ಗಿರೀಶ್ ಕಾರ್ನಾಡರ ನಾಟಕಗಳ ಸಮೀಕ್ಷೆ : ಹಿಟ್ಟಿನ ಹುಂಜ

Picture of Cinibuzz

Cinibuzz

Bureau Report

 

 

ಗಿರೀಶ್ ಕಾರ್ನಾಡರನ್ನು ಹೇಗೆ ಗ್ರಹಿಸಬೇಕು ಎಂಬುದೇ ಕನ್ನಡ ವಿಮರ್ಶಕರಿಗೆ ಪ್ರಶ್ನೆಯಾಗಿದೆ. ಏಕೆಂದರೆ ಅವರು ಅರ್ಧ ಶತಮಾನದ ಕಾಲ ಕನ್ನಡ ರಂಗಭೂಮಿಯಲ್ಲಿ ವಿಜೃಂಭಿಸಿದ ಕೈಲಾಸಂ-ಶ್ರೀರಂಗರ ವಾಸ್ತವವಾದಿ ಸಂಪ್ರದಾಯಕ್ಕೂ ಅವರು ಸೇರಿಲ್ಲ. ಹಾಗೆಯೇ ಐವತ್ತರ ದಶಕದಲ್ಲಿ ಸಾಕಷ್ಟು ಯಶಸ್ಸು ಗಳಿಸಿ ಪ್ರಭಾವಿಯಾಗಿದ್ದ  ‘ನವ್ಯ’ ಸಂಪ್ರದಾಯಕ್ಕೂ ಅವರು ಸೇರಿಲ್ಲ. ವಾಸ್ತವವಾದಿ ಪರಂಪರೆಯ ಕಾಲದಲ್ಲಿಯೂ ತನ್ನತನವನ್ನು ಹೇಗೋ ಉಳಿಸಿಕೊಂಡಿದ್ದ ವೃತ್ತಿಪರ(ಕಂಪನಿ) ನಾಟಕ ಪರಂಪರೆಗೂ ಅವರು ಹೊರತಾಗಿದ್ದಾರೆ. ಆದರೆ ಇವೆಲ್ಲಾ ಪರಂಪರೆಗಳ ಕೆಲವಂಶಗಳನ್ನು ಅವರ ನಾಟಕಕಗಳಲ್ಲಿ ನಾವು ಗುರುತಿಸಬಹುದು. ಬ್ರೆಕ್ಟ್ ಮತ್ತು ಆನ್ವಿ (Brecht-Anovilh) ಅವರ ಪ್ರಭಾವ ಅಲ್ಲಲ್ಲಿ ಕಂಡು ಬಂದರೂ ಬ್ರೆಕ್ಟ್‍ನ್ ಎಡಪಂಥೀಯ ಧೋರಣೆಗಳಾಗಲಿ ಆನ್ವಿಯ ನೈರಾಶ್ಯವಾಗಲಿ ಕಾರ್ನಾಡರಲ್ಲಿ ಇಲ್ಲ. ಹಾಗಾದರೆ ಕಾರ್ನಾಡರು ಎಂತಹ ನಾಟಕಕಾರರು.? ಅವರ ನಾಟಕಗಳ ಮೂಲ ಪ್ರೇರಣೆಗಳೇನು.? ಕಾರ್ನಾಡರ ಬೇರುಗಳು ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ಇಲ್ಲವೆಂದು  ಆಗಿಂದಾಗ್ಗೆ ಕನ್ನಡ ವಿಮರ್ಶಕರು ಮಂಡಿಸುತ್ತಿದ್ದಾರೆ. ‘ಕಾರ್ನಾಡರದ್ದು ಕೊಂಕಣಿ ಮನೋಧರ್ಮ. ಅವರು ನಿಜವಾದ ಅರ್ಥದಲ್ಲಿ ಕನ್ನಡಿಗರಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಕಾರ್ನಾಡರು ಆಲ್ ಇಂಡಿಯಾ ನಾಟಕಕಾರರೆಂದು ಅವರಲ್ಲಿ ‘ಕನ್ನಡತನ’ ಅಷ್ಟಾಗಿ ಇಲ್ಲವೆಂಬುದು ರಂಗ ನಿರ್ದೇಶಕರುಗಳಾದ ಪ್ರಸನ್ನ, ಅಕ್ಷರ ಹಾಗೂ ವಿಮರ್ಶಕರಾದ ಚಂಪಾ ಮುಂತಾದವರ ಅಭಿಪ್ರಾಯ.

“ಗಿರೀಶರು…..ಎಲ್ಲೋ ಕನ್ನಡದ ಜಾಯಮಾನದಿಂದ ಹೊರಗೆ ಉಳಿದುಬಿಡುತ್ತಾರೆ…ಇದು ಬರೀ ವ್ಯಕ್ತಿಯ ಸಮಸ್ಯೆ ಮಾತ್ರ ಅಲ್ಲ. ಇದು ಅವರ ಕೃತಿಯ ಸಮಸ್ಯೆಯೂ ಹೌದು” ಎಂದು ರಂಗ ನಿರ್ದೇಶಕ ಪ್ರಸನ್ನ ಅವರ ಅಭಿಮತವಾಗಿದೆ. ಅಂತೆಯೇ ಲಂಕೇಶರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ “…….ಈತ ಇದನ್ನೆಲ್ಲಾ ಮಂಗೋಲಿಯಾದಲ್ಲಿ ಮಾಡಿದ್ದರೂ ವ್ಯತ್ಯಾಸವಿರುತ್ತಿರಲಿಲ್ಲ; ಅಷ್ಟಿದೆ ಇವರ ಕನ್ನಡದ ಬೆಸುಗೆ” ಎಂದು ತೀರ್ಮಾನಿಸುತ್ತಾರೆ. ಕೆ.ವಿ. ಅಕ್ಷರ ಹಯವದನ ನಾಟಕ ಕುರಿತು ಮಾತನಾಡುವಾಗ “ಈ ನಾಟಕ ಎಲ್ಲ ಜಾನಪದ ಅಂಶಗಳನ್ನೂ ಆಯ್ಕೆಮಾಡಿ ಅಳವಡಿಸಿದ ದೃಷ್ಟಿ ಪಾಶ್ಚಾತ್ಯ ಧೋರಣೆಯುಳ್ಳದ್ದು….. ನಮ್ಮ ಸಾಂಪ್ರದಾಯಿಕ ರಂಗಭೂಮಿಯನ್ನು ಹೀಗೆ ಪಾಶ್ಚಾತ್ಯ ಕಣ್ಣುಗಳಿಂದ ನೋಡಿದ ಕಾರಣಕ್ಕಾಗಿಯೇ ಈ ಒಟ್ಟು ಕಟ್ಟಡಕ್ಕೆ ಒಂದು ‘ಫಾರಿನ್ ರಿಟರ್ನ್ಡ್ ಕಥೆಯೇ ಅಗತ್ಯವಾಗಿರಬೇಕು”. ಇಷ್ಟಲ್ಲದೆ ಚಂಪಾ ಸಂಕ್ರಮಣದ ಒಂದು ಸಂಚಿಕೆಯಲ್ಲಿ  “ಕಾರ್ನಾಡರ  ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕು” ಎಂದು ಗೇಲಿ ಮಾಡಿದ್ದನ್ನು ನೆನಪಿಸಬಹುದು. ಈ ಎಲ್ಲಾ ನಿಲುವುಗಳು ಸಮಾನವಾಗಿ ತೋರಿಸುವ ಒಂದು ಅಂಶವೆಂದರೆ ಕಾರ್ನಾಡರ ನಾಟಕಗಳ ಒಳಗೆ ಅವಿತಿರುವ ನಾವೀನ್ಯತೆ. ಇನ್ನು ‘ಪರಂಪರೆ’, ‘ಸಾತತ್ಯ’ ಇತ್ಯಾದಿ ಯಾವುವೂ ಸಿದ್ಧ ವಸ್ತುಗಳಲ್ಲ. ಅವುಗಳು ಆಯಾಯ ವಿಮರ್ಶಕನ ಮತ್ತು ಇತಿಹಾಸಕಾರನ ವೈಚಾರಿಕ ಪರಿಪ್ರೇಕ್ಷ್ಯವನ್ನು ಅನುಸರಿಸಿ ಬದಲಾಗುವ ಸಾಪೇಕ್ಷ ರಚನೆಗಳು. ಈ ಸಂದರ್ಭದಲ್ಲಿ ಗ್ರಹಿಸಬಹುದಾದ ಮತ್ತೊಂದು ಸತ್ಯ ಸಂಗತಿ ಎಂದರೆ ಮೇಲೆ ಹೆಸರಿಸಿದ ರಂಗ ನಿರ್ದೇಶಕರ ಹಾಗೂ ವಿಮರ್ಶಕರ ಅಭಿಪ್ರಾಯಗಳನ್ನು ಒಪ್ಪಬೇಕಾದ ವಿಚಾರ ಗಿರೀಶ್ ಕಾರ್ನಾಡರ ಮಾತಿನಿಂದಲೇ ಅರಿವಾಗುತ್ತದೆ.

“ನನ್ನ ತಲೆಮಾರಿನ ಅನಂತಮೂರ್ತಿ, ಲಂಕೇಶ ಅಥವಾ ತೇಜಸ್ವಿ ಕನ್ನಡ ಸಂಸ್ಕೃತಿಯೊಳಗೆ ಇನ್‍ವಾಲ್ವ್ ಆದ ಹಾಗೆ ನಾನು ಆಗಿಲ್ಲ. ಏಕೆ ಎಂದು ನನಗೆ ಗೊತ್ತಿಲ್ಲ ಆಗೋಕೆ ಸಾಧ್ಯವೂ ಆಗಿಲ್ಲ. ಪ್ರಾಯಶಃ ಅನಂತಮೂರ್ತಿ ಲಂಕೇಶ್  ಅವರೆಲ್ಲಾ  ಯೂನಿವರ್ಸಿಟಿಗಳಲ್ಲಿ ಕಳೆದರು ಅನ್ನುವುದು ಕಾರಣವಿರಬಹುದು”. ಎಂದು ಅಭಿಪ್ರಾಯಿಸುತ್ತಾರೆ. ಒಟ್ಟಿನಲ್ಲಿ ನಾಟಕ ಕಟ್ಟುವ ಕ್ರಿಯೆಯನ್ನು ಕಟ್ಟಡ ಕಟ್ಟುವ ಕ್ರಿಯೆಗೆ ಹೋಲಿಸುವ ಗಿರೀಶ ಕಾರ್ನಾಡರು ಕನ್ನಡ  ನಾಟಕ  ಜಗತ್ತಿನಲ್ಲಿ  ತಮ್ಮದೇ  ನೆಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆನೆ ನಡೆದದ್ದೇ ದಾರಿ ಅನ್ನುವ ಹಾಗೆ ನಾಟಕ ಕ್ಷೇತ್ರದಲ್ಲಿ ನಡೆದ  ಅದ್ಬುತ  ಪ್ರತಿಭಾವಂತ  ಅನ್ನುವುದು  ಮಾತ್ರ ಅತಿಶಯೋಕ್ತಿಯಲ್ಲ

ಹಿಟ್ಟಿನ ಹುಂಜ

1956ರಲ್ಲಿ ಜನ್ನನ ಯಶೋಧರ ಚರಿತೆ ಕಾವ್ಯವನ್ನು ಓದಿದಾಗಿನಿಂದ ಕಾರ್ನಾಡರನ್ನು ಆ ಪುರಾಣ ಕತೆ ಪೀಡಿಸಿತಂತೆ. ಅವರ ಪರಿಸರದ ಘಟನೆಗಳಲ್ಲಿ ಆ ಕಾವ್ಯದ ಪ್ರತಿಬಿಂಬ ಮೂಡುತ್ತಿತ್ತಂತೆ. ಅಂತೆಯೇ 1966ರಲ್ಲಿ ಈ ನಾಟಕವನ್ನು ಬರೆದರು. ಹಲವಾರು ಮಾರ್ಪಾಡುಗಳೊಂದಿಗೆ ಈ ನಾಟಕವು 1980ರಲ್ಲಿ ಪ್ರಕಟವಾಯಿತು. ಹಿಟ್ಟಿನ ಹುಂಜದ ಮೂಲ ಕ್ರಿ.ಶ. 1209ರಲ್ಲಿ ರಚಿತವಾದ ಜನ್ನನ ಯಶೋಧರ ಚರಿತೆಯಲ್ಲಿದೆ. ಆದರೆ ಮೂಲಕತೆಯಲ್ಲಿಯ ಹೆಸರುಗಳನ್ನು ಈ ನಾಟಕದಲ್ಲಿ ಬಳಸಲಾಗಿಲ್ಲ. ಪ್ರಾಯಶಃ ನಾಟಕದ ವಸ್ತುವಿಗೆ ಮನುಷ್ಯನ ಮೂಲಭೂತ ಧೋರಣೆಗಳ ರೂಪಕೊಡಲು ಹೀಗೆ ಮಾಡಿರಬಹುದು. ಮನುಷ್ಯನ ಬಾಳಿನ ಮೌಲ್ಯ ಮತ್ತು ಮೂಲಭೂತವಾದ ಇಂದ್ರಿಯ ಪ್ರವೃತ್ತಿ ನಾಟಕಕಾರನ ಜೀವನ ಕಾಳಜಿಗೆ ಕಾರಣವಾಗಿದೆ.

ಮಾವುತನೊಬ್ಬನ ಹಾಡಿನ ಮತ್ತು ಕೊಳಲಿನ ಧ್ವನಿಗೆ ಮಾರು ಹೋಗಿ ರಾಣಿಯೊಬ್ಬಳು ಲೈಂಗಿಕವಾಗಿ ಆತನಿಗೆ ಶರಣುಹೋಗುತ್ತಾಳೆ. ರಾಜನಿಗೆ  ಈ  ವಿಷಯ  ತಿಳಿಯುತ್ತದೆ.  ಮತ್ತು  ‘ಪ್ರೇಮಿ’ಗಳಿಬ್ಬರನ್ನು ಮುಂದಿಟ್ಟುಕೊಂಡು  ಕೆಲವು  ನಿರ್ದಾರಕ್ಕೆ  ಬರಬೇಕಾದ  ಪ್ರಸಂಗವಿದೆ.

ಹಾದರಕ್ಕೆ ಒಳಗಾದ ಹೆಂಡತಿಯನ್ನು ಮುಂದಿಟ್ಟುಕೊಂಡೇ ನಡೆಯುವ ಚರ್ಚೆಯು ಪ್ರಾಯಶ: ಈ ನಾಟಕದ ಹೊಸತನಕ್ಕೆ ಕಾರಣವಾಗಿದೆ. ಇನ್ನು ರಾಜನ ಮತಾಂತರದ ಪ್ರಶ್ನೆ. ರಾಣಿಯನ್ನು ಮದುವೆಯಾಗುವುದಕ್ಕಾಗಿಯೇ ರಾಜನು ಜೈನ ಧರ್ಮಕ್ಕೆ ಮತಾಂತರ ಹೊಂದಿದ್ದಾನೆ. ರಾಜಮಾತೆಗೆ ಅಂದರೆ ರಾಜನ ತಾಯಿಗೆ ಇದು ಇಷ್ಟವಿಲ್ಲ. ಈ ಮತಾಂತರದ ಹಿಂದೆಯೇ ಹಿಟ್ಟಿನ ಹುಂಜವನ್ನು ಬಲಿಕೊಡುವ ವಿಷಯ ಆತನಿಗೆ ಮತ್ತು ಆತನ ತಾಯಿಗೆ ಸಹಜ ಕ್ರಿಯೆಗಳು. ಆದರೆ ಜೈನ ಸಂಸ್ಕಾರಗಳನ್ನು ಹೊಂದಿದ ರಾಣಿಗೆ ಅದು ಅಸಹಜ ಕ್ರಿಯೆ. ಯಶೋಧರ   ಚರಿತೆಯಲ್ಲಿ   ರಾಣಿಯ   ವ್ಯಭಿಚಾರಕ್ಕೆ ಕಾರಣವೆನ್ನುವುದನ್ನು ಬಿಟ್ಟರೆ ಮಾವುತನಿಗೆ ಬೇರೆ ಪಾತ್ರವಿಲ್ಲ. ಆದರೆ ಕಾರ್ನಾಡರು ತಮ್ಮ ನಾಟಕದಲ್ಲಿ ಅವನನ್ನು ಒಂದು ವಿಶಿಷ್ಟ ದೃಷ್ಟಿಕೋನದ ಪ್ರತಿನಿಧಿಯನ್ನಾಗಿ ಪುನಃ ಸೃಷ್ಟಿಸಿದ್ದಾರೆ. ಅವನಿಗೆ ತನ್ನ ದನಿಯ ಬಗ್ಗೆ, ಲೈಂಗಿಕ ಶಕ್ತಿಯ ಬಗ್ಗೆ ಅಭಿಮಾನವಿದೆ. ಆದರೆ ತನ್ನ ಕುರೂಪದ ಬಗ್ಗೆ ಒಂದು ಬಗೆಯ ಕಾಂಪೆಕ್ಸ್ ಕೂಡ ಅವನಲ್ಲಿದೆ.

ರಾಣಿ ಅದನ್ನು ಗುರುತಿಸುತ್ತಾಳೆ. ಹಾಗೂ “ನೀನು ಕುರೂಪಿಯಲ್ಲ. ನಿನ್ನನ್ನು ಕಾಡುವುದು ಒಬ್ಬಂಟಿತನ” ಎಂದು ಹೇಳಿ ಅದರಿಂದ ಅವನನ್ನು ಪಾರು ಮಾಡಲು ಯತ್ನಿಸುತ್ತಾಳೆ. ರಾಜನ ಪ್ರವೇಶವಾದಾಗ ಅವನ ಮೊದಲ ಪ್ರತಿಕ್ರಿಯೆ ತನ್ನ ಜೀವನದ ಬಗ್ಗೆ ಹೆದರಿಕೆ. “ಅವರ ಮೈಮುಟ್ಟಿದ್ರ ಇಟ್ಟ ಆಣೀ. ಇಡೀ ರಾತ್ರಿ ಹಿಂಗ ಕೂತಿದ್ವಿ”. ಆದರೆ ತನ್ನ ಜೀವಕ್ಕೆ ಹೆದರಿಕೆಯಿಲ್ಲ ಎಂದು ಖಚಿತವಾದಾಗ ಅವನ ನಿಲುವಿನಲ್ಲಿ ಆಶ್ಚರ್ಯಕಾರಕ ಬದಲಾವಣೆ ಯಾಗುತ್ತದೆ. “ಹೌದಲ್ಲ ಮರೆತು ಹೋಗಿತ್ತು. ಜೈನರು ನೀವು ಅಧ್ಯಾಂಗ ಕೊಲ್ಲತ್ತೀರಿ?” ಎಂಬ ಅವನ ಮಾತಿನಲ್ಲಿ ವ್ಯಂಗ ಸೇರಿರುವುದನ್ನು ಗಮನಿಸಬಹುದು. ರಾಜನ ಬಗ್ಗೆ ಅವನಲ್ಲಿ ಸಹಜವಾದ ಹೆದರಿಕೆ ಇದೆ. ತಾನು ಸಂಗ ಮಾಡಿದ ರಾಣಿಯ ಬಗ್ಗೆ ಮೆಚ್ಚುಗೆಯಿದೆ. ಆದರೆ ಅವನ ಮೂಲ ಪ್ರತಿಕ್ರಿಯೆ ಬದುಕುಳಿಯುವುದಕ್ಕೆ ಸಂಬಂಧಿಸಿದುದು. ಚಂಡಮಾರಿಗೆ ಬಲಿಕೊಡುವ ವಿಚಾರ ತಿಳಿದಾಗ ಅವನು ಅದು ತನ್ನ ದನಿಯನ್ನು ಕಸಿದುಕೊಳ್ಳುವ ತಂತ್ರ ಎಂದೇ ಭಾವಿಸುತ್ತಾನೆ. ರಾಣಿ ಅವನಿಗೆ ಆಶ್ವಾಸನೆಯಿತ್ತಾಗ “ಅ$ಟೊಂದು ಮಾಡಿ ಪುಣ್ಣೆ ಕಟಗೊಳ್ಳಿ  ಹಡದವ್ವ. ನಿನ್ನ ಉಪಕಾರ ಮರೂದಿಲ್ಲ. ದೇವರು ಪಾರು ಮಾಡತಾನ ನಿನಗ” ಎಂದು ಅವಳ ಕಾಲು ಬೀಳುತ್ತಾನೆ, ಹಾಸ್ಯದÀ ವಸ್ತುವಾಗುತ್ತಾನೆ. ಆದರೆ ಸುರಕ್ಷಿತತೆಯ ಭಾವನೆ ಬೆಳೆದಂತೆ ತನ್ನನ್ನು ಕೆಲ ವಿಷಯಗಳಲ್ಲಿ ರಾಜನಿಗಿಂತ ಮೇಲು ಎಂದು ತಿಳಿದುಕೊಳ್ಳುವ ದಾಷ್ಟ್ರ್ಯವನ್ನು ತೋರಿಸುತ್ತಾನೆ. ರಾಜನಿಗೆ

ಲೈಂಗಿಕ ರಹಸ್ಯಗಳ ಬೋಧೆ ಮಾಡುತ್ತಾನೆ. “ಒಳ್ಳೆ ಮಾತಿಲೆ ಆ ಕೋಳಿ ಒಯ್ಯಿರಿ ಇಲ್ಲಿಂದ, ಹೂಂ, ಎತ್ತರಿ ಅದನ್ನ” ಎಂದು ರಾಜನನ್ನೆ, ಆಜ್ಞಾಪಿಸುವ ಮಟ್ಟಕ್ಕೆ ಅವನ ಧೈರ್ಯ ಬೆಳೆಯುತ್ತದೆ. ಮಾವುತನ ವ್ಯಕ್ತಿತ್ವದಲ್ಲಿರುವ ಈ ಚಲನಶೀಲತೆ ನಾಟಕದ ಬೇರೆ ಯಾವ ಪಾತ್ರದಲ್ಲಿಯೂ ಕಾಣುವುದಿಲ್ಲ. ಅವನೊಬ್ಬ ಅಸಾಧಾರಣ ವ್ಯಕ್ತಿಯೆಂದೇ ಕಾರ್ನಾಡರು ಸೃಷ್ಟಿಸಿದ್ದಾರೆ. ಯಾವ ತಾತ್ವಿಕ  ಗೊಂದಲದಲ್ಲಿಯೂ  ಸಿಕ್ಕಿಕೊಳ್ಳದ,  ಕೇವಲ  ಅನುಭವದ

ನಿಟ್ಟಿನಲ್ಲಿಯೇ ವ್ಯವಹರಿಸುವ ಅವನ ಅಸ್ತಿತ್ವವಾದ ನಾಟಕಕ್ಕೆ ಹೊಸ ಆಯಾಮವೊಂದನ್ನು ಸೇರಿಸಿದೆ. ಒಟ್ಟಿನಲ್ಲಿ  ಈ  ನಾಟಕವು  ಧರ್ಮ  ಮತ್ತು  ಅದರ  ವಿವಿಧ ವ್ಯಾಖ್ಯಾನಗಳು, ಅದನ್ನು ಮೀರುವುದರಿಂದ ಉಂಟಾಗುವ ಪಾಪ. ಈ ಪಾಪದ ಅನರ್ಥಗಳನ್ನು ತಪ್ಪಿಸಲು ಪ್ರಾಯಶ್ಚಿತ್ತ. ಇವೆಲ್ಲವನ್ನೂ ದಿಟ್ಟವಾಗಿ ಎದುರಿಸಿ ನಿಲ್ಲುವ ಮನುಷ್ಯನ ಮನಸ್ಸಿನ ಮೂಲ ಪ್ರವೃತ್ತಿಗಳು  ಇವನ್ನು ಅತ್ಯಂತ ಸೂಕ್ಷ್ಮವಾಗಿ ಪರೀಕ್ಷಿಸುತ್ತದೆ. ಮನುಷ್ಯನ ಸಹಜ ಕಾಮನೆಗಳಸಂಕೇತವಾಗಿದೆ. ಹೀಗೆ ಹಳೆಯ ವಸ್ತುವಿಗೆ ಸಮಕಾಲೀನತೆಯ ಆಯಾಮವೇ ಮುಖ್ಯ ಗುರಿಯಾಗಿ ಕಂಡುಬರುತ್ತದೆ.

 

ಇನ್ನಷ್ಟು ಓದಿರಿ

Scroll to Top