ಸತಿ ಲಂಕೇಶ್
`
ದೇವರ ಅನುಮತಿಯಿಂದಾನೇ ಎಲ್ಲಾನೂ ಅನ್ನೋದಾದರೆ… ಈ ರಾಕ್ಷಸರು?’ ಇದು ಸಿನಿಮಾದಲ್ಲಿ ಬರೋ ಒಂದು ಡೈಲಾಗು. ಜಗತ್ತು ವಿಪರೀತ ಕ್ರೂರತೆಯನ್ನು ತುಂಬಿಕೊಂಡಿದೆ. ಊಹೆಗೂ ನಿಲುಕದ, ನಂಬಲೂ ಸಾಧ್ಯವಿಲ್ಲದ ಘಟನೆಗಳು ಘಟಿಸುತ್ತಲೇ ಇರುತ್ತವೆ. ಅಂತಾ ವಿಚಿತ್ರ ಮತ್ತು ವಿಲಕ್ಷಣ ವಿಚಾರಗಳನ್ನು ಹೊತ್ತು ಬಂದಿರುವ ಚಿತ್ರ ‘ಆಲ್ಫಾ’! ನೋಡಲು ಶಾಂತವಾಗಿ ಕಾಣುವ ಕಡಲತೀರದ ಅಲೆಗಳ ಹಿಂದೆ ಅದೆಂತಹ ಭೀಕರ ಸುನಾಮಿ ಅಡಗಿ ಕುಳಿತಿರಬಹುದು ಅನ್ನೋ ಕುತೂಹಲಕ್ಕೆ ಈಗ ‘ಆಲ್ಫಾ’ ಉತ್ತರ ನೀಡಿದೆ. ಈ ಹಿಂದೆ ‘ಗೀತಾ’ ಚಿತ್ರದಲ್ಲಿ 80ರ ದಶಕದ ಮಧುರ ಪ್ರೇಮಕಥೆ ಹಾಗೂ ‘ಹೊಯ್ಸಳ’ದಲ್ಲಿ ಉತ್ತರ ಕರ್ನಾಟಕದ ಗತ್ತು ತೋರಿದ್ದ ವಿಜಯ್ ನಾಗೇಂದ್ರ, ಈ ಬಾರಿ ಕರಾವಳಿಯ ಮಾದಕ ದ್ರವ್ಯಗಳ ಕರಾಳ ಲೋಕಕ್ಕೆ ಕೈ ಇಟ್ಟಿದ್ದಾರೆ. ಕೇವಲ ಗುಂಡು-ಮದ್ದುಗಳ ಸದ್ದಷ್ಟೇ ಅಲ್ಲದೆ, ಭಾವನೆಗಳ ತೀವ್ರ ಸಂಘರ್ಷವನ್ನೂ ತೆರೆದಿಟ್ಟು ಅಚ್ಛರಿ ಮೂಡಿಸಿದ್ದಾರೆ.

ಸಿನಿಮಾದ ಅಸಲಿ ಕಸುವು ಇರೋದು ಅಪ್ಪ-ಮಗನ ಅಪರೂಪದ ಬಾಂಧವ್ಯದಲ್ಲಿ. ಮಗ ಅರ್ಜುನ್ ಐಪಿಎಸ್ ಅಧಿಕಾರಿಯಾಗಬೇಕು ಎಂಬುದು ತಂದೆ ಇನ್ಸ್ಪೆಕ್ಟರ್ ಶಕ್ತಿಪ್ರಸಾದ್ ಅವರ ದೊಡ್ಡ ಕನಸು. ಆದರೆ ಇಲ್ಲಿನ ಅಪ್ಪ ಆ ಕಾಲದ ಕಟ್ಟುನಿಟ್ಟಿನ ಪೋಲಿಸ್ ಅಲ್ಲ; ಮಗ ಹುಡುಗಿಯ ಜೊತೆ ತಿರುಗಾಡುತ್ತಿದ್ದಾನೆ ಎಂದು ಗೊತ್ತಾದಾಗಲೂ, “ಖರ್ಚಿಗೆ ಕಾಸು ಬೇಕಾಗುತ್ತೆ ತಗೋ” ಎಂದು ಮಗನ ಜೇಬಿಗೆ ಹಣ ತುರುಕುವಷ್ಟು ಆಧುನಿಕ ಗುಣದ ಗೆಳೆಯ. ಈ ಸುಂದರ ಸಂಬಂಧದ ಹಾದಿಗೆ ಅಡ್ಡಗಾಲಾಗಿ ನಿಲ್ಲುವುದು 500 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸಾಮ್ರಾಜ್ಯದ ಅಧಿಪತಿ ಬಾಬಿ ಮತ್ತು ರಕ್ತಸಿಕ್ತ ಕೈಗಳ ಸುಪಾರಿ ಕಿಲ್ಲರ್ಗಳಾದ ಕಾಳಿ-ವಾಜಿ ಜೋಡಿ.
ಇಡೀ ಚಿತ್ರದ ಹೈಲೈಟ್ ಎಂದರೆ ಅದು ಹೇಮಂತ್ ಅವರ ನಟನೆ. ಇದು ಚೊಚ್ಚಲ ಚಿತ್ರವಾದರೂ, ಮೊದಲ ಸಿನಿಮಾದ ಅಳುಕಿಲ್ಲದೆ ಪಳಗಿದ ನಟನಂತೆ ಅವರು ಅಬ್ಬರಿಸಿದ್ದಾರೆ. ತೆರೆಯ ಮೇಲೆ ಕಾಣಿಸಿಕೊಂಡ ಕ್ಷಣದಿಂದಲೇ ಅವರ ಫಿಸಿಕಲ್ ಟ್ರಾನ್ಸ್ಫಾರ್ಮೇಷನ್ ಮತ್ತು ಕಣ್ಣುಗಳಲ್ಲಿನ ತೀವ್ರತೆ ಪ್ರೇಕ್ಷಕರನ್ನು ಸೆಳೆಯುತ್ತದೆ. ಆ್ಯಕ್ಷನ್ ದೃಶ್ಯಗಳಲ್ಲಿ ಸಿಕ್ಸ್ ಪ್ಯಾಕ್ ಪ್ರದರ್ಶನದ ಜೊತೆಗೆ, ತಂದೆಯ ಮೇಲಿನ ಪ್ರೀತಿ ತೋರುವ ಭಾವನಾತ್ಮಕ ದೃಶ್ಯಗಳಲ್ಲಿ ಹೇಮಂತ್ ಲೀಲಾಜಾಲವಾಗಿ ನಟಿಸಿ ಸ್ಯಾಂಡಲ್ವುಡ್ಗೆ ಭರವಸೆಯ ನಾಯಕನಾಗಿ ಅಡಿಯಿಟ್ಟಿದ್ದಾರೆ.
ಇನ್ನು ನಾಯಕನ ಅಬ್ಬರಕ್ಕೆ ಸರಿಸಾಟಿಯಾಗಿ ನಿಲ್ಲುವುದು ಬಾಲು ನಾಗೇಂದ್ರ ಅವರ ನಟನೆ. ಸ್ವತಃ ಹೀರೋ ಆಗಿ ಹೆಸರು ಮಾಡಿ, ಅಪರೂಪದ ನಟ ಅನ್ನಿಸಿಕೊಂಡಿರುವ ಬಾಲು ಇಲ್ಲಿ ನೆಗೆಟೀವ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಪಾತ್ರ ಯಾವುದಾದರೂ ಅದರಾಳಕ್ಕಿಳಿದು ನಟಿಸುವ ಬಾಲು ತಮ್ಮ ಹಿಂದಿನ ಸಿನಿಮಾಗಳಲ್ಲಿ ಅದನ್ನು ಪ್ರೂವ್ ಮಾಡಿದ್ದಾರೆ. ಈ ಬಾರಿ ಕಾಳಿ ಪಾತ್ರದಲ್ಲಿ ಅವರು ತೋರಿರುವ ಸೈಕೋ ಗುಣದ ಕ್ರೌರ್ಯ ಮೈನಡುಗಿಸುವಂತಿದೆ. ಅವರ ಮ್ಯಾನರಿಸಂ, ಕ್ರೂರವಾದ ನಗು ಮತ್ತು ಬಾಡಿ ಲಾಂಗ್ವೇಜ್ ಚಿತ್ರದ ಗಾಂಭೀರ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ರಮೇಶ್ ಇಂದಿರಾ ಮತ್ತು ಬಾಲು ನಾಗೇಂದ್ರ ಅವರ ತೆರೆಯ ಮೇಲಿನ ಜುಗಲ್ಬಂದಿ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡುತ್ತದೆ. ಹೇಮಂತ್ ಸುಶೀಲ್ ಕೂಡಾ ಈ ಬಾರಿ ಹೊಸ ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಛರಿ ಮೂಡಿಸಿದ್ದಾಋಎ.
ತಾಂತ್ರಿಕವಾಗಿ ಸಿನಿಮಾ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದೆ. ಅನೂಪ್ ಸೀಳಿನ್ ಅವರ ಸಂಗೀತ ಕಥೆಯ ತೀವ್ರತೆಯನ್ನು ಹೆಚ್ಚಿಸಿದರೆ, ಮಾಸ್ತಿ ಉಪ್ಪಾರಹಳ್ಳಿಯವರ ಹರಿತವಾದ ಮಾಸ್ ಸಂಭಾಷಣೆಗಳು ಪ್ರೇಕ್ಷಕರಿಗೆ ಶಿಳ್ಳೆ ಹೊಡೆಯುವಂತೆ ಮಾಡುತ್ತವೆ. ಕಾರ್ತಿಕ್ ಅವರ ಛಾಯಾಗ್ರಹಣದಲ್ಲಿ ಮಂಗಳೂರಿನ ಗಲ್ಲಿ-ಗಲ್ಲಿಗಳು ಜೀವಂತವಾಗಿ ಕಂಡಿವೆ. ಅಚ್ಯುತ್ ಕುಮಾರ್ ಅವರ ಅನುಭವಿ ನಟನೆ ಮತ್ತು ಕಾರ್ತಿಕ್ ಮಹೇಶ್ ಅವರ ಪಾತ್ರ ನೀಡುವ ಟ್ವಿಸ್ಟ್ಗಳು ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸುತ್ತವೆ. ಮೊದಲಾರ್ಧದಲ್ಲಿ ರಾಕೆಟ್ ವೇಗದಲ್ಲಿ ಸಾಗುವ ಕಥೆ, ದ್ವಿತೀಯಾರ್ಧದಲ್ಲಿ ಕೊಂಚ ನಿಧಾನವೆನಿಸಿದರೂ, ‘ಯಾರು ಮಿತ್ರ? ಯಾರು ಶತ್ರು?’ ಎಂಬ ಸಸ್ಪೆನ್ಸ್ ಕುತೂಹಲವನ್ನು ಕೊನೆಯವರೆಗೆ ಕಾಯ್ದುಕೊಳ್ಳುತ್ತದೆ. ಅಂತಿಮವಾಗಿ, ಪ್ರೀತಿ, ಗೆಳೆತನ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಬಯಸುವ ಮಾಸ್ ಪ್ರೇಕ್ಷಕರಿಗೆ ‘ಆಲ್ಫಾ’ ಅದ್ಭುತ ಅನುಭವ ನೀಡುತ್ತದೆ…







































