ಪಾಪ ಅರ್ಜುನ್ ಜನ್ಯ!

ಅರ್ಜುನ್ ಜನ್ಯ ಅಂದುಕೊಂಡಿದ್ದೆಲ್ಲಾ ಅಂದುಕೊಂಡಂತೆಯೇ ಆಗಿಹೋಗಿದ್ದರೆ, ಈ ಹೊತ್ತಿಗೆ ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್‌ಗಳ ಪಟ್ಟಿಯಲ್ಲಿ ಅವರ ಹೆಸರು ರಾರಾಜಿಸಬೇಕಿತ್ತು. ದೊಡ್ಡ ಸ್ಟಾರ್‌ಗಳಿಗೆಲ್ಲಾ ಕಥೆ ಪೋಣಿಸಿ, ಮ್ಯೂಸಿಕ್ಕು ಸವಾರಿ ಮಾಡಿಸಿ ಸಿನಿಮಾ ನಿರ್ದೇಶನಕ್ಕೆ ಅಣಿಗೊಳ್ಳಬೇಕಿತ್ತು. ಆದರೆ, ನಸೀಬು ಈ ಸಲ ಜನ್ಯಾಗೆ ಕೈಕೊಟ್ಟಿರುವುದು ಸುಳ್ಳಲ್ಲ. ಮ್ಯೂಸಿಕ್ ಡೈರೆಕ್ಷನ್ನಲ್ಲಿ ಅವರಿಗೆ ಸಿಕ್ಕಿದ್ದ ಹಿಡಿತ, ಸಿನಿಮಾ ನಿರ್ದೇಶನದಲ್ಲಿ ಬಹುಶಃ ದಕ್ಕದೇ ಹೋಯಿತು.
ಹಾಗೆ ನೋಡಿದರೆ, ಮೊದಲ ಸಿನಿಮಾದ ನಿರ್ದೇಶಕನಿಗೆ ಏನೆಲ್ಲಾ ಸೌಲಭ್ಯಗಳು ಸಿಗಬೇಕೋ, ಅವು ಅವಶ್ಯಕತೆಗಿಂತ ಒಂದು ಹಿಡಿ ಹೆಚ್ಚಾಗಿಯೇ ಅರ್ಜುನ್ ಅವರಿಗೆ ಸಿಕ್ಕಿದ್ದವು. ಸಂಗೀತ ನಿರ್ದೇಶನದಲ್ಲಿ ಎತ್ತರಕ್ಕೆ ಏರಿದ್ದ ಅರ್ಜುನ್, ನಿರ್ದೇಶನವನ್ನೂ ಅಷ್ಟೇ ಲೀಲಾಜಾಲವಾಗಿ ಮಾಡಬಲ್ಲರು ಎನ್ನುವುದು ಎಲ್ಲರ ಅಂದಾಜಾಗಿತ್ತು. ಇದೇ ನಂಬಿಕೆಯಿಂದ ನಿರ್ಮಾಪಕ ರಮೇಶ್ ರೆಡ್ಡಿಯವರು ಅರ್ಜುನ್ ಕೇಳಿದ್ದನ್ನೆಲ್ಲಾ ತಂದು ಸುರಿದರು. ಕೇಳಿದ್ದಕ್ಕಿಂತಾ ಎರಡು ಪಟ್ಟು ಹೆಚ್ಚಾಗಿಯೇ ಖರ್ಚು ಮಾಡಿದರು. ಮೂವರು ಹೀರೋಗಳು ಬೇಕು ಅಂದ ತಕ್ಷಣವೇ ಶಿವಣ್ಣ, ಉಪ್ಪಿ, ರಾಜ್ ಬಿ. ಶೆಟ್ಟಿಯಂತಹ ಘಟಾನುಘಟಿ ಸ್ಟಾರ್‌ಗಳನ್ನು ತಂದು ನಿಲ್ಲಿಸಿದರು. ತಾಂತ್ರಿಕವಾಗಿಯಂತೂ ಯಾವುದೇ ಕೊರತೆ ಮಾಡಲಿಲ್ಲ. ಸಿನಿಮಾ ಶೂಟಿಂಗ್ ಮಾಡುವುದಕ್ಕೂ ಮುನ್ನವೇ ಅರ್ಜುನ್ ಮಾಡಿ ತೋರಿಸಿದ್ದ ಅನಿಮೇಷನ್ ಸಿನಿಮಾವನ್ನು ನಂಬಿ ಇಷ್ಟೆಲ್ಲಾ ಇನ್ವೆಸ್ಟ್ ಮಾಡಿದ್ದರು!
ಇಷ್ಟೆಲ್ಲಾ ಆದರೂ ರಮೇಶ್ ರೆಡ್ಡಿ ಎಲ್ಲಿ ಎಡವಿದರೋ ಅಥವಾ ಅರ್ಜುನ್ ಜನ್ಯಾ ಪ್ಲಾನು ಎಲ್ಲಿ ಹಳ್ಳ ಹಿಡಿಯಿತೋ ಗೊತ್ತಿಲ್ಲ; ’45’ ಎನ್ನುವ ಸಿನಿಮಾ ಅಕ್ಷರಶಃ ಜೀವ ಬಿಟ್ಟಿತು. ಲಭ್ಯವಿರುವ ಮಾಹಿತಿಯ ಪ್ರಕಾರ, ಮೂವರು ಸ್ಟಾರ್‌ಗಳು ಮತ್ತು ಅರ್ಜುನ್ ಜನ್ಯಾ ಎಂಬ ಬ್ರ್ಯಾಂಡ್ ಮೌಲ್ಯಕ್ಕಾಗಿಯೇ ಈ ಸಿನಿಮಾವನ್ನು ‘ಜೀ ಕನ್ನಡ’ ವಾಹಿನಿಯವರು ಸುಮಾರು 21 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರಂತೆ. ಅಷ್ಟು ದೊಡ್ಡ ಮೊತ್ತ ಕೊಟ್ಟು ಕೊಂಡುಕೊಂಡ ಮೇಲೆ ಜೀ ಟೀವಿಗೂ ಈ ಸಿನಿಮಾದಿಂದ ಲಾಭ ಗಳಿಸುವುದು ಅಷ್ಟು ಸುಲಭವಲ್ಲ. ಹೇಳಿ ಕೇಳಿ ಅದು ಕಾರ್ಪೊರೇಟ್ ಕಂಪನಿ, ಸುಮ್ಮನೆ ಬಿಟ್ಟಾರೆಯೇ? ಇನ್ನು ಮುಂದೆ ಜೀ ವಾಹಿನಿಯ ಯಾವುದೇ ರಿಯಾಲಿಟಿ ಶೋ ಆಗಲಿ ಅಥವಾ ಇವೆಂಟ್‌ಗಳಾಗಲಿ, ‘ಹೇ… ಅರ್ಜುನಾ ಬಾಪ್ಪಾ ಇಲ್ಲಿ…’ ಅಂದ ಕೂಡಲೇ ಜನ್ಯಾ ಎಲ್ಲೇ ಇದ್ದರೂ, ಹೋಗಿ ಸೈಲೆಂಟಾಗಿ ಕೂರಬೇಕು. ಅಷ್ಟರಮಟ್ಟಿಗೆ ಅವರಿಗೆ ಡ್ಯೂಟಿ ಬೀಳೋದು ಖಂಡಿತ.
’45’ ಸಿನಿಮಾ ಮಾಡಿದ ತಪ್ಪಿಗೆ ಅರ್ಜುನ್ ಏನೋ ಶಿಕ್ಷೆ ಅನುಭವಿಸಿ ಸುಮ್ಮನಾಗುತ್ತಾರೆ. ಆದರೆ, ಸರಿಸುಮಾರು ಮೂವತ್ತು ಕೋಟಿ ರೂಪಾಯಿ ನಷ್ಟ ಮಾಡಿಕೊಂಡ ಆ ದೇವರಂಥಾ ಮನುಷ್ಯ ರಮೇಶ್ ರೆಡ್ಡಿ, ಆ ಹಣವನ್ನು ಮತ್ತೆ ಗಳಿಸಲು ಎಷ್ಟು ಕಷ್ಟಪಡಬೇಕೋ? ಸದ್ಯಕ್ಕೆ ಅರ್ಜುನ್ ಜನ್ಯಾಗೆ ಬರೀ ಪ್ಯಾಥೋ ಟ್ಯೂನ್‌ಗಳೇ ಹುಟ್ಟುತ್ತಿರಬಹುದು!
———————————-
ಗಮನಿಸಿ: ಈ ಲೇಖನವು ಪ್ರಸ್ತುತ ಚಿತ್ರರಂಗದ ವಿದ್ಯಮಾನಗಳು, ಮಾರುಕಟ್ಟೆಯ ಚಲನವಲನಗಳು ಮತ್ತು ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಿದ ವಿಶ್ಲೇಷಣಾತ್ಮಕ ಬರಹವಾಗಿದೆ. ಇದು ಕೇವಲ ಪತ್ರಿಕಾ ವರದಿಗಾರಿಕೆಯ ಉದ್ದೇಶವನ್ನು ಹೊಂದಿದೆಯೇ ಹೊರತು, ವೈಯಕ್ತಿಕವಾಗಿ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ತಾಂತ್ರಿಕ ವರ್ಗದ ಮಾನಹಾನಿ ಮಾಡುವ ಅಥವಾ ಅವರ ಗೌರವಕ್ಕೆ ಧಕ್ಕೆ ತರುವ ದುರುದ್ದೇಶವನ್ನು ಹೊಂದಿಲ್ಲ. ಪತ್ರಿಕಾ ಸ್ವಾತಂತ್ರ್ಯದ ಆಶಯದಂತೆ ಸಾರ್ವಜನಿಕ ಆಸಕ್ತಿಯ ವಿಷಯವನ್ನು ವಸ್ತುನಿಷ್ಠವಾಗಿ ತೆರೆದಿಡುವುದು ಮತ್ತು ಆರೋಗ್ಯಕರ ಚರ್ಚೆಯನ್ನು ಉತ್ತೇಜಿಸುವುದು ಮಾತ್ರ ಈ ವರದಿಯ ಮೂಲ ಆಶಯವಾಗಿದೆ.










































