ಕನ್ನಡ ಓಟಿಟಿ ಲೋಕ ಅಂದಾಕ್ಷಣ ಈ ಹಿಂದೆ ಮೂಗು ಮುರಿಯುವವರೇ ಹೆಚ್ಚಾಗಿದ್ದರು. ಅದಕ್ಕೆ ಕಾರಣವೂ ಇತ್ತು; ಜೀ 5 ನಂತಹ ದೊಡ್ಡ ವೇದಿಕೆಗಳು ‘ಜೀ ಒರಿಜಿನಲ್ಸ್’ ಹೆಸರಿನಲ್ಲಿ ಬಿಡುಗಡೆ ಮಾಡಿದ ಸರಣಿಗಳೆಲ್ಲವೂ ಪರಭಾಷೆಯ ಹಳಸಿದ ಅಡುಗೆಯಂತಿದ್ದವು. ಕಳೆದ ವರ್ಷವಷ್ಟೇ ತೆರೆಕಂಡ ‘ಶೋಧ’ ಎಂಬ ಸರಣಿ ಹಿಂದಿಯ ‘ಖೋಜ್’ನ ನೆರಳಾಗಿದ್ದರೆ, ‘ರಾಕ್ಷಸ’ ಎಂಬ ಕ್ರೈಮ್ ಥ್ರಿಲ್ಲರ್ ತಮಿಳಿನ ‘ವಿಳಂಗು’ವಿನ ಹಾದಿಯಲ್ಲೇ ನಡೆದಿತ್ತು. ಆದರೆ, ಈ ಬಾರಿ ಈ ‘ಕಾಪಿ’ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ. ರೀಮೇಕ್ ಮಾದರಿಯಿಂದ ಹೊರಬಂದು, ಅಪ್ಪಟ ಕನ್ನಡದ ಮಣ್ಣಿನ ಸೊಗಡಿನಲ್ಲೇ ವಿಜ್ಞಾನದ ಕಚಗುಳಿ ಇಡುವಂತೆ ಬಂದಿರುವುದು ‘ಜೆರಾಕ್ಸ್’ ವೆಬ್ ಸರಣಿ. ಈ ಹಿಂದೆ ‘ಬ್ಲಿಂಕ್’ ಚಿತ್ರದ ಮೂಲಕ ಸಿನಿರಸಿಕರ ಮೆದುಳಿಗೆ ಭರ್ಜರಿ ಕೆಲಸ ಕೊಟ್ಟಿದ್ದ ನಿರ್ದೇಶಕ ಶ್ರೀನಿಧಿ ಬೆಂಗಳೂರು, ಈಗ ಅದೇ ಸೈನ್ಸ್ ಫಿಕ್ಷನ್ ಜಾದೂವನ್ನು ವೆಬ್ ಸರಣಿಯ ಚೌಕಟ್ಟಿನಲ್ಲಿ ತಂದಿಟ್ಟಿದ್ದಾರೆ.

ಈ ಕಥೆಯ ನಾಯಕ ಪ್ರಕಾಶ (ನಾಗಭೂಷಣ್). ರಾಯದುರ್ಗದ ಗಲ್ಲಿಯೊಂದರಲ್ಲಿ ಪುಟ್ಟ ಜೆರಾಕ್ಸ್ ಅಂಗಡಿ ಇಟ್ಟುಕೊಂಡು ಬದುಕು ಸವೆಸುತ್ತಿರುವ ಸಾಮಾನ್ಯ ಯುವಕ. ಆದರೆ ಅವನ ಬದುಕಿನ ಹಳಿ ತಪ್ಪುವುದು ಆತನ ಅಂಗಡಿಯಲ್ಲಿರುವ ಒಂದು ಹಳೆಯ ಜೆರಾಕ್ಸ್ ಮೆಷಿನ್‌ನಿಂದ. ಕಾಗದದ ಪ್ರತಿಗಳನ್ನು ತೆಗೆಯುವ ಯಂತ್ರವೊಂದು ದಿಢೀರನೆ ಮನುಷ್ಯರ ಪ್ರತಿಗಳನ್ನು ತೆಗೆಯಲು ಶುರು ಮಾಡಿದರೆ ಹೇಗಿರುತ್ತದೆ? ಫೋಟೋ ಕಾಪಿ ಮಾಡಬೇಕಾದ ಮೆಷಿನ್‌ನಿಂದ ರಕ್ತಮಾಂಸದ ಮನುಷ್ಯರೇ ಕ್ಲೋನ್ ಆಗಿ ಹೊರಬಂದರೆ ಏನಾಗುತ್ತದೆ? ಈ ಚಿತ್ರವಿಚಿತ್ರ ವಿದ್ಯಮಾನದ ಸುತ್ತಲೇ ಇಡೀ ಸರಣಿ ಹೆಣೆಯಲ್ಪಟ್ಟಿದೆ. ಹೀಗೆ ಸೃಷ್ಟಿಯಾದ ಕ್ಲೋನ್‌ಗಳನ್ನು ಪ್ರಕಾಶ ತನ್ನ ಬಳಿಯಿರುವ ರಹಸ್ಯದ ‘ತಾಯತ’ದಿಂದ ಕಂಟ್ರೋಲ್ ಮಾಡುತ್ತಿರುತ್ತಾನೆ. ಸೈನ್ಸ್ ಫಿಕ್ಷನ್ ಎಳೆಗೆ ರಾಜಕೀಯ ಪಗಡೆಯಾಟ, ಮನುಷ್ಯ ಸಹಜ ಪ್ರೀತಿ, ಒಳಗೊಳಗೇ ಕುದಿಯುವ ಷಡ್ಯಂತ್ರ ಮತ್ತು ದ್ರೋಹದ ಎಳೆಗಳನ್ನು ಬೆರೆಸಿ ಶ್ರೀನಿಧಿ ಒಂದು ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ.
ಸರಣಿಯ ಆರಂಭದ ಸಂಚಿಕೆಗಳು ತುಂಬಾ ಲವಲವಿಕೆಯಿಂದ, ಹಾಸ್ಯದ ಲೇಪನದೊಂದಿಗೆ ಸಾಗುತ್ತವೆ. ಪ್ರಕಾಶ ಮತ್ತು ಆತನ ಚಿತ್ರವಿಚಿತ್ರ ಕ್ಲೋನ್‌ಗಳ ಆಟ ನೋಡುವುದಕ್ಕೆ ಮಜಾ ಕೊಡುತ್ತದೆ. ಆದರೆ, ಮೂರನೆಯ ಕಂತಿನ ಹೊತ್ತಿಗೆ ಕಥೆ ಸೀರಿಯಸ್ ಟರ್ನ್ ತೆಗೆದುಕೊಳ್ಳುತ್ತದೆ. ಇಲ್ಲಿಂದ ಮುಂದೆ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರ ಕಲ್ಪನೆಯ ಲೇಖನಿ ವೇಗವಾಗಿ ಓಡಲು ಶುರು ಮಾಡುತ್ತದೆ. ಕಥೆ ಬೆಳೆಯುತ್ತಾ ಹೋದಂತೆ ಕ್ಲೋನ್‌ಗಳ ಸಂಖ್ಯೆ ಹೆಚ್ಚಾಗಿ, ಅಸಲಿ ಯಾರು? ನಕಲಿ ಯಾರು? ಯಾರು ಯಾರ ಪರವಾಗಿ ಆಡುತ್ತಿದ್ದಾರೆ? ಎಂಬ ಗೊಂದಲ ಪ್ರೇಕ್ಷಕರನ್ನು ಕಾಡುವುದು ಅನಿವಾರ್ಯ. ಸರಣಿಯ ಉತ್ತರಾರ್ಧದಲ್ಲಿ ಬರುವ ಲಾಜಿಕ್‌ಗಳು ಮತ್ತು ತಾರ್ಕಿಕ ವಿವರಣೆಗಳನ್ನು ನೀಡಲು ಹೋಗಿ ನಿರ್ದೇಶಕರು ತುಸು ಹೈರಾಣಾದಂತೆ ಕಾಣುತ್ತದೆ. ಬಹುಶಃ ಈ ಗೋಜಲುಗಳನ್ನು ತುಸು ತಿಳಿಯಾಗಿಸಿ, ನಿರೂಪಣೆಯನ್ನು ಇನ್ನಷ್ಟು ಹರಿತಗೊಳಿಸಿದ್ದರೆ ಈ ‘ಜೆರಾಕ್ಸ್’ ಮೆಷಿನ್ ಮೈ ನಡುಗಿಸುವ ಅನುಭವ ನೀಡುತ್ತಿತ್ತು. ಆದರೂ ಸದಾ ಕ್ರೌರ್ಯ, ರಕ್ತಪಾತ ಮತ್ತು ಅಶ್ಲೀಲತೆಯೇ ತುಂಬಿರುವ ಇಂದಿನ ವೆಬ್ ಸರಣಿಗಳ ನಡುವೆ, ಒಂದು ಸೃಜನಶೀಲ ಹಾದಿಯಲ್ಲಿ ಕಥೆ ಹೇಳಿರುವುದು ಈ ತಂಡದ ದೊಡ್ಡ ಯಶಸ್ಸು.
ನಟನೆಯ ವಿಚಾರಕ್ಕೆ ಬಂದರೆ, ನಾಗಭೂಷಣ್ ಮತ್ತೊಮ್ಮೆ ತಾನೊಬ್ಬ ಅದ್ಭುತ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಗೊಂದಲ, ಭಯ ಮತ್ತು ಜವಾಬ್ದಾರಿಯ ನಡುವೆ ಸಿಕ್ಕಿಬಿದ್ದ ಪ್ರಕಾಶನ ಪಾತ್ರಕ್ಕೆ ಅವರು ಪಕ್ಕಾ ನ್ಯಾಯ ಒದಗಿಸಿದ್ದಾರೆ. ಅವರಿಗೆ ಸಾಥ್ ನೀಡಿರುವ ಮಂಜು ಪಾವಗಡ ಇಲ್ಲಿ ಸರ್‌ಪ್ರೈಸ್ ಪ್ಯಾಕೇಜ್! ಒಂದು ಹಂತದಲ್ಲಂತೂ ಇಡೀ ಸರಣಿಯನ್ನು ಮುನ್ನಡೆಸುವಷ್ಟು ಪ್ರಬಲ ಪಾತ್ರ ಅವರದ್ದು. ಸಿದ್ದು ಮಂಡ್ಯ, ಪಾಯಲ್ ಚೆಂಗಪ್ಪ, ತುಕಾಲಿ ಸಂತು, ಸುಧಾಕರ್ ಗೌಡ ಹಾಗೂ ಶ್ರೀವತ್ಸ ಅವರ ಅಭಿನಯವು ಸರಣಿಯ ತೂಕ ಹೆಚ್ಚಿಸಿದೆ. ಇನ್ನು ಹಿರಿಯ ನಟರಾದ ರಿಚರ್ಡ್ ಲೂಯಿಸ್ ಮತ್ತು ಓಂಪ್ರಕಾಶ್ ರಾವ್ ಅವರು ತಮ್ಮ ಅನುಭವದ ಮೂಲಕ ಸನ್ನಿವೇಶಗಳಿಗೆ ಜೀವ ತುಂಬಿದ್ದಾರೆ. ವಿನಯ್ ಶಂಕರ್ ಅವರ ಬಿಟ್‌ಗಳಂತೆ ಬರುವ ಹಿನ್ನೆಲೆ ಸಂಗೀತ ಮತ್ತು ಆದರ್ಶ ಅವರ ಛಾಯಾಗ್ರಹಣ ಸರಣಿಯ ನಿಗೂಢತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ. ಕನ್ನಡದ ಓಟಿಟಿ ಲೋಕದಲ್ಲಿ ‘ಜೆರಾಕ್ಸ್’ ಒಂದು ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ ಎಂಬುದಂತೂ ಸತ್ಯ.











































