ಚಿತ್ರರಂಗ ಅಂದಮೇಲೆ ಅಲ್ಲಿ ಬಣ್ಣದ ಮಾತುಗಳಿಗೇನು ಕೊರತೆಯಿಲ್ಲ. ಆದರೆ, ಅದೇ ಬಣ್ಣದ ಲೋಕದ ಹಿಂದೆ ಹಸಿವು, ಅವಮಾನ ಮತ್ತು ಹನಿಗಣ್ಣಿನ ಕಥೆಗಳೂ ಸಾಕಷ್ಟಿರುತ್ತವೆ. ಸ್ಯಾಂಡಲ್‌ವುಡ್‌ನ ನವರಸನಾಯಕ ಜಗ್ಗೇಶ್ ಇಂದು ಐಷಾರಾಮಿ ಬಂಗಲೆಯಲ್ಲಿ ಕೂತು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿರಬಹುದು, ಆದರೆ ಅವರ ಈ ಯಶಸ್ಸಿನ ಅಡಿಪಾಯದ ಹಿಂದೆ ಮಲ್ಲೇಶ್ವರದ ಒಂದು ಪುಟ್ಟ ದೇವರಕೋಣೆ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನೀಡಿದ ಆ ಐನೂರು ರುಪಾಯಿಯ ಕಥೆಯಿದೆ.

ಜಗ್ಗೇಶ್ ಅಂದರೆ ಇವತ್ತಿಗೆ ನವರಸ ನಾಯಕ. ಅಪಾರ ಆಸ್ತಿ ಗಳಿಸಿಟ್ಟಿರುವ ಹೀರೋ… ಆದರೆ 1986-87ರ ಕಾಲಘಟ್ಟದಲ್ಲಿ ಅವರ ಸ್ಥಿತಿ ಹೇಗಿತ್ತು ಗೊತ್ತಾ? ಅಡುಗೆ ಮನೆಯ ಮೂಲೆಯಲ್ಲಿ 40 ರೂಪಾಯಿ ಕೊಟ್ಟು ತಂದ ಗಣಪ ಮತ್ತು ರಾಯರ ಮಣ್ಣಿನ ವಿಗ್ರಹಗಳ ಮುಂದೆ ಕಣ್ಣೀರು ಹಾಕುತ್ತಾ, “ನನ್ನನ್ನು ನನ್ನ ಕಾಲ ಮೇಲೆ ನಿಲ್ಲಿಸಪ್ಪಾ” ಎಂದು ಬೇಡುತ್ತಿದ್ದ ಒಬ್ಬ ಸಾಮಾನ್ಯ ಕಲಾವಿದ ಮಾತ್ರ. ಅಂದು ಅನುಭವಿಸಿದ ಅಪಮಾನಗಳು ಒಂದೆರಡಲ್ಲ. ಆದರೆ ಜಗ್ಗೇಶ್ ಅವರ ಈ ಭಕ್ತಿಯ ಹಿಂದೆ ಒಂದು ಹಠವಿತ್ತು, ಆ ಹಠಕ್ಕೆ ಸಾಕ್ಷಿಯಾಗಿದ್ದು 1987ರ ಆ ಒಂದು ಗಣೇಶ ಚತುರ್ಥಿ!
ಅಂದು ರವಿಚಂದ್ರನ್ ಅವರ ‘ರಣಧೀರ’ ಸಿನಿಮಾದ ಚಿತ್ರೀಕರಣದ ಜೋರು. ಇತ್ತ ಜಗ್ಗೇಶ್ ಅವರಿಗೆ ಮನೆಯಲ್ಲಿ ಗಣೇಶನ ವ್ರತ ಮಾಡುವ ಆಸೆ. ಆದರೆ ವಿಧಿಯ ಆಟ ನೋಡಿ, ಅಂದು ರಾತ್ರಿ 2 ಗಂಟೆಯಾದರೂ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿಯಲೇ ಇಲ್ಲ. ಶೂಟಿಂಗ್ ಮುಗಿದು ಪ್ಯಾಕಪ್ ಆದಾಗ ಸಮಯ ಬೆಳಗಿನ ಜಾವ 2:40! ಕೈಯಲ್ಲೋ ಬಿಡಿಗಾಸಿಲ್ಲ, ಮನೆಯಲ್ಲಿ ಪೂಜೆಯ ಸಿದ್ಧತೆಯೂ ಆಗಿಲ್ಲ. ಅಂದು ಜಗ್ಗೇಶ್ ಅಕ್ಷರಶಃ ಕಂಗಾಲಾಗಿದ್ದರು. ಆದರೆ ಸೋಲೊಪ್ಪದ ಜಗ್ಗೇಶ್, ಅಂದು ನೇರವಾಗಿ ಹೋಗಿ ನಿಂತಿದ್ದು ಅಂದಿನ ಸುಪ್ರೀಂ ಸ್ಟಾರ್ ರವಿಚಂದ್ರನ್ ಮುಂದೆ.
ದಣಿವಿನಿಂದ ಕೂತಿದ್ದ ರವಿಚಂದ್ರನ್ ಅವರಿಗೆ “ಸಾರ್, ಪೂಜೆಗೆ ಕಾಸಿಲ್ಲ, ಒಂದು 200 ರೂಪಾಯಿ ಕೊಡಿ” ಎಂದು ಕೇಳುವಾಗ ಜಗ್ಗೇಶ್ ಅವರ ಗಂಟಲು ಒಣಗಿತ್ತು. ಆದರೆ ರವಿಚಂದ್ರನ್ ಎಂಬ ಮ್ಯಾನೇಜರ್ ಈಶ್ವರಿ ಬಾಬುನ ಕರೆದು “ಇವನಿಗೆ 500 ರೂಪಾಯಿ ಕೊಡು” ಅಂದಾಗ ಜಗ್ಗೇಶ್ ಪಟ್ಟ ಸಂತೋಷ ಅಷ್ಟಿಷ್ಟಲ್ಲ. ಅಲ್ಲಿಂದ ಬೈಕ್ ಹತ್ತಿ ಮಲ್ಲೇಶ್ವರ ಮಾರುಕಟ್ಟೆಗೆ ನುಗ್ಗಿ, ಹೂವು-ಹಣ್ಣು ತಂದು ಬೆಳಗಿನ ಜಾವ 5 ಗಂಟೆಗೆ ಪೂಜೆ ಮುಗಿಸಿದ ಆ ಕ್ಷಣ ಜಗ್ಗೇಶ್ ಅವರ ಜೀವನದ ಅತಿದೊಡ್ಡ ವಿಜಯ ಎನ್ನಬಹುದು. ಬಹುಶಃ ಅಂದು ರವಿಚಂದ್ರನ್ ನೀಡಿದ ಆ ಆಸರೆಯೇ ಇಂದಿಗೂ ಜಗ್ಗೇಶ್ ಅವರಿಗೆ ಅವರ ಮೇಲೆ ಅತೀವ ಗೌರವ ಇರುವಂತೆ ಮಾಡಿದೆ. ಅದಕ್ಕೇ ಇರಬೇಕು, ‘ಭಂಡ ನನ್ನ ಗಂಡ’ ಸಿನಿಮಾದ ಹಾಡಿನಲ್ಲಿ “ಹತ್ತಿದ್ದ ಏಣಿನಾ ಒದಿಬ್ಯಾಡ” ಎಂದು ಜಗ್ಗೇಶ್ ಅಷ್ಟು ಕಾಳಜಿಯಿಂದ ಬರೆಸಿದ್ದು.
ಇನ್ನು ಇತ್ತೀಚೆಗೆ ಜಾಲತಾಣಗಳಲ್ಲಿ ಜಗ್ಗೇಶ್ ಅವರು ರಾಯರ ಮಠದಲ್ಲಿ ಕಸ ಗುಡಿಸುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಇದನ್ನೂ ಕೆಲವರು ಅಣಕ ಮಾಡುತ್ತಿದ್ದಾರೆ, ವಿಕೃತವಾಗಿ ಆನಂದಿಸುತ್ತಿದ್ದಾರೆ. ಆದರೆ ಜಗ್ಗೇಶ್ ಅವರಿಗೆ ಇದೆಲ್ಲವೂ ಹೊಸತಲ್ಲ. “ಅಹಂಕಾರ ಹತ್ತಿರ ಸುಳಿಯಬಾರದು, ರಾಹು-ಶನಿ ದೋಷ ತಾಗಬಾರದು” ಎಂದು ಯೌವನದಲ್ಲೇ ಗುರುಗಳು ಹೇಳಿಕೊಟ್ಟ ಪಾಠವನ್ನು ಇಂದಿಗೂ ಪಾಲಿಸುತ್ತಿದ್ದಾರೆ. ದೇವರು ಮನುಷ್ಯ ರೂಪದಲ್ಲೇ ಬರುತ್ತಾನೆ ಎಂಬುದು ಅವರ ಅಚಲ ನಂಬಿಕೆ. ದೆಹಲಿಯ ಮನೆಯಲ್ಲಿ ನಿರಾಳವಾಗಿ ಕುಳಿತಿರುವ ಜಗ್ಗೇಶ್ ಅವರಿಗೆ, ಅಂದಿನ 500 ರೂಪಾಯಿ ಮತ್ತು ಇಂದಿನ ಕಸ ಗುಡಿಸುವ ಕಾಯಕ ಎರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಕಾಣುತ್ತಿವೆ. ಟೀಕೆ ಮಾಡುವವರಿಗೆ ಅವರು ಕೊಡುವ ಉತ್ತರ ಒಂದೇ- ‘ದೈವಂ ಮಾನುಷ ರೂಪೇಣ’!











































