ಗಾಂಧಿನಗರದ ಗಲ್ಲಿಗಳಲ್ಲಿ ಒಂದು ಕಾಲಕ್ಕೆ ಆತನದ್ದೇ ಪಾರುಪತ್ಯ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರಳಿನಂತೆ ಇರುತ್ತಿದ್ದ ಆತ, ಡಿ-ಬಾಸ್ ಆಪ್ತ ವಲಯದ ‘ಮಾಸ್ಟರ್ ಮೈಂಡ್’ ಎಂದೇ ಖ್ಯಾತನಾಗಿದ್ದ ಮಲ್ಲಿಕಾರ್ಜುನ ಸಂಕನಗೌಡರ್ ಅಲಿಯಾಸ್ ಮಲ್ಲಿ. ಸುಮಾರು ಏಳು ವರ್ಷಗಳ ಹಿಂದೆ ಹಣದ ಅವ್ಯವಹಾರ, ದೋಖಾ ಮತ್ತು ಸೆಲೆಬ್ರಿಟಿಗಳ ನಡುವಿನ ಕಿತ್ತಾಟದ ಸುಳಿಯಲ್ಲಿ ಸಿಲುಕಿ ಏಕಾಏಕಿ ನಾಪತ್ತೆಯಾಗಿದ್ದ ಈ ಭೂಪ ಈಗ ಸದ್ದಿಲ್ಲದೆ ಪ್ರತ್ಯಕ್ಷನಾಗುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾನೆ.

ಸುಮಾರು ಹತ್ತೆನ್ನರಡು ಕೋಟಿ ರೂಪಾಯಿಗಳ ಹಣಕಾಸಿನ ಅವ್ಯವಹಾರದ ಆರೋಪ ಹೊತ್ತು, ದರ್ಶನ್ ಆಪ್ತರಿಗೆಲ್ಲ ನಾಮ ಹಾಕಿ ಗಾಯಬ್ ಆಗಿದ್ದ ಮಲ್ಲು ಸ್ಟೋರಿ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಅಂದು ‘ಸಿನಿಬಜ್’ ಮಲ್ಲಿ ನಾಪತ್ತೆಯಾದ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದಾಗ ಅದೆಷ್ಟೋ ಮಂದಿ ಹುಬ್ಬೇರಿಸಿದ್ದರು. ಆದರೆ ಕಾಲಚಕ್ರ ಉರುಳಿದಂತೆ ಆ ಸುದ್ದಿ ಅಕ್ಷರಶಃ ಸತ್ಯ ಎಂಬುದು ಸಾಬೀತಾಗಿತ್ತು. ಇತ್ತೀಚೆಗೆ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾದಾಗಲೂ ಪೊಲೀಸರು ಮಲ್ಲಿನ ಹಳೇ ಪ್ರಕರಣವನ್ನು ಕೆದಕಿದ್ದರು. “ಮಲ್ಲಿ ಸತ್ತುಹೋಗಿರಬಹುದು, ದರ್ಶನ್ ಆತನನ್ನು ಮುಗಿಸಿ ತೋಟದ ಮನೆಯಲ್ಲಿ ಹೂತು ಹಾಕಿರಬಹುದು” ಎಂಬ ಗಂಭೀರ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದವು. ಆದರೆ ಪೊಲೀಸರ ವಿಚಾರಣೆ ವೇಳೆ ದರ್ಶನ್ ಮಾತ್ರ “ಅವನು ಎಲ್ಲೂ ಹೋಗಿಲ್ಲ, ಇದ್ದಾನೆ. ಅವನ ಬಗ್ಗೆ ಹೆಚ್ಚು ಪ್ರಶ್ನೆ ಮಾಡಬೇಡಿ” ಎಂದು ಮಾರ್ಮಿಕವಾಗಿ ಉತ್ತರಿಸುವ ಮೂಲಕ ಮಲ್ಲು ರಹಸ್ಯವನ್ನು ಅತೀ ಆಪ್ತವಾಗಿ ಕಾಪಾಡಿಕೊಂಡಿದ್ದರು.
ಮಲ್ಲಿಕಾರ್ಜುನನ ಈ ಪಲಾಯನ ಪರ್ವಕ್ಕೆ ಮುನ್ನುಡಿ ಬರೆದಿದ್ದು ಅರ್ಜುನ್ ಸರ್ಜಾ ಅವರ ‘ಪ್ರೇಮ ಬರಹ’ ಚಿತ್ರ. ತೂಗುದೀಪ ಸಂಸ್ಥೆಯ ಮೂಲಕ ಚಿತ್ರ ವಿತರಣೆಯ ಜವಾಬ್ದಾರಿ ಹೊತ್ತಿದ್ದ ಮಲ್ಲಿ, ಸಿನಿಮಾ ಗಳಿಸಿದ ಒಂದು ಕೋಟಿಗೂ ಅಧಿಕ ಮೊತ್ತದ ಲೆಕ್ಕ ನೀಡದೆ ಕೈಕೊಟ್ಟಿದ್ದ. ಲೆಕ್ಕಾಚಾರದಲ್ಲಿ ಪಕ್ಕಾ ಇದ್ದ ಆಕ್ಷನ್ ಕಿಂಗ್ ಸರ್ಜಾ ಈ ಮೋಸವನ್ನು ಹಿಡಿದು ತರಾಟೆಗೆ ತೆಗೆದುಕೊಂಡಾಗ ಮಲ್ಲಿಗೆ ಭೂಮಿ ಬಾಯ್ಬಿಟ್ಟರೆ ಸಾಕು ಎನ್ನುವಂತಾಗಿತ್ತು. ಹಳೇ ಸಾಲ ತೀರಿಸಲು ಹೊಸ ಸಾಲ, ಅಲ್ಲಿಂದ ಇಲ್ಲಿಗೆ ಹಣ ವರ್ಗಾಯಿಸಿ ಹೈರಾಣಾಗಿದ್ದ ಮಲ್ಲಿಗೆ ಅರ್ಜುನ್ ಸರ್ಜಾ ಅವರಿಗೆ ಉತ್ತರಿಸಲು ದಾರಿಯೇ ಇರಲಿಲ್ಲ. ಈ ಹತಾಶೆಯೇ ಆತನನ್ನು ಅಜ್ಞಾತವಾಸಕ್ಕೆ ತಳ್ಳಿತ್ತು.
ಕಳೆದ ಎಂಟು ವರ್ಷಗಳಲ್ಲಿ ಮಲ್ಲಿಯ ಹುಡುಕಾಟಕ್ಕೆ ಹಣ ಕಳೆದುಕೊಂಡವರು ಹತ್ತಾರು ಹಾದಿ ತುಳಿದಿದ್ದರು. ಫೈನಾನ್ಷಿಯರ್ ಚಾಮರಾಜಪೇಟೆ ವಾಸು ನಿರಂತರವಾಗಿ ಜಾಲ ಬೀಸಿದ್ದದ್ದರು. ನಿರ್ದೇಶಕರಾದ ದಿನಕರ್ ಮತ್ತು ಚಿಂತನ್ ಅವರು ಉತ್ತರ ಕರ್ನಾಟಕದಲ್ಲಿರುವ ಮಲ್ಲಿನ ಹುಟ್ಟೂರಿಗೂ ಹೋಗಿ ತಲಾಶ್ ನಡೆಸಿದ್ದರು. ಆದರೆ ಅಲ್ಲಿ ಆತನ ಮನೆಯ ಕಡು ಬಡತನದ ಸ್ಥಿತಿಯನ್ನು ಕಂಡು, ಹುಡುಕಲು ಹೋದವರೇ ಮರುಗಿ ತಮ್ಮಲ್ಲಿದ್ದ ಹಣ ಕೊಟ್ಟು ಬರುವಂತಾಗಿತ್ತು. ಮಲ್ಲಿ ಎಲ್ಲಿಗೆ ಹೋದ, ಯಾರ ಆಶ್ರಯದಲ್ಲಿದ್ದಾನೆ ಎಂಬುದು ಕೇವಲ ದರ್ಶನ್ ಅವರಿಗೆ ಮಾತ್ರ ತಿಳಿದ ಗುಟ್ಟಾಗಿತ್ತು.
ಆದರೆ ಈಗ ಹೊರಬಿದ್ದಿರುವ ಲೇಟೆಸ್ಟ್ ಮಾಹಿತಿ ಇಡೀ ಪ್ರಕರಣಕ್ಕೆ ರೋಚಕ ತಿರುವು ನೀಡಿದೆ. ಇಷ್ಟು ದಿನಗಳ ಕಾಲ ಮೌನವಾಗಿ ಅಜ್ಞಾತವಾಸ ಅನುಭವಿಸಿದ ಮಲ್ಲಿ, ಈಗ ರವಿಶಂಕರ್ ಗುರೂಜಿಯವರ ಆಶ್ರಮಕ್ಕೆ ಹೋಗಿ ತನ್ನ ‘ಪಾಪ ನಿವೇದನೆ’ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ತನ್ನಿಂದ ಹಣ ಕಳೆದುಕೊಂಡವರ ಆಕ್ರೋಶ ತಣ್ಣಗಾಗಿದೆಯೇ ಅಥವಾ ತನ್ನ ಯಜಮಾನ ದರ್ಶನ್ ಜೈಲಿನಲ್ಲಿರುವ ಈ ಹೊತ್ತಿನಲ್ಲಿ ತಾನು ಹೊರಬರುವುದು ಸೇಫು ಎಂಬ ಲೆಕ್ಕಾಚಾರ ಆತನದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಏಳು ವರ್ಷಗಳ ಕಾಲದ ‘ಮಲ್ಲಿ ನಾಪತ್ತೆ’ ಪ್ರಕರಣಕ್ಕೆ ಈಗ ಮರುಜೀವ ಬಂದಿದ್ದು, ಈ ‘ಮಾಸ್ಟರ್ ಮೈಂಡ್’ ಬಾಯ್ಬಿಡುವ ಸತ್ಯಗಳಿಗಾಗಿ ಗಾಂಧಿನಗರ ಕಾತರದಿಂದ ಕಾಯುತ್ತಿದೆ.
(ಈ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಿ ನಿಮ್ಮ CINIBUZZನಲ್ಲಿ)










































