ಬದುಕನ್ನು ಯಾರು ಅಪಾರವಾಗಿ ಪ್ರೀತಿಸುತ್ತಾರೋ, ಪ್ರತಿ ಕ್ಷಣವನ್ನೂ ಬೆರಗಿನಿಂದ ನೋಡುತ್ತಾ ಸಂಭ್ರಮಿಸಬೇಕು ಅಂದುಕೊಳ್ಳುತ್ತಾರೋ, ಅಂತಹವರನ್ನೇ ಈ ಬದುಕು ಅಕ್ಷರಶಃ ಬೆಚ್ಚಿಬೀಳಿಸುತ್ತದೆ. ಅದೂ ಮೇಲಿಂದ ಮೇಲೆ! ಎಷ್ಟರ ಮಟ್ಟಿಗೆ ಹೈರಾಣಾಗಿಸುತ್ತದೆ ಅಂದರೆ, “ಜಗತ್ತಿನ ಎಲ್ಲ ಅನಿಷ್ಟಗಳೂ ನನಗೇ ಮೆತ್ತಿಕೊಂಡಿವೆಯಾ?” ಅಂತಾ ಕುಸಿಯುವಷ್ಟು!

ಪೀಟರ್ ಕೂಡಾ ಅಂತಹವನೇ. ಚಂಡೆ ತಂಡವೊಂದನ್ನು ಕಟ್ಟಿಕೊಂಡು, ಎದೆಯಲ್ಲೊಂದು ಪ್ರೀತಿಯ ಗಿಡ ಬೆಳೆಸಿಕೊಂಡು, ‘ತಾನು-ತನ್ನ ಕುಟುಂಬ’ ಎಂಬ ಪುಟ್ಟ ಲೋಕದಲ್ಲಿ ಸುಖವಾಗಿದ್ದ ಹುಡುಗ. ಆದರೆ ಅವನ ಬದುಕಿನಲ್ಲಿ ಯಾರೂ ನಿರೀಕ್ಷಿಸದ ಘಟನೆಗಳು ಮಿಂಚಿನ ವೇಗದಲ್ಲಿ ನಡೆದುಹೋಗುತ್ತವೆ. ಎಲ್ಲವೂ ಅಯೋಮಯ! ಏನಾಗುತ್ತಿದೆ ಅಂತಾ ಪೀಟರ್ ತಿಳಿದುಕೊಳ್ಳೋಹೊತ್ತಿಗೆ ಕಾಲದ ಸುಳಿಯಲ್ಲಿ ಏನೇನೋ ಪಲ್ಲಟಗಳಾಗಿರುತ್ತವೆ. ಬದುಕಿನಲ್ಲಿ ನಡೆಯುತ್ತಿರುವ ಈ ಆಘಾತಗಳೆಲ್ಲಾ ಕೇವಲ ವಿಧಿಯಾಟವಾ? ಅಥವಾ ಕಾಣದ ಕೈಯೊಂದು ನಡೆಸುತ್ತಿರುವ ವ್ಯವಸ್ಥಿತ ಸಂಚಾ? ತನ್ನವರೇ ಎಂದು ನಂಬಿದವರು ಮಾಡುತ್ತಿರುವ ಮಸಲತ್ತಾ? ಹೀಗೆ ಹತ್ತು ಹಲವು ಅನುಮಾನಗಳ ಬೆನ್ನುಹತ್ತುತ್ತಲೇ, ಅನಿರೀಕ್ಷಿತ ತಿರುವುಗಳ ಮೂಲಕ ಪೀಟರ್‌ನ ಬದುಕಿನ ಈ ಕಥೆ ನೋಡುಗರ ಎದೆಯನ್ನು ಭಾರವಾಗಿಸುತ್ತದೆ. ಪ್ರತಿ ಹಂತದಲ್ಲೂ ಕಾಡುತ್ತಾ, ಉತ್ತರ ಸಿಗದ ಪ್ರಶ್ನೆಗಳ ನಡುವೆ ಮೌನವಾಗಿಸುತ್ತದೆ.
ಮನೆಗೆ ಬರುವ ಹೆಣ್ಣುಮಗಳು ಆ ಮನೆಯನ್ನು ಬೆಳಗುವಂತವಳಾಗಿರಬೇಕು. ʻʻತೀರಾ ಬಡತನದ ಕುಟುಂಬದಿಂದ ಹೆಣ್ಣು ತಂದರೆ, ತಗ್ಗೀ ಬಗ್ಗೀ ಹೋಗ್ತಾಳೆ. ನಾನು ನಮ್ಮವರು ಅಂತಾ ಬಾಳ್ತಾಳೆʼʼ ಅನ್ನೋದು ಮಿಡಲ್ ಕ್ಲಾಸ್ ಮೆಂಟಾಲಿಟಿ. ಕೆಲವೊಮ್ಮೆ ಏನಾಗುತ್ತದೆಂದರೆ, ಬಡತನದ ಬೇಗೆಯಲ್ಲಿ ನೊಂದು, ಬೆಂದು ಬಂದ ಹೆಣ್ಣುಮಕ್ಕಳು ಇನ್ನೂ ಯಾಕೆ ಅದೇ ಬದುಕನ್ನು ಮುಂದುವರೆಸಬೇಕು? ತಾವು ಕಂಡ ಕನಸಿನ ಜೀವನ ಸಾಗಿಸಬೇಕು ಎನ್ನುವ ಕಾರಣಕ್ಕೆ ವಿರುದ್ಧ ದಿಕ್ಕಿನಲ್ಲಿ ನಡೆಯಲು ಶುರು ಮಾಡುತ್ತಾರೆ. ಅಲ್ಲಿಗೆ ಕುಟುಂಬದಲ್ಲಿ ಬಿರುಕು, ಕೆಡುಕುಗಳೆಲ್ಲವೂ ಘಟಿಸುತ್ತವೆ. ಪೀಟರ್ ಚಿತ್ರದಲ್ಲೂ ಅಂಥದ್ದೊಂದು ಪ್ರಕರಣ ನಡೆಯುತ್ತದೆ. ಅದಕ್ಕೆ ಹೊಂದಿಕೊಂಡಂತೆ ಎಲ್ಲವೂ ದಿಕ್ಕಾಪಾಲಾಗುತ್ತವೆ. ಪೀಟರ್ ಕೂಡಾ ದಿಕ್ಕು ಕಾಣದಂತಾಗಿರುತ್ತಾನೆ. ಒಂದಷ್ಟು ವರ್ಷಗಳ ನಂತರ ಮತ್ತೆ ತನ್ನೂರಿಗೆ ಬಂದರೆ ಎಲ್ಲವೂ ಬದಲಾಗಿರುತ್ತದೆ. ಇದಕ್ಕೆಲ್ಲಾ ಕಾರಣವನ್ನು ಹುಡುಕೋದಷ್ಟೇ ಪೀಟರ್ ಮುಂದಿನ ಸವಾಲು. ಅದು ಸಾಧ್ಯವಾಗುತ್ತದಾ ಇಲ್ಲವಾ ಅನ್ನೋದು ಅಂತಿಮ ಗುಟ್ಟು!
ನಂಬಿಕೆ ಎನ್ನುವ ಸ್ತಂಭವನ್ನು ನಂಬಿ ಮೇಲಿನ ಬದುಕೆಂಬ ಕಟ್ಟಡ ನಿಂತಿರುತ್ತದೆ. ಅದು, ಅಣ್ಣ-ತಮ್ಮ, ಹೆತ್ತವರು-ಮಕ್ಕಳು, ಪ್ರೀತಿಸಿದವರು, ಮದುವೆಯಾದವರು, ಗೆಳೆತನ ಹೀಗೆ… ಇದರಲ್ಲಿ ಯಾವೊಂದು ಇಟ್ಟಿಗೆ ಜರುಗಿದರೂ ಕಟ್ಟಡವಿಡೀ ನಲುಗಿಹೋಗುತ್ತದೆ. ಪೀಟರ್ ಸಿನಿಮಾದಲ್ಲೂ ಹಾಗಾಗುತ್ತದೆ. ತೀರಾ ನಂಬಿದವರೇ ಹಿಂದಿನಿಂದ ಇರಿದಿರುತ್ತಾರೆ. ಯಾರೋ ಬೀಸಿದ ಸುಳ್ಳು, ನಯವಂಚನೆ, ಅಸೂಯೆ ಮತ್ತು ದುರಾಸೆಯ ಬೆಂಕಿ ಮತ್ಯಾರನ್ನೋ ಸುಟ್ಟು ಬೂದಿ ಮಾಡಿರುತ್ತದೆ. ಈ ಚಿತ್ರದಲ್ಲಿ ತೀರಾ ಕಾಡುವ ಕಥೆಯ ಎಳೆ ಇದೆ. ಅದನ್ನು ರೋಚಕಗೊಳಿಸುವ ಚಿತ್ರಕತೆ ಇದೆ. ಪೂರಕವಾಗಿ ಜೀವ ತುಂಬಿದ ಕಲಾವಿದರಿದ್ದಾರೆ.
ರಾಜೇಶ್ ಧ್ರುವ ಅವರದ್ದು ಸಹಜ ಅಭಿನಯ. ಇವನು ನಮ್ಮವನು ಎನ್ನುವ ಫೀಲ್ ಹುಟ್ಟಿಸುತ್ತಾರೆ. ಎರಡು ಶೇಡ್‌ನಲ್ಲೂ ಗಮನ ಸೆಳೆಯುತ್ತಾರೆ. ಬಹುಶಃ ರವೀಕ್ಷಾ ಶೆಟ್ಟಿ ಆ ಪಾತ್ರಕ್ಕೆ ಹೇಳಿಮಾಡಿಸಿದ ಆಯ್ಕೆ. ರವೀಕ್ಷಾ ಎಂಥದ್ದೇ ಪಾತ್ರ ಕೊಟ್ಟರೂ ಸಲೀಸಾಗಿ ಅಭಿನಯಿಸುವ ಪ್ರತಿಭಾವಂತೆ ಅನ್ನೋದನ್ನು ಪೀಟರ್ ತೋರಿಸಿದೆ. ಚಿತ್ರದಲ್ಲಿ ಚೂರು ಸ್ಕ್ರೀನ್ ಸ್ಪೇಸ್ ಕಡಿಮೆ ಅನ್ನಿಸಿದರೂ ಹೆಚ್ಚು ಕಾಡುತ್ತಾರೆ. ಆ ಮೂಲಕ ನಾಯಕನಟಿಯಾಗಿ ಭದ್ರವಾಗಿ ನೆಲೆ ನಿಲ್ಲುವ ಎಲ್ಲ ಸೂಚನೆ ನೀಡಿದ್ದಾರೆ. ಈ ಸಿನಿಮಾದಲ್ಲೊಂದು ಪಾತ್ರವಿದೆ. ತನ್ನ ಪುಟ್ಟ ಮಗನೊಂದಿಗೆ ಎಲ್ಲಿಂದಲೋ ಬಂದು ಸೇರುವ ಪೀಟಿ ಟೀಚರ್ ಪಾತ್ರ. ʻಈ ಪಾತ್ರ ಯಾಕೆ ಬಂತು? ಯಾವ ಅಗತ್ಯವಿತ್ತು?ʼ ಅಂತಾ ಆರಂಭದಲ್ಲಿ ಅನ್ನಿಸೋದು ಸಹಜ. ಆದರೆ, ಕಥೆ ಸಾಗುತ್ತಾ ಗೊತ್ತಾಗುತ್ತದೆ ಇದೇ ಸಿನಿಮಾದ ಶಕ್ತಿ ಅನ್ನೋದು. ಆ ಪಾತ್ರವನ್ನು ಜಾಹ್ನವಿ ರಾಯಲ ಎನ್ನುವ ಹೆಣ್ಣುಮಗಳು ನಿಭಾಯಿಸಿರುವ ರೀತಿ ಇದೆಯಲ್ಲಾ? ನಿಜಕ್ಕೂ ಗ್ರೇಟ್. ಜಾಹ್ನವಿಯ ದನಿ, ಕಣ್ಣುಗಳಲ್ಲಿನ ಶಾರ್ಪ್‌ನೆಸ್ಸು, ನಟನೆ ಎಲ್ಲವೂ ಆ ಪಾತ್ರದ ತೂಕವನ್ನು ಹೆಚ್ಚಿಸಿದೆ. ಹಾಗೆಯೇ, ಮನೆಗೆ ಬರುವ ಬೆಕ್ಕಣ್ಣಿನ ಸೊಸೆಯಾಗಿ ಡೀನಾ ಪೂಜಾರಿಯನ್ನು ಅದೆಲ್ಲಿಂದ ಹುಡುಕಿತಂದರೋ, ಆಕೆ ಕೂಡಾ ಪಾತ್ರವನ್ನು ತಿಂದುಹಾಕಿದ್ದಾಳೆ. ಪ್ರತಿಮಾ ನಾಯಕ್ ಆಳಕ್ಕಿಳಿದು ನಟಿಸಿದ್ದಾರೆ. ಪೀಟರ್ ಅಣ್ಣ ಡೇವಿಡ್ ಪಾತ್ರದಲ್ಲಿ ಭರತ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ರಾಮ್ ನಾಡಗೌಡ ಕೂಡಾ ಹೊಸಾ ಹೊಳಹು ನೀಡಿದ್ದಾರೆ. ಈ ಎಲ್ಲ ಪ್ರತಿಭಾವಂತರನ್ನು ಒಂದು ಕಡೆ ಸೇರಿಸಿದ್ದೇ ಬಹುಶಃ ನಿರ್ದೇಶಕ ಸುಖೇಶ್ ಶೆಟ್ಟಿ ಅವರ ಮೊದಲ ಗೆಲುವು.
ದೂರದರ್ಶನ ನಿರ್ದೇಶಕ ಸುಖೇಶ್ ಶೆಟ್ಟಿಯ ದೂರದೃಷ್ಟಿ, ಕಥೆ ಕಟ್ಟುವ ಶೈಲಿ ಎಲ್ಲವೂ ಚೆಂದ. ಈ ಚಿತ್ರವನ್ನು ಇನ್ನು ಸುಖೇಶ್ ಬಹಳ ಪ್ರಬುದ್ಧವಾಗಿ ನಿಭಾಯಿಸಿದ್ದಾರೆ. ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಮತ್ತು ಬದುಕಿನ ಅನಿರೀಕ್ಷಿತ ತಿರುವುಗಳನ್ನು ದೃಶ್ಯಗಳ ಮೂಲಕ ಹಿಡಿದಿಡುವಲ್ಲಿ ಅವರ ಕೆಲಸ ಎದ್ದು ಕಾಣುತ್ತದೆ. ರಿತ್ವಿಕ್ ಮುರಳೀಧರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಜೀವಾಳ. ಪ್ರತಿ ಭಾವನಾತ್ಮಕ ಕ್ಷಣಕ್ಕೂ ಅವರ ಸಂಗೀತ ಹೊಸ ಆಯಾಮ ನೀಡಿದೆ. ಗುರುಪ್ರಸಾದ್ ನಾರ್ನಾಡ್ ಅವರ ಛಾಯಾಗ್ರಹಣ ಕಣ್ಣಿಗೆ ತಂಪು ನೀಡುವಂತಿದ್ದು, ಸಣ್ಣ ಜಾಗದಲ್ಲೂ ಚಿತ್ರದ ಮೂಡ್ ಅನ್ನು ಸಶಕ್ತವಾಗಿ ಕ್ಯಾರಿ ಮಾಡಿದೆ. ಸಿನಿಮಾಗೆ ಬಳಸಿರುವ ಲೊಕೇಷನ್ನುಗಳೂ ಪಾತ್ರಗಳಂತೆ ಆಪ್ತವಾಗುತ್ತವೆ. ಇದರ ಜೊತೆಗೆ ತಾಂತ್ರಿಕತೆಯ ನೈಪುಣ್ಯವೂ ಸೇರಿ ʻಪೀಟರ್ʼ ಒಟ್ಟಾರೆಯಾಗಿ ಒಂದು ಗುಣಮಟ್ಟದ ಚಿತ್ರವಾಗಿ ಹೊರಹೊಮ್ಮಿದೆ. ಮೊದಲ ಭಾಗದಲ್ಲಿ ಒಂಚೂರು ಸ್ಪೀಡ್ ಇದ್ದಿದ್ದರೆ ಪೀಟರ್ ಮತ್ತೊಂದು ಲೆವೆಲ್ಲಿಗೆ ಮುಟ್ಟುತ್ತಿತ್ತು! ಏನೇ ಆಗಲಿ ಪೀಟರ್ ಬಡಿದ ಚಂಡೆ ಪ್ರೇಕ್ಷಕರ ಎದೆಯಲ್ಲಿ ಸದ್ದು ಮಾಡಿದೆ!!
– ಅರುಣ್ ಕುಮಾರ್ ಜಿ










































