ಪ್ರಿಯ ಚೇತನ್

Picture of Cinibuzz

Cinibuzz

Bureau Report

ಪ್ರಿಯ ಚೇತನ್

ಯಾವುದೇ ಸಮಾಜದಲ್ಲಿ ಪರಂಪರೆಯ ಪ್ರತೀಕವಾಗಿ ಮತ್ತು ಸಾರ್ವಜನಿಕ ಉದ್ದೇಶಗಳಿಗಾಗಿ ಮ್ಯೂಸಿಯಂಗಳು, ಪಾರ್ಕ್, ಪುರಾತತ್ವ ತಾಣಗಳು, ಪ್ರತಿಮೆಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಸಾಂಸ್ಕೃತಿಕ ಪರಂಪರೆಯ ತಾಣಗಳು, ಮಹತ್ವದ ವ್ಯಕ್ತಿಗಳ ವಸ್ತು, ವಾಸಸ್ಥಳ, ಸಮಾಧಿಗಳು, ಯುದ್ಧ ಸ್ಮಾರಕಗಳು, ಇತಿಹಾಸ ಅಧ್ಯಯನ ಕೇಂದ್ರಗಳು ಇರುತ್ತವೆ.

ಜೀವಂತ ಸಮಾಜ ಇರುವುದೇ ಹೀಗೆ. ಇದು ವಿಶ್ವವ್ಯಾಪಿ.

ರಾಜ್ ಕುಮಾರ್ ಕನ್ನಡ ಅಸ್ಮಿತೆಯ ಬಹು ದೊಡ್ಡ ಪ್ರತಿಭೆ ಮತ್ತು ಸಾಧಕರು. ಏಳು ಕೋಟಿ ಕನ್ನಡಿಗರ ಹೃದಯಸಿಂಹಾಸನಾದೀಶ್ವರನಿಗೆ ಎರಡೂವರೆ ಎಕರೆ ಜಾಗ ಮೀಸಲಿಡುವುದು ದೊಡ್ಡ ಸಂಗತಿಯಲ್ಲ. ನಿಮ್ಮ ಕಾಳಜಿ ಸರಿ ಇರಬಹುದು ಆದರೆ ಇತರ ಸಂಗತಿ, ಆಯಾಮಗಳನ್ನೂ ನಾವು ಪರಿಗಣಿಸಬೇಕು.

ಈ ಎರಡೂವರೆ ಎಕರೆ ಜಾಗದ ಬಗ್ಗೆ ನಿಮಗೆ ತಿಳಿದಿರಬೇಕಾದ್ದು ಏನೆಂದರೆ,

  1. ಕಂಠೀರವ ಸ್ಟುಡಿಯೋ ವ್ಯಾಪ್ತಿಯಲ್ಲಿನ ಡಾ. ರಾಜ್ ಸ್ಮಾರಕ ಜಾಗವನ್ನು ರಾಜ್ ಅವರ ಕುಟುಂಬಕ್ಕೆ ನೀಡಿಲ್ಲ, ಅದೊಂದು ಸಾರ್ವಜನಿಕರು ಭೇಟಿ ನೀಡುವ ಸ್ಮಾರಕ ತಾಣ. ಇದನ್ನು ಅಂದಿನ ಸರ್ಕಾರವೇ ಸ್ವಯಂಪ್ರೇರಣೆಯಿಂದ ಮಾಡಿದ್ದು. ಒಂದು ವೇಳೆ ರಾಜ್ ಕುಟುಂಬವು ಈ ಸ್ಮಾರಕವನ್ನು ಗಾಜನೂರಿನಲ್ಲಿ ಮಾಡಿದ್ದರೂ ಕನ್ನಡಿಗರು ಮಹದೇಶ್ವರ ಬೆಟ್ಟಕ್ಕೆ ಹೋಗುವಂತೆ ಗಾಜನೂರಿಗೂ ಹೋಗಿ ಭೇಟಿ ನೀಡುತ್ತಿದ್ದರು. ಇದು ಖಚಿತ.

ರಾಜ್ ಅವರಿಗೆ ಜಾಗ ನೀಡಿದ ನಂತರ ಇತರ ಕಲಾವಿದರಿಗೂ ಕೊಡಬೇಕಾಗಿ ಬರುತ್ತದೆ ಎಂದು ಹೇಳುತ್ತಿದ್ದೀರಿ. ಆದರೆ ರಾಜ್ ಅವರೊಂದಿಗೆ ಯಾರನ್ನೂ ಹೋಲಿಸಲಾಗದು. ನಟನಾ ಪ್ರತಿಭೆಯ ಒಂದೇ ವಿಚಾರಕ್ಕೆ ಸೀಮಿತಗೊಳಿಸಲಾಗದ ಸಂಗತಿ ಅದು.

ಕರ್ನಾಟಕ ಏಕೀಕರಣ, ಮನರಂಜನಾ ಉದ್ಯಮದ ಬೆಳವಣಿಗೆ, ಹಲವು ಪೀಳಿಗೆಯವರಿಗೆ ಜೀವನ ಮೌಲ್ಯ, ವಿವೇಕಗಳನ್ನು ಬೆಳೆಸಿ ಪೊರೆದದ್ದು, ಕನ್ನಡ ಭಾಷೆಯ ಗೌರವ ಮಾತ್ರವಲ್ಲದೆ ಅದರ ಸೌಂದರ್ಯ-ಸಾಮರ್ಥ್ಯಗಳನ್ನೂ ಬಿಂಬಿಸಿದವರು ಡಾ. ರಾಜ್. ಈ ಕಾರಣಗಳಿಗಾಗಿ ಅವರೇ ಮೊದಲು. ಆ ಮೊದಲ ಸಾಲಿನ ಕಲಾವಿದರಲ್ಲಿ ಕನ್ನಡಕ್ಕೆ ಕೊಡುಗೆ ನೀಡುವ ಐತಿಹಾಸಿಕ ಅವಕಾಶ ಸಿಕ್ಕಿದ್ದು ರಾಜ್ ಅವರಿಗೆ.

  1. ಎರಡೂವರೆ ಎಕರೆ ಅನ್ನುವುದರ ಅರ್ಥ ಸ್ಮಾರಕದ ಸುತ್ತಲಿನ ಜಾಗದ ಹೂ ಗಿಡಗಳು, ಪಾದಚಾರಿ ಪಥ, ಒಪ್ಪ ಓರಣದ ಆವರಣ ಮುಂತಾದ್ದು.
  2. ಡಾ. ರಾಜ್ ಸ್ಮಾರಕ ಮತ್ತು ಅಲ್ಲಿ ಜಾಗ ನೀಡಿದ್ದರ ಹಿಂದೆ ಓಟಿನ ಲೆಕ್ಕಾಚಾರವಿತ್ತು ಎಂದಿದ್ದೀರಿ!

ನಿಜ ಸಂಗತಿ ಏನೆಂದರೆ, ರಾಜ್ ಅವರನ್ನು ರಾಜಕಾರಣಿಗಳು ಬಳಸುವ ಪ್ರಯತ್ನ ಮಾಡಿದ್ದು ನಿಜ ಆದರೆ ರಾಜ್ ವ್ಯಕ್ತಿತ್ವ ಅವೆಲ್ಲವನ್ನೂ ಮೀರಿ ಮುಗಿಲೆತ್ತರ ಬೆಳೆದಿತ್ತು. ಅವರನ್ನು ಒಳಗೊಳ್ಳುವ ನೈತಿಕ ಶಕ್ತಿ ಯಾವ ಪಕ್ಷಕ್ಕೂ ಇರಲಿಲ್ಲ.

ಡಾ. ರಾಜ್ ಕುಮಾರ್ ಅವರು ಕನ್ನಡ ಸಮಾಜದ ಮೇಲೆ ಬೀರಿದ ಸಕಾರಾತ್ಮಕ ಪ್ರಭಾವ ಮತ್ತು ಪರಿಣಾಮವನ್ನು ಕುಗ್ಗಿಸುವ ಪ್ರಯತ್ನ ರಾಜ್ ಜೀವಂತವಿದ್ದಾಗಿಂದಲೂ ನಡೆದಿದೆ. ಮೇಲ್ಜಾತಿಯ ಒಂದು ವರ್ಗದ ಪತ್ರಕರ್ತರು, ಬರಹಗಾರರು, ಗುಂಪುಗಳು ಅಂತಹದ್ದನ್ನು ಮಾಡಿದರು, ಈಗಲೂ ಅದೇ ಧೋರಣೆ ಹೊಂದಿದ್ದಾರೆ ಮತ್ತು ವಿಫಲರಾಗಿದ್ದಾರೆ. ಸವರನ್ ಚಿನ್ನವನ್ನೆಂದಾದರೂ ಕಬ್ಬಿಣದೊಂದಿಗೆ ಬೆರೆಸಲಾದೀತೆ?

ಡಾ. ರಾಜ್ ಕುಮಾರ್ ಎಂಬುದು ಎಲ್ಲೋ ಯುಗದಲ್ಲೊಮ್ಮೆ ಸಂಭವಿಸುವ ಘಟನೆ. ಅದನ್ನರಿಯಲು ವಿವೇಕ ವ್ಯವಧಾನಗಳೆರಡೂ ಬೇಕು.

ರಾಜ್ ಕುಮಾರ್ ಅವರ ಕೊಡುಗೆ ಮತ್ತು ವ್ಯಕ್ತಿತ್ವದ ಹಿರಿಮೆಯನ್ನು ಮೃದುಮಾತುಗಳಿಂದಲೂ ಒಬ್ಬರಿಗೆ ಮನವರಿಕೆ ಮಾಡಲು ಸಾಧ್ಯ. ಸಾ. ರಾ. ಗೋವಿಂದು ಮತ್ತು ಮಿತ್ರರು ಈ ವಿಚಾರ ಮಾತನಾಡುವಾಗ ಚೇತನ್ ಅವರ ಜೊತೆ ಸಂಯಮ ತೋರಬೇಕಿತ್ತು ಎಂದು ನನಗನಿಸಿದೆ. ನಿಮ್ಮ ನಿಂದನೆ, ದೂಷಣೆ ಒಪ್ಪಲಾಗದು.

ಕರ್ನಾಟಕಕ್ಕೆ ಒಳಿತಾಗುವಂತೆ ನಿಮ್ಮ ಮುಂದಿನ ಚಟುವಟಿಕೆಗಳು, ಚಿಂತನೆಗಳು ಇರಲೆಂದು ಬಯಸುವೆ.

  • ಪಾರ್ವತೀಶ ಬಿಳಿದಾಳೆ

ಇನ್ನಷ್ಟು ಓದಿರಿ

Scroll to Top