ಜಗತ್ತು ಇಂದು ತಾಂತ್ರಿಕತೆಯ ತರ್ಲೆಗಳಲ್ಲಿ ಬಿದ್ದು, ಬೆರಳ ತುದಿಯ ವೇಗಕ್ಕೆ ಸೋತು ಮಕಾಡೆ ಮಲಗಿದೆ. ಸಂಬಂಧಗಳು ‘ಸ್ಟೇಟಸ್’ ಮತ್ತು ‘ಸ್ಟೋರಿ’ಗಳ ನಡುವೆ ಕಳೆದುಹೋಗುತ್ತಿರುವ ಈ ಕಾಲಘಟ್ಟದಲ್ಲಿ, ಕನ್ನಡ ಚಿತ್ರರಂಗವೊಂದು ಮೆಲ್ಲನೆ ಹಿಮ್ಮುಖವಾಗಿ ಚಲಿಸಿ 70ರ ದಶಕದ ಅಂಗಳಕ್ಕೆ ಲಗ್ಗೆ ಇಟ್ಟಿದೆ. ‘ಆ ಕಾಲದ ಕಾದಂಬರಿ ಆಧಾರಿತ ಸಿನಿಮಾಗಳೇ ಬೇರೆ’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುವ ಮಂದಿಗೆ, ಖ್ಯಾತ ಸಾಹಿತಿ ತ್ರಿವೇಣಿಯವರ ‘ವಸಂತಗಾನ’ ಕಾದಂಬರಿಯ ಅಕ್ಷರ ರೂಪ ಈಗ ‘ಸರಳ ಸುಬ್ಬರಾವ್’ ಆಗಿ ತೆರೆಯ ಮೇಲೆ ಜೀವಂತಗೊಂಡಿದೆ. ಇದು ಕೇವಲ ಒಂದು ಸಿನಿಮಾವಲ್ಲ; ಅದು ಕಾಲದ ಗಾಡಿಯನ್ನೇರಿ ಮೈಸೂರಿನ ಆ ಅಂದಿನ ಸುಂದರ ಗಲ್ಲಿಗಳ ನಡುವೆ, ಗಂಧದ ಘಮಲಿನಂತೆ ಅರಳುವ ಮುಗ್ಧ ಪ್ರೇಮದ ಕವಿತೆ.

ನಿರ್ದೇಶಕ ಮಂಜು ಸ್ವರಾಜ್ ಭಾವನೆಗಳನ್ನು ಬಸಿದು, ತಮಾಷೆಯನ್ನು ಬೆರೆಸಿ ತೀರಾ ಅಚ್ಚುಕಟ್ಟಾಗಿ ಪೋಣಿಸಿದ್ದಾರೆ. 1970ರ ದಶಕದ ಆ ಹಿತವಾದ ಭಾಷೆ, ಘಮಘಮಿಸುವ ಅಡುಗೆಮನೆಯಿಂದ ಬರುವ ತಿಂಡಿಗಳ ವಾಸನೆ, ಸೈಕಲ್ ಘಂಟೆಯ ನಾದ ಮತ್ತು ಅಗ್ರಹಾರದ ಮನೆಗಳ ನಡುವೆ ಬೆಸೆದ ಸಂಬಂಧಗಳ ಮರುಸೃಷ್ಟಿಯೇ ಒಂದು ಅದ್ಭುತ ಕಲೆ. ಇಂಗ್ಲಿಷ್ ಪ್ರೊಫೆಸರ್ ಸುಬ್ಬರಾವ್ ಆಗಿ ನಟ ಅಜಯ್ ರಾವ್ ಅವರು ಬರೀ ಅಭಿನಯಿಸಿಲ್ಲ, ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಅಂದಿನ ಕಾಲದ ಮಿತಭಾಷೆ, ಶಾಂತ ಸ್ವಭಾವ ಮತ್ತು ಪತ್ನಿಯ ಮೇಲೆ ಅವರು ತೋರುವ ಆ ಮೌನ ಪ್ರೀತಿ ಪ್ರೇಕ್ಷಕರ ಎದೆಯಾಳವನ್ನು ಮುಟ್ಟುತ್ತದೆ. ಅವರ ಪ್ರೀತಿ ಆಕಾಶದಂತೆ ವಿಶಾಲ, ಆದರೆ ಆ ಶಿಸ್ತು ಮಾತ್ರ ಕಾಲೇಜಿನ ಬೆಲ್ನಷ್ಟೇ ಕಟ್ಟುನಿಟ್ಟು.
ಇನ್ನು ಈ ‘ಸರಳ’ ಸುಂದರಿ ಮಿಶಾ ನಾರಂಗ್ ಅವರು, ಲೇಖಕಿಯಾಗಬೇಕೆಂಬ ಕನಸಿನ ಹಂಬಲದ ನಡುವೆಯೇ ಸಂಸಾರದ ಸಿಹಿಯನ್ನು ಸವಿಯುವ, ‘ಭಯಂಕರ ತಿಂಡಿಪೋತಿ’ ಗೃಹಿಣಿಯಾಗಿ ಅಕ್ಷರಶಃ ಮಿಂಚಿದ್ದಾರೆ. ಅವರ ಮುಗ್ಧತೆ ಮತ್ತು ಹಠದ ನಡುವಿನ ಸಮತೋಲನವು ಚಿತ್ರಕ್ಕೆ ಜೀವ ತುಂಬಿದೆ. ಇವರ ನಡುವೆ ಹಿರಿಯ ಕಲಾವಿದರಾದ ರಂಗಾಯಣ ರಘು ಮತ್ತು ವೀಣಾ ಸುಂದರ್ ಜೋಡಿ ಚಿತ್ರದ ಭಾವನಾತ್ಮಕ ಬೆನ್ನೆಲುಬು. ದಶಕಗಳ ಕಾಲ ಮಗುವಿಗಾಗಿ ಹಂಬಲಿಸುವ ನರಸಿಂಹ ಶಾಸ್ತ್ರಿ ಮತ್ತು ಲಕ್ಷ್ಮಿ ದಂಪತಿಗಳ ಎಮೋಷನಲ್ ಟ್ರ್ಯಾಕ್ ನೋಡುವಾಗ, ಸಂಬಂಧಗಳ ಮೌಲ್ಯವು ಕಣ್ಣೀರಿನ ರೂಪದಲ್ಲಿ ಪ್ರೇಕ್ಷಕರನ್ನು ತಾಕುತ್ತದೆ.
ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತವು 70ರ ದಶಕದ ಆ ಹಳೆಯ ಗ್ರಾಮಫೋನ್ ರೆಕಾರ್ಡ್ನಂತೆ ಮನಸ್ಸಿಗೆ ಇಂಪಾದ ನಾದವನ್ನು ನೀಡಿದರೆ, ಪ್ರದೀಪ್ ಪದ್ಮಕುಮಾರ್ ಅವರ ಛಾಯಾಗ್ರಹಣವು ಪ್ರತಿ ಚೌಕಟ್ಟನ್ನೂ ಒಂದು ವರ್ಣಚಿತ್ರದಂತೆ ಕಣ್ಮುಂದೆ ನಿಲ್ಲಿಸಿದೆ. ಇಲ್ಲಿ ಯಾವುದೇ ಅಬ್ಬರವಿಲ್ಲ, ಗದ್ದಲವಿಲ್ಲ; ಕೇವಲ ಶುದ್ಧವಾದ ಭಾವನೆಗಳ ಮೆರವಣಿಗೆಯಿದೆ. ಲೊಕೇಶನ್ಗಳು ಮತ್ತು ವೇಷಭೂಷಣಗಳು ನಮ್ಮನ್ನು ಕೈಹಿಡಿದು ಅಜ್ಜಿ ಕಾಲದ ಅಂಗಳಕ್ಕೆ ಕರೆದೊಯ್ಯುತ್ತವೆ. ಹಳೆಯ ಕಾಲದ ಮೈಸೂರಿನ ಆಪ್ತತೆಯನ್ನು, ಸಂಬಂಧಗಳ ಬೆಕ್ಕಿನ ನಡಿಗೆಯಂತಹ ಲಾವಣ್ಯವನ್ನು ಸವಿಯಲು ‘ಸರಳ ಸುಬ್ಬರಾವ್’ ಒಂದು ಪರಿಪೂರ್ಣ ಕಲಾಕೃತಿ. ಒಮ್ಮೆ ಈ ಕಾಲಯಂತ್ರದೊಳಗೆ ಕೂತು ಹಳೆ ನೆನಪುಗಳ ಸವಿಯನ್ನು ಸವಿದು ಬನ್ನಿ!







































