ಬಾಲಿವುಡ್‌ನ ‘ಕ್ವೀನ್’ ಹಾಗೂ ಈಗ ರಾಜಕೀಯ ರಂಗದಲ್ಲೂ ಸಕ್ರಿಯವಾಗಿರುವ ಕಂಗನಾ ರಣಾವತ್ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾಳೆ. ಈ ಬಾರಿ ಈಕೆ ಸುದ್ದಿಯಲ್ಲಿರುವುದು ತನ್ನ ಯಾವುದೇ ವಿವಾದಾತ್ಮಕ ಹೇಳಿಕೆಗಾಗಿ ಅಲ್ಲ, ಬದಲಾಗಿ ತನ್ನ ಕೈಬೆರಳನ್ನು ಅಲಂಕರಿಸಿರುವ ಧಗಧಗಿಸುವ ವಜ್ರದ ಉಂಗುರಕ್ಕಾಗಿ!

ಇತ್ತೀಚೆಗಷ್ಟೇ ಕಂಗನಾ ಸೀರೆಯಲ್ಲಿ ಮಿಂಚುತ್ತಿರುವ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ. ಎಲಗಂಟ್ ಲುಕ್‌ನಲ್ಲಿ ಕಂಗನಾ ಮಿರಮಿರ ಮಿಂಚುತ್ತಿರುವುದನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ಎಲ್ಲರ ಕಣ್ಣು ನೆಟ್ಟಿರುವುದು ಆಕೆಯ ಕೈಬೆರಳಿನ ಮೇಲಿರುವ ಆ ದೊಡ್ಡ ವಜ್ರದ ಉಂಗುರದ ಮೇಲೆ. ಈ ಉಂಗುರವನ್ನು ಕಂಡ ಅಭಿಮಾನಿಗಳು ಆಕೆಗೆ ನಿಶ್ಚಿತಾರ್ಥವಾಗಿದೆಯೇ ಎಂಬ ಗುಮಾನಿ ವ್ಯಕ್ತಪಡಿಸುತ್ತಿದ್ದಾರೆ. “ನಮ್ಮ ಜೀಜು ಖಂಡಿತವಾಗಿಯೂ ಗುಜರಾತಿಯೇ ಇರಬೇಕು… ಈಗಲಾದರೂ ವಿಷಯವನ್ನು ಅಧಿಕೃತವಾಗಿ ಅನೌನ್ಸ್ ಮಾಡು” ಎಂದು ನೆಟ್ಟಿಗನೊಬ್ಬ ಟ್ವೀಟ್ ಮಾಡುವ ಮೂಲಕ ವದಂತಿಗಳಿಗೆ ತುಪ್ಪ ಸುರಿದಿದ್ದಾನೆ.

ಆದರೆ, ಈ ಉಂಗುರ ಕೇವಲ ನಿಶ್ಚಿತಾರ್ಥದ ಸಂಕೇತವೇ ಎಂಬ ಪ್ರಶ್ನೆಯೂ ಎದ್ದಿದೆ. ರೆಡ್ಡಿಟ್‌ನಂತಹ ವೇದಿಕೆಗಳಲ್ಲಿ ಹಲವರು ಈ ವದಂತಿಯನ್ನು ತಳ್ಳಿಹಾಕಿದ್ದಾರೆ. “ಕಂಗನಾ ಅಂತಹ ಸ್ವಾವಲಂಬಿ ಮತ್ತು ಸಾಧಕಿ ತನಗಾಗಿ ತಾನೇ ವಜ್ರದ ಉಂಗುರವನ್ನು ಖರೀದಿಸಲು ಸಾಧ್ಯವಿಲ್ಲವೇ? ಪ್ರತಿಯೊಂದನ್ನೂ ಮದುವೆ ಅಥವಾ ನಿಶ್ಚಿತಾರ್ಥಕ್ಕೆ ಜೋಡಿಸುವುದು ಬೇಡ” ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ. “ಒಂದು ವೇಳೆ ನಿಶ್ಚಿತಾರ್ಥವಾಗಿದ್ದರೆ ಸಂತೋಷವೇ, ಆದರೆ ಈಕೆ ತನಗಾಗಿ ತಾನೇ ಉಂಗುರ ಕೊಂಡುಕೊಳ್ಳುವಷ್ಟು ಸಮರ್ಥಳಿದ್ದಾಳೆ” ಎಂದು ಅಭಿಮಾನಿಯೊಬ್ಬ ಕಮೆಂಟ್ ಮಾಡಿದ್ದಾನೆ.

ಸದ್ಯಕ್ಕೆ ಕಂಗನಾ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆಕೆ ಮೌನ ಮುರಿಯುವವರೆಗೂ ಆ ವಜ್ರದ ಉಂಗುರ ಕೇವಲ ಒಂದು ಆಭರಣವೋ ಅಥವಾ ಆಕೆಯ ಜೀವನದ ಹೊಸ ಅಧ್ಯಾಯದ ಮುನ್ನುಡಿಯೋ ಎಂಬುದು ಕುತೂಹಲವಾಗಿಯೇ ಉಳಿದಿದೆ. ತನ್ನ ವೈಯಕ್ತಿಕ ವಿಚಾರವಿರಲಿ ಅಥವಾ ಫ್ಯಾಷನ್ ಸ್ಟೇಟ್‌ಮೆಂಟ್ ಇರಲಿ, ಒಟ್ಟಿನಲ್ಲಿ ಲೈಮ್‌ಲೈಟ್‌ನಲ್ಲಿ ಹೇಗೆ ಇರಬೇಕು ಎಂಬುದು ಈಕೆಗೆ ಚೆನ್ನಾಗಿಯೇ ಗೊತ್ತಿದೆ.











































