ಚಂದನವನದಲ್ಲಿ ಮತ್ತೊಂದು ನಂಬಿಕೆ ದ್ರೋಹದ ಕಥೆ ಸದ್ದು ಮಾಡುತ್ತಿದೆ. ತಾನೇ ನಂಬಿ ಅವಕಾಶ ಕೊಟ್ಟ ನಿರ್ದೇಶಕನೇ ತನ್ನ ಆಫೀಸಿಗೆ ಕನ್ನ ಹಾಕಿ, ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾನೆ ಎಂದು ನಿರ್ಮಾಪಕ ದಿಲೀಪ್ ಕಣ್ಣೀರು ಹಾಕಿದ್ದಾರೆ. ಹೌದು, ‘ಒರಟ’ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀ ವಿರುದ್ಧ ನಿರ್ಮಾಪಕ ದಿಲೀಪ್ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಕಳ್ಳತನದ ದೂರು ದಾಖಲಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಸಹಿತ ಸಾಕ್ಷಿ ಒದಗಿಸಿದ್ದಾರೆ. “ಸಿನಿಮಾದಲ್ಲೇ ಮನೆ ಕಟ್ಟಿಕೊಂಡು, ಬದುಕೋಣ ಅಂದುಕೊಂಡಿದ್ದೆ, ಆದರೆ ಹೀಗೆ ನಂಬಿಸಿ ಮೋಸ ಮಾಡುತ್ತಾರೆ ಅಂದುಕೊಂಡಿರಲಿಲ್ಲ” ಎಂದು ದಿಲೀಪ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

“ನಾನೊಬ್ಬ ಚಿಕ್ಕ ವರದಿಗಾರನಾಗಿ ಚಿತ್ರರಂಗಕ್ಕೆ ಬಂದು, ಎಲ್ಲರ ಆಶೀರ್ವಾದ, ಸಪೋರ್ಟ್ನಿಂದ ಬೆಳೆಯುತ್ತಿದ್ದವನು. ಈ ಒರಟ ಶ್ರೀಗೆ ‘ಕೋರಾ’ ಎನ್ನುವ ಚಿತ್ರಕ್ಕೆ ನಾನೇ ಅವಕಾಶ ಕೊಟ್ಟೆ. ಅದು ಮುಗಿದ ಬಳಿಕ, ನನ್ನ ಬಳಿ ಇದ್ದ ‘ತಿಮ್ಮಕ್ಕ’ ಚಿತ್ರದ ಕಥೆಯನ್ನು ಕೊಟ್ಟು, ‘ಬನ್ನಿ ಅಣ್ಣ, ನಾವೆಲ್ಲ ಸೇರಿ ಮಾಡೋಣ’ ಎಂದಾಗ ಅವನನ್ನು ನಂಬಿ ಆ ಪ್ರಾಜೆಕ್ಟ್ ಕೂಡ ಶುರು ಮಾಡಿದೆವು. ಆದರೆ ಆತ ಈಗ ಬೆನ್ನಿಗೆ ಚೂರಿ ಹಾಕಿದ್ದಾನೆ” ಎಂದು ದಿಲೀಪ್ ಘಟನೆಯನ್ನು ವಿವರಿಸಲು ಆರಂಭಿಸಿದರು.
ಇವರಿಬ್ಬರ ಕಾಂಬಿನೇಷನ್ನಲ್ಲಿ ‘ಶಬರಿ’ ಎಂಬ ಹೊಸ ಸಿನಿಮಾ ಆಗಸ್ಟ್ ತಿಂಗಳಲ್ಲಿ ಶುರುವಾಗಿತ್ತು. ಸಿನಿಮಾದ ಆಡಿಷನ್, ಲೊಕೇಶನ್ ಹುಡುಕಾಟ, ಚಿಕ್ಕಪುಟ್ಟ ಕೆಲಸಗಳು ಎಲ್ಲವೂ ದಿಲೀಪ್ ಅವರ ಆಫೀಸ್ನಲ್ಲೇ ನಡೆಯುತ್ತಿತ್ತು. ಎಲ್ಲವೂ ಸರಿಯಾಗಿದೆ ಎನ್ನುವಾಗಲೇ, “ಯಾರೋ ಬೇರೆ ನಿರ್ಮಾಪಕರು ‘ಪ್ಯಾಕೇಜ್’ ಆಧಾರದ ಮೇಲೆ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಅಲ್ಲಿಗೆ, ನನ್ನ ಕಡೆಯಿಂದ ಜಾರಿಕೊಳ್ಳಬೇಕು ಎಂದು ಶ್ರೀ ಪ್ಲಾನ್ ಮಾಡಿದ್ದಾನೆ. ನೇರವಾಗಿ ಕೇಳಿದರೆ ಸಮಸ್ಯೆ ಆಗುತ್ತದೆ ಎಂದು, ನಾನು ಆಫೀಸ್ನಲ್ಲಿ ಇಲ್ಲದ ಸಮಯ ನೋಡಿಕೊಂಡು, ತನ್ನ ಅಸಿಸ್ಟೆಂಟ್ ಡೈರೆಕ್ಟರ್ ಕೈಯಲ್ಲಿ ಆಫೀಸ್ನಲ್ಲಿದ್ದ ಕ್ಯಾಮೆರಾ, ಸಿನಿಮಾದ ಪ್ರಮುಖ ಫೈಲ್ಗಳು, ದಾಖಲೆಗಳು ಎಲ್ಲವನ್ನೂ ಎತ್ತಿಕೊಂಡು ಹೋಗಿದ್ದಾನೆ” ಎಂದು ದಿಲೀಪ್ ಆರೋಪಿಸಿದ್ದಾರೆ.
ವಿಷಯ ತಿಳಿದು ದಿಲೀಪ್ ಪೊಲೀಸರಿಗೆ ದೂರು ನೀಡಿದ್ದಾರೆ. “ನಾವು ಬೀಗ ಮುರಿದು ಕಳ್ಳತನ ಮಾಡಿಲ್ಲ, ನಮ್ಮ ಬಳಿ ಇದ್ದ ಕೀ ಬಳಸಿ ತೆಗೆದುಕೊಂಡು ಹೋಗಿದ್ದೇವೆ” ಎಂದು ಶ್ರೀ ಕಡೆಯವರು ಹೇಳಿಕೊಂಡಿದ್ದಾರೆ. ಆದರೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆಫೀಸ್ನಿಂದ ಸಾಮಗ್ರಿಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗುವುದು ಸ್ಪಷ್ಟವಾಗಿ ಸೆರೆಯಾಗಿದೆ. ಪೊಲೀಸರು ನಿರ್ದೇಶಕ ಶ್ರೀಗೆ ಕರೆ ಮಾಡಿದಾಗ, ಆತ ಉದ್ಧಟತನದಿಂದ ವರ್ತಿಸಿದ್ದಾನಂತೆ. “‘ಏನ್ ಕಿತ್ಕೊಳ್ತೀಯಾ ಕಿತ್ಕೋ ನೋಡೋಣ. ಹೌದು, ಕಳ್ಳತನ ಮಾಡಿದ್ದು, ಏನ್ ಮಾಡ್ತೀಯಾ?’ ಎಂದು ನನಗೂ, ಪೊಲೀಸರಿಗೂ ಅವಾಜ್ ಹಾಕಿದ್ದಾನೆ” ಎಂದು ದಿಲೀಪ್ ಆರೋಪಿಸಿದ್ದಾರೆ.
ಇಷ್ಟಕ್ಕೇ ನಿಲ್ಲಿಸದ ಶ್ರೀ, “ಜೆಪಿ ನಗರ ಮಂಜ, ಬನ್ನೇರುಘಟ್ಟ ವಿಶ್ವ ಎಂಬ ಬೇರೆ ಬೇರೆ ವ್ಯಕ್ತಿಗಳಿಂದ ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡಿಸುತ್ತಿದ್ದಾನೆ. ಆ ಎಲ್ಲಾ ಕರೆಗಳ ರೆಕಾರ್ಡಿಂಗ್ ಅನ್ನು ಪೊಲೀಸರಿಗೆ ಕೊಟ್ಟಿದ್ದೇನೆ” ಎಂದಿದ್ದಾರೆ ದಿಲೀಪ್. ಪೊಲೀಸರು ಶ್ರೀಯನ್ನು ವಿಚಾರಣೆಗೆ ಕರೆದಾಗ, ಆತ ದಿನಾಂಕ 29ಕ್ಕೆ ಬರುತ್ತೇನೆ, 30ಕ್ಕೆ ಬರುತ್ತೇನೆ ಎಂದು ಸತಾಯಿಸಿದ್ದಾನೆ. ಅಚ್ಚರಿಯೆಂದರೆ, “29ನೇ ತಾರೀಕು ನಮಗೆ ಗೊತ್ತೇ ಇಲ್ಲದಂತೆ ಮೀಡಿಯಾವನ್ನು ಕರೆದು ‘ಶಬರಿ’ ಚಿತ್ರಕ್ಕೆ ಪೂಜೆ ಮಾಡಿದ್ದಾನೆ”. ಕೊನೆಗೆ, ಪೊಲೀಸರು ಅಕ್ಟೋಬರ್ 31 ರಂದು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ನಂಬಿ ಅವಕಾಶ ಕೊಟ್ಟ ನಿರ್ಮಾಪಕನಿಗೇ ನಿರ್ದೇಶಕನೊಬ್ಬ ಹೀಗೆ ವಂಚಿಸಿ, ಕಳ್ಳತನ ಮಾಡಿ, ಜೀವ ಬೆದರಿಕೆ ಹಾಕಿರುವ ಈ ಪ್ರಕರಣ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದೆ.











































