“ಕೋಮಲ್” ಸಿನಿಮಾ ಎಂದಕೂಡಲೇ ಅದೊಂದು ಪಕ್ಕಾ ಕಾಮಿಡಿ ಸಿನಿಮಾವೇ ಆಗಿರುತ್ತದೆ ಎನ್ನುವುದು ಪ್ರೇಕ್ಷಕನ ನಂಬಿಕೆ. ಆದರೆ ಈ ಬಾರಿ, ‘ಕೋಣ’ ಚಿತ್ರದ ಮೂಲಕ ಅವರು ತಮ್ಮ ಎಂದಿನ ಹಾದಿಯಿಂದ ಸ್ವಲ್ಪ ವಿಭಿನ್ನವಾದ ಹಾದಿ ಹಿಡಿದಿದ್ದಾರೆ. ನಿರ್ದೇಶಕ ಹರಿ ಕೃಷ್ಣ ಎಸ್. ಅವರು ಹಾಸ್ಯ, ಜಾನಪದ ನಂಬಿಕೆ, ಮತ್ತು ಹಾರರ್ ಥ್ರಿಲ್ಲರ್ ಅಂಶಗಳನ್ನು ಒಂದೇ ಕಥೆಯಲ್ಲಿ ಬೆಸೆಯುವ ಒಂದು ವಿಶಿಷ್ಟ ಪ್ರಯತ್ನವನ್ನು ಮಾಡಿದ್ದಾರೆ. ಈ ಪ್ರಯತ್ನ ಪ್ರೇಕ್ಷಕ ಮಹಾಪ್ರಭುವನ್ನು ಮೆಚ್ಚಿಸಿದೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸುಮಾರು ಮೂರು ಶತಮಾನಗಳಷ್ಟು ಹಿಂದಕ್ಕೆ ಹೋಗಿ ಪ್ರಾರಂಭವಾಗುವ ಈ *ಕಥೆ, ಪ್ರಸ್ತುತ ಹಳ್ಳಿಯೊಂದರ ಪುರಾತನ ನಂಬಿಕೆಯೊಂದಿಗೆ ಬೆಸುದುಕೊಳ್ಳುತ್ತದೆ. *ಈ ಹಳ್ಳಿಯ ಜನರ ಪ್ರಕಾರ, ತಮ್ಮ ಗ್ರಾಮವನ್ನು ಕಾಪಾಡುತ್ತಿರುವ ದೇವತೆಗೆ ಶಾಪ ತಟ್ಟಿದ್ದು, ಆ ಶಾಪದಿಂದ ವಿಮೋಚನೆ ಪಡೆಯಲು ಮತ್ತು ದುಷ್ಟಶಕ್ತಿಯನ್ನು ಶಾಂತಗೊಳಿಸಲು ಪ್ರತಿ ವರ್ಷ ‘ಕೋಣ’ವನ್ನು ಬಲಿ ಕೊಡುವ ಸಂಪ್ರದಾಯವನ್ನು ಪಾಲಿಸಲೇ ಬೇಕು ಎಂಬ ನಂಬಿಕೆ ಇರುತ್ತದೆ. ಇಂತಹ ವಿಚಿತ್ರ ಮತ್ತು ಭಯದ ವಾತಾವರಣವಿರುವ ಹಳ್ಳಿಗೆ ನಾರಾಯಣ (ಕೋಮಲ್) ಪ್ರವೇಶಿಸುತ್ತಾನೆ. ತನ್ನ ಭೂತಕಾಲದ ನೋವಿನಿಂದ ಬಳಲುತ್ತಿರುವ ಆತ, ‘ಜೋಗಿ’ ಎಂಬ ಭವಿಷ್ಯ ಹೇಳುವ ರೋಬೋಟ್ ಒಂದನ್ನು ಹಿಡಿದು ಊರೂರು ಅಲೆಯುತ್ತಿರುತ್ತಾನೆ. ಈ ನಡುವೆ ಅಲ್ಲಿ ನಡೆಯುವ ವಿಚಿತ್ರ ಘಟನೆಗಳು, ಊರ ಹಬ್ಬಕ್ಕೆ ಉಂಟಾಗುವ ವಿಘ್ನಗಳು, ಕೊನೆಗೂ ಊರ ಜನ ಕೋಣ ಕಡಿಯಲು ಸಫಲರಾಗುತ್ತಾರೋ ಇಲ್ಲವೋ.. ಇವೆಲ್ಲದರ ಜೊತೆ ಆಕಸ್ಮಿಕವಾಗಿ ಆ ಊರು ಸೇರಿರುವ ನಾರಾಯಣನಿಗೂ ಆ ಕೋಣಕ್ಕೂ ಏನು ಸಂಬಂಧ..? ಊರಿಗೆ ಅಂಟಿರುವ ಶಾಪ ದೂರವಾಗುತ್ತದೋ ಇಲ್ಲವೋ ಎಂಬುದೇ ಚಿತ್ರದ ತಿರುಳು.
ನಟನೆಯ ವಿಷಯಕ್ಕೆ ಬಂದರೆ, ಕೋಮಲ್ ಅವರು ತಮ್ಮ ಎಂದಿನ ಅಬ್ಬರದ ಹಾಸ್ಯವನ್ನು ಸಂಪೂರ್ಣವಾಗಿ ಬದಿಗಿಟ್ಟು, ಪಾತ್ರಕ್ಕೆ ಬೇಕಾದ ಗಂಭೀರತೆ ಮತ್ತು ಸಂಯಮದ ಅಭಿನಯವನ್ನು ನೀಡಲು ಪ್ರಯತ್ನಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಹೊಸ ಅನುಭವ ನೀಡುತ್ತದೆ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ತನಿಷಾ ಕುಪ್ಪಂಡ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ನಮ್ರತಾ ಗೌಡ, ರಿತ್ವಿ ಜಗದೀಶ್, ರಘು ರಾಮನಕೊಪ್ಪ, ವಿಜಯ್ ಚೆಂಡೂರ್, ತುಕಾಲಿ ಸಂತೋಷ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ನಿರ್ದೇಶಕ ಹರಿ ಕೃಷ್ಣ ಅವರು ಜಾನಪದ ಕಥೆಯೊಂದನ್ನು ಹಾರರ್-ಕಾಮಿಡಿ ಚೌಕಟ್ಟಿನಲ್ಲಿ ಹೇಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ ಮೂರು ಪ್ರಕಾರಗಳನ್ನು ಬ್ಯಾಲೆನ್ಸ್ ಮಾಡಿ ಚಿತ್ರಕತೆಯನ್ನು ಮುಂದೊಯ್ಯುವುದು ಒಂದು ದೊಡ್ಡ ಸವಾಲಂತೂ ಹೌದು. ಕೆಲವು ಕಡೆ ಹಾಸ್ಯವು ಭಯದ ವಾತಾವರಣವನ್ನು ತಿಳಿಗೊಳಿಸಿದರೆ, ಇನ್ನು ಕೆಲವು ಕಡೆ ನಿರೂಪಣೆಯು ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು *ಅನ್ನಿಸಲು, ಚಿತ್ರದಲ್ಲಿ *ಕೆಲವೆಡೆ ತುರುಕಿದಂತೆ ಅನ್ನಿಸುವ ಕೆಲವು ಹಾಸ್ಯ ಸನ್ನಿವೇಶಗಳೇ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.
ಶಶಾಂಕ್ ಶೇಷಗಿರಿಯವರ ಹಿನ್ನೆಲೆ ಸಂಗೀತವು ದೃಶ್ಯಗಳಿಗೆ ಪೂರಕವಾಗಿದೆ ಮತ್ತು ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಪ್ಯಾಥೋ ಸಾಂಗ್ ಒಂದು ಮಟ್ಟಿಗೆ ಪರಿಣಾಮಕಾರಿಯಾಗಿದೆ. ವೀನಸ್ ನಾಗರಾಜ ಮೂರ್ತಿಯವರ ಕ್ಯಾಮೆರಾ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಸಾಕಷ್ಟು ಸಫಲವಾಗಿದೆ. ಗ್ರಾಫಿಕ್ಸ್ ವರ್ಕ್ ಕೂಡ ತೀರಾ ಕಣ್ಣಿಗೆ ಮೋಸ ಮಾಡುವುದಿಲ್ಲ.
ಒಟ್ಟಾರೆಯಾಗಿ, ‘ಕೋಣ’ ಒಂದು ವಿಭಿನ್ನ ಪ್ರಯೋಗ. ಇದು ಕೇವಲ ಕಣ್ಣುಮುಚ್ಚಿ ನಗುವ ಚಿತ್ರವಲ್ಲ, ಬದಲಿಗೆ ಜಾನಪದ, ನಂಬಿಕೆ ಮತ್ತು ಭಯದ ಎಳೆಗಳನ್ನು ಹೊಂದಿರುವ ಚಿತ್ರ. ಕೋಮಲ್ ಅವರ ಹೊಸ ಬಗೆಯ ಅಭಿನಯಕ್ಕಾಗಿ, ಒಂದು ವಿಭಿನ್ನ ಕಥಾಹಂದರಕ್ಕಾಗಿ ಮತ್ತು ಹಾರರ್-ಕಾಮಿಡಿ ಮಿಶ್ರಣವನ್ನು ಇಷ್ಟಪಡುವವರು ಈ ಚಿತ್ರವನ್ನು ಒಮ್ಮೆ ಖಂಡಿತ ನೋಡಬಹುದು. ಆದರೆ, ನಿರೂಪಣೆಯಲ್ಲಾಗುವ ಸಣ್ಣಪುಟ್ಟ ಎಡವಟ್ಟುಗಳು ಚಿತ್ರದ ಒಟ್ಟಾರೆ ಪರಿಣಾಮವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆ.











































