ಸಿನಿಬಜ್ ಬರೆದದ್ದೆಲ್ಲವೂ ಪದಶಃ ನಿಜವಾಗಿದೆ!

Picture of Cinibuzz

Cinibuzz

Bureau Report

ಸಿನಿಬಜ್ ಬರೆದದ್ದೆಲ್ಲವೂ ಪದಶಃ ನಿಜವಾಗಿದೆ! ದರ್ಶನ್‌ ಮ್ಯಾನೇಜರ್‌ ಮಲ್ಲಿ ಮರೆಯಾಗಿದ್ದರ ಬಗ್ಗೆ ಏಳು ವರ್ಷಗಳ ಹಿಂದೆ ಹೇಳಿದ್ದು ಸತ್ಯವಾಗಿತ್ತು. ಜನ ಅರಗಿಸಿಕೊಳ್ಳಲು ಸಾಧ್ಯವಾಗದ ಆ ಸುದ್ದಿ ಅಂದು ಸಂಚಲನ ಸೃಷ್ಟಿ ಮಾಡಿತ್ತು. ಈಗ ಅದೇ ಮಲ್ಲಿ ವಾಪಸ್ ಬಂದಿರೋದಾಗಿ ನಾವು ಸುಳಿವು ನೀಡಿದ್ದೆವು. ಮತ್ತೆ ಅದೇ ಜನ “ಹೌದಾ? ಸಾಧ್ಯನಾ?” ಅಂದರು. ಆದರೆ, “ನಾವು ಹೇಳೋದೆಲ್ಲವೂ ಸತ್ಯ” ಅನ್ನೋದು ಎಂದಿನಂತೆ ಸಾಬೀತಾಗಿದೆ!

ದರ್ಶನ್‌ ಅವರ ಮ್ಯಾನೇಜರ್‌ ಆಗಿದ್ದ ಮಲ್ಲಿಕಾರ್ಜುನ ಸಂಕನಗೌಡರ್‌ಗೆ ಸಿನಿಬಜ್‌ ಬರೆದ ವರದಿಯೇ ಬಹುಶಃ ವರವಾಗಿದೆ. ಮುಖ್ಯವಾಹಿನಿಗೆ ಬರಲು ಇದು ಒಂದು ರೀತಿಯ ವೇದಿಕೆ ಒದಗಿಸಿದೆ. ಸ್ವತಃ ಮಲ್ಲಿ ಪತ್ರಿಕಾಗೋಷ್ಠಿ ಕರೆದು “ನಾನು ವಾಪಸ್‌ ಬಂದಿದ್ದೀನಿ” ಅಂತಾ ಘೋಷಿಸಿದ್ದಾರೆ.

“ಮಾಧ್ಯಮ ಮಿತ್ರದವರೆಲ್ಲರಿಗೂ ಹೃತ್ಪೂರ್ವಕ ನಮಸ್ಕಾರ. ನಾನು ಮಲ್ಲಿಕಾರ್ಜುನ್ ಬಿ. ಸಂಕನಗೌಡರ, ಮೂಲತಃ ಗದಗಿನವನು. 18 ವರ್ಷಗಳ ಕಾಲ ನಾನು ಚಲನಚಿತ್ರ ಕ್ಷೇತ್ರದಲ್ಲಿ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಾಗೂ ವಿತರಕನಾಗಿ ಕೆಲಸ ಮಾಡಿದ್ದೇನೆ. ಕೆಲವು ಅನಿವಾರ್ಯ ಕಾರಣಗಳಿಂದ ಮತ್ತು ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ, ನನ್ನ ವ್ಯವಹಾರದಲ್ಲಿ ನಷ್ಟ ಉಂಟಾಗಿ ಕೆಲವು ವರ್ಷಗಳ ಹಿಂದೆ ನಾನು ಬೆಂಗಳೂರನ್ನು ತಾತ್ಕಾಲಿಕವಾಗಿ ಬಿಡುವಂತಹ ಪರಿಸ್ಥಿತಿ ಬಂತು. ಕೆಲವು ವರ್ಷಗಳ ನಂತರ ಮತ್ತೆ ನಾನು ವಾಪಸ್ ಬಂದಿದ್ದೀನಿ. ನನ್ನ ಮುಂದಿನ ಯೋಜನೆಗಳನ್ನು ತಿಳಿಸುತ್ತೇನೆ” ಎಂಬ ಸಂದೇಶದೊಂದಿಗೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ. ಮಲ್ಲಿ ವಾಪಸ್ ಬಂದಿರೋದು ಮೀಡಿಯಾ ಮತ್ತು ಸಿನಿಮಾ ಮಂದಿಗೆ ಖಚಿತವಾಗಿರೋದು ನಿಜ. ಆದರೆ, ಆತ ಏನು ಮಾತಾಡಬಹುದು ಎನ್ನುವ ಬಗ್ಗೆ ಕುತೂಹಲವಿದೆ. ಇಷ್ಟಕ್ಕೂ ಏನು ಮಾತಾಡಲು ತಾನೇ ಸಾಧ್ಯ?

ದರ್ಶನ್‌ ಮತ್ತು ರೇಣುಕಾಸ್ವಾಮಿ ಪ್ರಕರಣದ ಪ್ರಹಸನಗಳೆಲ್ಲ ನಡೆಯದೇ ಹೋಗಿದ್ದರೆ, ಬಹುಶಃ ಮಲ್ಲಿ ಮೇನ್‌ಸ್ಟ್ರೀಮಿಗೆ ಈ ಹೊತ್ತಿಗೆ ಬರಲು ಸಾಧ್ಯವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ದರ್ಶನ್ ಅವರೇ ಕೊಲೆ ಕೇಸಿನಲ್ಲಿ ಸಿಲುಕಿ ಒಳಗಿರುವಾಗ, ನಾನು ಮಾಡಿರುವ ಹಣಕಾಸಿನ ವಂಚನೆಗೆ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ ಅನ್ನೋದು ಮಲ್ಲಿಗೆ ಗೊತ್ತು. ಯಾಕೆಂದರೆ ಮಲ್ಲಿ ಹೇಳಿ ಕೇಳಿ “ಮಾಸ್ಟರ್ ಮೈಂಡ್”. ಮಲ್ಲಿಕಾರ್ಜುನ್ ಅಪಾರ ಬುದ್ಧಿವಂತ ಮತ್ತು ವಿದ್ಯಾವಂತ. ಬಹುಶಃ ನಸೀಬು ಕೆಟ್ಟಿದ್ದರಿಂದ ಅಷ್ಟೇ ಹಣಕಾಸಿನ ವಿಚಾರದಲ್ಲಿ ಏನೋ ಯಡವಟ್ಟಾಗಿ ತಲೆಮರೆಸಿಕೊಳ್ಳುವಂತಾಯಿತು. ಅದನ್ನು ಬಿಟ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್ ದೊಡ್ಡ ಮಟ್ಟಕ್ಕೆ ಬೆಳೆದದ್ದರ ಹಿಂದೆ ಮಲ್ಲಿಯ ಶ್ರಮವೂ ಇದೆ. ಕಾಲ್ ಶೀಟನ್ನು ಹೇಗೆಲ್ಲಾ ನಿರ್ವಹಿಸಬೇಕು? ಅತಿಥಿಯಾಗಿ ಕರೆದರೆ ಎಷ್ಟು ಸಂಭಾವನೆ ಕೇಳಬೇಕು? ಮಳಿಗೆಗಳ ಉದ್ಘಾಟನೆಗೆ ಎಷ್ಟು, ರಾಜಕೀಯ ಪ್ರಚಾರಕ್ಕೆ ಎಷ್ಟು ಅಂತೆಲ್ಲಾ ದರ ನಿಗದಿ ಮಾಡಿದ್ದೇ ಮಲ್ಲಿ ಅಲ್ವಾ?

ಹಾಗೆ ನೋಡಿದರೆ, ದರ್ಶನ್ ಸ್ಟಾರ್ ಅನ್ನಿಸಿಕೊಳ್ಳುವ ಮುಂಚಿನಿಂದಲೂ ಅವರಿಗೆ ಹೆಗಲಿಗೆ ಹೆಗಲಾಗಿದ್ದು, ಅವರ ಬೇಕು-ಬೇಡಗಳನ್ನು ನೋಡಿಕೊಂಡಿದ್ದು ಪಿಸ್ತಾ ಸೀನಣ್ಣ. ಅಗಣಿತ ಅಭಿಮಾನಿಗಳು, ಒತ್ತಡ, ಸಿನಿಮಾ, ಶೂಟಿಂಗ್, ವೈಯಕ್ತಿಕ ವಿಚಾರ—ಎಲ್ಲವನ್ನೂ ನಿಭಾಯಿಸುತ್ತಿದ್ದವರು ಸೀನಣ್ಣ. ಆದರೆ ಹಣಕಾಸಿನ ವಿಚಾರದಲ್ಲಿ ಕಮರ್ಷಿಯಲ್ ಟಚ್ ಕೊಟ್ಟಿದ್ದು ಮಲ್ಲಿ!

ಇಂಥ ಮಲ್ಲಿ ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ ಒಂದಿಷ್ಟು ವಿಚಾರಗಳನ್ನು ಹೇಳೇ ಹೇಳುತ್ತಾರೆ. ತನ್ನ ಬಾಸ್ ದರ್ಶನ್ ಅವರಿಗೆ ಹೀಗೆಲ್ಲ ಆಗಬಾರದಿತ್ತು ಅಂತ ಮಾತು ಶುರುಮಾಡಿಕೊಳ್ಳಬಹುದು. “ತಾವು 23 ಜನಕ್ಕೆ ಹಣ ಕೊಡಬೇಕಿದ್ದು, ಅದರಲ್ಲಿ 22 ಮಂದಿಯ ಮನೆಗೇ ಹೋಗಿ ತಾನು ಬಂದಿರುವ ವಿಚಾರ ತಿಳಿಸಿ, ಆದಷ್ಟು ಬೇಗ ಹಣ ತೀರಿಸುವ ಭರವಸೆ ನೀಡಿದ್ದೇನೆ. ತಾವು ಜಾಗ ಖಾಲಿ ಮಾಡಲು ಮೂಲ ಕಾರಣವಾಗಿದ್ದ ಅರ್ಜುನ್ ಸರ್ಜಾ ಒಬ್ಬರು ಇನ್ನೂ ಕೈಗೆ ಸಿಕ್ಕಿಲ್ಲ, ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ” ಎಂದು ಹೇಳಬಹುದು. ಉಳಿದಂತೆ ಕಳೆದ ಏಳು ವರ್ಷಗಳಲ್ಲಿ ತಾನು ಅನುಭವಿಸಿದ ವ್ಯಾಕುಲತೆ, ಯಾತನೆ, ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅದಕ್ಕೆ ಧೈರ್ಯ ಸಾಲದೇ ಎಲ್ಲೆಲ್ಲೋ ತಲೆಮರೆಸಿಕೊಂಡು ಬದುಕಿದ್ದು—ಈ ಎಲ್ಲದರ ಬಗ್ಗೆ ಮಲ್ಲಿ ಇವತ್ತು ಸವಿವರವಾಗಿ ಮಾತಾಡಬಹುದು!

ಮಲ್ಲಿಕಾರ್ಜುನ್ ಏನೇ ಮಾತಾಡಲಿ, ಅಸಲಿಗೆ ಆತ ಯಾರಿಂದಲೂ ಅಧಿಕೃತವಾಗಿ ಹಣ ಪಡೆದಿಲ್ಲ. ಅದು ಕೋಟಿಗಟ್ಟಲೆ ವ್ಯವಹಾರವಾಗಿದ್ದರೂ ಕೊಟ್ಟವರೆಲ್ಲ ನಂಬಿಕೆಯ ಆಧಾರದ ಮೇಲಷ್ಟೇ ನೀಡಿದ್ದಾರೆ. ಅದಕ್ಕೆ ಯಾವುದೇ ಸಾಕ್ಷಿ ಪುರಾವೆಗಳಿಲ್ಲ. ಈ ಕಾರಣಕ್ಕಾಗಿಯೇ ಮಲ್ಲಿ ಮಾಯವಾಗಿ ಏಳು ವರ್ಷಗಳಾದರೂ ಯಾರೂ ದೂರು ಅಥವಾ ಕೇಸು ದಾಖಲಿಸುವ ಗೋಜಿಗೆ ಹೋಗಿಲ್ಲ.

ಯಾವುದೇ ಒಬ್ಬ ವ್ಯಕ್ತಿಗೆ ಇರಬೇಕಾದ ಆತ್ಮಸ್ಥೈರ್ಯ ಮಲ್ಲಿಯಲ್ಲಿದೆ. ಏನೇ ಆದರೂ ಬದುಕಬೇಕು ಎನ್ನುವ ಛಲವಿದೆ. ‘ವಂಚಕ’ ಎನ್ನುವ ಹಣೆಪಟ್ಟಿ ಕಟ್ಟಿಸಿಕೊಂಡು, ಏಳು ವರ್ಷಗಳ ಕಾಲ ಅಜ್ಞಾತ ಜೀವನದಲ್ಲಿರುವುದು ಸುಲಭದ ಮಾತಲ್ಲ. ಆದರೆ ಮಲ್ಲಿ ಆ ಹಂತವನ್ನು ದಾಟಿ ಬಂದಿದ್ದಾನೆ.

ಸದ್ಯಕ್ಕೆ ಮಾಧ್ಯಮದವರಿಗೆ ಕೇಳಲು ಉಳಿದಿರುವ ಪ್ರಶ್ನೆಗಳೆಂದರೆ: ಅಷ್ಟೊಂದು ಕೋಟಿ ಹಣ ಕಳೆದುಕೊಳ್ಳಲು ಕಾರಣವಾದ ಮೂಲ ಯಾವುದು? ಪಡೆದಿದ್ದ ಅಷ್ಟೂ ಹಣ ವ್ಯಾಪಾರ-ವ್ಯವಹಾರದಲ್ಲಿ ನಷ್ಟವಾಯಿತೇ? ವಿನಿವಿಂಕ್ ಶಾಸ್ತ್ರಿ ತರಹ ರಿಯಲ್ ಎಸ್ಟೇಟ್ ಅಥವಾ ಇನ್ಯಾವುದೋ ರೂಪದಲ್ಲಿ ಹೂಡಿಕೆ ಮಾಡಿದ್ದೀರಾ? ಸಾಲ ತೀರಿಸಲು ಉಳಿದಿರುವ ಮಾರ್ಗ ಯಾವುದು? ಸದ್ಯ ನಿಮ್ಮ ಬೆನ್ನಿಗೆ ನಿಂತಿರುವವರು ಯಾರು? ಹಣ ಕೊಟ್ಟವರ ಮನೆಗೆ ಹೋಗಿ ಕುಳಿತಾಗ ಅವರ ಪ್ರತಿಕ್ರಿಯೆ ಹೇಗಿತ್ತು? ಇಷ್ಟು ವರ್ಷಗಳ ಕಾಲ ಕುಟುಂಬದವರನ್ನು ಸಂಪರ್ಕಿಸಿರಲಿಲ್ಲವೇ? ಇಷ್ಟು ವರ್ಷಗಳ ನಂತರ ನೋಡಿದಾಗ ದಿನಕರ್ ಶಾಕ್ ಆದರೇ? ಅಷ್ಟೊಂದು ಸ್ನೇಹ ಹೊಂದಿದ್ದ ದಿನಕರ್ ದುಡ್ಡಿನ ವಿಚಾರವಾಗಿ ಏನಂದರು? ಅಸಲಿಗೆ ಇಷ್ಟು ವರ್ಷಗಳ ಕಾಲ ಎಲ್ಲಿದ್ದಿರಿ?

ಹೀಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಬಹುದು. ಅದರ ಹೊರತಾಗಿ ‘ಮಾಸ್ಟರ್ ಮೈಂಡ್’ ಮಲ್ಲಿ ಏನೇನು ಹೇಳುತ್ತಾರೋ ಗೊತ್ತಿಲ್ಲ! ಬದುಕಿನಲ್ಲಿ ಸೋಲು-ಗೆಲುವು, ಲಾಭ-ನಷ್ಟಗಳೆಲ್ಲ ಇದ್ದದ್ದೇ. ಆದರೆ ಅದನ್ನೆಲ್ಲ ಮೀರಿ ಮನುಷ್ಯ ಎದ್ದು ನಿಲ್ಲಬೇಕು. ಮತ್ತೆ ಬಂದಿರುವ ಮಲ್ಲಿಯ ಯೋಜನೆಗಳು, ಕಾರ್ಯಕ್ರಮಗಳು ಏನೇನಿರಬಹುದೋ ಕಾದು ನೋಡೋಣ!

-ಅರುಣ್ ಕುಮಾರ್ ಜಿ

ಪ್ರಕಟಿತ ಲೇಖನವು ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ… ಇದು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಪೂರ್ವಾಗ್ರಹ ಪೀಡಿತವಾಗಿ ಬರೆದದ್ದಲ್ಲ ಮತ್ತು ಯಾರಿಗೂ ಮಾನಸಿಕ ಸಂಕಟ ಅಥವಾ ಮಾನಹಾನಿ ಉಂಟುಮಾಡುವ ದುರುದ್ದೇಶವನ್ನು ಈ ವರದಿ ಒಳಗೊಂಡಿಲ್ಲ.

ಇನ್ನಷ್ಟು ಓದಿರಿ

Scroll to Top