ಮಾರಿಗೆ ದಾರಿ’ ಚಿತ್ರದ ತೊಂಬತ್ತು ಸೆಕೆಂಡ್ ಟೀಸರ್‌ದಲ್ಲಿ ಸಿನಿಮಾದ ಮೊದಲ ನೋಟದ ಗ್ಲಿಂಪ್ಸ್ ತೋರಿಸಿದೆ. ಕಥೆಯ ಬಗ್ಗೆ ಹೆಚ್ಚು ಸುಳಿವನ್ನು ನೀಡದೆ, ಕೆಲವೊಂದು ತುಣುಕುಗಳನ್ನು ಹೊರಬಿಟ್ಟು ಕುತೂಹಲ ಕಾಯ್ದಿರಿಸಿದೆ. ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಟೀಸರ್ ವೈರಲ್ ಆಗಿರುವುದು ತಂಡಕ್ಕೆ ಸಂತಸ ತಂದಿದೆ. ಬೆಂಗಳೂರು ಮೂಲದ ಅಗಸ್ತ್ಯ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ನಿರ್ದೇಶನ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ರಾಧ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ರಾಧ ಬಂಡವಾಳ ಹೂಡಿದ್ದಾರೆ. ಉದ್ಯಮಿ ಚೇತನ್‌ಚಂದ್ರ ಮತ್ತು ಸತೀಶ್ ಕೃಷ್ಣ ಶೆಟ್ಟಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ’ಮಾರಿಗೆ ದಾರಿ’ ಒಂದು ಕಲ್ಟ್, ಕ್ಲಾಸಿಕ್ ಹಾಗೂ ಭಾವನೆಗಳನ್ನು ತುಂಬಿಕೊಂಡಿರುವ ಕಚ್ಚಾ ಅಂಶಗಳನ್ನು ಒಳಗೊಂಡಿದೆ. ಇಷ್ಟು ಮಾತ್ರ ಹೇಳಬಹುದು. ಸದ್ಯಕ್ಕೆ ನಿರೂಪಣೆ ಮುಚ್ಚಿಡಲಾಗಿದೆ. ಟೀಸರ್ ನೋಡಿದವರು ಚೆನ್ನಾಗಿ ಮೂಡಿಬಂದಿದೆ. ಯಾವಾಗ ಬಿಡುಗಡೆ ಅಂತ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಾಹಿತಿ ನೀಡಲಾಗುವುದೆಂದು ಅಗಸ್ತ್ಯ ಹೇಳಿಕೊಂಡಿದ್ದಾರೆ.

ಐದಾರು ಸಿನಿಮಾಗಳಲ್ಲಿ ನಟಿಸಿ, ಸದ್ಯ ’ಲಕ್ಷೀ ನಿವಾಸ’ ಧಾರವಾಹಿಯಲ್ಲಿ ಬ್ಯುಸಿ ಇರುವ ಮಹಾಲಕ್ಷೀ ನಾಯಕಿ. ಉಳಿದಂತೆ ಕಾಕ್ರೋಚ್ ಸುಧಿ, ಬಲರಾಜವಾಡಿ, ಬೆನಕ ನಂಜಪ್ಪ, ವರ್ಧನ್, ಪ್ರದೀಪ್‌ಪೂಜಾರಿ, ಮಂಡ್ಯ ಸ್ಟಾರ್ ಅನಂತಕುಮಾರ್, ತಾರಕ ರಾಮ್ ಬಣ್ಣ ಹಚ್ಚಿದ್ದಾರೆ.

ಕಿನ್ನಾಳ್‌ರಾಜ್-ಪ್ರಮೋದ್‌ಮರವಂತೆ-ತ್ರಿಲೋಕ ತ್ರಿವಿಕ್ರಮ ಸಾಹಿತ್ಯದ ನಾಲ್ಕು ಗೀತೆಗಳಿಗೆ ರಿಯೋಆಂಟೋನಿ ಸಂಗೀತ ಸಂಯೋಜಿಸಿದ್ದಾರೆ. ಜಗದೀಶ್‌ಗೌಡ ಛಾಯಾಗ್ರಹಣ ಮತ್ತು ಸಂಕಲನ, ಸಾಹಸ ಸೈಕ್ ಸೂರಿ ಅವರದಾಗಿದೆ. ವಾರಾಣಾಸಿ, ಬೆಂಗಳೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಮಡಕೇರಿ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೆ ಚಿತ್ರವು ಸೆನ್ಸಾರ್ ಅಂಗಳಕ್ಕೆ ಹೋಗಲಿದೆ.











































