ಸಮಾಜದಲ್ಲಿ ದಿನನಿತ್ಯದ ಬದುಕು ಒಂದು ನಿರ್ದಿಷ್ಟ ಲಯದಲ್ಲಿ ಸಾಗುತ್ತಿರುತ್ತದೆ. ಆದರೆ ಆ ಲಯದ ಹಿಂದೆ ಹೆಣ್ಣಿನ ಪಾಲಿನ ಹೋರಾಟಗಳು ನಮಗೆ ಕಾಣಿಸುವುದೇ ಇಲ್ಲ. ಹೆಣ್ಣಿನ ದೈನಂದಿನ ಕೆಲಸ ಕಾರ್ಯಗಳು, ಅವಳ ನಡವಳಿಕೆ, ದೈಹಿಕ ಬದಲಾವಣೆಗಳು ಮತ್ತು ಇವೆಲ್ಲದರ ನಡುವೆ ಅವಳು ಎದುರಿಸುವ ಮಾನಸಿಕ ಏರುಪೇರುಗಳು ಕೇವಲ ವೈಯಕ್ತಿಕವಲ್ಲ, ಅವು ಇಡೀ ಕುಟುಂಬದ ಮೇಲೆ ಪ್ರಭಾವ ಬೀರುತ್ತವೆ. ಇಂತಹದ್ದೇ ಒಂದು ಗಂಭೀರ ಹಾಗೂ ಅತ್ಯಂತ ಸೂಕ್ಷ್ಮವಾದ ಮಹಿಳಾ ಕೇಂದ್ರಿತ ಎಳೆಯನ್ನು ಇಟ್ಟುಕೊಂಡು ನಿರ್ದೇಶಕ ನವೀನ್ ಶಕ್ತಿ ಅವರು ಈ ವಾರ ‘ಕ್ಯಾಲೆಂಡರ್’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ.

ಚಿತ್ರದ ಕಥೆ ಪ್ರೇಕ್ಷಕರನ್ನು ಆವರಿಸಿಕೊಳ್ಳುವುದು ಡಾಕ್ಟರ್ ಆಕಾಶ್ (ಆದರ್ಶ ಗುಂಡುರಾಜ್) ಎಂಬ ಮೃದು ಸ್ವಭಾವದ ವೈದ್ಯನ ಮೂಲಕ. ತನ್ನ ವೃತ್ತಿಯನ್ನು ಕೇವಲ ಕೆಲಸವೆಂದು ಭಾವಿಸದೆ, ಜನರ ಸೇವೆಯನ್ನೇ ಪರಮಧರ್ಮ ಎಂದು ನಂಬಿರುವ ಆಕಾಶ್‌ಗೆ ಅಚಾನಕ್ಕಾಗಿ ನಕ್ಷತ್ರಾ (ಸುಶ್ಮಿತಾ ನಾಯಕ್) ಎಂಬ ಸುಂದರಿ ಪರಿಚಯವಾಗುತ್ತಾಳೆ. ಈ ಪರಿಚಯ ಪ್ರೀತಿಯಾಗಿ ಅರಳಿ, ಮದುವೆಯ ಹಂತಕ್ಕೆ ತಲುಪಿದಾಗ ವಿಧಿಯ ಆಟವೇ ಬೇರೆಯಾಗಿರುತ್ತದೆ. ಅನಿವಾರ್ಯ ಕಾರಣಗಳಿಂದ ಈ ಜೋಡಿ ದೂರಾದಾಗ, ಆ ನೋವನ್ನು ಭರಿಸಲಾರದೆ ಆಕಾಶ್ ಕುಡಿತಕ್ಕೆ ದಾಸನಾಗುತ್ತಾನೆ. ಇಂತಹ ಸಂಕಷ್ಟದ ಸಮಯದಲ್ಲಿ ಆತನಿಗೆ ನೆರಳಾಗಿ, ಧೈರ್ಯವಾಗಿ ನಿಲ್ಲುವುದು ಆತನ ಗೆಳತಿ ಮಾಳವಿಕಾ (ನಿವಿಷ್ಕ ಪಾಟೀಲ್).
ಆದರೆ, ಸಮಾಜ ಮತ್ತು ಸಂಬಂಧಗಳ ನಡುವಿನ ಸಂಶಯದ ಗೋಡೆ ಈ ಸ್ನೇಹಕ್ಕೆ ಅಡ್ಡಗಾಲಾಗುತ್ತದೆ. ಮಾಳವಿಕಾಳ ಪತಿ ರಾಜ್‌ಗೆ ಇವರಿಬ್ಬರ ನಿಷ್ಕಲ್ಮಶ ಸ್ನೇಹದ ಮೇಲೆ ಅನುಮಾನ ಮೂಡುತ್ತದೆ. ಈ ಸಂಶಯದ ಕಿಡಿ ವಾದ-ವಿವಾದವಾಗಿ ಬೆಳೆದು, ಅಂತಿಮವಾಗಿ ರಾಜ್‌ನ ಅನಿರೀಕ್ಷಿತ ಸಾವಿನಲ್ಲಿ ಅಂತ್ಯಗೊಳ್ಳುತ್ತದೆ. ಈ ಸಾವು ಚಿತ್ರಕ್ಕೆ ಹೊಸ ತಿರುವು ನೀಡುತ್ತದೆ ಮತ್ತು ಇಡೀ ಕಥೆಯನ್ನು ಇನ್ವೆಸ್ಟಿಗೇಶನ್ ಹಾದಿಗೆ ಹೊರಳಿಸುತ್ತದೆ. ತನ್ನ ಪುತ್ರನ ಸಾವಿಗೆ ನ್ಯಾಯ ಸಿಗಲೇಬೇಕೆಂದು ಹಠಕ್ಕೆ ಬೀಳುವ ಶ್ರೀಮಂತ ವ್ಯಕ್ತಿ ಧನ್ವೀರ್ ಸಿಂಗ್ (ಶಿವ್ ಪ್ರದೀಪ್), ಈ ಪ್ರಕರಣದ ಜವಾಬ್ದಾರಿಯನ್ನು ಸಿಐಡಿ ಅಧಿಕಾರಿ ಯುವರಾಜು ಒಂಟಿಮನಿ (ರಮೇಶ್ ಇಂದಿರಾ) ಎಂಬ ಖಡಕ್ ಅಧಿಕಾರಿಗೆ ನೀಡುತ್ತಾರೆ.
ಒಂದೆಡೆ ಪೊಲೀಸ್ ತನಿಖೆ ತೀವ್ರಗೊಂಡರೆ, ಮತ್ತೊಂದೆಡೆ ತನ್ನ ಮೇಲಿರುವ ಕಳಂಕವನ್ನು ತೊಡೆದುಹಾಕಲು ಆಕಾಶ್ ಗೆಳೆಯ ಸೂರ್ಯನ (ಗುರುನಂದನ್) ಮೂಲಕ ಪ್ರಖ್ಯಾತ ವಕೀಲರ (ಸುಚೇಂದ್ರ ಪ್ರಸಾದ್) ಸಹಾಯ ಕೋರುತ್ತಾನೆ. ಈ ಎಲ್ಲಾ ನಾಟಕೀಯ ಬೆಳವಣಿಗೆಗಳು ಮತ್ತು ತನಿಖೆಯ ಹಾದಿಯಲ್ಲಿ ಪ್ರೇಕ್ಷಕರಿಗೆ ಹತ್ತಾರು ಅನುಮಾನಗಳು ಮೂಡುತ್ತವೆ. ಆದರೆ ಇವೆಲ್ಲದರ ಮೂಲ ಕಾರಣ ಇರುವುದು ‘ಪಿ.ಎಸ್.ಎಂ’ ಎಂಬ ವೈದ್ಯಕೀಯ ಸಮಸ್ಯೆಯಲ್ಲಿ. ಮಹಿಳೆಯರಲ್ಲಿ ಉಂಟಾಗುವ ಈ ಹಾರ್ಮೋನುಗಳ ಏರುಪೇರು ಅವರ ಜೀವನದಲ್ಲಿ ಎಂತಹ ಭೀಕರ ಪರಿಣಾಮ ಬೀರಬಲ್ಲದು ಎಂಬ ಸತ್ಯವು ಸ್ವತಃ ಆರೋಗ್ಯ ಸಚಿವೆಯ (ಮಾಲಾಶ್ರೀ) ಸಮ್ಮುಖದಲ್ಲಿ ವೈದ್ಯರ ತಂಡದಿಂದ ಬಯಲಾಗುತ್ತದೆ. ಈ ವಿಶಿಷ್ಟ ಕಾಯಿಲೆ ಏನು? ಇದು ಮಹಿಳೆಯರ ಜೀವನವನ್ನು ಹೇಗೆ ಕಂಗೆಡಿಸುತ್ತದೆ? ಮತ್ತು ಈ ಗೋಜಲಿಗೆ ಪರಿಹಾರವಿದೆಯೇ ಎನ್ನುವುದೇ ಚಿತ್ರದ ಅಂತಿಮ ಹಂತದ ರೋಚಕತೆ.
ತಾಂತ್ರಿಕವಾಗಿ ಚಿತ್ರವು ತಕ್ಕಮಟ್ಟಿಗೆ ಪ್ರಬುದ್ಧವಾಗಿ ಮೂಡಿಬಂದಿದೆ. ಸುನಾದ್ ಗೌತಮ್ ಅವರ ಸಂಗೀತ ಚಿತ್ರದ ಭಾವನಾತ್ಮಕ ಸನ್ನಿವೇಶಗಳಿಗೆ ಪೂರಕವಾಗಿದ್ದರೆ, ರಮೇಶ್ ಅವರ ಛಾಯಾಗ್ರಹಣ ಕಥೆಯ ಗಂಭೀರತೆಯನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಸಂಕಲನವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಚಿತ್ರದ ನಾಯಕನಾಗಿ ಮತ್ತು ನಿರ್ಮಾಪಕನಾಗಿ ಹೆಚ್ಚಿನ ಜವಾಬ್ದಾರಿ ಹೊತ್ತಿರುವ ಆದರ್ಶ ಗುಂಡುರಾಜ್ ಅವರು ಪಾತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ. ಕೆಲವು ಕಡೆಗಳಲ್ಲಿ ಅವರು ಪ್ರಬುದ್ಧವಾಗಿ ನಟಿಸಿದ್ದರೂ, ಇನ್ನುಳಿದಂತೆ ಅವರ ನಟನೆಯಲ್ಲಿ ಇನ್ನಷ್ಟು ಪಕ್ವತೆ ಬೇಕು ಎನಿಸುತ್ತದೆ. ನಾಯಕಿ ಸುಶ್ಮಿತಾ ನಾಯಕ್ ತಮ್ಮ ನಗುಮೊಗದ ಮೂಲಕ ಪ್ರೇಕ್ಷಕರ ಮನ ಗೆದ್ದರೆ, ನಿವಿಷ್ಕ ಪಾಟೀಲ್ ಅವರು ಗಂಭೀರ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದಾರೆ.
ಇನ್ನು ಪೋಷಕ ನಟರ ದಂಡೇ ಚಿತ್ರದಲ್ಲಿದೆ. ವಿಶೇಷ ಪಾತ್ರದಲ್ಲಿ ಮಿಂಚುವ ‘ಕನಸಿನ ರಾಣಿ’ ಮಾಲಾಶ್ರೀ ಅವರ ಉಪಸ್ಥಿತಿ ಚಿತ್ರಕ್ಕೆ ಮೆರುಗು ನೀಡಿದೆ. ಹಿರಿಯ ನಟ ರಮೇಶ್ ಇಂದಿರಾ ಅವರ ಪೊಲೀಸ್ ಅಧಿಕಾರಿ ಪಾತ್ರ ಕೆಲವು ಕಡೆಗಳಲ್ಲಿ ಸ್ವಲ್ಪ ಅತಿರೇಕವೆನಿಸಿದರೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಸುಚೇಂದ್ರ ಪ್ರಸಾದ್ ಮತ್ತು ಚಂದ್ರಪ್ರಭ ಅಂತಹ ಅನುಭವಿ ಕಲಾವಿದರು ತಮ್ಮ ಪಕ್ವವಾದ ಅಭಿನಯದ ಮೂಲಕ ಚಿತ್ರದ ಓಟಕ್ಕೆ ಭದ್ರ ಬುನಾದಿ ಹಾಕಿದ್ದಾರೆ.
ಚಿತ್ರಕಥೆಯ ಶೈಲಿ ಕ್ಲೈಮ್ಯಾಕ್ಸ್ ವರೆಗೂ ಸಸ್ಪೆನ್ಸ್ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರೂ, ಕೆಲವು ಕಡೆಗಳಲ್ಲಿ ಚಿತ್ರ ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬ ಗೊಂದಲ ಮೂಡುವುದು ಸುಳ್ಳಲ್ಲ. ಆದರೆ ಅಂತಿಮವಾಗಿ ನಿರ್ದೇಶಕರು ನೀಡುವ ಸಂದೇಶ ಆ ಎಲ್ಲಾ ಗೊಂದಲಗಳನ್ನು ನಿವಾರಿಸುತ್ತದೆ. ಹೆಣ್ಣಿನ ಮನದಾಳದ ಅರಿಯದ ನೋವುಗಳನ್ನು ಮತ್ತು ಅವಳ ಆರೋಗ್ಯದ ಸೂಕ್ಷ್ಮ ವಿಚಾರಗಳನ್ನು ಸಮಾಜಕ್ಕೆ ಮುಟ್ಟಿಸುವಲ್ಲಿ ‘ಕ್ಯಾಲೆಂಡರ್’ ಒಂದು ಪ್ರಾಮಾಣಿಕ ಪ್ರಯತ್ನ. ಮಹಿಳೆಯರ ಸಮಸ್ಯೆಗಳನ್ನು ಕೇವಲ ವೈಯಕ್ತಿಕವಾಗಿ ನೋಡದೆ ಸಾಮಾಜಿಕ ದೃಷ್ಟಿಕೋನದಿಂದ ನೋಡಬೇಕೆಂಬ ಸಂದೇಶ ಸಾರುವ ಈ ಚಿತ್ರವನ್ನು ಪ್ರತಿಯೊಬ್ಬರೂ ಒಮ್ಮೆ ನೋಡಲೇಬೇಕು.










































