ಕಾರ್ನಾಡರ ಬಾಲ್ಯ ಹೀಗಿತ್ತು…

Picture of Cinibuzz

Cinibuzz

Bureau Report

ಗಿರೀಶ್ ಕಾರ್ನಾಡರು ಮಹಾರಾಷ್ಟ್ರದ ಮಥೇರಾನ್ ಎಂಬಲ್ಲಿ 1938 ಮೇ 19ರಂದು ಜನಿಸಿದರು. ಇವರ ತಾಯಿ ಕೃಷ್ಣಬಾಯಿ, ತಂದೆ ಡಾ. ರಘುನಾಥ ಕೃಷ್ಣ ಕಾರ್ನಾಡರು. ವೃತ್ತಿಯಲ್ಲಿ ವೈದ್ಯರು. ಇವರು ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ತಮ್ಮ 19ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಕೃಷ್ಣಭಾಯಿ ಹತ್ತು ವರ್ಷಗಳ ನಂತರ ರಘುನಾಥ ಕಾರ್ನಾಡರನ್ನು ಮರು ಮದುವೆಯಾದರು. ಈ ದಂಪತಿಗಳ ಗಂಡು ಮಕ್ಕಳಲ್ಲಿ ಕಿರಿಯವರು ಗಿರೀಶರು. ಅರ್ಧ ಮರಾಠಿ ಅರ್ಧ ಕನ್ನಡ ಎನ್ನುವಂತಿರುವ  ಸಾರಸ್ವತ  ಜನಾಂಗವು  ಪಟ್ಟಣದ  ಜೀವನವನ್ನು ರೂಢಿಸಿಕೊಂಡಿತ್ತು. ಇದರ ಜೊತೆಗೆ ಜಾತಿ ಮತ್ತು ಸಂಪ್ರದಾಯಗಳ ಕಟ್ಟು ಸಡಿಲಿಸಿರುವುದರಿಂದ ಮುಕ್ತ ವಾತಾವರಣದಲ್ಲಿ ಬೆಳೆಯುವ ಅದೃಷ್ಟ ಕಾರ್ನಾಡರಿಗೆ ಲಭ್ಯವಾಯಿತು.

ಇವರ ಹೆಸರಿನಲ್ಲಿರುವ ಕಾರ್ನಾಡ್ ಸಹ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹತ್ತಿರ ಇರುವ ‘ಕಾರ್ನಾಡ್’ ಎಂಬ ಗ್ರಾಮದಿಂದ ಬಂದಿದೆ. ಮೂಲತಃ ಈ ಗ್ರಾಮಕ್ಕೆ ಸೇರಿದ ಕಾರ್ನಾಡರ ಪೂರ್ವಜರು ಸುಮಾರು 300 ವರ್ಷಗಳ ಹಿಂದೆ ಈ ಗ್ರಾಮವನ್ನು ಬಿಟ್ಟು ಮುಲ್ಕಿಯಲ್ಲಿ ನೆಲೆಸಿದರು ಎಂದು ಹೇಳಲಾಗುತ್ತದೆ. ಇಂದು ಪೂಂಜಾ ಕುಟುಂಬಕ್ಕೆ ಸೇರಿರುವ ‘ಕಾರ್ನಾಡ್ ಹೌಸ್’ ಮೂಲತಃ ಗಿರೀಶರ ವಂಶಸ್ಥರಿಗೆ ಸೇರಿದ್ದು. ಈಗ ಆ ಮನೆ ಒಂದು ಕೊಠಡಿಯನ್ನು ಹೊರತುಪಡಿಸಿದರೆ ಸಂಪೂರ್ಣವಾಗಿ ನವೀಕರಣಗೊಂಡಿದೆ.

ಕಾರ್ನಾಡ ಸದಾಶಿವರಾಯರು

ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಕಾರ್ನಾಡ ಸದಾಶಿವರಾಯರು ಗಿರೀಶರ ತಂದೆಗೆ ಹತ್ತಿರದ ಸಂಬಂಧಿ.   ಗಿರೀಶರ ತಾಯಿ ಶ್ರೀಮತಿ ಕೃಷ್ಣಬಾಯಿಯವರು ವೈದ್ಯರಾದ ತಮ್ಮ ತಂದೆಯ ದ್ವಿತೀಯ ಪತ್ನಿಯೆಂದು ಗಿರೀಶ ಕಾರ್ನಾಡರಿಗೆ ತಮ್ಮ ಹದಿನೈದನೇ ವರ್ಷದಲ್ಲಿ ತಿಳಿಯಿತಂತೆ. ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿದ್ದ ಕೃಷ್ಣಬಾಯಿಗೆ ಅವರ ಗಿರೀಶ್  ಪತಿಯ   ಅಕಾಲ   ಮರಣದಿಂದಾಗಿ   19ನೇ   ವಯಸ್ಸಿನಲ್ಲಿಯೇ ವೈಧವ್ಯವೊದಗಿತ್ತು. ಅದಾಗಲೇ ಬಾಲಚಂದ್ರ ಅನ್ನುವ ಒಬ್ಬ ಮಗನು ಜನಿಸಿದ್ದನು. “ಮದುವೆಯಾಯಿತು. ಒಬ್ಬ ಮಗ ಹುಟ್ಟಿದ, ಬಾಲಚಂದ್ರ. ಇದಾದ ಒಂದು ವರ್ಷದೊಳಗೆ ಗಂಡ ಅನೀಮಿಯಾ- ಮಲೇರಿಯಾ ಆಗಿ ತೀರಿಕೊಂಡ. ಮೃತನ ತಂದೆಯಾಗಲಿ ತಾಯಿಯಾಗಲಿ ಕುಟ್ಟಾಬಾಯಿ (ಕೃಷ್ಣಬಾಯಿ)ಯನ್ನು ಬಂದು ಮಾತನಾಡಿಸಲಿಲ್ಲ”  ಆದರೆ, ಆತ್ಮಗೌರವದಿಂದ ಬದುಕುವ ಛಲವಿದ್ದ ಕೃಷ್ಣಬಾಯಿ ಅಂದಿನ ಕಾಲದ ಸಂಪ್ರದಾಯದಂತೆ ಕೇಶಮುಂಡನ ಇತ್ಯಾದಿಗಳನ್ನು ತಿರಸ್ಕರಿಸಿ, ನರ್ಸಿಂಗ್ ಶಿಕ್ಷಣ ಪಡೆದು, ಸ್ವತಂತ್ರವಾಗಿ ತಮ್ಮ ಬದುಕನ್ನು ರೂಪಿಸಿಕೊಂಡರು. ಹಾಗೆಯೇ ತಮ್ಮ ಚಿಕ್ಕ ಮಗ ಬಾಲಚಂದ್ರನನ್ನು ಬೆಳೆಸಿದರು.  ತಂದೆ ರಘುನಾಥ ಕಾರ್ನಾಡರ ಮೊದಲ ಪತ್ನಿಯು ತೀವ್ರ ಅನಾರೋಗ್ಯದಿಂದ ಆಗಾಗ್ಗೆ ನರಳುತ್ತಿದ್ದರು. ರಘುನಾಥ್ ಕಾರ್ನಾಡ್ ಬೆಳಗಾಂನಲ್ಲಿ ಕೆಲಸ ಮಾಡುತ್ತಿದ್ದಾಗ ನರ್ಸಿಂಗ್ ಓದಲು ಬಂದ ಕೃಷ್ಣಬಾಯಿ ತನ್ನ ಭಾವನ ಮೂಲಕ ರಘುನಾಥ ಕಾರ್ನಾಡ್ ಅವರ ಮನೆಯಲ್ಲಿಯೇ ವಾಸ್ತವ್ಯ ಹೂಡಿದಳು. ಅಲ್ಲಿಯೇ ರಘುನಾಥ್ ಕಾರ್ನಾಡ್ ಅವರೊಂದಿಗೆ ಪ್ರೇಮಾಂಕುರವಾಗಿ ಮದುವೆಯಾಯಿತು.

ಇವರಿಗೆ ವಸಂತ, ಪ್ರೇಮಾ, ಗಿರೀಶ, ಲೀನಾ ಎಂಬ ನಾಲ್ಕು ಜನ ಮಕ್ಕಳು ಜನಿಸಿದರು. ಐದಾರು ವರ್ಷದ ಅನಂತರದಲ್ಲಿ ಅವರ ಅಣ್ಣ ಬಾಲಚಂದ್ರ (ಕೃಷ್ಣಬಾಯಿ ಅವರ ಮೊದಲ ಪತಿಯ ಮಗ)ನೂ ‘ಗೋಕರ್ಣ’ ಅನ್ನುವ ಅವನ ಅಡ್ಡ ಹೆಸರನ್ನು ತ್ಯಜಿಸಿ ‘ಬಾಲಚಂದ್ರ ಕಾರ್ನಾಡ್’ನಾಗಿದ್ದ. ಹೀಗಾಗಿ ಅವನು ಅವರ ಖಾಸಾ ಅಣ್ಣನಾಗಿಯೇ ಅವರ ಕುಟುಂಬದಲ್ಲಿ ಬೆಳೆದನು.   ಮುಂದೆ   ಗಿರೀಶ   ಕಾರ್ನಾಡರು   ಸರಸ್ವತಿಯೊಂದಿಗೆ ವಿವಾಹವಾದರು. “ಚಿಕ್ಕಂದಿನಿಂದಲೇ ವಿಧವೆಯಾದ ಆಯಾ ಗೆ ಆರ್ಯ ಸಮಾಜದ ಬೆಂಬಲದಿಂದಾಗಿ ಪುನರ್ ವಿವಾಹ ಸಾಧ್ಯವಾಗಿತ್ತಾದ್ದರಿಂದ ನಾನು ಆರ್ಯ ಸಮಾಜ ಪದ್ದತಿಯಿಂದಲೇ ಲಗ್ನವಾಗಬೇಕು ಎಂದು ಆಕೆಯ ಅಪೇಕ್ಷೆ ಇತ್ತು. ಸರಸ್ಪತಿಯ ತಾಯಿ ಪಾರಸೀ. ಆಕೆ ಅಗ್ನಿ ಆರಾಧಕಳು.

ಹೀಗಾಗಿ ಯಾವುದೇ ಪೂಜೆ ಇಲ್ಲದೆ ಅಗ್ನಿಸಾಕ್ಷಿಯಾಗಿ ವಿವಾಹವನ್ನು ನೆರವೇರಿಸುವ ಯೋಚನೆಗೆ ಆಕೆಯೂ ಸಂತಸ ಪಟ್ಟಳು. ಹೀಗಾಗಿ ಆರ್ಯ ಸಮಾಜ ವಿಧಿಯ ಪ್ರಕಾರ ನಮ್ಮ ವಿವಾಹವಾಯಿತು.”2   ಅಂತೆಯೇ ಅವರಿಗೆ ಶಾಲ್ಮಲೀ ರಾಧಾ ಎಂಬ ಮಗಳು, ರಘು ಅಮೇಯ ಎಂಬ ಮಗನು ಜನಿಸಿದರು.

ಹೈಸ್ಕೂಲ್ ಶಿಕ್ಷಣವನ್ನು ಶಿರಸಿಯಲ್ಲಿ ಪಡೆದ ಗಿರೀಶ್ ಕಾರ್ನಾಡರು 1958   ರಲ್ಲಿ   ಕರ್ನಾಟಕ   ವಿಶ್ವವಿದ್ಯಾಲಯದಲ್ಲಿ   ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನದಲ್ಲಿ ಬಿಎ ಪದವಿಗಳಿಸಿದರು. ಅನಂತರ ಮುಂಬಯಿ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಎಂ.ಎ ತರಗತಿಗೆ ದಾಖಲಾಗಿ “ದಕ್ಷಿಣ ಫೆಲೋ” ಎಂಬ ಮನ್ನಣೆಯನ್ನು ಗಳಿಸಿದರು. ಈ ಮಧ್ಯೆ ಆಕ್ಸ್ ಫರ್ಡ ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಶಿಕ್ಷಣಕ್ಕಾಗಿ ಪ್ರತಿಷ್ಠಿತ “ರ್ಹೋಡ್ಸ್” ವಿದ್ಯಾರ್ಥಿ ವೇತನ ದೊರೆಯಿತು. ಇದರಿಂದ ಕಾರ್ನಾಡರು ಮುಂಬಯಿ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಆಕ್ಸ್‍ಫರ್ಡ್ ತೆರಳಿದರು. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಲ್ಲಿ ಎಂ.ಎ ಪದವಿ ಗಳಿಸಿದರು. ಅಲ್ಲಿಯ ವಿದ್ಯಾರ್ಥಿ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು 1962-63 ರಲ್ಲಿ ಮ್ಯಾಗ್ಡಲೆನ್ ಜೂನಿಯರ್ ಕಾಮನ್ ರೂಮಿನ ಅಧ್ಯಕ್ಷರಾಗಿದ್ದ ಗಿರೀಶರು  1963  ರಲ್ಲಿ  ಆಕ್ಸಫರ್ಡ  ಯೂನಿಯನ್  ಸೊಸೈಟಿಗೂ ಅಧ್ಯಕ್ಷರಾಗಿದ್ದರು.

ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

– ಸಂ

ಇನ್ನಷ್ಟು ಓದಿರಿ

Scroll to Top