ಕನ್ನಡ ಚಿತ್ರರಂಗದ ಏಳುಬೀಳುಗಳನ್ನು, ತಾರೆಯರ ಅಬ್ಬರವನ್ನು ಮತ್ತು ತೆರೆಮರೆಯ ಸತ್ಯಗಳನ್ನು ಹತ್ತಿರದಿಂದ ಕಂಡಿರುವ ಖ್ಯಾತ ಪತ್ರಕರ್ತ ಸಣ್ಣಂಗಿ ರಾಜ ಅವರು ಈಗ ‘ಸಿನಿಬಜ್’ ಅಂಗಳಕ್ಕೆ ಬಂದಿದ್ದಾರೆ. ಅದು ಸಾಫ್ಟ್ ಆಗಿ ಮಾತಾಡಲಿಕ್ಕಲ್ಲ, ಬದಲಾಗಿ ಗಾಂಧಿನಗರದ ಗತ್ತು-ಗಮ್ಮತ್ತುಗಳಿಗೆ ‘ಲಗೋರಿ’ ಇಡಲು! ಇಲ್ಲಿ ಪಾಲಿಶ್ ಮಾಡಿದ ಮಾತುಗಳಿಲ್ಲ, ಮುಲಾಜಿನ ವಿಶ್ಲೇಷಣೆಗಳಿಲ್ಲ. ಚಿತ್ರರಂಗದ ‘ದೊಡ್ಡವರ’ ನಡೆಗೆ ಸಣ್ಣವರ ಧ್ವನಿಯಾಗಿ, ವಿಡಂಬನೆಯ ಮೊನಚು ಮತ್ತು ಅಣಕದ ಚಾತುರ್ಯದೊಂದಿಗೆ ನಮ್ಮ ಸಣ್ಣಂಗಿ ರಾಜ ತಮ್ಮ ಹೊಸ ಅಂಕಣದ ಮೂಲಕ ನಿಮ್ಮ ಮುಂದೆ ಸತ್ಯ ಬಿಚ್ಚಿಡಲಿದ್ದಾರೆ. ಮೊದಲನೇ ಏಟಿನಲ್ಲೇ ‘ಕ್ರೇಜಿಸ್ಟಾರ್’ ರವಿಚಂದ್ರನ್ ಅವರ “ನೂರು ರೂಪಾಯಿ” ಹೇಳಿಕೆಗೆ ಪ್ರೇಕ್ಷಕ ಪ್ರಭುವಿನ ಪರವಾಗಿ ಖಡಕ್ ಉತ್ತರ ನೀಡಿರುವ ಈ ಲೇಖನ, ಚಿತ್ರರಂಗ ಮತ್ತು ಅಭಿಮಾನಿಗಳ ನಡುವಿನ ಕಂದಕವನ್ನು ಕನ್ನಡಿ ಹಿಡಿದು ತೋರಿಸುತ್ತಿದೆ. “ಸಿನಿಮಾ ಅಂದ್ರೆ ಬರೀ ಗ್ಲಾಮರ್ ಅಲ್ಲ, ಅದು ಕೋಟಿ ಜನರ ಬೆವರಿನ ಬೆಲೆ” ಎನ್ನುವ ಸತ್ಯವನ್ನು ಫಿಲ್ಟರ್ ಇಲ್ಲದೆ ಹೇಳುವ ಈ ‘ಲಗೋರಿ’ ಇಂದಿನಿಂದ ನಿಮ್ಮ ಓದಿಗೆ ಸಿದ್ಧ.

ಸಿನ್ಮಾಗಳು ಬರ್ತಾನೇ ಇವೆ.
ಆದ್ರೆ, ಒಳ್ಳೆ ಚಿತ್ರಗಳನ್ನ ನೀವ್ ಗೆಲಿಸ್ತಿಲ್ಲ. ಎಲ್ರು ಮೊಬೈಲ್ ಗಳಲ್ಲಿ ಕಳೆದೋಗಿದ್ದಾರೆ. ಅದನ್ನ
ಬಿಟ್ಟು ಥಿಯೇಟರುಗಳಿಗೆ ಬಂದ್ ಸಿನ್ಮಾ ನೋಡಿ. ಒಬ್ಬ ಪ್ರೇಕ್ಷಕನಿಗೆ ನೂರ್ ರೂಪಾಯ್ ಕೊಟ್
ಸಿನ್ಮಾ ನೋಡಕ್ಕಾಗಲ್ವಾ… ಸಿನ್ಮಾ ಚೆನ್ನಾಗಿಲ್ಲಾಂದ್ರೆ ಬಿಡಿ. ಏನೂ ಆಗಲ್ಲ. ನೂರ್ ರೂಪಾಯಿ
ಕೊಟ್ಟು ಥಿಯೇಟರುಗಳಿಗೆ ಬಂದ್ರೆ ನಿಮ್ ಗಂಟೇನೂ ಹೋಗಲ್ಲ…. ಬನ್ರೀ… ಸಿನಿಮಾ ನೋಡ್ರಿ…
ಗೆಲ್ಸಿರೀ.

ಈ ಮೇಲಿನ ಮಾತುಗಳು ಯಾರು ಮತ್ತು
ಯಾರಿಗೆ ಹೇಳಿದ್ದು ಎನ್ನುವ ಒಂದು ವಾಕ್ಯದ ಉತ್ತರ ನಿಮಗೆ ಗೊತ್ತಿದೆ. ಕಳೆದ ಒಂದು ವಾರದಿಂದ
ಸೋಷಿಯಲ್ ಮೀಡಿಯಾ, ಮುಖ್ಯ ವಾಹಿನಿಯ ಮಾಧ್ಯಮಗಳಲ್ಲೂ ಕ್ರೇಜಿ ಸ್ಟಾರ್ ಅವರ ಈ ಮೇಲಿನ ಮಾತುಗಳದ್ದೇ
ಕಾರು-ಬಾರು. ‘ಪ್ರೇಕ್ಷಕರ ಮೇಲೆ ರವಿಚಂದ್ರನ್ ಅವರು ಹೀಗೆ ಗುಡುಗಿದ್ದು ಸರಿನಾ, ತಪ್ಪಾ ಅಂತ ವೋಟ್ ಮಾಡಿ’ ಎಂದು
ಟ್ರೋಲ್ ಪುಟಗಳು, ಮೀಮ್ಸ್ ಪೇಜ್ ಗಳು, ಪೋಲಿಂಗ್ ಬಿಟ್ಟಿವೆ. “ಅದೆಲ್ಲ ಬಿಡು ಮಾರಾಯ, ಈಗ ಈ ವಿಚಾರದಾಗ ನಿನ್ದೇನು ಸಮಾಚಾರ?” ಅಂತ ಕೇಳ್ತೀರಾ….ನೇರ ವಿಷಯಕ್ಕೆ ಬರ್ತೀನಿ.
ಪ್ರೀತಿಯ ರವಿ ಸರ್…. ನಮ್ಗೆ
ಅಂದ್ರೆ ಪ್ರೇಕ್ಷಕರಿಗೆ ನೂರು ರುಪಾಯಿ ದೊಡ್ಡ ಗಂಟೇ ಅನ್ನೋ ವಿಚಾರ “past born golden spoon, present ಏನೋ spoon” ಆಗಿರುವ ನಿಮ್ಮಂಥವರಿಗೆ ಹೇಗೆ ಹೇಳಿದರೂ ಅರ್ಥ ಆಗಲ್ಲ ಅನ್ನೋದು ನನ್ನಂಥವರ ಗಾಢವಾದ ನಂಬಿಕೆ. ಆದರೂ ನನ್ನಂಥ ನೂರು ರುಪಾಯಿ ಕೂಲಿ ಮನುಷ್ಯರು ಅಂದ್ರೆ ಕ್ಯೂ ನಿಂತು ಟಿಕೆಟ್ ತಗೊಂಡು ನಿಮ್ಮಗಳ ಸಿನಿಮಾಗಳನ್ನು ನೋಡಿ ಕಾಲ ಕಾಲಕ್ಕೆ ಗೆಲ್ಲಿಸುತ್ತಾ ಬರುತ್ತಿರುವ
ನಮ್ಮ ಕಷ್ಟಗಳನ್ನು ನಿಮ್ಮ ಬಳಿ ಹೇಳಿಕೊಳ್ಳಬೇಕು ಅನಿಸುತ್ತಿದೆ. ಯಾಕೆಂದರೆ ಡಾ. ರಾಜಕುಮಾರ್, ಡಾ.
ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಶಂಕರ್ ನಾಗ್ ಅವರಂತಹ ಹಿರಿಯ ಜೀವಗಳ ನಂತರ ಬೇಡ ಬೇಡ
ಅಂದರೂ ನೆನಪಾಗುವ ಸೀನಿಯರ್ ನೇಮು ನಿಮ್ಮದು. ಹೀಗಾಗಿ ದೊಡ್ಡವರಾದ ತಮ್ಮ ಬಳಿ ನಮ್ಮ ಕಷ್ಟ
ಹೇಳಿಕೊಳ್ಳೋದು ತಪ್ಪಲ್ಲ ಅನ್ನೋದು ನನ್ನ ಅಂತರಂಗದ ಭಾವನೆ.
ಡಿಯರ್ ರವಿಯಣ್ಣ…. ನೀವೇ ಹೇಳಿದಂತೆ
ಆ ನೂರು ರುಪಾಯಿ ಜನ ಯಾರು ಅನ್ನೋದು ನಿಮ್ಗೆ ಗೊತ್ತಾ!? Oh sorry… ಗೊತ್ತಿಲ್ವಾ? ಹಾಗಾದ್ರೆ ಕೇಳಿ. ಹೋಟೆಲ್ ನಲ್ಲಿ ಕೆಲಸ ಮಾಡೋ ಹುಡುಗರು, ಗಾರ್ಮೆಂಟ್ಸ್ಫ್ಯಾ ಕ್ಟ್ರಿಗಳಲ್ಲಿ ದುಡಿಯೋ ಹೆಣ್ಣು ಮಕ್ಕಳು, ವ್ಯವಸಾಯ ಮಾಡೋ ರೈತರು ಮತ್ತು ಅವರ ಮಕ್ಕಳು,
ಅಂಗನವಾಡಿಗಳಲ್ಲಿ ಕೆಲಸ ಮಾಡೋ ಆಯಾಗಳ ಸಂತಾನ, ಆಟೋ ಚಾಲಕರು ಮತ್ತು ಅವರ ಮಕ್ಕಳು, ಕಾಲೇಜು ಓದೋ
ಹುಡುಗ- ಹುಡುಗಿಯರು. ಸಣ್ಣ ಸಣ್ಣ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಶ್ರಮ ಜೀವಿಗಳು, ಬಸ್
ಸ್ಟ್ಯಾಂಡು, ಮಾರ್ಕೆಟ್ಟು, ಫುಟ್ ಪಾತ್ ಗಳಲ್ಲಿ ವ್ಯಾಪಾರಸ್ಥರೆನಿಸಿಕೊಂಡಿರುವ ಕೂಲಿಗಳು…. ಪಟ್ಟಿ ಇನ್ನೂ ಬೆಳೀತಾ ಹೋಗಬಹುದು. ಸಿಂಪಲ್ಲಾಗಿ ಒಂದೇ ಮಾತಿನಲ್ಲಿ ಹೇಳುವುದಾದರೆ ಸ್ವಂತ ಶ್ರಮದ ದುಡಿಯನ್ನು ನಂಬಿಕೊಂಡು ಬದುಕುತ್ತಿರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರೇ ಈ ನೂರು ರುಪಾಯಿ ಮನುಷ್ಯರು.
“ಅದ್ಸೆರಿ ಕಣಪ್ಪ, ಇದೆಲ್ಲ ನನಗ್ಯಾಕೆ ಹೇಳ್ತಾ
ಇದ್ದಿಯಾ!?” ಅಂತ ಡಿಸ್ಟರ್ಬ್ ಮಾಡ್ಬೇಡಿ ಸ್ವಲ್ಪ ತಡೀರಿ ರವಿ
ಮಾಮ. ನಿಮ್ಗೆ ಬೆಂಗಳೂರಿನಲ್ಲಿ ಬನಪ್ಪ ಪಾರ್ಕ್ ಗೊತ್ತಾ, ಫ್ರೀಡಮ್ ಪಾರ್ಕು ಅಂತೊಂದಿದೆ
ಗೊತ್ತಿದಿಯಾ, ಹೋಗ್ಲಿ ಆನಂದರಾವ್ ವೃತ್ತದಲ್ಲಿ ಇರೋ ಗಾಂಧಿ ಪ್ರತಿಮೆ ಗೊತ್ತಾ, ಕೊನೇ ಪಕ್ಷ ಟೌನ್
ಹಾಲ್ ಬಗ್ಗೆ ಗೊತ್ತಾ… ಈ ಎಲ್ಲವೂ ಕನ್ನಡ ಚಿತ್ರರಂಗದ ಹೆಬ್ಬಾಗಿಲು, ತವರು ಮನೆ, ಗಂಡನ ಮನೆ,
ಬಾಯ್ ಫ್ರೆಂಡ್ ಊರು ಅಂತ ಏನೆನೋ ಬಿರುದು ಹೊತ್ತುಕೊಂಡಿರುವ ಗಾಂಧಿನಗರದ ಕೂಗಳತೆಯ ದೂರದಲ್ಲೇ
ಇರೋದು. ‘ಬನ್ರೋ ನಿಮ್ ಗಂಟೇನು ಹೋಗುತ್ತಾ… ನೂರ್
ರುಪಾಯಿ ಕೊಟ್ಟು ಸಿನಿಮಾ ನೋಡಿ’ ಎಂದು ನೀವು ಮೊನ್ನೆ
ಅಧಿಕಾರಯುತವಾಗಿ ಕರೆದ್ರಾಲ್ಲ ಅದೇ ಜನ, ಅದೇ ಜನರ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ- ತಮ್ಮ, ಬಂಧು
ಬಳಗ ನಿತ್ಯ ಒಂದಲ್ಲಾ ರೂಪದಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸಂಕಷ್ಟ-
ನೋವು, ಅನ್ಯಾಯ, ಶೋಷಣೆಯನ್ನು ವಿರೋಧಿಸಿ-ಎದುರಿಸಿ ಇದೇ ಜಾಗಗಳಲ್ಲಿ ವಾರ, ತಿಂಗಳುಗಳ ಕಾಲ
ಪ್ರತಿಭಟನೆ ಮಾಡಿದ್ದಾರೆ. ಮತ್ತು ಮಾಡ್ತಾನೆ ಇರ್ತಾರೆ ರವಿ ಸಾರ್.
ಸ್ಯಾಂಡಲ್ ವುಡ್ ತವರು ಮನೆಯೆಂಬ ನಿಮ್ಮ ಗಾಂಧಿನಗರದ
ಸುತ್ತಾ ಕೂರುತ್ತಿರುವವರ ಆ ನೂರು ರುಪಾಯಿ ಜನರ ಕೂಗು ಯಾವತ್ತೂ ನಿಮಗೆ ಕೇಳಿಸಲಿಲ್ಲವೇ? ಕನಿಷ್ಠ ಸೌಲಭ್ಯಕ್ಕಾಗಿ ಒತ್ತಾಯಿಸಿದ ಅಂಗನವಾಡಿ ತಾಯಂದಿರ ನೋವು
ನಿಮಗೆ ತಟ್ಟಲಿಲ್ಲವೇ? ನಮ್ಮ ಕೆಲಸ ಖಾಯಂಗೊಳಿಸಿ ಎಂದ ಪಾಠ ಮಾಡೋ
ಶಿಕ್ಷಕ ಸಮೂಹದ ಆಕ್ರೋಶ ನಿಮ್ಮನ್ನು ಎಚ್ಚರಿಸಲಿಲ್ಲವೇ? ಆತ್ಮಹತ್ಯೆ ಮಾಡಿಕೊಂಡ ರೈತರ ಬದುಕಿನ ಸಂಕಷ್ಟದ ಪ್ರತಿಭಟನೆಗಳು
ನಿಮಗೆ ಕಾಣಿಸಲಿಲ್ಲವೇ? ಅತ್ಯಾಚಾರಕ್ಕೆ ತುತ್ತಾದ ಹೆಣ್ಣು ಮಕ್ಕಳ
ತಾಯಂದಿಯರು ನ್ಯಾಯಕ್ಕಾಗಿ ಒತ್ತಾಯಿಸುವ ಒಡಲಾಳದ ಧ್ವನಿಗಳ ಪರ ನಿಲ್ಲಬೇಕು, ಸರ್ಕಾರಿ ಶಾಲೆಗಳನ್ನು
ಮುಚ್ಚುವ ಅಧಿಕಾರಶಾಹಿಯ ನಡೆಯ ವಿರುದ್ಧ ಧ್ವನಿ ಎತ್ತಬೇಕೆಂದು ತಮಗೆ ಅನಿಸಲಿಲ್ಲವೇ? ಆದರೂ ನಿಮ್ಮಂತೆ “ಬನ್ರೀ… ನಿಮ್ ಮೇಕಪ್ಪೇನು ಹಾಳಾಗುತ್ತಾ… ಸ್ಟಾರ್ ಡಮ್ ಏನಾದ್ರು
ಬಿದ್ದೋಗುತ್ತಾ!?” ಎಂದು ನಿಮ್ಮ ಮೇಲೆ ನಾವು ದರ್ಪ ತೋರಲಿಲ್ಲ ರವಿ ಸರ್.
ಇದೆಲ್ಲ ಹೋಗ್ಲಿ ಬಿಡಿ “ಪ್ರೇಮ ಲೋಕ”ದ ಯಜಮಾನ್ರೆ… ನಿಮ್ಮದೇ ಕ್ಷೇತ್ರದ
ಐ ಮೀನ್ ಕನ್ನಡ ಚಿತ್ರರಂಗದಲ್ಲಿ ಎಷ್ಟೆಲ್ಲ ಸಂಕಷ್ಟಗಳಿವೆ ಗೊತ್ತಾ! ಸಿನಿಮಾ ಕಾರ್ಮಿಕರ ಬದುಕು ಹೇಗಿದೆ, ನೂರಾರು ಚಿತ್ರಗಳಲ್ಲಿ ನಟಿಸಿ ಈಗ
ವಯಸ್ಸಾಗಿರುವ ಪೋಷಕ ಕಲಾವಿದರ ಬದುಕು, ಅವರ ಕುಟುಂಬಗಳು ಇವತ್ತು ಯಾವ ಹಂತದಲ್ಲಿದೆ, ಚಿತ್ರಕ್ಕೆ
ಕೆಲಸ ಮಾಡೋ ಲೈಟ್ ಬಾಯ್ ನಿಂದ ಶುರುವಾಗಿ ತೆರೆ ಹಿಂದೆ ದುಡಿಯೋ ವರ್ಗ ಸುಖವಾಗಿದೆಯೇ, ಹೋಗ್ಲಿ
ನಿಮ್ಮ ಜೊತೆ ಹೆಜ್ಜೆ ಹಾಕಿ, ಹಣ್ಣು-ಕಾಯಿಗಳಿಂದ ಎಲ್ಲೆಂದರಲ್ಲಿ ಹೊಡೆಸಿಕೊಳ್ಳುವ ನಾಯಕಿಯರ
ಸಂಭಾವನೆ ನಿಮ್ಮಷ್ಟೇ ಇದಿಯೇ… ಇತ್ಯಾದಿಗಳ ಬಗ್ಗೆ ನೀವೇ ಒಮ್ಮೆ ಯೋಚಿಸಿ. ಇನ್ನೂ ಮಾಂಸಹಾರ ಸೇವನೆ ವಿಚಾರಕ್ಕೆ ನಿಮ್ಮ ಕಿರಿಯ ಸಹದ್ಯೋಗಿ ಡಾಲಿ ಧನಂಜಯ ಅವರ ಮೇಲೆ ಇತ್ತೀಚೆಗೆ ಒಂದು ಗುಂಪು ಮುಗಿಬಿದ್ದಾಗ, “ಲೇ
ಸುಮ್ನಿರೋ, ತಿನ್ನೋ ಅನ್ನಕ್ಕೂ ಜಾತಿ, ಧರ್ಮ ಅಂಟಿಸ್ಬೇಡಿ. ಅವನ ಹಸಿವು, ಅವರ ಆಹಾರ ಅವರ ಇಷ್ಟ.
ನಮ್ಗೇನು ನೋವು” ಎಂದು ನೀವು ಗದರಿ ಮಾತನಾಡಬಹುದಿತ್ತಲ್ವಾ ಸರ್…?
ಅಭಿಮಾನದ ಅಣ್ಣಯ್ಯ…. ನಾನು ಬರೀ
ಪ್ರತಿಭಟನೆ, ಹೋರಾಟ, ಕಿಚ್ಚು ಅಂತ ನಿಮ್ಮ ಬಳಿ ಹೇಳಿ ನಿಮಗೆ ಬೋರ್ ಹೊಡೆಸುತ್ತಿದ್ದೇನೆ
ಅಂದುಕೊಳ್ಳಬೇಡಿ. ನೂರು ರುಪಾಯಿ ಜನ, ನಿಮ್ಮದೇ ಕ್ಷೇತ್ರದ ಕಷ್ಟ ಜೀವಿಗಳು… ಇದ್ಯಾವುದರ
ಬಗ್ಗೆಯೂ ಮಾತನಾಡಕ್ಕೆ ನಿಮಗೆ ಆಗಲ್ಲ ಅಂದ್ರೆ ಪರ್ವಾಗಿಲ್ಲ ಬಿಡಿ. ಈ ಕೆಲ್ಸ ಮಾಡಬಹುದಾ ನೋಡಿ.
ಕನ್ನಡದ 20 ರಿಂದ 30 ಮಂದಿ ಹೀರೋಗಳನ್ನು ಒಂದು ತಂಡ ಮಾಡಿಕೊಳ್ಳಿ. ಈ ತಂಡದಲ್ಲಿ ನಿಮ್ಮ ಇಬ್ಬರು ಮಕ್ಕಳು
ಬೇಕಾದರೆ ಇರಲಿ. ನಿಮಗೆ ಸಂಪರ್ಕ ಇರುವ ಸಾಹಿತಿಗಳು, ಬರಹಗಾರರನ್ನು ಕರೆಸಿಕೊಳ್ಳಿ. ಅಥವಾ ನೀವೇ
ಖುದ್ದಾಗಿ ಭೇಟಿ ಮಾಡಿದರೂ ತಪ್ಪಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪ್ರಕಟಣೆ ಆಗುತ್ತಿರುವ, ಆಗಿರುವ
ಒಂದಿಷ್ಟು ಕತೆ, ಕಾದಂಬರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಹೊಸ ತಲೆಮಾರಿನ ಬರಹಗಾರರನ್ನು ಸಂಪರ್ಕಿಸಲು
ಸಾಧ್ಯನಾ ಅಂತ ನೋಡಿ. ಇದೆಲ್ಲ ಆದ ನಂತರ ಸಿನಿಮಾಗಳಿಗೇ ಅಂತ ಬರೆಯುವ ಸ್ಕಿಲ್ ಇರುತ್ತಲ್ಲ ಆ ಸಿನಿ
ರೈಟರ್ಸ್ ಗಳಿಗೆ ನಿಮ್ಮ ಬಳಿ ಸಂಗ್ರಹ ಆಗುವ ಸಾಹಿತ್ಯವನ್ನು ಅವರಿಗೆ ಕೊಟ್ಟು, ಇದರಲ್ಲಿ ಸಿನಿಮಾ
ಆಗುವಂತಹ ಸತ್ವ ಇದ್ದರೆ ನೋಡಿ ಅಂತ ಕೇಳಿ. ಅವರು ಪೇಪರ್ ಟು ಸ್ಕ್ರೀನ್ ಕನ್ವರ್ಷನ್ ಮಾಡಿ
ಕೊಡುತ್ತಾರೆ. ಹಾಗೆ ನಿಮ್ಮ ಕೈಗೆ ಬರುವ ಪೇಪರ್ ಟು ಸ್ಕ್ರೀನ್ ರೈಟಿಂಗ್ ಅನ್ನು ನಾನು ಆಗಲೇ
ಹೇಳಿದ್ನಲ್ಲ ಹೀರೋಗಳ ತಂಡ ಅವರಿಗೆ ನಿಮ್ಮ ಮೂಲಕವೇ ಆ ರೈಟಿಂಗ್ ಕಡತಗಳನ್ನು ತಲುಪಿಸಿ, ಸೂಕ್ತ ಅನಿಸಿದ್ದನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ಹೇಳಿ.
ಅಸುರನ್, ಸೈರಾಟ್, ಬಳಗಂ, ವಿಸಾರಣೈ ಮುಂತಾದ ಪರಭಾಷೆಯ
ಸಿನಿಮಾಗಳು ಮಾತ್ರವಲ್ಲ ಕನ್ನಡದ ಎವರ್ ಗ್ರೀನ್ ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ನಾಗರಹಾವು,
ಕಸ್ತೂರಿ ನಿವಾಸ, ಚೋಮನ ದುಡಿ, ಚಂದವಳ್ಳಿಯ ತೋಟ, ಓಂ, ಮುತ್ತಿನ ಹಾರ, ಅಮೆರಿಕಾ ಅಮೆರಿಕಾ…
ನಿನ್ನೆ ಮೊನ್ನೆ ಬಂದ ಸು ಫ್ರಮ್ ಸೋ, ಕಾಂತಾರ, ಲ್ಯಾಂಡ್ ಲಾರ್ಡ್, ಕಾಟೇರ… ಹೀಗೆ ಹೇಳುತ್ತಾ
ಹೋದರೆ “ಚಂದನವನದ” ಇಂಥ ನೂರಾರು “ಚಿಲುಮೆಗಳು” ಕಾಣಸಿಗುತ್ತವೆ. ಈ ನೂರಾರು ಚಿತ್ರಗಳು ಜೀವ ಪಡೆದುಕೊಂಡಿದ್ದು ಕನ್ನಡದ
ಸಾಹಿತ್ಯ, ಓದು ಮತ್ತು ಬರವಣಿಗೆಯಿಂದಲೇ ಎಂಬುದನ್ನು ನಾನು ಪ್ರತ್ಯೇಕವಾಗಿ ಮತ್ತು ಹೊಸದಾಗಿ ತಮಗೆ
ಹೇಳಬೇಕಿಲ್ಲ!
ಈಗ ಮತ್ತೆ ಆ ಸಾಹಿತ್ಯದ ನಂಟಿಗೆ
ಚಿತ್ರರಂಗವನ್ನು ಜೊತೆಗೂಡಿಸಿ. ಆ ಮೂಲಕ ಕನ್ನಡ ಸಾಹಿತ್ಯ ಸಂಪತ್ತು ತೆರೆ ಮೇಲೆ ಶ್ರೀಮಂತವಾಗಿ
ಕಾಣಿಸಿಕೊಳ್ಳುವುದಕ್ಕೆ ನೀವು “ಹಳ್ಳಿ ಮೇಸ್ಟ್ರು” ಆಗ್ತಿರೋ, “ರಣಧೀರ” ಆಗ್ತಿರೋ ನಿಮಗೆ ಬಿಟ್ಟಿದ್ದು. ಒಟ್ನಲ್ಲಿ ಬೌನ್ಸರ್ ಗಳ ಜೊತೆ ಬಂದು,
ಅದೇ ಬೌನ್ಸರ್ ಗಳ ಜೊತೆಗೆ ಹೋಗುತ್ತಿರುವ ಹೀರೋಗಳನ್ನು ಬುಕ್ ಸ್ಟೋರ್ ಗಳ ಕಡೆಗೂ ಹೋಗಿ ಬರುವಂತೆ
ಮಾಡಿ.
“ಅಯ್ಯೋ ಶಿವನೇ… ನೂರ್ ರುಪಾಯಿ ಕೊಟ್ಟು ಸಿನ್ಮಾ
ನೋಡಿ ಅಂದಿದ್ದಕ್ಕೆ ಇಷ್ಟೆಲ್ಲ ಹೇಳಿಕೊಳ್ಳ ಬೇಕಾಯಿತಲ್ಲ ಮಾರಾಯ…” ಎಂದು ಮುನಿಸಿಕೊಳ್ಳಬೇಡಿ “ರಾಮಾಚಾರಿ” ದೇವ್ರು. ಆದರೆ, ಸಿನಿಮಾ
ಕಾರ್ಯಕ್ರಮದಲ್ಲಿ ಕೂತು ಹೇಳಿದ ನಿಮ್ಮ ಮಾತಿನ ದಾಟಿಯೇ ನನ್ನಿಂದ ಇಷ್ಟೆಲ್ಲ ಮಾತನಾಡಿಸಿತು.
“ಆಯ್ತು ಗುರುವೇ ನಾನು ಹೇಳಿದ್ದು wrong, ವಾಪಸ್ಸು ತೆಗೆದುಕೊಳ್ಳುತ್ತೇನೆ” ಅನ್ನಬೇಡಿ. ಯಾಕೆಂದರೆ ರೇಷನ್ ಅಂಗಡಿಗಳ ಮುಂದೆ ಸಾಲು ನಿಂತು ತುತ್ತಿನ ಚೀಲ ಹೊತ್ತುಕೊಂಡು ಹೋಗೋ ನಮಗೆ ಅದೇ ಥಿಯೇಟರುಗಳ ಮುಂದೆ ನಿಂತು ಟಿಕೆಟ್ ತೆಗೆದುಕೊಂಡು ಸಿನಿಮಾ
ನೋಡಿ ನಿಮ್ಮನ್ನು ಮೆರವಣಿಗೆ ಮಾಡೋದು ಕೂಡ ಗೊತ್ತು. ಕನ್ನಡ ಚಿತ್ರರಂಗವೊಂದೇ ಇಲ್ಲಿವರೆಗೂ ಆರು
ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಜನ್ಮ ಕೊಟ್ಟು, 90 ವರ್ಷಗಳ ಹಿರಿತನ ಮೈಗೂಡಿಸಿಕೊಂಡು,
ಶತಾಯುಷಿ ಆಗಲು ಹೊರಟಿರುವುದು ಈ ನೂರು ರುಪಾಯಿ ವರ್ಗದ ಮಕ್ಕಳ ಅಂಥ ಮೆರವಣಿಗೆಗಳ ಫಲವೇ ಸರ್.
ನೂರು ಕೋಟಿ ಒಡೆಯರ ಮಕ್ಕಳ ಮದುವೆ- ಸಂಭ್ರಮಗಳಲ್ಲಿ ಡ್ಯಾನ್ಸ್ ಮಾಡೋ ನಿಮ್ಮಗಳ ಸಿನಿಮಾಗಳನ್ನು 100
ರುಪಾಯಿ ಕೊಟ್ಟು ನೋಡಿ ನಿಮ್ಮ ಸಿನ್ಮಾ ಸ್ಕ್ರೀನ್ ಗಳ ಮುಂದೆ ಡ್ಯಾನ್ಸ್ ಮಾಡಕ್ಕೆ ನಿಮಗೇನು ಬೇಸರ ಇಲ್ಲ “ಪುಟ್ನಂಜ” ಸರ್.
ಯಾಕೆಂದರೆ ಕಲೆ, ಸಾಹಿತ್ಯ, ಭಾಷೆಯನ್ನು ನಮ್ಮ ದುಡಿಯುವಷ್ಟೇ ಪ್ರೀತಿ-ಅಭಿಮಾನದಿಂದ ನೋಡಿ ಆನಂದಿಸುವುದನ್ನು ನಾವು ಯಾರಿಂದಲೂ ಹೇಳಿಸಿಕೊಳ್ಳಲ್ಲ. ಆದರೂ 100 ರುಪಾಯಿ ಕೊಟ್ಟು ಸಿನಿಮಾ ನೋಡೋ ನಮ್ಗೆ ನೀವೇನ್ ಕೊಡ್ತಿದ್ದೀರಿ
ಂತ ಕೇಳೋದು ತಪ್ಪಾ ಕ್ರೇಜಿಸ್ಟಾರ್ ಸರ್.
ಕೊನೆಗೂ ನಿಮ್ಮಲ್ಲಿ ನನ್ನದೊಂದು ವಿನಂತಿ… ನಿಮ್ಮ ಆ ಮಾತುಗಳನ್ನು ನಾನು ತಪ್ಪಾಗಿ ಗ್ರಹಿಸಿದ್ದರೆ ಅಥವಾ ಅರ್ಥೈಸಿಕೊಂಡಿದ್ದರೆ
ಕ್ಷಮಿಸಿ.
ಇನ್ನೊಂದು ವಿಚಾರ ಸಾರ್…. ‘ವಲವಾರ’ ಅಂತ ಒಂದು ಸಿನಿಮಾ ಬಂದಿದೆ. ಆ ಚಿತ್ರವನ್ನು ನೋಡಿದವರೆಲ್ಲ ತುಂಬಾ ಭಾವುಕರಾಗಿ,
ಮೆಚ್ಚಿ, ಖುಷಿಯಾಗಿ, ಮನಬಿಚ್ಚಿ ಮಾತನಾಡುತ್ತಿದ್ದಾರೆ. ನಿಮ್ಮದೇ ಕ್ಷೇತ್ರದ ಕವಿರಾಜ್ ಎನ್ನುವ
ಅಪ್ಪಟ ಬರಹದ ಪ್ರತಿಭೆ ಈ ಚಿತ್ರಕ್ಕೆ ತಮ್ಮ ಸ್ವಂತ ಹಣ ಕೊಟ್ಟು ಟಿಕೆಟ್ ಗಳನ್ನು ಬುಕ್ ಮಾಡಿಸಿ
ಪ್ರೇಕ್ಷಕರು ಆ ಚಿತ್ರ ನೋಡುವಂತೆ ಮಾಡುತ್ತಿದ್ದಾರೆ. ಇವರ ಜೊತೆಗೆ ವೀರಕಪುತ್ರ ಶ್ರೀನಿವಾಸ್
ಸೇರಿಕೊಂಡಿದ್ದಾರೆ. ಈ ವೀರಕಪುತ್ರ ಶ್ರೀನಿವಾಸ್ ಅವರು ನಿಮಗೆ ಗೊತ್ತಿದ್ದಾರೋ, ಇಲ್ಲವೋ ನನಗೆ
ತಿಳಿಯದು. ಅವರು ವೀರಲೋಕ ಎನ್ನುವ ಪುಸ್ತಕ ಪ್ರಕಾಶನ ಕಟ್ಟಿದ್ದಾರೆ. ಅವರ ಪ್ರಕಾಶನದ ಪುಸ್ತಕ
ಬಿಡುಗಡೆಗೆ ಹೋಗೋದು ಇರಲಿ, ಆ ಪುಸ್ತಕಗಳನ್ನು ಚಿತ್ರರಂಗದ ಎಷ್ಟು ಮಂದಿ ಕೊಂಡು ಓದಿದ್ದಾರೋ ನಾ
ಕಾಣೆ! ಆದರೂ ಆ ವ್ಯಕ್ತಿ, ವಲವಾರ ಸಿನಿಮಾ ನೋಡುವವರಿಗೆ ನಾನು ಟಿಕೆಟ್
ಕೊಡಿಸುತ್ತೇನೆ, ಸ್ಪಾನ್ಸರ್ ಮಾಡಿಸುತ್ತೇನೆ ಎಂದೇಳಿ ಆ ಚಿತ್ರದ ಪ್ರದರ್ಶನಕ್ಕೆ ಬೆಂಗಾವಲಾಗಿ
ನಿಂತಿದ್ದಾರೆ. ಹಾಗಂತ ವೀರಕಪುತ್ರ ಶ್ರೀನಿವಾಸ್ ನಿರ್ಮಾಪಕ, ನಿರ್ದೇಶಕ ಅಲ್ಲ. ನೋಡಕ್ಕೆ
ಹೀರೋನಷ್ಟೇ ಲಕ್ಷಣವಾಗಿದ್ದರೂ ನಟಿಸೋ ಯಾವ ಪ್ಲಾನು ಅವರಿಗೆ ಇಲ್ಲ. ಆದರೂ ಒಂದು ಕನ್ನಡ ಚಿತ್ರವನ್ನು
ಥಿಯೇಟರ್ ನಲ್ಲಿ ಉಳಿಸಿಕೊಳ್ಳುವ ಸಾಹಸಕ್ಕೆ ಜೊತೆಯಾಗಿದ್ದಾರೆ. ಚಿತ್ರರಂಗದ ಒಳಗೆ ಮತ್ತು ಹೊರಗೆ
ಇಂಥ ಸಿನಿಕರ್ಮಿಗಳು, ಪ್ರೇಮಿಗಳು, ಆಸಕ್ತರು ತುಂಬಾ ಮಂದಿ ಇದ್ದಾರೆ. ಅವರನ್ನೊಮ್ಮೆ ಭೇಟಿಯಾಗಿ,
ಮಾತನಾಡಿ ನೀವೇ ಹೇಳಿದಂತೆ ಒಳ್ಳೆಯ ಚಿತ್ರಗಳನ್ನು ಜನರಿಗೆ ತಲುಪಿಸಕ್ಕೆ ಏನಾದರು ಐಡಿಯಾ ಮಾಡಿ.
ನಿಮ್ಮ ಮೇಲೆ ನನಗೆ ಆ ನಂಬಿಕೆ ಇದೆ ಅಂತಲೇ ಈ ಮಾತು ಹೇಳುತ್ತಿರುವೆ.
ಓ ಸಾರಿ… ಹೇಳೋದು ಮರೆತೆ ಅಣ್ಣ . “ವಿಶ್ವ ಕೆಂಪು ಪುಸ್ತಕದ ದಿನದ ಶುಭಾಶಯಗಳು”. ಕೆಂಪು ಪುಸ್ತಕ ಅಂದರೆ ಕಮ್ಯೂನಿಸ್ಟ್ ಪ್ರಣಾಳಿಕೆ. ಇದು ಪ್ರಕಟಣೆ
ಆಗಿದ್ದು ಫೆಬ್ರವರಿ 22, 1848ರಲ್ಲಿ.
ಕಮ್ಯೂನಿಸ್ಟ್ ಅಂದರೆ ಸುತ್ತಿಗೆ, ಕುಡುಗೋಲು ಇರುವ ಕೆಂಪು ಬಾವುಟ ಹಿಡಿಯೋ ಪಕ್ಷದವರ ಪುಸ್ತಕ ಅಂತ
ಮಾತ್ರ ನೋಡಬೇಡಿ. ಸ್ವಂತ ಶ್ರಮದ ದುಡಿಮೆ, ಸ್ವಂತ ಬೆವರಿನ ಆದಾಯದ ಮೇಲೆ ಬದುಕುವ ಪ್ರತಿಯೊಬ್ಬರ
ಆತ್ಮಾಭಿಮಾನದ ಗೈಡು. ನೀವು ಕೂಡ ನಮ್ಮ ಹಾಗೆ ಬೆವರು ಸುರಿಸಿ ದುಡಿಯೋ ಜನ ಅಂತ ವಿಷ್ ಮಾಡಿದೆ
ಸರ್. ಮತ್ತೊಮ್ಮೆ “ವಿಶ್ವ ಕೆಂಪು ಪುಸ್ತಕದ ದಿನದ ಶುಭಾಶಯಗಳು”.







































