ಗಿರೀಶ್ ಕಾರ್ನಾಡರ ನಾಟಕಗಳ ಸಮೀಕ್ಷೆ: ಹಯವದನ

Picture of Cinibuzz

Cinibuzz

Bureau Report

ಗಿರೀಶ್ ಕಾರ್ನಾಡರನ್ನು ಹೇಗೆ ಗ್ರಹಿಸಬೇಕು ಎಂಬುದೇ ಕನ್ನಡ ವಿಮರ್ಶಕರಿಗೆ ಪ್ರಶ್ನೆಯಾಗಿದೆ. ಏಕೆಂದರೆ ಅವರು ಅರ್ಧ ಶತಮಾನದ ಕಾಲ ಕನ್ನಡ ರಂಗಭೂಮಿಯಲ್ಲಿ ವಿಜೃಂಭಿಸಿದ ಕೈಲಾಸಂ-ಶ್ರೀರಂಗರ ವಾಸ್ತವವಾದಿ ಸಂಪ್ರದಾಯಕ್ಕೂ ಅವರು ಸೇರಿಲ್ಲ. ಹಾಗೆಯೇ ಐವತ್ತರ ದಶಕದಲ್ಲಿ ಸಾಕಷ್ಟು ಯಶಸ್ಸು ಗಳಿಸಿ ಪ್ರಭಾವಿಯಾಗಿದ್ದ  ‘ನವ್ಯ’ ಸಂಪ್ರದಾಯಕ್ಕೂ ಅವರು ಸೇರಿಲ್ಲ. ವಾಸ್ತವವಾದಿ ಪರಂಪರೆಯ ಕಾಲದಲ್ಲಿಯೂ ತನ್ನತನವನ್ನು ಹೇಗೋ ಉಳಿಸಿಕೊಂಡಿದ್ದ ವೃತ್ತಿಪರ(ಕಂಪನಿ) ನಾಟಕ ಪರಂಪರೆಗೂ ಅವರು ಹೊರತಾಗಿದ್ದಾರೆ. ಆದರೆ ಇವೆಲ್ಲಾ ಪರಂಪರೆಗಳ ಕೆಲವಂಶಗಳನ್ನು ಅವರ ನಾಟಕಕಗಳಲ್ಲಿ ನಾವು ಗುರುತಿಸಬಹುದು.

ಬ್ರೆಕ್ಟ್ ಮತ್ತು ಆನ್ವಿ (Brecht-Anovilh) ಅವರ ಪ್ರಭಾವ ಅಲ್ಲಲ್ಲಿ ಕಂಡು ಬಂದರೂ ಬ್ರೆಕ್ಟ್‍ನ್ ಎಡಪಂಥೀಯ ಧೋರಣೆಗಳಾಗಲಿ ಆನ್ವಿಯ ನೈರಾಶ್ಯವಾಗಲಿ ಕಾರ್ನಾಡರಲ್ಲಿ ಇಲ್ಲ. ಹಾಗಾದರೆ ಕಾರ್ನಾಡರು ಎಂತಹ ನಾಟಕಕಾರರು.? ಅವರ ನಾಟಕಗಳ ಮೂಲ ಪ್ರೇರಣೆಗಳೇನು.? ಕಾರ್ನಾಡರ ಬೇರುಗಳು ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ಇಲ್ಲವೆಂದು  ಆಗಿಂದಾಗ್ಗೆ ಕನ್ನಡ ವಿಮರ್ಶಕರು ಮಂಡಿಸುತ್ತಿದ್ದಾರೆ. ‘ಕಾರ್ನಾಡರದ್ದು ಕೊಂಕಣಿ ಮನೋಧರ್ಮ. ಅವರು ನಿಜವಾದ ಅರ್ಥದಲ್ಲಿ ಕನ್ನಡಿಗರಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಕಾರ್ನಾಡರು ಆಲ್ ಇಂಡಿಯಾ ನಾಟಕಕಾರರೆಂದು ಅವರಲ್ಲಿ ‘ಕನ್ನಡತನ’ ಅಷ್ಟಾಗಿ ಇಲ್ಲವೆಂಬುದು ರಂಗ ನಿರ್ದೇಶಕರುಗಳಾದ ಪ್ರಸನ್ನ, ಅಕ್ಷರ ಹಾಗೂ ವಿಮರ್ಶಕರಾದ ಚಂಪಾ ಮುಂತಾದವರ ಅಭಿಪ್ರಾಯ.

“ಗಿರೀಶರು…..ಎಲ್ಲೋ ಕನ್ನಡದ ಜಾಯಮಾನದಿಂದ ಹೊರಗೆ ಉಳಿದುಬಿಡುತ್ತಾರೆ…ಇದು ಬರೀ ವ್ಯಕ್ತಿಯ ಸಮಸ್ಯೆ ಮಾತ್ರ ಅಲ್ಲ. ಇದು ಅವರ ಕೃತಿಯ ಸಮಸ್ಯೆಯೂ ಹೌದು” ಎಂದು ರಂಗ ನಿರ್ದೇಶಕ ಪ್ರಸನ್ನ ಅವರ ಅಭಿಮತವಾಗಿದೆ. ಅಂತೆಯೇ ಲಂಕೇಶರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ “…….ಈತ ಇದನ್ನೆಲ್ಲಾ ಮಂಗೋಲಿಯಾದಲ್ಲಿ ಮಾಡಿದ್ದರೂ ವ್ಯತ್ಯಾಸವಿರುತ್ತಿರಲಿಲ್ಲ; ಅಷ್ಟಿದೆ ಇವರ ಕನ್ನಡದ ಬೆಸುಗೆ” ಎಂದು ತೀರ್ಮಾನಿಸುತ್ತಾರೆ. ಕೆ.ವಿ. ಅಕ್ಷರ ಹಯವದನ ನಾಟಕ ಕುರಿತು ಮಾತನಾಡುವಾಗ “ಈ ನಾಟಕ ಎಲ್ಲ ಜಾನಪದ ಅಂಶಗಳನ್ನೂ ಆಯ್ಕೆಮಾಡಿ ಅಳವಡಿಸಿದ ದೃಷ್ಟಿ ಪಾಶ್ಚಾತ್ಯ ಧೋರಣೆಯುಳ್ಳದ್ದು….. ನಮ್ಮ ಸಾಂಪ್ರದಾಯಿಕ ರಂಗಭೂಮಿಯನ್ನು ಹೀಗೆ ಪಾಶ್ಚಾತ್ಯ ಕಣ್ಣುಗಳಿಂದ ನೋಡಿದ ಕಾರಣಕ್ಕಾಗಿಯೇ ಈ ಒಟ್ಟು ಕಟ್ಟಡಕ್ಕೆ ಒಂದು ‘ಫಾರಿನ್ ರಿಟರ್ನ್ಡ್ ಕಥೆಯೇ ಅಗತ್ಯವಾಗಿರಬೇಕು”.

ಇಷ್ಟಲ್ಲದೆ ಚಂಪಾ ಸಂಕ್ರಮಣದ ಒಂದು ಸಂಚಿಕೆಯಲ್ಲಿ  “ಕಾರ್ನಾಡರ  ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕು” ಎಂದು ಗೇಲಿ ಮಾಡಿದ್ದನ್ನು ನೆನಪಿಸಬಹುದು. ಈ ಎಲ್ಲಾ ನಿಲುವುಗಳು ಸಮಾನವಾಗಿ ತೋರಿಸುವ ಒಂದು ಅಂಶವೆಂದರೆ ಕಾರ್ನಾಡರ ನಾಟಕಗಳ ಒಳಗೆ ಅವಿತಿರುವ ನಾವೀನ್ಯತೆ. ಇನ್ನು ‘ಪರಂಪರೆ’, ‘ಸಾತತ್ಯ’ ಇತ್ಯಾದಿ ಯಾವುವೂ ಸಿದ್ಧ ವಸ್ತುಗಳಲ್ಲ. ಅವುಗಳು ಆಯಾಯ ವಿಮರ್ಶಕನ ಮತ್ತು ಇತಿಹಾಸಕಾರನ ವೈಚಾರಿಕ ಪರಿಪ್ರೇಕ್ಷ್ಯವನ್ನು ಅನುಸರಿಸಿ ಬದಲಾಗುವ ಸಾಪೇಕ್ಷ ರಚನೆಗಳು. ಈ ಸಂದರ್ಭದಲ್ಲಿ ಗ್ರಹಿಸಬಹುದಾದ ಮತ್ತೊಂದು ಸತ್ಯ ಸಂಗತಿ ಎಂದರೆ ಮೇಲೆ ಹೆಸರಿಸಿದ ರಂಗ ನಿರ್ದೇಶಕರ ಹಾಗೂ ವಿಮರ್ಶಕರ ಅಭಿಪ್ರಾಯಗಳನ್ನು ಒಪ್ಪಬೇಕಾದ ವಿಚಾರ ಗಿರೀಶ್ ಕಾರ್ನಾಡರ ಮಾತಿನಿಂದಲೇ ಅರಿವಾಗುತ್ತದೆ.

“ನನ್ನ ತಲೆಮಾರಿನ ಅನಂತಮೂರ್ತಿ, ಲಂಕೇಶ ಅಥವಾ ತೇಜಸ್ವಿ ಕನ್ನಡ ಸಂಸ್ಕೃತಿಯೊಳಗೆ ಇನ್‍ವಾಲ್ವ್ ಆದ ಹಾಗೆ ನಾನು ಆಗಿಲ್ಲ. ಏಕೆ ಎಂದು ನನಗೆ ಗೊತ್ತಿಲ್ಲ ಆಗೋಕೆ ಸಾಧ್ಯವೂ ಆಗಿಲ್ಲ. ಪ್ರಾಯಶಃ ಅನಂತಮೂರ್ತಿ ಲಂಕೇಶ್  ಅವರೆಲ್ಲಾ  ಯೂನಿವರ್ಸಿಟಿಗಳಲ್ಲಿ ಕಳೆದರು ಅನ್ನುವುದು ಕಾರಣವಿರಬಹುದು”. ಎಂದು ಅಭಿಪ್ರಾಯಿಸುತ್ತಾರೆ. ಒಟ್ಟಿನಲ್ಲಿ ನಾಟಕ ಕಟ್ಟುವ ಕ್ರಿಯೆಯನ್ನು ಕಟ್ಟಡ ಕಟ್ಟುವ ಕ್ರಿಯೆಗೆ ಹೋಲಿಸುವ ಗಿರೀಶ ಕಾರ್ನಾಡರು ಕನ್ನಡ  ನಾಟಕ  ಜಗತ್ತಿನಲ್ಲಿ  ತಮ್ಮದೇ  ನೆಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆನೆ ನಡೆದದ್ದೇ ದಾರಿ ಅನ್ನುವ ಹಾಗೆ ನಾಟಕ ಕ್ಷೇತ್ರದಲ್ಲಿ ನಡೆದ  ಅದ್ಬುತ  ಪ್ರತಿಭಾವಂತ  ಅನ್ನುವುದು  ಮಾತ್ರ ಅತಿಶಯೋಕ್ತಿಯಲ್ಲ.

ಹಯವದನ

ಪೂರ್ಣತ್ವದ   ವಸ್ತುವನ್ನಿಟ್ಟುಕೊಂಡು   ರಚಿತವಾಗಿರುವ ‘ಹಯವದನ’ ಪೂರ್ಣತ್ವದ ಹಂಬಲ ಮನುಷ್ಯ ಸಂಬಂಧಗಳಲ್ಲಿ ತರುವ ದುರಂತ ಪರಿಣಾಮಗಳನ್ನು ಚಿತ್ರಿಸುತ್ತದೆ. ಮನುಷ್ಯ ಎಷ್ಟೇ ಪ್ರಯತ್ನಿಸಿದರೂ ಪೂರ್ಣತ್ವ  ಲಭಿಸದಿರುವುದು  ಒಂದು  ದುರಂತವಾದರೆ  ಅದರ ಅರಸುವಿಕೆಯಲ್ಲಿ ತಲೆ ಮತ್ತು ದೇಹದ ನಡುವೆ ನಡೆಯುವ ಸಂಘರ್ಷ ನಾಟಕಕ್ಕೆ ಇನ್ನೊಂದು ಆಯಾಮವನ್ನು ಒದಗಿಸುತ್ತದೆ. ತಲೆ ಮತ್ತು ದೇಹದ ನಡುವೆ ನಡೆಯುವ ಸಂಘರ್ಷದಲ್ಲಿ ಯಾವಾಗಲೂ ತಲೆಯೇ ಗೆಲ್ಲುತ್ತಾ ಹೋಗುವುದು ನಾಟಕಕ್ಕೆ ಅನೇಕ ತಿರುವುಗಳನ್ನು ಕೊಡುತ್ತದೆ. ಹಾಗೂ ಪೂರ್ಣತ್ವವನ್ನು ಸಾಧಿಸಲು ತೊಡಕುಗಳಾಗಿ ಪರಿಣಮಿಸುತ್ತದೆ. ಎಂದಿನಂತೆ ಕಾರ್ನಾಡರು ತಮ್ಮ ಶೋಧನೆಯಲ್ಲಿ ತೊಡಗಿ ದೇಹ ಮತ್ತು ಮನಸ್ಸಿನ ಗುಣಗಳ ಅರಿವನ್ನು ವಿಸ್ತರಿಸಿಕೊಡುತ್ತಾರೆ. ಪೌರಾಣಿಕ ಕಥೆ, ಜಾನಪದ ರಂಗತಂತ್ರಗಳು, ಆಧುನಿಕ ವೈಚಾರಿಕತೆ ಈ ಮೂರರ ಸಂಯೋಗವೇ ಹಯವದನ ನಾಟಕದ ಯಶಸ್ವಿಗೂ, ಜನಪ್ರಿಯತೆಗೂ ಕಾರಣವಾಗಿದೆ. ನಮ್ಮ ಬೇತಾಳನ ಕಥೆಯೊಂದು ಜರ್ಮನ್ ಲೇಖಕ  ಥಾಮಸ್  ಮಾನ್‍ನಿಂದ  ಪರಿವರ್ತನೆಗೊಂಡ  ರೂಪದಲ್ಲಿ ಕಾರ್ನಾಡರ ನಾಟಕದ ಮುಖ್ಯ ಕಥಾನಕವನ್ನು ಒದಗಿಸಿದೆ

ಪದ್ಮಿನಿ, ದೇವದತ್ತ, ಕಪಿಲರ ಈ ಕಥೆಯನ್ನು ಒಳನಾಟಕವಾಗಿರಿಸಿಕೊಂಡು, ಇವಕ್ಕೆ ಆವರಣ  ಕಲ್ಪಿಸುವ  ಚೌಕಟ್ಟಿನಂತೆ  ಹಯವದನದ  ಕಥಾನಕವನ್ನು ನಾಟ್ಯೀಕರಿಸಲಾಗಿದೆ. ತಲೆ ಅದಲು ಬದಲಾದಾಗ ವ್ಯಕ್ತಿಗಳ ‘ಐಡೆಂಟಿಟಿ’ ಏನಾಗುತ್ತದೆ ಎನ್ನುವ ಒಗಟೇ ಬೇತಾಳನ ಕಥೆಯ ಸ್ವಾರಸ್ಯ ಕೇಂದ್ರವಾಗಿದೆ. ಕಾರ್ನಾಡರ ನಾಟಕದ ಮುಖ್ಯ ಕಾಳಜಿಯೆಂದರೆ ಪೂರ್ಣತ್ವದ ಹಂಬಲ ಹಾಗೂ ಅದಕ್ಕಾಗಿ ನಡೆಸುವ ಸುದೀರ್ಘ ಪ್ರಯತ್ನ. ಈ ಕೇಂದ್ರ ವಸ್ತುವಿನ ಅಂಗವೆಂಬಂತೆಯೇ ತಲೆಗಳು ಅದಲು ಬದಲಾಗುವ ಸಂದರ್ಭ ಪದ್ಮಿನಿಯ ಕಥೆಯಲ್ಲಿ  ಹಾಗೂ  ಹಯವದನದ  ಕಥಾನಕದಲ್ಲಿ  ಚಿತ್ರಿತವಾಗಿದೆ. ಪೂರ್ಣತ್ವದ ವಸ್ತು ಕೆಲವು ವಿಭಿನ್ನ ಸ್ತರಗಳಲ್ಲಿ ಹಯವದನ ನಾಟಕದಲ್ಲಿ ವಿಶ್ಲೇಷಿಸಲ್ಪಟ್ಟಿದೆ.   ಸಂದರ್ಭಕ್ಕೆ   ಅನುಗುಣವಾಗಿ   ಪೂರ್ಣತ್ವದ ಅರ್ಥವ್ಯಾಪ್ತಿಯೂ ಬದಲಾಗುತ್ತ ಹೋಗಿದೆ.

ನಾಟಕದ  ಪ್ರಾರಂಭದಲ್ಲಿ  ವಿಘ್ನ  ನಿವಾರಕ  ಗಣೇಶನನ್ನು ಸ್ತುತಿಸುತ್ತಿರುವಾಗಲೇ ಭಾಗವತನು “ಆ ವಿಘ್ನೇಶ್ವರನೇ ಇಂದಿನ ನಮ್ಮ ನಾಟಕಕ್ಕೆ ಯಶಸ್ಸು ನೀಡಲಿ. ಆತನ ಮಹಾತ್ಮವನ್ನಾದರೂ ವರ್ಣಿಸುವುದು ಹೇಗೆ? ಆನೆಯ ಮುಖ, ಮನುಷ್ಯನ ದೇಹ, ಮುಖದಲ್ಲಿ ಮುರುಕು ದಂತ, ದೇಹದಲ್ಲಿ ಬಿರುಕು ಬಿಟ್ಟ ಉದರ – ಹೇಗೆ ನೋಡಿದರೂ ಅಪೂರ್ಣತೆಗೆ ಸಾಕ್ಷಿಯಾಗಿರುವಂತೆ ಕಾಣುವ ಈ ವಕ್ರತುಂಡನೇ ವಿಘ್ನ ನಿವಾರಕನೂ ಆಗಿರಬೇಕು ಎಂಬುದರ ರಹಸ್ಯವನ್ನಾದರೂ ಹೇಗೆ ಬಿಡಿಸೋಣ? ಬಹುಶಃ ದೇವರ ಪೂರ್ಣತ್ವ ಮನುಷ್ಯ ಕಲ್ಪನೆಗೆ ಒಗ್ಗಲಾರದಂಥದ್ದು ಎಂಬುದನ್ನೇ ಆ ಮಂಗಳಮೂರ್ತಿಯ  ರೂಪ  ಸಂಕೇತಿಸುತ್ತಿರಬಹುದು”  ಎನ್ನುತ್ತಾನೆ. ನಾಟಕದ ಮೊದಲಲ್ಲೆ ಹೀಗೆ ಪರಿಚಯವಾಗುವ ಪೂರ್ಣತೆಯ ಸಮಸ್ಯೆ ನಾಟಕದುದ್ದಕ್ಕೂ  ವಿಭಿನ್ನ  ವ್ಯಾಖ್ಯಾನಗಳೊಂದಿಗೆ  ಮರುಕಳಿಸುತ್ತಲೇ ಹೋಗುತ್ತದೆ. ಕುದುರೆಯ ತಲೆ, ಮನುಷ್ಯನ ದೇಹ ಹಾಗೂ ಮನುಷ್ಯನ ವಾಣಿ   ಹೊಂದಿರುವ   ಹಯವದನ   ಪೂರ್ಣಾಂಗನಾಗಲು  ಹಂಬಲಿಸುವವನು. ಪೂರ್ಣ ಮನುಷ್ಯ ರೂಪ ಗಳಿಸಲೆಂದು ಹತ್ತು ಹಲವು ಪುಣ್ಯಕ್ಷೇತ್ರಗಳಿಗೆ ಹೋಗಿ, ಸಾಧು ಸಂತರನ್ನು ಆಶ್ರಯಿಸಿ, ಸಾರ್ವಜನಿಕ ಸೇವೆಯಲ್ಲಿ ತೊಡಗಿ ಫಲ ಕಾಣದೆ ಹತಾಶನಾದ ಹಯವದನ ಭಾಗವತನ ಸಲಹೆಯಂತೆ ಚಿತ್ರಕೂಟ ಪರ್ವತದ ಕಾಳಿಯ ದರ್ಶನ ಮಾಡುತ್ತಾನೆ. ಪ್ರಾರ್ಥಿಸುವಾಗಿನ   ಅವನ   ಅಸ್ಪಷ್ಟತೆಯಿಂದಲೋ,   ದೇವಿಯ ಅನಾಸಕ್ತಿಯಿಂದಲೋ ಪೂರ್ಣ ಮನುಷ್ಯನಾಗುವ ಬದಲು ಪೂರ್ಣ ಕುದುರೆಯ  ರೂಪ  ಪಡೆಯುತ್ತಾನೆ.  ಈ  ರೂಪಕ್ಕೆ  ಮನುಷ್ಯವಾಣಿ ತಗಲುಹಾಕಿಕೊಂಡದ್ದು  ಮತ್ತೆ  ಅವನನ್ನು  ಕಾಡಿಸುತ್ತದೆ.

ನಾಟಕದ ಕೊನೆಯಲ್ಲಿ ಪದ್ಮಿನಿಯ ಮಗನಿಂದಾಗಿ ಮನುಷ್ಯ ವಾಣಿ ಹೋಗಿ ಕುದುರೆಯ ಹೇಷಾರವ ಗಳಿಸಿ ಪೂರ್ಣ ಕುದುರೆಯಾದಾಗ ಅವನಿಗೆ ಪೂರ್ಣತ್ವದ ಸಮಾಧಾನ ಲಭಿಸುತ್ತದೆ. ಈ ಹಯವದನ ಅರಸಿ, ಗಳಿಸುವುದು ದೇಹ, ತಲೆ, ಧ್ವನಿಗಳಿಗೆ ಸಂಬಂಧಿಸಿದ ದೈಹಿಕ ಪೂರ್ಣತ್ವವನ್ನು ಮಾತ್ರ. ಕಪಿಲ-ದೇವದತ್ತ   ಇವರಿಬ್ಬರ   ವ್ಯಕ್ತಿತ್ವದಲ್ಲೂ   ಅಂಗಗಳ ಅಸಮಾನತೆಯ ದೋಷವಿದೆ. ದೈಹಿಕ ಸೌಂದರ್ಯ, ಕ್ರಿಯಾಶೀಲತೆಗಳ ಪ್ರತೀಕದಂತಿರುವ  ಕಪಿಲನಲ್ಲಿ  ಅದಕ್ಕೆ  ಸಮಾನವೆನ್ನುವ  ಬುದ್ದಿ-ಪಾಂಡಿತ್ಯಗಳಿಲ್ಲ. ಉದ್ದಾಮ ಪಂಡಿತನೂ ಪ್ರತಿಭಾವಂತನೂ ಆದ ದೇವದತ್ತ ದೇಹ ಶಕ್ತಿಯಿಂದ ದುರ್ಬಲನಾದ ಸಪ್ಪೆ ಮನುಷ್ಯ. ಇವರಿಬ್ಬರೂ ನೇರವಾಗಿ ಪೂರ್ಣತೆಯನ್ನು ಹುಡುಕುವುದಿಲ್ಲವಾದರೂ, ಅವರಿಗೆ ತಮ್ಮ ಕೊರತೆಯ ಅರಿವಿರುವುದು ದೇಹ-ತಲೆ ಅದಲು ಬದಲಾದಾಗಿನ ಅವರ ಉನ್ಮಾದದಲ್ಲಿ ಸೂಚಿತವಾಗಿದೆ. ಕಥಾನಾಯಕಿ ಪದ್ಮಿನಿಯ ತೊಳಲಾಟ ಹಂಬಲಿಕೆ ದೇಹ- ಮನಸ್ಸುಗಳೆರಡರಲ್ಲೂ  ಉತ್ತಮವಾದ ಪೂರ್ಣಾಂಗನಾದ ಜೊತೆಗಾರನಿಗಾಗಿ. ಪ್ರಕಾಂಡ ಪಂಡಿತ ದೇವದತ್ತನನ್ನು ವಿವಾಹವಾದ ಪದ್ಮಿನಿ ಕಪಿಲನ ಅಂಗಸೌಷ್ಠವ ಚುರುಕುತನಗಳಿಗೆ ಮಾರುಹೋಗಿ, ಅವಕಾಶ ಸಿಕ್ಕೊಡನೆ ದೇವದತ್ತನ ಜಾಣ ತಲೆಯನ್ನು ಕಪಿಲನ ಸದೃಡ ದೇಹಕ್ಕೆ ಜೋಡಿಸಿ  ಆದರ್ಶ  ಪುರುಷನೊಬ್ಬನನ್ನು  ತನ್ನ  ಸಂಗಾತಿಯಾಗಿರಲು ರೂಪಿಸಿಕೊಳ್ಳುವುದೇ ನಾಟಕದ ಕೇಂದ್ರ ಕ್ರಿಯೆಯಾಗಿದೆ. ದೇವದತ್ತನ ತಲೆಯ ಪ್ರಭಾವಕ್ಕೆ ಸಿಲುಕಿ, ಪದ್ಮಿನಿಯ ಸಂಗಾತಿ ಗಳಿಸಿದ್ದ ಕಪಿಲನ ದೇಹ ಮತ್ತೆ ದೇವದತ್ತನಿಗೊಪ್ಪುವ ನಾಜೂಕು, ದುರ್ಬಲ,  ನಿಷ್ಕ್ರೀಯ ರೂಪವನ್ನು ತಳೆದು, ಪದ್ಮಿನಿಯ ಬಯಕೆ ಮರೀಚಿಕೆಯಾಗಿಯೇ ಉಳಿಯುತ್ತದೆ. ತನ್ನ ಮನ ಬಯಸಿದ್ದ ಆದರ್ಶ ಪುರುಷನೊಡನೆ ಕೆಲವು ಕಾಲ ಸುಖಪಟ್ಟು ಪದ್ಮಿನಿಗೆ ಈಗಿನ ಲೋಪ ಇನ್ನಷ್ಟು ಅಸಹನೀಯವಾಗುತ್ತದೆ ಪುನ: ಕಪಿಲನನ್ನರಸಿ ಅವಳು ಕಾಡಿಗೆ ಹೋಗುತ್ತಾಳಾದರೂ ಪದ್ಮಿನಿಯ ಹಂಬಲ   ಪದ್ಮಿನಿ-ಕಪಿಲ   ದೇವದತ್ತರ   ಅಂತ್ಯದೊಂದಿಗೇ ಪರ್ಯವಸಾನಗೊಳ್ಳುವುದು  ಅನಿವಾರ್ಯ.  ಮನುಷ್ಯನ  ಪೂರ್ಣತ್ವದ ಹಂಬಲ ಎಂದೂ ಫಲಿಸದ ಮರೀಚಿಕೆಯಷ್ಟೇ ಎನ್ನುವ ಅಸ್ತಿತ್ವವಾದಿ ನಿಲುವನ್ನೇ ನಾಟಕ ಬಿಂಬಿಸುತ್ತದೆ.

ಪದ್ಮಿನಿಯ ಮಗ ಬಾಲಕ. ಅಜ್ಞಾತ ನೋವು-ಚಿಂತೆಗಳಿಂದಾಗಿ ವಯಸ್ಸಿಗೆ ಮೀರಿದ ಅಸಹಜ ಮೌನ-ಗಾಂಭೀರ್ಯಗಳ ಮೊರೆ ಹೊಕ್ಕವನು. ಈ ಬಾಲಕ ಹಾಗೂ ಹಯವದನ ಇಬ್ಬರೂ ಪರಸ್ಪರರ ಸಂಪರ್ಕದಿಂದಾಗಿ ತಮ್ಮ ತಮ್ಮ ಲೋಪಗಳನ್ನು ನೀಗಿಸಿಕೊಳ್ಳುತ್ತಾರೆ.   ಧ್ವನಿ-ದೇಹಾಕೃತಿ ಎರಡರಲ್ಲೂ ಪೂರ್ಣಾಂಗನಾದ ಕುದುರೆಯ ರೂಪದ ಹಯವದನನ ಮೇಲೆ, ವಯಸ್ಸಿಗೆ ಸಹಜವಾಗಿ ಲವಲವಿಕೆಯಿಂದಿರಲು, ನಗಲು ಕಲಿತ ಬಾಲಕ ಸವಾರಿ ಮಾಡುತ್ತ ತೆರಳುತ್ತಾನೆ. ಕೈಗೆಟುಕುವ ವಿಷಯಗಳಿಗೆ ಸಂಬಂಧಿಸಿದ್ದರೆ ಮಾತ್ರ ಪೂರ್ಣತ್ವದ ಹಂಬಲ ಈಡೇರುತ್ತದೆಂದು ಇದನ್ನು ಅರ್ಥೈಸಬಹುದಾಗಿದೆ. ನಾಟಕ  ರಚನೆಯಲ್ಲಿ  ಕಾರ್ನಾಡರು  ಜಾನಪದ  ಕಥೆಗಳಿಂದ, ಜಾನಪದ ರಂಗಭೂಮಿಯಿಂದ ಸಿಗಬಹುದಾದ ಎಲ್ಲಾ ಸಾಮಾಗ್ರಿಗಳನ್ನು ತೆಗೆದುಕೊಂಡು ಬಳಸಿ ನಾಟಕವನ್ನು ಅತ್ಯಂತ ಶ್ರೀಮಂತಗೊಳಿಸಿದ್ದಾರೆ. ‘ಹಯವದನ’ ದಲ್ಲಿ ಕಾಳಿ ಮಾತನಾಡುತ್ತಾಳೆ. ಅಂತೆಯೇ ಗೊಂಬೆಗಳು ಮಾತನಾಡುತ್ತವೆ.

ಈ ಮಾತುಗಳು ಬರಿಯ ಮಾತುಗಳಲ್ಲ. ಮನುಷ್ಯರ ಅಂತರಾಳದಲ್ಲಿ ನಡೆಯುವ ಮನೋವ್ಯಾಪಾರದ ಗುಟ್ಟನ್ನು ಪ್ರಕಟಪಡಿಸುವ ತಂತ್ರ. ಇಂತಹ ಅನೇಕ ತಂತ್ರಗಳಿಂದ ಈ ನಾಟಕದಲ್ಲಿ ಲೇಖಕರು ರಂಗಭಾಷೆಯನ್ನು ವಿಸ್ತರಿಸಿದ್ದಾರೆ. ಮತ್ತು ರಂಗ ಸಾಧ್ಯತೆಗಳನ್ನು ತೆರೆಸಿದ್ದಾರೆ. ವಸ್ತುವಿನ ದೃಷ್ಟಿಯಿಂದಲ್ಲದೆ ತಂತ್ರದ ದೃಷ್ಠಿಯಿಂದಲೂ ಬಹು ಅಧ್ಯಯನ ಶೀಲವಾದ   ನಾಟಕ   ‘ಹಯವದನ’   ಅನ್ನುವುದು   ಗಮನಾರ್ಹ ವಿಷಯವಾಗಿದೆ. ನಾಟಕ  ಕವಿತೆಗಳನ್ನು  ಒಳಗೊಂಡಿದೆ.  ನಾಟಕದಲ್ಲಿ  ಬರುವ ಕವಿತೆಗಳು ಅರ್ಥಗರ್ಭಿತವಾಗಿವೆ. ನಾಟಕದ ಒಂದು ದೌರ್ಬಲ್ಯವೆಂದರೆ ಪೂರ್ಣತ್ವವನ್ನು ಹಂಬಲಿಸುವ, ಅರಸುವ ಪದ್ಮಿನಿ ಶರೀರಕ್ಕೆ ಕೊಡುವ ಮಹತ್ವವನ್ನು ‘ಶಿರ’ಕ್ಕೆ ಕೊಡದಿರುವುದು. ನಾಟಕದಲ್ಲಿ ಕಪಿಲನ ದೇಹದ ಗಂಧವನ್ನು ಅಘ್ರಾಣಿಸುವಂತೆ, ದೇವದತ್ತನ ಬುದ್ದಿಮತ್ತೆಯತ್ತ ಗಮನ ಸೆಳೆತ ಕಾಣಬರುವುದಿಲ್ಲ.

ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

– ಸಂ

ಇನ್ನಷ್ಟು ಓದಿರಿ

Scroll to Top