| ಗಿರೀಶ್ ಕಾರ್ನಾಡರನ್ನು ಹೇಗೆ ಗ್ರಹಿಸಬೇಕು ಎಂಬುದೇ ಕನ್ನಡ ವಿಮರ್ಶಕರಿಗೆ ಪ್ರಶ್ನೆಯಾಗಿದೆ. ಏಕೆಂದರೆ ಅವರು ಅರ್ಧ ಶತಮಾನದ ಕಾಲ ಕನ್ನಡ ರಂಗಭೂಮಿಯಲ್ಲಿ ವಿಜೃಂಭಿಸಿದ ಕೈಲಾಸಂ-ಶ್ರೀರಂಗರ ವಾಸ್ತವವಾದಿ ಸಂಪ್ರದಾಯಕ್ಕೂ ಅವರು ಸೇರಿಲ್ಲ. ಹಾಗೆಯೇ ಐವತ್ತರ ದಶಕದಲ್ಲಿ ಸಾಕಷ್ಟು ಯಶಸ್ಸು ಗಳಿಸಿ ಪ್ರಭಾವಿಯಾಗಿದ್ದ ‘ನವ್ಯ’ ಸಂಪ್ರದಾಯಕ್ಕೂ ಅವರು ಸೇರಿಲ್ಲ. ವಾಸ್ತವವಾದಿ ಪರಂಪರೆಯ ಕಾಲದಲ್ಲಿಯೂ ತನ್ನತನವನ್ನು ಹೇಗೋ ಉಳಿಸಿಕೊಂಡಿದ್ದ ವೃತ್ತಿಪರ(ಕಂಪನಿ) ನಾಟಕ ಪರಂಪರೆಗೂ ಅವರು ಹೊರತಾಗಿದ್ದಾರೆ. ಆದರೆ ಇವೆಲ್ಲಾ ಪರಂಪರೆಗಳ ಕೆಲವಂಶಗಳನ್ನು ಅವರ ನಾಟಕಕಗಳಲ್ಲಿ ನಾವು ಗುರುತಿಸಬಹುದು. ಬ್ರೆಕ್ಟ್ ಮತ್ತು ಆನ್ವಿ (Brecht-Anovilh) ಅವರ ಪ್ರಭಾವ ಅಲ್ಲಲ್ಲಿ ಕಂಡು ಬಂದರೂ ಬ್ರೆಕ್ಟ್‍ನ್ ಎಡಪಂಥೀಯ ಧೋರಣೆಗಳಾಗಲಿ ಆನ್ವಿಯ ನೈರಾಶ್ಯವಾಗಲಿ ಕಾರ್ನಾಡರಲ್ಲಿ ಇಲ್ಲ. ಹಾಗಾದರೆ ಕಾರ್ನಾಡರು ಎಂತಹ ನಾಟಕಕಾರರು.? ಅವರ ನಾಟಕಗಳ ಮೂಲ ಪ್ರೇರಣೆಗಳೇನು.? ಕಾರ್ನಾಡರ ಬೇರುಗಳು ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ಇಲ್ಲವೆಂದು ಆಗಿಂದಾಗ್ಗೆ ಕನ್ನಡ ವಿಮರ್ಶಕರು ಮಂಡಿಸುತ್ತಿದ್ದಾರೆ. ‘ಕಾರ್ನಾಡರದ್ದು ಕೊಂಕಣಿ ಮನೋಧರ್ಮ. ಅವರು ನಿಜವಾದ ಅರ್ಥದಲ್ಲಿ ಕನ್ನಡಿಗರಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಕಾರ್ನಾಡರು ಆಲ್ ಇಂಡಿಯಾ ನಾಟಕಕಾರರೆಂದು ಅವರಲ್ಲಿ ‘ಕನ್ನಡತನ’ ಅಷ್ಟಾಗಿ ಇಲ್ಲವೆಂಬುದು ರಂಗ ನಿರ್ದೇಶಕರುಗಳಾದ ಪ್ರಸನ್ನ, ಅಕ್ಷರ ಹಾಗೂ ವಿಮರ್ಶಕರಾದ ಚಂಪಾ ಮುಂತಾದವರ ಅಭಿಪ್ರಾಯ.

“ಗಿರೀಶರು…..ಎಲ್ಲೋ ಕನ್ನಡದ ಜಾಯಮಾನದಿಂದ ಹೊರಗೆ ಉಳಿದುಬಿಡುತ್ತಾರೆ…ಇದು ಬರೀ ವ್ಯಕ್ತಿಯ ಸಮಸ್ಯೆ ಮಾತ್ರ ಅಲ್ಲ. ಇದು ಅವರ ಕೃತಿಯ ಸಮಸ್ಯೆಯೂ ಹೌದು” ಎಂದು ರಂಗ ನಿರ್ದೇಶಕ ಪ್ರಸನ್ನ ಅವರ ಅಭಿಮತವಾಗಿದೆ. ಅಂತೆಯೇ ಲಂಕೇಶರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ “…….ಈತ ಇದನ್ನೆಲ್ಲಾ ಮಂಗೋಲಿಯಾದಲ್ಲಿ ಮಾಡಿದ್ದರೂ ವ್ಯತ್ಯಾಸವಿರುತ್ತಿರಲಿಲ್ಲ; ಅಷ್ಟಿದೆ ಇವರ ಕನ್ನಡದ ಬೆಸುಗೆ” ಎಂದು ತೀರ್ಮಾನಿಸುತ್ತಾರೆ. ಕೆ.ವಿ. ಅಕ್ಷರ ಹಯವದನ ನಾಟಕ ಕುರಿತು ಮಾತನಾಡುವಾಗ “ಈ ನಾಟಕ ಎಲ್ಲ ಜಾನಪದ ಅಂಶಗಳನ್ನೂ ಆಯ್ಕೆಮಾಡಿ ಅಳವಡಿಸಿದ ದೃಷ್ಟಿ ಪಾಶ್ಚಾತ್ಯ ಧೋರಣೆಯುಳ್ಳದ್ದು….. ನಮ್ಮ ಸಾಂಪ್ರದಾಯಿಕ ರಂಗಭೂಮಿಯನ್ನು ಹೀಗೆ ಪಾಶ್ಚಾತ್ಯ ಕಣ್ಣುಗಳಿಂದ ನೋಡಿದ ಕಾರಣಕ್ಕಾಗಿಯೇ ಈ ಒಟ್ಟು ಕಟ್ಟಡಕ್ಕೆ ಒಂದು ‘ಫಾರಿನ್ ರಿಟರ್ನ್ಡ್ ಕಥೆಯೇ ಅಗತ್ಯವಾಗಿರಬೇಕು”. ಇಷ್ಟಲ್ಲದೆ ಚಂಪಾ ಸಂಕ್ರಮಣದ ಒಂದು ಸಂಚಿಕೆಯಲ್ಲಿ “ಕಾರ್ನಾಡರ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕು” ಎಂದು ಗೇಲಿ ಮಾಡಿದ್ದನ್ನು ನೆನಪಿಸಬಹುದು. ಈ ಎಲ್ಲಾ ನಿಲುವುಗಳು ಸಮಾನವಾಗಿ ತೋರಿಸುವ ಒಂದು ಅಂಶವೆಂದರೆ ಕಾರ್ನಾಡರ ನಾಟಕಗಳ ಒಳಗೆ ಅವಿತಿರುವ ನಾವೀನ್ಯತೆ. ಇನ್ನು ‘ಪರಂಪರೆ’, ‘ಸಾತತ್ಯ’ ಇತ್ಯಾದಿ ಯಾವುವೂ ಸಿದ್ಧ ವಸ್ತುಗಳಲ್ಲ. ಅವುಗಳು ಆಯಾಯ ವಿಮರ್ಶಕನ ಮತ್ತು ಇತಿಹಾಸಕಾರನ ವೈಚಾರಿಕ ಪರಿಪ್ರೇಕ್ಷ್ಯವನ್ನು ಅನುಸರಿಸಿ ಬದಲಾಗುವ ಸಾಪೇಕ್ಷ ರಚನೆಗಳು. ಈ ಸಂದರ್ಭದಲ್ಲಿ ಗ್ರಹಿಸಬಹುದಾದ ಮತ್ತೊಂದು ಸತ್ಯ ಸಂಗತಿ ಎಂದರೆ ಮೇಲೆ ಹೆಸರಿಸಿದ ರಂಗ ನಿರ್ದೇಶಕರ ಹಾಗೂ ವಿಮರ್ಶಕರ ಅಭಿಪ್ರಾಯಗಳನ್ನು ಒಪ್ಪಬೇಕಾದ ವಿಚಾರ ಗಿರೀಶ್ ಕಾರ್ನಾಡರ ಮಾತಿನಿಂದಲೇ ಅರಿವಾಗುತ್ತದೆ.
“ನನ್ನ ತಲೆಮಾರಿನ ಅನಂತಮೂರ್ತಿ, ಲಂಕೇಶ ಅಥವಾ ತೇಜಸ್ವಿ ಕನ್ನಡ ಸಂಸ್ಕೃತಿಯೊಳಗೆ ಇನ್‍ವಾಲ್ವ್ ಆದ ಹಾಗೆ ನಾನು ಆಗಿಲ್ಲ. ಏಕೆ ಎಂದು ನನಗೆ ಗೊತ್ತಿಲ್ಲ ಆಗೋಕೆ ಸಾಧ್ಯವೂ ಆಗಿಲ್ಲ. ಪ್ರಾಯಶಃ ಅನಂತಮೂರ್ತಿ ಲಂಕೇಶ್ ಅವರೆಲ್ಲಾ ಯೂನಿವರ್ಸಿಟಿಗಳಲ್ಲಿ ಕಳೆದರು ಅನ್ನುವುದು ಕಾರಣವಿರಬಹುದು”. ಎಂದು ಅಭಿಪ್ರಾಯಿಸುತ್ತಾರೆ. ಒಟ್ಟಿನಲ್ಲಿ ನಾಟಕ ಕಟ್ಟುವ ಕ್ರಿಯೆಯನ್ನು ಕಟ್ಟಡ ಕಟ್ಟುವ ಕ್ರಿಯೆಗೆ ಹೋಲಿಸುವ ಗಿರೀಶ ಕಾರ್ನಾಡರು ಕನ್ನಡ ನಾಟಕ ಜಗತ್ತಿನಲ್ಲಿ ತಮ್ಮದೇ ನೆಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆನೆ ನಡೆದದ್ದೇ ದಾರಿ ಅನ್ನುವ ಹಾಗೆ ನಾಟಕ ಕ್ಷೇತ್ರದಲ್ಲಿ ನಡೆದ ಅದ್ಬುತ ಪ್ರತಿಭಾವಂತ ಅನ್ನುವುದು ಮಾತ್ರ ಅತಿಶಯೋಕ್ತಿಯಲ್ಲ. |
ಮಾ ನಿಷಾದ :
ಗಿರೀಶ್ ಕಾರ್ನಾಡರು 1963ರಲ್ಲಿಯೇ ಈ ಕಿರುನಾಟಕವನ್ನು ಬರೆದರು. ಆದರೆ ಪುಸ್ತಕ ರೂಪವಾಗಿ ಪ್ರಕಟಗೊಂಡಿದ್ದು 1986ರಲ್ಲಿ. ಇದನ್ನು ಮನೋಹರ ಗ್ರಂಥಮಾಲೆಯವರು 2004ರಲ್ಲಿ ಪ್ರಕಟಿಸಿದರು. ಮಾ ನಿಷಾದ ನಾಟಕದಲ್ಲಿ ಕಾರ್ನಾಡರ ಮುಂದಿನ ಬೆಳವಣೆಗೆಯ ಸೂಚನೆಯನ್ನು ಕಾಣಬಹುದು. ರಾಮನು ತನ್ನ ಮಡದಿಯನ್ನು ಅಗಸನ ಮಾತನ್ನು ಕೇಳಿ ತ್ಯಜಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ ಆ ಒಂದು ತ್ಯಾಗಕ್ಕೆ ಕಾರಣನಾದ ಅಗಸನ ‘ಗತಿ’ ಏನಾಯಿತೆಂಬುದನ್ನು ನಾಟಕವು ಬಿಂಬಿಸುತ್ತದೆ. ರಾಮಾಯಣದಲ್ಲಿ ಲಕ್ಷ್ಮಣನ ಮಡದಿಯ ಗತಿ ಏನಾಯಿತೆಂಬುದು ಹೆಚ್ಚು ವಿವರಣಾತ್ಮಕವಾಗಿ ಇಲ್ಲ. ಆಧುನಿಕ ಕಾಲದಲ್ಲಿ ಆ ಲಕ್ಷ್ಮಣನ ಹೆಂಡತಿಯ ವಿರಹವನ್ನು ಕೇಂದ್ರವಾಗಿಟ್ಟುಗೊಂಡು ಹಲವಾರು ಸಾಹಿತ್ಯ ಕೃತಿಗಳ ರಚನೆಯಾಯಿತು. ಅಂತೆಯೇ ಇಲ್ಲಿ ಸೀತೆಯು ಎರಡನೆಯ ಸಲ ವನವಾಸಕ್ಕೆ ಹೋಗಲು ಕಾರಣವಾದ ಅಗಸನ ಗತಿ ಏನಾಯಿತೆಂಬುದನ್ನು ಕುರಿತು ಈ ನಾಟಕವು ಚಿಂತಿಸುತ್ತದೆ.

ನಾಟಕದಲ್ಲಿ ರಾಮ-ಸೀತೆಯರ ಪ್ರವೇಶವಿಲ್ಲ. ಭರತ ಕಾಣಿಸಿಕೊಳ್ಳುತ್ತಾನೆ. ಆತನಾಡುವ ಮಾತಿನ ಮೇಲೆಯೇ ನಾಟಕದ ಇಡೀ ವ್ಯಾಖ್ಯೆ ನಿಂತಿದೆ ಎನ್ನಿಸುತ್ತದೆ. ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಲು ರಾಮನಿಗೆ ಅಗಸನ ಮಾತಲ್ಲದಿದ್ದರೆ ಇನ್ನಾವುದಾದರೂ ಮಾತು ದೊರೆಯಬಹುದಿತ್ತೆಂಬ ಇಂಗಿತವನ್ನು ಭರತನ ಮಾತುಗಳು ವ್ಯಕ್ತಪಡಿಸುತ್ತವೆ. ಅಂದರೆ ತಾನು ಒಳ್ಳೆಯವನು ಮತ್ತು ನ್ಯಾಯ ನಿಷ್ಠುರನೆನ್ನಿಸಿಕೊಳ್ಳಲು ರಾಮನು ಪ್ರಸಂಗಗಳನ್ನು ಅರಸುತ್ತ ಹೋಗುವಂಥವನು ಮತ್ತು ಅಂಥ ಒಂದು ಪ್ರಸಂಗಕ್ಕೆ ಅಗಸನೊಬ್ಬ ‘ಬಲಿ’ಯಾಗಿದ್ದಾನೆಂಬಂತೆ ನಾಟಕವು ಚಿತ್ರಿತವಾಗಿದೆ.

ನಿಜವಾಗಿಯೂ ಇದೊಂದು ಹೊಸ ದೃಷ್ಟಿಕೋನ. ಏಕೆಂದರೆ ನ್ಯಾಯ ನಿಷ್ಠುರತೆಯ ಹಾದಿಯಲ್ಲಿ ಹಲವರು ಅಮಾಯಕರಾಗಿ ಸಿಕ್ಕಿ ಹಾಕಿಕೊಂಡಾಗ ಅವರ ಸ್ಥಿತಿ ಏನಾಗುತ್ತದೆಂಬುದನ್ನು ರಾಮಾಯಣದ ಕಥಾ ಪ್ರಸಂಗವನ್ನು ಉಪಯೋಗಿಸಿಕೊಂಡು ನಾಟಕವನ್ನು ರಚಿಸಲಾಗಿದೆ. ಮಾ ನಿಷಾದ ಕಾರ್ನಾಡರ canonಗೆ ಸೇರಿಲ್ಲ. ಸ್ವತಃ ನಾಟಕಕಾರರಾಗಿದ್ದವರು ಅದನ್ನು ಅಲಕ್ಷಿಸಿದ್ದಾರೆ. ಆದರೆ, ಅದೊಂದು ಒಳ್ಳೆಯ ನಾಟಕ. ಅವರು ಅಗಸನ ಪಾತ್ರದಲ್ಲಿ ಜೀವ ತುಂಬಿದ್ದಾರಲ್ಲದೆ ಅವನನ್ನು ಆಧುನಿಕ ಸಂವೇದನೆಯ ವಾಹಕನನ್ನಾಗಿ ಪರಿವರ್ತಿಸಿದ್ದಾರೆ. ಅವನ ಸಮಸ್ಯೆಗೆ ಸಾರ್ವಕಾಲಿಕ ಆಯಾಮವೂ ಇದೆ. ಅವರು ಕಲ್ಪಿಸುವ ಅಗಸ-ವಾಲ್ಮೀಕಿ ಮುಖಾಮುಖಿ ಅವರ ಸ್ವಂತದ ಸೃಷ್ಟಿ. ರಾಮಾಯಣದತ್ತ ನೋಡುವ ಹೊಸ ದೃಷ್ಟಿಯೊಂದನ್ನು ಕಾರ್ನಾಡರು ಈ ನಾಟಕದಲ್ಲಿ ಸಾಂಕೇತಿಕವಾಗಿಯಾದರೂ ಸ್ಪಷ್ಟವಾಗಿ ಸೂಚಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಈ ಕೃತಿ ಸೂಕ್ಷ್ಮ ಪರಿಶೀಲನೆಗೆ ಯೋಗ್ಯವಾಗಿದೆ.
| ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. |
|