ಇಡೀ ಚಿತ್ರರಂಗವನ್ನು ಕರೆದು ಕೂರಿಸೋದು ಬೇಕಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಬಹುಮುಖ್ಯ ನಾಯಕನಟರು, ನಿರ್ದೇಶಕರೆಲ್ಲಾ ಸೇರಿದರೂ ಇವತ್ತಿಗೆ ನೂರು ಜನರಾಗಬಹುದು. ಅವರನ್ನೆಲ್ಲಾ ಕರೆದು ಗೌರವಿಸುವ ಕನಿಷ್ಟ ಪ್ರಜ್ಞೆ ಕೂಡಾ ಸೈಮಾ ಆಯೋಜಕರಿಗೆ ಇಲ್ಲದೇ ಹೋಗಿದ್ದು ದುರಂತ. ನಮ್ಮ ನೆಲದಲ್ಲೇ ಬಂದು ಕಾರ್ಯಕ್ರಮ ಮಾಡಿ, ಕೋಟಿಗಟ್ಟಲೆ ಹಣ ಬಾಚಿದ ಸೈಮಾದ ದರಿದ್ರರಿಗೆ ನೂರು ಖುರ್ಚಿ ವ್ಯವಸ್ಥೆ ಮಾಡಿಸುವಷ್ಟು ಯೋಗ್ಯತೆ ಇಲ್ಲದೇ ಹೋಗಿದ್ದನ್ನು ಖಂಡಿಸದೇ ಏನು ಮಾಡಬೇಕು?
ಈ ಬಾರಿ ಬೆಂಗಳೂರಿನಲ್ಲಿ ನಡೆದ ಸೈಮಾ (ಸೌಥ್ ಇಂಡಿಯನ್ ಇಂಟರ್ನ್ಯಾಷನಲ್ ಅವಾರ್ಡ್ಸ್) ಪ್ರಶಸ್ತಿ ಪ್ರದಾನ ಸಮಾರಂಭ ಅದೆಷ್ಟು ಅಧ್ವಾನದಿಂದ ಕೂಡಿತ್ತು ಎಂದರೆ ಅದಕ್ಕೊಂದು ಉದಾಹರಣೆ ರಣವೀರ್ ಸಿಂಗ್ಗೆ ಕಪಾಳಮೋಕ್ಷವಾಗಿದ್ದು. ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ರಣವೀರ್ ಅಥವಾ ಬಾಲಿವುಡ್ಗೆ ಯಾವುದೇ ಸಂಬಂಧವಿಲ್ಲ. ಆದರೂ ಅವರು ಮುಖ್ಯ ಅತಿಥಿಯಾಗಿ ಈ ಸಮಾರಂಭದಲ್ಲಿ ಭಾಗವಹಿಸಿದ್ದು ಸಿನಿಮಾ ಮೇಲಿನ ಪ್ರೀತಿಗಾಗಿ. ಅಂಥವರಿಗೆ ಈ ಸಮಾರಂಭದಲ್ಲಿ ಏಟು ಬಿದ್ದಿದೆ ಎಂದರೆ, ಕಾರ್ಯಕ್ರಮ ಎಷ್ಟು ಕೆಟ್ಟದಾಗಿ ಆಯೋಜಿತವಾಗಿತ್ತು ಎಂಬುದು ಗೊತ್ತಾಗುತ್ತದೆ.
ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ರಣವೀರ್ ಸಿಂಗ್ ಮುಖ್ಯ ಅತಿಥಿಯಾಗಿ ರೆಡ್ ಕಾರ್ಪೆಟ್ ಮೇಲೆ ನಡೆದು ಬರುವ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಜನ ಜಮಾಯಿಸಿದ್ದರು. ರಣವೀರ್ ಅವರನ್ನು ಮುತ್ತಿಕೊಳ್ಳಲು ತಯಾರಾಗಿದ್ದರು. ಇದನ್ನೆಲ್ಲ ತಪ್ಪಿಸುವುದಕ್ಕಾದರೂ ಆಯೋಜಕರು ಬೇರೆ ಉಪಾಯ ಮಾಡಬಹುದಿತ್ತು. ಹೇಗೂ ಬೌನ್ಸರ್ಗಳಿದ್ದಾರಲ್ಲ ಎಂಬ ಧೈರ್ಯದ ಮೇಲೆ ರಣವೀರ್ ಅವರನ್ನು ರೆಡ್ ಕಾರ್ಪೆಟ್ ಮೇಲೆ ಕರೆಸಲಾಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳು ರಣವೀರ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೆ ಮುಗಿಬಿದ್ದರು. ರಣವೀರ್ಗೆ ಯಾವುದೇ ಸಮಸ್ಯೆ ಎದುರಾಗದಂತೆ ಬೌನ್ಸರ್ಗಳು ತಡೆಯುವುದಕ್ಕೆ ಪ್ರಯತ್ನಿಸಿದರು. ಹೀಗೆ ಅಭಿಮಾನಿಯೊಬ್ಬರನ್ನು ತಡೆಯುವುದಕ್ಕೆ ಹೋಗಿ, ಬೌನ್ಸರ್ ಒಬ್ಬ ರಣವೀರ್ ಕಪಾಳಕ್ಕೆ ಚಟೀರನೆ ಹೊಡೆದ. ರಣವೀರ್ಗೆ ಯಾವ ಪರಿ ಹೊಡೆತ ಬಿತ್ತು ಎಂದರೆ, ಅವರು ತುಂಬಾ ಹೊತ್ತು ಕೆನ್ನೆ ಸವರಿಕೊಳ್ಳುತ್ತಲೇ ಇದ್ದರು.
ಇನ್ನು, ಕನ್ನಡ ಚಿತ್ರರಂಗದಿಂದ ಶಿವರಾಜಕುಮಾರ್, ದರ್ಶನ್, ಯಶ್, ಅಭಿಷೇಕ್ ಅಂಬರೀಷ್, ಧನಂಜಯ್, ಪ್ರಜ್ವಲ್ ಮುಂತಾದವರನ್ನು ಹೊರತುಪಡಿಸಿದರೆ, ಸುದೀಪ್, ಗಣೇಶ್, ಸತೀಶ್ ನೀನಾಸಂ, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, , ಶ್ರೀಮುರಳಿ, ಧ್ರುವ ಸರ್ಜಾ ಸೇರಿದಂತೆ ಬಹಳಷ್ಟು ಜನರಿಗೆ ಈ ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಮಾಹಿತಿ ಇದ್ದರೂ ಆಹ್ವಾನವಿರಲಿಲ್ಲ. ಕೊನೆಗೆ ಜನಪ್ರಿಯ ನಟರ ಅನುಪಸ್ಥಿತಿಯಲ್ಲೇ ಕಾರ್ಯಕ್ರಮ ನಡೆಯಿತು.
ವಿಶೇಷವೆಂದರೆ, ದರ್ಶನ್ ಹಾಜರಿ. ಇಷ್ಟು ವರ್ಷಗಳಲ್ಲಿ ದರ್ಶನ್ಗೆ ಒಮ್ಮೆ ‘ಯಜಮಾನ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಸಾಮಾನ್ಯವಾಗಿ ಪ್ರಶಸ್ತಿ ಪ್ರದಾನ ಸಮಾರಂಭಗಳೆಂದರೆ, ಅದರಲ್ಲೂ ಫಿಲಂಫೇರ್, ಸೈಮಾದಂತಹ ಖಾಸಗೀ ಸಮಾರಂಭಗಳಿಂದ ದೂರವೇ ಇರುವ ದರ್ಶನ್, ಈ ಬಾರಿ ಸಮಾರಂಭಕ್ಕೆ ಬಂದಿದ್ದರು. ಬಹುಶಃ ಕಳೆದ ಬಾರಿ ತಮಗೆ ಪ್ರಶಸ್ತಿ ಸಿಕ್ಕಿತು ಎಂಬ ಕೃತಜ್ಞತೆಯಿಂದ ಬಂದಿದ್ದ ಅವರನ್ನು ಆಯೋಜಕರು ಬಹಳ ಕೆಟ್ಟದಾಗಿ ನಡೆಸಿಕೊಂಡರು. ಅವರಿಗೆ ಕೂರುವುದಕ್ಕೆ ಸೀಟಿನ ವ್ಯವಸ್ಥೆ ಇರಲಿಲ್ಲ. ಕೊನೆಗೆ ಯಾರ್ಯಾರೋ ಬಿಟ್ಟುಕೊಟ್ಟಿದ್ದರಿಂದ ದರ್ಶನ್ ಸ್ವಲ್ಪ ಹೊತ್ತು ಕೂರುವಂತಾಯಿತು. ವೇದಿಕೆಗೆ ಸಹಾ ಅವರನ್ನು ಕರೆಯಲಿಲ್ಲ. ದರ್ಶನ್ ಹಿಂದೆ ಅಭಿಷೇಕ್ ಅಂಬರೀಷ್, ಜೈದ್ ಖಾನ್ ಮುಂತಾದವರು ಕೂಡಾ ಈ ಕಾರ್ಯಕ್ರಮಕ್ಕೆ ಬಂದಿದ್ದು, ಅವರ್ಯಾರಿಗೂ ಸೂಕ್ತ ಆಹ್ವಾನವಾಗಲಿ, ಆಸನ ವ್ಯವಸ್ಥೆಯಾಗಲೀ ಇರಲಿಲ್ಲ. ಕ್ಯಾರೆ ಎನ್ನದ ಜನರ ಮಧ್ಯೆ ಸ್ವಲ್ಪ ಕಾಲ ಕೂತಿದ್ದ ದರ್ಶನ್, ಕೊನೆಗೆ ಬೇಸರದಿಂದ ಕಾರ್ಯಕ್ರಮದಿಂದಲೇ ಹೊರನಡೆದರು.
ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಂದ ದೂರವೇ ಇರುವ ಮತ್ತು ಅಪರೂಪಕ್ಕೆಂಬಂತೆ ಇಂತಹ ಇವೆಂಟ್ಗಳಲ್ಲಿ ಕಾಣಿಸಿಕೊಂಡ ದರ್ಶನ್ಗೆ ಹೀಗಾಗಿದ್ದು ಬೇಸರದ ಸಂಗತಿ.
ಭಾಗ – 3 : ಬಿಚ್ಚೋಲೆ ಗೌರಮ್ಮಂದಿರ ತಾರಾಟ!
No Comment! Be the first one.