ವೆಲ್‌ಡನ್ ಸಪ್ತಮಿ ಗೌಡ… ಬಟ್ ರಿಯಾಲಿಟಿ ಮಾತಾಡ್ಕೊಳ್ಳೋಣ್ವಾ?

Picture of Cinibuzz

Cinibuzz

Bureau Report

CAMERA’S AND THIGHS
ವೆಲ್‌ಡನ್ ಸಪ್ತಮಿ ಗೌಡ… ಬಟ್ ರಿಯಾಲಿಟಿ ಮಾತಾಡ್ಕೊಳ್ಳೋಣ್ವಾ?

ನಟಿ ಸಪ್ತಮಿ ಗೌಡ ಅವರು ಸಿಟ್ಟಿಗೆದ್ದು ಒಂದು ಉಗ್ರ ಹೋರಾಟದ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಇವರ ಈ ಸೋಷಿಯಲ್ ಮೀಡಿಯಾ ಹೋರಾಟಕ್ಕೆ ಒಂದಿಷ್ಟು ನಟ, ನಟಿಯರು ಧ್ವನಿಗೂಡಿಸಿ ತಾವು ಕೂತ ಜಾಗದಲ್ಲೇ ಪೋಸ್ಟ್ ಗಳನ್ನು ಮಾಡುವ ಮೂಲಕ ಅದಕ್ಕೆ ಅಭಿಯಾನದ ರೂಪ ಕೊಟ್ಟಿದ್ದಾರೆ.

ಅಂದಹಾಗೆ ‌ಸಪ್ತಮಿ ಗೌಡ ಅವರ ಈ ಹೋರಾಟ ಯಾವುದರ ಬಗ್ಗೆ ಅಂತ ಗೊತ್ತು ತಾನೇ!? ಸಿನಿಮಾ ಕಾರ್ಯಕ್ರಮಗಳಲ್ಲಿ, ಚಿತ್ರೀಕರಣದ ವೇಳೆ ಅಸಭ್ಯ ರೀತಿಯಲ್ಲಿ ನಟಿಯರ ದೇಹದ ಭಾಗಗಳನ್ನು ಚಿತ್ರೀಕರಿಸಿ, ಫೋಟೋ ತೆಗೆಯುವ ಯೂಟ್ಯೂಬರ್‌, ಪಾಪರಾಜಿಗಳ ವಿರುದ್ಧ ಎಂಬುದನ್ನು ಮತ್ತೊಮ್ಮೆ ಸಮಸ್ತ ಜನತೆಗೂ ನೆನಪಿಸಲಿಚ್ಛಿಸುತ್ತೇನೆ.

ಹಾಗೆ ನೋಡಿದರೆ ಸಪ್ತಮಿ ಗೌಡ ಅವರ ಈ ಸಿಟ್ಟು ನ್ಯಾಯಯುತವಾದದ್ದೇ. ಈ ವಿಚಾರದಲ್ಲಿ ಅವರ ಹೋರಾಟ ಸೋಷಿಯಲ್ ಮೀಡಿಯಾ ದಾಟಿ ಕಾನೂನು ಕ್ರಮಕ್ಕೆ ಮುಂದಾದರೂ ಎಲ್ಲರೂ ಹೀಗೆಯೇ ಸಪೋರ್ಟ್ ಮಾಡಬೇಕು. ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಕೂಡ ಈ ಪ್ರಕರಣದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇನ್ನೂ ತುಂಬಾ ವರ್ಷಗಳ ಹಿಂದಿನಿಂದಲೂ ದೀರ್ಘ ನಿದ್ದೆಗೆ ಜಾರಿರುವ ಕಲಾವಿದರ ಸಂಘ ಕೂಡ “ತಾನು ಇದ್ದೇನೆ” ಎಂಬುದನ್ನು ಇಂಥ ಸಂದರ್ಭದಲ್ಲಾದರೂ ಸಾಬೀತು ಮಾಡಬೇಕಾದ ಅಗತ್ಯ ಇದೆ.

ಸಪ್ತಮಿ ಅವರ ಈ ಕೂಗು ಒಳ್ಳೆಯದು ಅಂತ ಹೇಳುತ್ತಲೇ, ಅವರೇ ಹೇಳುವಂತೆ ಈ ರೀತಿಯ ಅಸಭ್ಯ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿದ್ದು ಯಾರು ಎಂಬುದನ್ನು ನೋಡಬೇಕಿದೆ. ಪತ್ರಿಕೋದ್ಯಮ, ವರದಿಗಾರಿಕೆ, ಸಿನಿಮಾ ಬರಹ ಎಂದರೆ ಸಿನಿಮಾ ನಟಿಯರ ಹಿಂದೆ ಬಿದ್ದು “CAMERA’S AND THIGHS” ಎನ್ನುವ ಮೊಬೈಲ್ ಪತ್ರಕರ್ತರನ್ನು ಸಿನಿಮಾ ಕಾರ್ಯಕ್ರಮಗಳಿಗೆ ಕಾಡಿಬೇಡಿ ಕರೆಸಿಕೊಂಡು ಅವರಿಂದ ವಿಡಿಯೋ ಶೂಟ್ ಮಾಡಿಸಿಕೊಂಡು, ಅದನ್ನು ಡಿಜಿಟಲ್ ವೇದಿಕೆಗಳಲ್ಲಿ ಪ್ರಸಾರ ಮಾಡುವಂತೆ ಹೇಳುತ್ತಾ ಅವರನ್ನು ಬೆಳೆಸಿದ್ದು ಇದೇ ಸಿನಿಮಾ ಮಂದಿ. ನನಗೆ ಗೊತ್ತಿರುವಂತೆ ಒಂದಿಷ್ಟು ನಟಿಯರು ಇಂಥ ಸಂಚಾರಿ ದೂರವಾಣಿ ವೀರರ ಒಂದು ಗ್ರೂಪ್ ಮಾಡಿಕೊಂಡು ತಾವು ಯಾವ ದಿನ, ಎಲ್ಲಿಗೆ, ಎಷ್ಟೊತ್ತಿಗೆ ಹೋಗುತ್ತೇವೆ ಎನ್ನುವ ಸಮಗ್ರ ವಿವರಣೆಗಳನ್ನು ಈ ಗ್ರೂಪ್‌ಗಳಲ್ಲಿ ಶೇರ್ ಮಾಡುತ್ತಿರುತ್ತಾರೆ.

ಈ ನಟಿಯರ ಆಹ್ವಾನದ ಮೇರೆಗೆ ಎದ್ದು ಬಿದ್ದು ಬರುವ ಈ ಮೊಬೈಲ್ ಪಡ್ಡೆ ಹುಡುಗರು “ನಿಮ್ಮ ದೇಹವೇ ದೇಗುಲ, ನಿಮ್ಮ ಕಾಲುಗಳೇ ನಮ್ಮ ಆರಾಧ್ಯ ದೈವ ಸ್ತಂಭಗಳು” ಎನ್ನುವಂತೆ ಡಿಫರೆಂಟ್ ಡಿಫರೆಂಟ್ ಕೋನಗಳಲ್ಲಿ ಲೆನ್ಸುಗಳನ್ನು ಹರಿದಾಡಿಸಿ ಹೋಗುತ್ತಾರೆ. ಆ ವಿಡಿಯೋಗಳನ್ನು ಇದೇ ನಟಿಯರು ಶೇರ್ ಮಾಡಿಕೊಂಡು ಥಾಂಕ್ಸ್ ಬೇರೆ ಹೇಳುತ್ತಾರೆ.

ಮುಂಬೈನ ಬಾಲಿವುಡ್ ಗಲ್ಲಿಯಲ್ಲಿ ಇದೊಂದು ದೊಡ್ಡ ಬ್ಯುಸಿನೆಸ್ಸು ಆಗಿಹೋಗಿದೆ. ಈ ಬಗ್ಗೆ ಮೊದಲು ಧ್ವನಿ ಎತ್ತಿ ಇಂಥ ಪಾಪರಾಜಿ ಸಂಸ್ಕೃತಿಗೆ ವಿರೋಧ ಮಾಡಿದ್ದು ನಟಿಯರಾದ ಪ್ರಿಯಾಮಣಿ ಹಾಗೂ ತಾಪ್ಸಿ ಪನ್ನು ಅವರು. ಅಲ್ಲಿ ನಟಿಯರು ಪುಟ್ಟ ಪುಟ್ಟ ಚಡ್ಡಿ, ಲಂಗೋಟಿ ರೀತಿಯ ಶಾರ್ಟ್ಸ್ ಹಾಕಿಕೊಂಡು ಜಿಮ್, ರೆಸ್ಟೋರೆಂಟ್, ಪಾರ್ಕ್, ಏರ್‌ಪೋರ್ಟ್… ಮುಂತಾದ ಕಡೆ ಹೋಗಿ ಬರುವ ವಿಡಿಯೋಗಳನ್ನು ನಾವು ಇಲ್ಲೇ ಕೂತು ನೋಡುತ್ತೇವೆ ಅಲ್ಲವೇ, ಅವುಗಳನ್ನು ನಮ್ಮ ಮೊಬೈಲ್ ಗಳಿಗೆ ರಫ್ತು ಮಾಡೋದು ನಮ್ಮ ಸಪ್ತಮಿ ಗೌಡ ಅವರು ಹೇಳಿದ ಈ ಪಾಪರಾಜಿ ಅಂಕಲ್ಸ್ ಆಂಡ್ ಬ್ರದರ್ಸ್‌ಗಳೇ.

ಹಾಗಂತ ಆ ಪಾಪರಾಜಿಗಳು ಮುಂಬೈನಿಂದ ಈಗ ಬೆಂಗಳೂರಿಗೆ ಬಂದಿದ್ದಾರೆಯೇ ಅಂದುಕೊಳ್ಳಬೇಡಿ. ಇವರು ಇಲ್ಲಿನವರೇ. ಕೈಯಲ್ಲೊಂದು ಮೊಬೈಲ್, ಅದರೊಳಗೆ ವಿಡಿಯೋ ಹಾಗೂ ಫೋಟೋ ಎಡಿಟ್ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡ ಕೂಡಲೇ ಪತ್ರಕರ್ತರೆನಿಸಿಕೊಂಡ ಪ್ರತಿಭಾ ಕಾರಂಜಿಗಳು. ಸಿನಿಮಾ ಕಾರ್ಯಕ್ರಮಗಳಲ್ಲಿ ನಟಿಯರನ್ನು ನೋಡಿದ ಕೂಡಲೇ ಈ ಕಾರಂಜಿಗಳ ಮೊಬೈಲ್ ಕ್ಯಾಮೆರಾಗಳು ಚಿಮ್ಮುತ್ತಾ ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತವೆ. ಇನ್ನೂ ಕೆಲ ನಟ-ನಟಿಯರು ಈ ಮೊಬೈಲ್ ಶೂರರ ಜೊತೆಗೆ ರೀಲ್ಸ್ ಮಾಡುತ್ತಾರೆ. ಇತ್ತೀಚೆಗೆ ನಟಿಯೊಬ್ಬರು ಸಿನಿಮಾ ಪ್ರಚಾರಕರ್ತರ (PRO) ಮೇಲೆ ಸಿಟ್ಟು ಮಾಡಿಕೊಂಡಿದ್ದರಂತೆ. ಯಾಕೆ ಅಂತ ಕೇಳಿದರೆ ನಾನು ಕಾರಿನಿಂದ ಇಳಿಯುವಾಗ, ವೇದಿಕೆ ಹತ್ತುವಾಗ, ವೇದಿಕೆ ಇಳಿಯುವಾಗ, ವಾಪಸ್ ಹೋಗುವಾಗ ಒಂದೇ ಒಂದು ಕ್ಯಾಮೆರಾ ಕೂಡ ನನ್ನ ಹಿಂದೆ ಬರಲಿಲ್ಲ ಅಂತ ತಮ್ಮ ಅಗಾಧವಾದ ದುಃಖವನ್ನು ತೋಡಿಕೊಂಡಿದ್ದಾರೆ ಅಂತ ಕೇಳಿದರೆ ನೀವು ನಂಬಲೇ ಬೇಕು!

ಈ ಎಲ್ಲಾ ಗದ್ದಲ, ಗಲಾಟೆಗಳ ನಡುವೆ ಸಿನಿಮಾ ನಟಿಯರು ನಿಜವಾದ ಮಾಧ್ಯಮಗಳನ್ನು ಮರೆತು ತುಂಬಾ ವರ್ಷಗಳೇ ಕಳೆದುಹೋಗಿವೆ. ತಮ್ಮನ್ನು ಆಗಾಗ ಮಾತನಾಡಿಸಿ ಪತ್ರಿಕೆಗಳಲ್ಲಿ ವರದಿ ಮಾಡುವ ಪತ್ರಕರ್ತರು ಯಾರೆಂದು ಈ ನಟಿಯರನ್ನು ಕೇಳಿ ನೋಡಿ, ಕೊತ್ತಂಬರಿ ಬಾಬು ಮೇಲೆ ಆಣೆ ಐದು ಮಂದಿ ಪತ್ರಕರ್ತರ ಹೆಸರು ಕೂಡ ಇವರಿಗೆ ಗೊತ್ತಿರಲ್ಲ. ಇನ್ನೂ ನಟರು ಬಿಡಿ, ಅವರು ಬೌನ್ಸರ್ ಗಳ ರಕ್ಷಣಾ ಕವಚದಲ್ಲಿ ಬರುತ್ತಾರೆ, ಅದೇ ಕವಚದಲ್ಲಿ ಮನೆಗೆ ಮರಳುತ್ತಾರೆ. ಅವರನ್ನು ಮಾತನಾಡಿಸೋದು ಎಂದರೆ ಓಡೋ ಕುದುರೆ ಬಾಲಕ್ಕೆ ಮಲ್ಲಿಗೆ ಹೂವಿನ ಹಾರ ಹಾಕಿದಷ್ಟೇ ಕಷ್ಟ!

ಒಂದು ಕಡೆ ಪ್ರೀತಿ-ವಿಶ್ವಾಸ-ವೃತ್ತಿಪರತೆಯಿಂದ ಕೂತು ಮಾತನಾಡುವ ಮತ್ತು ಮಾತನಾಡಿಸುವ ಮಾಧ್ಯಮಗಳು ಈ ನಟ-ನಟಿಯರಿಂದ ದೂರವಾಗಿದ್ದಾರೆ. ಮತ್ತೊಂದು ಕಡೆ ಸಿನಿಮಾ ಕಾರ್ಯಕ್ರಮಗಳೆಂದರೆ ಖಾಲಿ ತಲೆಗಳ ಶೋ ಅಪ್ ಆಗಿದೆ. ಇದೆಲ್ಲವೂ ಸಿನಿಮಾ ಮಂದಿಯೇ ಮುಗಿಬಿದ್ದು ಆಹ್ವಾನಿಸುವ ಮೊಬೈಲ್, ಯೂಟ್ಯೂಬ್ ಮತ್ತು ಪಾಪರಾಜಿಗಳಿಗೆ ಬಂಡವಾಳ ಆಗಿದೆ. “ಹಾಗಾದರೆ ನಮ್ಮ ದೇಹಗಳನ್ನು ಹೀಗೆ ಅಸಭ್ಯವಾಗಿ ತೋರಿಸುವವರ ವಿರುದ್ಧ ನಾವು ಮಾತಾಡೋದು ತಪ್ಪಾ?” ಅಂತ ನೀವು ಕೇಳಿದರೆ ಖಂಡಿತ ತಪ್ಪಿಲ್ಲ. ಇಂಥ ತೊಡೆ ಕ್ಯಾಮೆರಾ ವೀರರನ್ನು ತಡೆಯೋಕೆ ಅಥವಾ ಅವಾಯ್ಡ್ ಮಾಡೋಕೆ, ಇಲ್ಲವೇ ನೋ ಎಂಟ್ರಿ ಆಗಿಸಲು ಸಿಂಪಲ್ಲಾಗಿ ನಾಲ್ಕು ಟಿಪ್ಸ್ ಇವೆ. ಬೇಕಾದರೆ ಯೂಸ್ ಮಾಡ್ಕೊಳ್ಳಿ.

  1. ಯಾರು ಪತ್ರಕರ್ತರು, ಯಾರು ಪಾಪರಾಜಿಗಳು ಎಂಬುದು Film PROಗಳಿಗೆ ಸ್ಪಷ್ಟವಾಗಿ ಗೊತ್ತಿದೆ. ಅಧಿಕೃತ ಮಾಧ್ಯಮ ಸಂಸ್ಥೆಗಳ ವರದಿಗಾರರನ್ನು, ಛಾಯಾಗ್ರಾಹಕರನ್ನು ಹೊರತುಪಡಿಸಿ ಉಳಿದವರಿಗೆ ಆಹ್ವಾನವೇ ಕಳುಹಿಸಬೇಡಿ. ಈ ಕುರಿತು ನಿಮ್ಮ ನಿಮ್ಮ ಸಿನಿಮಾ ಪ್ರಚಾರಕರ್ತರ ಜೊತೆಗೆ ಮೊದಲೇ ಮಾತನಾಡಿಕೊಳ್ಳಿ.
  2. ಇಂಥ ಮೊಬೈಲ್, ಯೂಟ್ಯೂಬ್, ಪಾಪರಾಜಿಗಳೆಂಬ ಅನಧಿಕೃತರನ್ನು ಗುಂಪು ಸೇರಿಸಿಕೊಂಡಿರುವ ಸಿನಿಮಾ ನಟಿಯರಿಗೆ ಪ್ರಚಾರದ ದಾರಿ ಯಾವುದು ಎಂಬುದನ್ನು ಗೈಡ್ ಮಾಡಿಸಿ.
  3. ನೀವು ಕೂಡ ಸಿನಿಮಾ ಕಾರ್ಯಕ್ರಮಗಳಿಗೆ ಬರಲು ಮೇಕಪ್‌ಗೆ ಕೊಡುವಷ್ಟು ಸಮಯ, ಆಸಕ್ತಿಯನ್ನು ಕಾರ್ಯಕ್ರಮದಲ್ಲಿ ಏನು ಮಾತನಾಡಬೇಕು, ತಮ್ಮ ಮಾತುಗಳು ಎಷ್ಟು ತೂಕವಾಗಿರಬೇಕು ಎಂಬುದನ್ನು ತಿಳಿದುಕೊಂಡರೆ ಉತ್ತಮ.

ಹಾಗಂತ ಮುಖ್ಯವಾಹಿನಿಯ ಮಾಧ್ಯಮಗಳು ಕಂಪ್ಲೀಟ್ ಸಾಚಾಗಳು ಅಂತೇಳುತ್ತಿಲ್ಲ. ಅವರೇನಾದರೂ ತಪ್ಪು ಮಾಡಿದರೆ ಅವರ ಮೇಲೆ ದೂರು ಕೊಡಲು ಅವರಿಗೊಂದು ಅಧಿಕೃತ ಸಂಸ್ಥೆ, ಸಂಪಾದಕರು ಅಂತಿದ್ದಾರೆ.
ಯಪ್ಪಾ ಸಣ್ಣಂಗಿ ರಾಜ … ಇವೆಲ್ಲ ಮಾಡೋಕೆ ನಮಗೆ ಟೈಮಿಲ್ಲ ಅಂದರೆ ನೋ ಕಾಮೆಂಟ್ಸ್. ಮತ್ತು ನಿಮ್ಮ ಹೋರಾಟ ನಿಮ್ಮದೇ ನಟನೆಯ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರದ “ಬೇ…ರ್ಸಿ ಅವಳು ಯಾವಳಾದ್ರೆ ನನಗೇನು ಸೀನಾ, ನೋಡ್ ಸೀನಾ ನನ್ ತಂಟೆಗೆ ಬಂದ್ರೆ…” ಅನ್ನೋ ಡೈಲಾಗ್ ನಷ್ಟೇ ಸದ್ದು ಮಾಡಿ ಸುದ್ದಿ ಆಗಿ ಮರೆಯಾಗುತ್ತದೆ.

ಸಣ್ಣಂಗಿ ರಾಜ

ಇನ್ನಷ್ಟು ಓದಿರಿ

Scroll to Top