬಂದು ಹೋಗುತ್ತಿದ್ದವರು ಮದುವೆ ಮಕ್ಕಳು ಅಂತೆಲ್ಲಾ ಆದಮೇಲೆ ಇಂಡಿಯಾಗೆ ಬರೋದನ್ನೇ ಎಷ್ಟೋ ಜನ ನಿಲ್ಲಿಸಿಬಿಟ್ಟರು. ಮಕ್ಕಳು ಫಾರಿನ್‌ಗೆ ಹೋಗಿದ್ದಾರೆ, ತಿಂಗಳಾಯಿತೆಂದರೆ ತಪ್ಪದೇ ಅಕೌಂಟಿಗೆ ಹಣ ಜಮಾ ಮಾಡ್ತಿದ್ದಾರೆ ಅನ್ನೋದು ಆರಂಭದ ಖುಷಿ ಮತ್ತು ಸಂಭ್ರಮ. ಅಷ್ಟೇ. ಆಮೇಲಾಮೇಲೆ ಆರೋಗ್ಯ ಕೈಕೊಟ್ಟು, ಒಂದು ಸಲ ಆಸ್ಪತ್ರೆ, ಓಡಾಟ ಅಂತಾ ಶುರುವಾದಾಗ ತಮ್ಮ ಮಕ್ಕಳನ್ನು ವಿದೇಶಗಳಿಗೆ ಕಳಿಸೋದೇ ತಮ್ಮ ಬದುಕಿನ ಪರಮ ಗುರಿ ಅಂತಾ ಅಂದುಕೊಂಡ ಹೆತ್ತವರು ಅಕ್ಷರಶಃ ತತ್ತರಿಸಿಬಿಡುತ್ತಾರೆ.

ಒಂದು ಹಂತಕ್ಕೆ ವಯಸ್ಸು ಮೀರಿದ ಮೇಲೆ ಯಾರಿಗೇ ಆದರೂ ತಮ್ಮ ಮಕ್ಕಳು ತಮ್ಮ ಕಣ್ಮುಂದೆ ಇರಬೇಕು ಅಂತಾ ಅನಿಸದೇ ಇರತ್ತಾ? ಮಕ್ಕಳನ್ನು ವಿದೇಶಕ್ಕೆ ಕಳಿಸಬೇಕು ಎನ್ನುವ ಕಾರಣಕ್ಕೆ ಬದುಕಿಡೀ ಕಷ್ಟಪಟ್ಟು, ಕನಸು ಕಂಡಿರುತ್ತದೋ ಅದೇ ಮನಸ್ಸು ʻʻಯಾವ ಫಾರಿನ್ನೂ, ದುಡ್ಡು ಏನೂ ಬ್ಯಾಡ. ಮಕ್ಕಳು ವಾಪಾಸು ಬಂದುಬಿಟ್ಟರೆʼʼ ಸಾಕು ಅಂತಾ ಬಯಸಲು ಶುರು ಮಾಡುತ್ತದೆ. ಆದರದು ಪ್ರಾಕ್ಟಿಕಲ್ಲಾಗಿ ಸಾಧ್ಯಾನೇ ಇರೋದಿಲ್ಲ. ಏಕಾಏಕಿ ಅಷ್ಟೊಂದು ಸಂಬಳ ಬರುವ ನೌಕರಿಯನ್ನು ಬಿಟ್ಟು ಬರಲು ಮಕ್ಕಳು ಒಪ್ಪೋದಿಲ್ಲ. ಎಲ್ಲದಕ್ಕಿಂತಾ ಹೆಚ್ಚಾಗಿ ವ್ಯವಸ್ಥಿತ ದೇಶ, ಪ್ರದೇಶಕ್ಕೆ ಹೊಂದಿಕೊಂಡ ಅವರು ಅಲ್ಲೇ ಬದುಕು ಕಟ್ಟಿಕೊಂಡಿರುತ್ತಾರೆ. ಇಷ್ಟಪಟ್ಟವರನ್ನು ಮದುವೆಯಾಗಿ ನೆಲೆ ಕಂಡುಕೊಂಡಿರುತ್ತಾರೆ. ಅಪ್ಪ-ಅಮ್ಮನಿಗೆ ಹಣ ಕಳಿಸಿದರೆ ಮುಗೀತು. ಅದೇ ಜವಾಬ್ದಾರಿ ಅಂತಂದುಕೊಂಡಿರುತ್ತಾರೆ. ಬರಿಯ ಕಾಸು ಕಳಿಸಿದರೆ ಸಾಲದು, ಭೌತಿಕವಾಗಿ ಅವರೊಟ್ಟಿಗಿರಬೇಕು ಅನ್ನೋ ಕಲ್ಪನೆಯೇ ಅವರಲ್ಲಿರೋದಿಲ್ಲ. ಆರೋಗ್ಯ ಕೆಟ್ಟು ಮಲಗಿದ ಹೆತ್ತವರಿಗೆ ಡಾಕ್ಟರು ಕೊಟ್ಟ ಔಷಧಕ್ಕಿಂತಾ ತಮ್ಮ ಪ್ರೀತಿ, ಮಮತೆ, ಕಕ್ಕುಲಾತಿಯಲ್ಲಿ ಹೆಚ್ಚು ಚಿಕಿತ್ಸಕ ಗುಣವಿರುತ್ತದೆ ಅನ್ನೋದರ ಅರಿವು ಇವರಿಗಿರಲ್ಲ. ಹೆಚ್ಚು ಬಿಲ್ ಪೀಕುವ, ಪ್ರತಿಷ್ಠಿತ ಆಸ್ಪತ್ರೆಗೆ ಸೇರಿಸುವಂತೆ ನೋಡಿಕೊಂಡು, ಬಾಡಿಗೆ ದಾದಿಯರನ್ನು, ಹೋಮ್ ನರ್ಸುಗಳನ್ನು, ಪೇಯ್ಡ್ ಕೇರ್ ಟೇಕರುಗಳನ್ನು ಅಪಾಯಿಂಟ್ ಮಾಡಿಬಿಟ್ಟರೆ ಎಲ್ಲ ಜವಾಬ್ದಾರಿಯೂ ಮುಗಿದು ಹೋಯ್ತು ಅಂದುಕೊಂಡಿರುತ್ತಾರೆ. ಇದೆಲ್ಲವನ್ನೂ ಮೀರಿ ತಂದೆ-ತಾಯಿ ಉಸಿರು ನಿಲ್ಲಿಸಿದರೆ, ವಿಡಿಯೋ ಕಾಲ್‌ನಲ್ಲೇ ಅವರ ಮುಖ ನೋಡಿ, ಅಂತ್ಯ ಸಂಸ್ಕಾರದಿಂದ ಹಿಡಿದು ತಿಥಿಯ ತನಕ ಎಲ್ಲದಕ್ಕೂ ಪ್ಯಾಕೇಜ್ ಡೀಲ್ ಕೊಟ್ಟು ತಲೆ ತೊಳೆದುಕೊಳ್ತಾರೆ. ಪಡಬಾರದ ಪಾಡು ಪಟ್ಟು, ನೋವುಗಳನ್ನು ತಿಂದ ಹೆತ್ತವರು ಯಾಕಾದರೂ ತಮ್ಮ ಮಕ್ಕಳನ್ನು ಫಾರಿನ್ನಿಗೆ ಕಳಿಸಿಬಿಟ್ಟೆವೋ ಅಂತಾ ಕಣ್ಣೀರಲ್ಲಿ ಕೈ ತೊಳೆದು ಪ್ರಾಣ ಬಿಡುತ್ತಾರೆ. ಅದರಲ್ಲೂ ಅಪ್ಪ-ಅಮ್ಮ ಇಬ್ಬರಲ್ಲಿ ಒಬ್ಬರು ತೀರಿಕೊಂಡು ಮತ್ತೊಬ್ಬರು ಉಳಿದುಬಿಟ್ಟರಂತೂ ಅವರ ಪಾಡು ಅಕ್ಷರಶಃ ನಾಯಿನರಕ. ಇದ್ದಲ್ಲಿಂದಲೇ ಯಾವುದಾದರೂ ವೃದ್ಧಾಶ್ರಮವನ್ನು ಹುಡುಕಿ, ಅಲ್ಲಿಗೆ ಸಾಗಹಾಕಿಬಿಡ್ತಾರೆ. ಇವತ್ತಿಗೇನು ವಿಲ್ಲಾ ಮಾದರಿಯ ವೃದ್ಧಾಶ್ರಮಗಳೆಲ್ಲಾ ಇವೆ.
ಖರ್ಚು ಮಾಡಿದಷ್ಟೂ ದುಬಾರಿ ವ್ಯವಸ್ಥೆಗಳಿವೆ. ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಳ್ಳುತ್ತಾರೆ. ಏನೇ ಆದರೂ ಹೊಟ್ಟೇಲಿ ಹುಟ್ಟಿದ ಮಕ್ಕಳು ನೋಡಿಕೊಂಡ ನೆಮ್ಮದಿ, ಸಮಾಧಾನ ಸಿಗಲು ಸಾಧ್ಯವಾ? ಇನ್ನೂ ಕೆಲವು ಮಕ್ಕಳಿಗೆ ಹೆತ್ತವರ ಬಗ್ಗೆ ಕಾಳಜಿಗಿಂತಾ ಅವರು ಮಾಡಿಟ್ಟ ಆಸ್ತಿ ಮೇಲೇ ಕಣ್ಣು. ಫಾರಿನ್ನಲ್ಲಿ ಕೂತು ಇಲ್ಲಿರುವ ಆಸ್ತಿಯನ್ನು ಸೀದುಬಿಡುವ ಪ್ಲಾನು ಮಾಡುತ್ತಾರೆ… ತುತ್ತು ಅನ್ನ ಬೇಯಿಸಿ ಕೊಡೋರೂ ಗತಿ ಇಲ್ಲದೆ ಮತ್ಯಾರದ್ದೋ ಆಸರೆಗಾಗಿ ಆ ಹಿರೀ ಜೀವಗಳು ಪರದಾಡುತ್ತವೆ…
- ಇಂಥ ಗಂಭೀರ ಮತ್ತು ಅನೇಕ ಸೂಕ್ಷ್ಮಗಳ ಸುತ್ತ ರೂಪುಗೊಂಡಿರುವ ಸಿನಿಮಾ ಸನ್ ಆಫ್ ಮುತ್ತಣ್ಣ. ರಂಗಾಯಣ ರಘು ಮತ್ತು ಪ್ರಣಮ್ ದೇವರಾಜ್ ಜೋಡಿ ಜೀವಗಳಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಖುಷಿ ರವಿ ಅವರ ಜೊತೆಯಾಗಿದ್ದಾರೆ. ಮುತ್ತಣ್ಣನಾಗಿ ಕಾಣಿಸಿಕೊಂಡಿರುವ ರಂಗಾಯಣ ರಘು ಅವರ ಪಾತ್ರವೇನಾಗಿರುತ್ತದೆ? ಅವರು ಯಾರಿಂದ ಅನ್ಯಾಯಕ್ಕೊಳಗಾಗಿರುತ್ತಾರೆ? ಶಿವು (ಪ್ರಣಮ್) ಯಾಕೆ ಮುತ್ತಣ್ಣನನ್ನು ಆ ಮಟ್ಟಕ್ಕೆ ಆರೈಕೆ ಮಾಡುತ್ತಾರೆ? ಬೆಂಗಳೂರಿನಿಂದ ಕಥೆ ಕಾಶಿಯತ್ತ ಪ್ರಯಾಣ ಬೆಳೆಸುವುದು ಯಾವ ಕಾರಣಕ್ಕಾಗಿ? ಇವೆಲ್ಲಾ ಕಥೆಯಲ್ಲಿ ಒಂದೊಂದಾಗಿ ಬಿಚ್ಚಿಕೊಳ್ಳುತ್ತದೆ.
ಚಿತ್ರದ ಮೊದಲ ಭಾಗ ತಮಾಷೆ ಪ್ರಸಂಗಗಳ ಮೂಲಕ ಸಾಗುತ್ತದೆ. ದ್ವಿತೀಯಾರ್ಧ ನೋಡುಗರನ್ನು ಆವರಿಸಿಕೊಳ್ಳುತ್ತದೆ. ಶೆಟ್ರಂಗಡಿ ಹುಡುಗನಾಗಿ ದಡಿಯ ಗಿರಿ ನಟನೆ ಮಜಾ ಕೊಡುತ್ತದೆ. ಅಪ್ಪನಾಗಿ, ಸ್ನೇಹಿತನಾಗಿ, ಮುತ್ತಣ್ಣನಾಗಿ ರಂಗಾಯಣ ರಘು ತುಂಬಾನೇ ಆಪ್ತವಾಗುತ್ತಾರೆ.
ಚಿತ್ರಕತೆ ಇನ್ನೊಂಚೂರು ಬಿಗಿಯಾಗಬೇಕಿತ್ತು. ಸಂಭಾಷಣೆ ಕೆಲವೊಂದು ಕಡೆ ತುಂಬಾನೇ ಚೆಂದ ಅನ್ನಿಸಿದರೆ, ಮತ್ತೆ ಕೆಲವು ಕಡೆ ಅನವಶ್ಯಕವಾಗಿ ಪೋಣಿಸಿದ್ದಾರೆ ಅನ್ನಿಸುತ್ತದೆ. ಮುಖ್ಯ ಪಾತ್ರವಾದ ರಂಗಾಯಣ ರಘು ಅವರ ಗಡ್ಡ-ಮೀಸೆಯ ಕಂಟ್ಯೂನಿಟಿ ಮಿಸ್ ಆಗಿರುವುದು ಅಲ್ಲಲ್ಲಿ ಇರಿಟೇಟ್ ಮಾಡುತ್ತದೆ. ಹಾಡುಗಳ ಮೇಕಿಂಗ್ ಕಡೆ ಹೆಚ್ಚು ಗಮನ ಕೊಟ್ಟಿಲ್ಲ ಅನ್ನೋದು ಗೊತ್ತಾಗುತ್ತದೆ. ಪ್ರಣಮ್ ಮೊದಲಿಗಿಂತಾ ತುಂಬಾನೇ ಬೆಟರಾಗಿ ಫರ್ಮಾರ್ಮ್ ಮಾಡಿದ್ದಾರೆ. ತಾಂತ್ರಿಕ ದೋಷಗಳೇನೇ ಇದ್ದರೂ, ನಿರ್ದೇಶಕ ಶ್ರೀಕಾಂತ್ ಹುಣಸೂರು ಹೇಳಿರುವ ವಿಚಾರಗಳು ಇವತ್ತಿಗೆ ಅತ್ಯಂತ ಪ್ರಸ್ತುತವಾಗಿದೆ. ಈ ಕಾರಣಕ್ಕೆ, ಪ್ರತಿಯೊಬ್ಬರೂ ಕಡಾಖಂಡಿತವಾಗಿ ನೋಡಲೇಬೇಕಾದ ಚಿತ್ರ ಇದು…












































