ಗಿರೀಶ್ ಕಾರ್ನಾಡರನ್ನು ಹೇಗೆ ಗ್ರಹಿಸಬೇಕು ಎಂಬುದೇ ಕನ್ನಡ ವಿಮರ್ಶಕರಿಗೆ ಪ್ರಶ್ನೆಯಾಗಿದೆ. ಏಕೆಂದರೆ ಅವರು ಅರ್ಧ ಶತಮಾನದ ಕಾಲ ಕನ್ನಡ ರಂಗಭೂಮಿಯಲ್ಲಿ ವಿಜೃಂಭಿಸಿದ ಕೈಲಾಸಂ-ಶ್ರೀರಂಗರ ವಾಸ್ತವವಾದಿ ಸಂಪ್ರದಾಯಕ್ಕೂ ಅವರು ಸೇರಿಲ್ಲ. ಹಾಗೆಯೇ ಐವತ್ತರ ದಶಕದಲ್ಲಿ ಸಾಕಷ್ಟು ಯಶಸ್ಸು ಗಳಿಸಿ ಪ್ರಭಾವಿಯಾಗಿದ್ದ ‘ನವ್ಯ’ ಸಂಪ್ರದಾಯಕ್ಕೂ ಅವರು ಸೇರಿಲ್ಲ. ವಾಸ್ತವವಾದಿ ಪರಂಪರೆಯ ಕಾಲದಲ್ಲಿಯೂ ತನ್ನತನವನ್ನು ಹೇಗೋ ಉಳಿಸಿಕೊಂಡಿದ್ದ ವೃತ್ತಿಪರ(ಕಂಪನಿ) ನಾಟಕ ಪರಂಪರೆಗೂ ಅವರು ಹೊರತಾಗಿದ್ದಾರೆ. ಆದರೆ ಇವೆಲ್ಲಾ ಪರಂಪರೆಗಳ ಕೆಲವಂಶಗಳನ್ನು ಅವರ ನಾಟಕಕಗಳಲ್ಲಿ ನಾವು ಗುರುತಿಸಬಹುದು. ಬ್ರೆಕ್ಟ್ ಮತ್ತು ಆನ್ವಿ (Brecht-Anovilh) ಅವರ ಪ್ರಭಾವ ಅಲ್ಲಲ್ಲಿ ಕಂಡು ಬಂದರೂ ಬ್ರೆಕ್ಟ್‍ನ್ ಎಡಪಂಥೀಯ ಧೋರಣೆಗಳಾಗಲಿ ಆನ್ವಿಯ ನೈರಾಶ್ಯವಾಗಲಿ ಕಾರ್ನಾಡರಲ್ಲಿ ಇಲ್ಲ. ಹಾಗಾದರೆ ಕಾರ್ನಾಡರು ಎಂತಹ ನಾಟಕಕಾರರು.? ಅವರ ನಾಟಕಗಳ ಮೂಲ ಪ್ರೇರಣೆಗಳೇನು.? ಕಾರ್ನಾಡರ ಬೇರುಗಳು ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ಇಲ್ಲವೆಂದು ಆಗಿಂದಾಗ್ಗೆ ಕನ್ನಡ ವಿಮರ್ಶಕರು ಮಂಡಿಸುತ್ತಿದ್ದಾರೆ. ‘ಕಾರ್ನಾಡರದ್ದು ಕೊಂಕಣಿ ಮನೋಧರ್ಮ. ಅವರು ನಿಜವಾದ ಅರ್ಥದಲ್ಲಿ ಕನ್ನಡಿಗರಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಕಾರ್ನಾಡರು ಆಲ್ ಇಂಡಿಯಾ ನಾಟಕಕಾರರೆಂದು ಅವರಲ್ಲಿ ‘ಕನ್ನಡತನ’ ಅಷ್ಟಾಗಿ ಇಲ್ಲವೆಂಬುದು ರಂಗ ನಿರ್ದೇಶಕರುಗಳಾದ ಪ್ರಸನ್ನ, ಅಕ್ಷರ ಹಾಗೂ ವಿಮರ್ಶಕರಾದ ಚಂಪಾ ಮುಂತಾದವರ ಅಭಿಪ್ರಾಯ.
“ಗಿರೀಶರು…..ಎಲ್ಲೋ ಕನ್ನಡದ ಜಾಯಮಾನದಿಂದ ಹೊರಗೆ ಉಳಿದುಬಿಡುತ್ತಾರೆ…ಇದು ಬರೀ ವ್ಯಕ್ತಿಯ ಸಮಸ್ಯೆ ಮಾತ್ರ ಅಲ್ಲ. ಇದು ಅವರ ಕೃತಿಯ ಸಮಸ್ಯೆಯೂ ಹೌದು” ಎಂದು ರಂಗ ನಿರ್ದೇಶಕ ಪ್ರಸನ್ನ ಅವರ ಅಭಿಮತವಾಗಿದೆ. ಅಂತೆಯೇ ಲಂಕೇಶರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ “…….ಈತ ಇದನ್ನೆಲ್ಲಾ ಮಂಗೋಲಿಯಾದಲ್ಲಿ ಮಾಡಿದ್ದರೂ ವ್ಯತ್ಯಾಸವಿರುತ್ತಿರಲಿಲ್ಲ; ಅಷ್ಟಿದೆ ಇವರ ಕನ್ನಡದ ಬೆಸುಗೆ” ಎಂದು ತೀರ್ಮಾನಿಸುತ್ತಾರೆ. ಕೆ.ವಿ. ಅಕ್ಷರ ಹಯವದನ ನಾಟಕ ಕುರಿತು ಮಾತನಾಡುವಾಗ “ಈ ನಾಟಕ ಎಲ್ಲ ಜಾನಪದ ಅಂಶಗಳನ್ನೂ ಆಯ್ಕೆಮಾಡಿ ಅಳವಡಿಸಿದ ದೃಷ್ಟಿ ಪಾಶ್ಚಾತ್ಯ ಧೋರಣೆಯುಳ್ಳದ್ದು….. ನಮ್ಮ ಸಾಂಪ್ರದಾಯಿಕ ರಂಗಭೂಮಿಯನ್ನು ಹೀಗೆ ಪಾಶ್ಚಾತ್ಯ ಕಣ್ಣುಗಳಿಂದ ನೋಡಿದ ಕಾರಣಕ್ಕಾಗಿಯೇ ಈ ಒಟ್ಟು ಕಟ್ಟಡಕ್ಕೆ ಒಂದು ‘ಫಾರಿನ್ ರಿಟರ್ನ್ಡ್ ಕಥೆಯೇ ಅಗತ್ಯವಾಗಿರಬೇಕು”. ಇಷ್ಟಲ್ಲದೆ ಚಂಪಾ ಸಂಕ್ರಮಣದ ಒಂದು ಸಂಚಿಕೆಯಲ್ಲಿ “ಕಾರ್ನಾಡರ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕು” ಎಂದು ಗೇಲಿ ಮಾಡಿದ್ದನ್ನು ನೆನಪಿಸಬಹುದು. ಈ ಎಲ್ಲಾ ನಿಲುವುಗಳು ಸಮಾನವಾಗಿ ತೋರಿಸುವ ಒಂದು ಅಂಶವೆಂದರೆ ಕಾರ್ನಾಡರ ನಾಟಕಗಳ ಒಳಗೆ ಅವಿತಿರುವ ನಾವೀನ್ಯತೆ. ಇನ್ನು ‘ಪರಂಪರೆ’, ‘ಸಾತತ್ಯ’ ಇತ್ಯಾದಿ ಯಾವುವೂ ಸಿದ್ಧ ವಸ್ತುಗಳಲ್ಲ. ಅವುಗಳು ಆಯಾಯ ವಿಮರ್ಶಕನ ಮತ್ತು ಇತಿಹಾಸಕಾರನ ವೈಚಾರಿಕ ಪರಿಪ್ರೇಕ್ಷ್ಯವನ್ನು ಅನುಸರಿಸಿ ಬದಲಾಗುವ ಸಾಪೇಕ್ಷ ರಚನೆಗಳು. ಈ ಸಂದರ್ಭದಲ್ಲಿ ಗ್ರಹಿಸಬಹುದಾದ ಮತ್ತೊಂದು ಸತ್ಯ ಸಂಗತಿ ಎಂದರೆ ಮೇಲೆ ಹೆಸರಿಸಿದ ರಂಗ ನಿರ್ದೇಶಕರ ಹಾಗೂ ವಿಮರ್ಶಕರ ಅಭಿಪ್ರಾಯಗಳನ್ನು ಒಪ್ಪಬೇಕಾದ ವಿಚಾರ ಗಿರೀಶ್ ಕಾರ್ನಾಡರ ಮಾತಿನಿಂದಲೇ ಅರಿವಾಗುತ್ತದೆ.
“ನನ್ನ ತಲೆಮಾರಿನ ಅನಂತಮೂರ್ತಿ, ಲಂಕೇಶ ಅಥವಾ ತೇಜಸ್ವಿ ಕನ್ನಡ ಸಂಸ್ಕೃತಿಯೊಳಗೆ ಇನ್‍ವಾಲ್ವ್ ಆದ ಹಾಗೆ ನಾನು ಆಗಿಲ್ಲ. ಏಕೆ ಎಂದು ನನಗೆ ಗೊತ್ತಿಲ್ಲ ಆಗೋಕೆ ಸಾಧ್ಯವೂ ಆಗಿಲ್ಲ. ಪ್ರಾಯಶಃ ಅನಂತಮೂರ್ತಿ ಲಂಕೇಶ್ ಅವರೆಲ್ಲಾ ಯೂನಿವರ್ಸಿಟಿಗಳಲ್ಲಿ ಕಳೆದರು ಅನ್ನುವುದು ಕಾರಣವಿರಬಹುದು”. ಎಂದು ಅಭಿಪ್ರಾಯಿಸುತ್ತಾರೆ. ಒಟ್ಟಿನಲ್ಲಿ ನಾಟಕ ಕಟ್ಟುವ ಕ್ರಿಯೆಯನ್ನು ಕಟ್ಟಡ ಕಟ್ಟುವ ಕ್ರಿಯೆಗೆ ಹೋಲಿಸುವ ಗಿರೀಶ ಕಾರ್ನಾಡರು ಕನ್ನಡ ನಾಟಕ ಜಗತ್ತಿನಲ್ಲಿ ತಮ್ಮದೇ ನೆಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆನೆ ನಡೆದದ್ದೇ ದಾರಿ ಅನ್ನುವ ಹಾಗೆ ನಾಟಕ ಕ್ಷೇತ್ರದಲ್ಲಿ ನಡೆದ ಅದ್ಬುತ ಪ್ರತಿಭಾವಂತ ಅನ್ನುವುದು ಮಾತ್ರ ಅತಿಶಯೋಕ್ತಿಯಲ್ಲ.
ನಾಗಮಂಡಲ
ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕ 1989ರ ಸುಮಾರಿಗೆ ಪ್ರಕಟವಾಗಿದೆ. ಜಾನಪದ ಶೈಲಿಯನ್ನು ಒಳಗೊಂಡ ಈ ನಾಟಕ ಕಾರ್ನಾಡರ ಕ್ರಿಯಾತ್ಮಕ ಪ್ರತಿಭೆಗೆ ಉತ್ತಮ ಉದಾಹರಣೆ ಎನ್ನಬಹುದು. ಇದು ನಾಟಕ ಹಾಗೂ ಸಿನಿಮಾ ಎರಡು ಪ್ರಕಾರಗಳಲ್ಲಿಯೂ ಯಶಸ್ವಿಯಾದ ಕೃತಿ. ಜಾನಪದ ಕಥೆಯೊಂದರ ಮೇಲೆ ಆಧಾರಿತವಾಗಿರುವ ಈ ನಾಟಕವು ಸಾಂಪ್ರದಾಯಿಕ ಸಮಾಜದಲ್ಲಿ ಗಂಡು-ಹೆಣ್ಣಿನ ಸಂಬಂಧವನ್ನು ಶೋಧಿಸುತ್ತದೆ, ಹಾಗೂ ವ್ಯಾಖ್ಯಾನಿಸುತ್ತದೆ. ಪುರುಷ ಪ್ರಧಾನ ಸಮಾಜ ಹೆಣ್ಣಿನ ಮೇಲೆ ಗಂಡಿನ ಅಪರಿಮಿತವಾದ ಅಧಿಕಾರವನ್ನು ನೀಡುತ್ತದೆ. ಹಾಗೆಯೇ ಹೆಣ್ಣು ಆ ಅಧಿಕಾರವನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಈ ಅಧಿಕಾರ ನಾಟಕ ನಿದರ್ಶಿಸುವಂತೆ ದರ್ಪ ದಬ್ಬಾಳಿಕೆಯೂ ಆಗಬಹುದು. ಆದರೆ ಇದು ಗಂಡು-ಹೆಣ್ಣಿನ ಸಹಜ ಸಂಬಂಧಗಳು ಅರಳುವುದಕ್ಕೆ ಅಡ್ಡಿಯಾಗುತ್ತದೆ. ಪರಸ್ಪರ ಅನುಮಾನಿಸುವುದಕ್ಕೆ ಅಪನಂಬಿಕೆಗಳಿಗೆ ದಾರಿಯಾಗುತ್ತದೆ.
ಇದನ್ನೆಲ್ಲ ನಾಟಕದಲ್ಲಿ ಕಾರ್ನಾಡರು ಹೇಳಿರುವ ರೀತಿ, ತಂದಿರುವ ನಾಟಕೀಯತೆ ಅಸಾಧಾರಣವಾದದ್ದು. ನಾಟಕದಲ್ಲಿ ರಾಣಿಯನ್ನು ಮದುವೆಯಾದ ಅಪ್ಪಣ್ಣ ರಾತ್ರಿ ಮನೆಗೇ ಬರುವುದಿಲ್ಲ. ಮನೆ ಬಿಡುವಾಗ ತನ್ನ ಹೆಂಡತಿಯನ್ನು ಮನೆಯಲ್ಲಿ ಕೂಡಿ ಗಿರೀಶ್ ಕಾರ್ನಾಡರು ಮತ್ತು ಅವರ ಸಾಹಿತ್ಯ ಹಾಕಿ ಹೊರಹೋಗುತ್ತಾನೆ. ರಾಣಿಯ ಭಾವನೆಗಳಿಗೆ ಸ್ಥಳವೇ ಇಲ್ಲ. ರಾಣಿ ಪ್ರೀತಿಗಾಗಿ ಹಂಬಲಿಸುತ್ತಾಳೆ. ರಾಣಿಗೆ ಆ ಪ್ರೀತಿ ಸಿಗುವುದು ತನ್ನ ಗಂಡನ ರೂಪ ಧರಿಸಿ ರಾತ್ರಿ ಬರುವ ನಾಗರ ಹಾವಿನಿಂದ. ರಾತ್ರಿಯಲ್ಲಿ ಪ್ರೀತಿ ತೋರುವ ಗಂಡನು ಹಗಲಲ್ಲಿ ತನ್ನನ್ನು ಮುಟ್ಟದೆ ಹೆದರಿಸಿ, ಬೆದರಿಸಿ ಕೂಡಿ ಹಾಕಿ ಏಕೆ ಹೋಗುತ್ತಾನೆಂದು ರಾಣಿ ಚಡಪಡಿಸುತ್ತಾಳೆ. ರಾಣಿಗೆ ಯಾವುದು ವಾಸ್ತವ, ಯಾವುದು ಸ್ವಪ್ನ ಎರಡು ಅರ್ಥವಾಗುವುದಿಲ್ಲ. ರಾತ್ರಿ-ಹಗಲಿನ ಒಂದು ಆಟದಂತೆ ಸಾಗುವ ನಾಟಕದ ನಾಟಕೀಯತೆ ಲೇಖಕರ ರಚನಾ ಕೌಶಲ್ಯವನ್ನು ಮತ್ತೊಮ್ಮೆ ಸಾರುತ್ತದೆ. ನಾಗಮಂಡಲ ಸಾಂಪ್ರದಾಯಿಕ ಸಮಾಜದಲ್ಲಿ ಹೆಣ್ಣಿನ ಅವಸ್ಥೆಯನ್ನು ಚಿತ್ರಿಸುವುದಲ್ಲದೆ, ಅವಳ ಅಭಿವ್ಯಕ್ತಿಗಳಿಗೆ ಅವಕಾಶ ಮಾಡಿಕೊಡುತ್ತದೆ. ಹಾಗೆ ಆ ಅಭಿವ್ಯಕ್ತಿಗಳಿಗೆ ಅವಕಾಶವೇ ಇಲ್ಲದಂತೆ ಮಾಡಿರುವ ಪುರುಷ ಪ್ರಧಾನ ಸಮಾಜದ ಟೀಕೆಯೂ ಆಗಿದೆ. ಒಟ್ಟಿನಲ್ಲಿ ನಾಟಕ ವಾಸ್ತವ, ಸಾಂಕೇತಿಕ, ನೈತಿಕ ನೆಲೆಗಳಲ್ಲಿ ಚಿತ್ರಿತವಾಗುತ್ತದೆ.ಮೌಲ್ಯಗಳ ಘರ್ಷಣೆ ನಡದೇ ಇದೆ. ಜಾನಪದ ಕಲೆ ಕೊನೆಯಿರದ ಮಾನವನ ಮನಸ್ಸಿನ ಪ್ರಕ್ರಿಯೆಯ ಅನಂತತೆಯನ್ನು ಸೂಚಿಸುತ್ತದೆ.
ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.