ಗಿರೀಶ್ ಕಾರ್ನಾಡರ ನಾಟಕಗಳ ಸಮೀಕ್ಷೆ: ತಲೆದಂಡ

Picture of Cinibuzz

Cinibuzz

Bureau Report

ಗಿರೀಶ್ ಕಾರ್ನಾಡರನ್ನು ಹೇಗೆ ಗ್ರಹಿಸಬೇಕು ಎಂಬುದೇ ಕನ್ನಡ ವಿಮರ್ಶಕರಿಗೆ ಪ್ರಶ್ನೆಯಾಗಿದೆ. ಏಕೆಂದರೆ ಅವರು ಅರ್ಧ ಶತಮಾನದ ಕಾಲ ಕನ್ನಡ ರಂಗಭೂಮಿಯಲ್ಲಿ ವಿಜೃಂಭಿಸಿದ ಕೈಲಾಸಂ-ಶ್ರೀರಂಗರ ವಾಸ್ತವವಾದಿ ಸಂಪ್ರದಾಯಕ್ಕೂ ಅವರು ಸೇರಿಲ್ಲ. ಹಾಗೆಯೇ ಐವತ್ತರ ದಶಕದಲ್ಲಿ ಸಾಕಷ್ಟು ಯಶಸ್ಸು ಗಳಿಸಿ ಪ್ರಭಾವಿಯಾಗಿದ್ದ  ‘ನವ್ಯ’ ಸಂಪ್ರದಾಯಕ್ಕೂ ಅವರು ಸೇರಿಲ್ಲ. ವಾಸ್ತವವಾದಿ ಪರಂಪರೆಯ ಕಾಲದಲ್ಲಿಯೂ ತನ್ನತನವನ್ನು ಹೇಗೋ ಉಳಿಸಿಕೊಂಡಿದ್ದ ವೃತ್ತಿಪರ(ಕಂಪನಿ) ನಾಟಕ ಪರಂಪರೆಗೂ ಅವರು ಹೊರತಾಗಿದ್ದಾರೆ. ಆದರೆ ಇವೆಲ್ಲಾ ಪರಂಪರೆಗಳ ಕೆಲವಂಶಗಳನ್ನು ಅವರ ನಾಟಕಕಗಳಲ್ಲಿ ನಾವು ಗುರುತಿಸಬಹುದು. ಬ್ರೆಕ್ಟ್ ಮತ್ತು ಆನ್ವಿ (Brecht-Anovilh) ಅವರ ಪ್ರಭಾವ ಅಲ್ಲಲ್ಲಿ ಕಂಡು ಬಂದರೂ ಬ್ರೆಕ್ಟ್‍ನ್ ಎಡಪಂಥೀಯ ಧೋರಣೆಗಳಾಗಲಿ ಆನ್ವಿಯ ನೈರಾಶ್ಯವಾಗಲಿ ಕಾರ್ನಾಡರಲ್ಲಿ ಇಲ್ಲ. ಹಾಗಾದರೆ ಕಾರ್ನಾಡರು ಎಂತಹ ನಾಟಕಕಾರರು.? ಅವರ ನಾಟಕಗಳ ಮೂಲ ಪ್ರೇರಣೆಗಳೇನು.? ಕಾರ್ನಾಡರ ಬೇರುಗಳು ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ಇಲ್ಲವೆಂದು  ಆಗಿಂದಾಗ್ಗೆ ಕನ್ನಡ ವಿಮರ್ಶಕರು ಮಂಡಿಸುತ್ತಿದ್ದಾರೆ. ‘ಕಾರ್ನಾಡರದ್ದು ಕೊಂಕಣಿ ಮನೋಧರ್ಮ. ಅವರು ನಿಜವಾದ ಅರ್ಥದಲ್ಲಿ ಕನ್ನಡಿಗರಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಕಾರ್ನಾಡರು ಆಲ್ ಇಂಡಿಯಾ ನಾಟಕಕಾರರೆಂದು ಅವರಲ್ಲಿ ‘ಕನ್ನಡತನ’ ಅಷ್ಟಾಗಿ ಇಲ್ಲವೆಂಬುದು ರಂಗ ನಿರ್ದೇಶಕರುಗಳಾದ ಪ್ರಸನ್ನ, ಅಕ್ಷರ ಹಾಗೂ ವಿಮರ್ಶಕರಾದ ಚಂಪಾ ಮುಂತಾದವರ ಅಭಿಪ್ರಾಯ.

“ಗಿರೀಶರು…..ಎಲ್ಲೋ ಕನ್ನಡದ ಜಾಯಮಾನದಿಂದ ಹೊರಗೆ ಉಳಿದುಬಿಡುತ್ತಾರೆ…ಇದು ಬರೀ ವ್ಯಕ್ತಿಯ ಸಮಸ್ಯೆ ಮಾತ್ರ ಅಲ್ಲ. ಇದು ಅವರ ಕೃತಿಯ ಸಮಸ್ಯೆಯೂ ಹೌದು” ಎಂದು ರಂಗ ನಿರ್ದೇಶಕ ಪ್ರಸನ್ನ ಅವರ ಅಭಿಮತವಾಗಿದೆ. ಅಂತೆಯೇ ಲಂಕೇಶರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ “…….ಈತ ಇದನ್ನೆಲ್ಲಾ ಮಂಗೋಲಿಯಾದಲ್ಲಿ ಮಾಡಿದ್ದರೂ ವ್ಯತ್ಯಾಸವಿರುತ್ತಿರಲಿಲ್ಲ; ಅಷ್ಟಿದೆ ಇವರ ಕನ್ನಡದ ಬೆಸುಗೆ” ಎಂದು ತೀರ್ಮಾನಿಸುತ್ತಾರೆ. ಕೆ.ವಿ. ಅಕ್ಷರ ಹಯವದನ ನಾಟಕ ಕುರಿತು ಮಾತನಾಡುವಾಗ “ಈ ನಾಟಕ ಎಲ್ಲ ಜಾನಪದ ಅಂಶಗಳನ್ನೂ ಆಯ್ಕೆಮಾಡಿ ಅಳವಡಿಸಿದ ದೃಷ್ಟಿ ಪಾಶ್ಚಾತ್ಯ ಧೋರಣೆಯುಳ್ಳದ್ದು….. ನಮ್ಮ ಸಾಂಪ್ರದಾಯಿಕ ರಂಗಭೂಮಿಯನ್ನು ಹೀಗೆ ಪಾಶ್ಚಾತ್ಯ ಕಣ್ಣುಗಳಿಂದ ನೋಡಿದ ಕಾರಣಕ್ಕಾಗಿಯೇ ಈ ಒಟ್ಟು ಕಟ್ಟಡಕ್ಕೆ ಒಂದು ‘ಫಾರಿನ್ ರಿಟರ್ನ್ಡ್ ಕಥೆಯೇ ಅಗತ್ಯವಾಗಿರಬೇಕು”. ಇಷ್ಟಲ್ಲದೆ ಚಂಪಾ ಸಂಕ್ರಮಣದ ಒಂದು ಸಂಚಿಕೆಯಲ್ಲಿ  “ಕಾರ್ನಾಡರ  ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕು” ಎಂದು ಗೇಲಿ ಮಾಡಿದ್ದನ್ನು ನೆನಪಿಸಬಹುದು. ಈ ಎಲ್ಲಾ ನಿಲುವುಗಳು ಸಮಾನವಾಗಿ ತೋರಿಸುವ ಒಂದು ಅಂಶವೆಂದರೆ ಕಾರ್ನಾಡರ ನಾಟಕಗಳ ಒಳಗೆ ಅವಿತಿರುವ ನಾವೀನ್ಯತೆ. ಇನ್ನು ‘ಪರಂಪರೆ’, ‘ಸಾತತ್ಯ’ ಇತ್ಯಾದಿ ಯಾವುವೂ ಸಿದ್ಧ ವಸ್ತುಗಳಲ್ಲ. ಅವುಗಳು ಆಯಾಯ ವಿಮರ್ಶಕನ ಮತ್ತು ಇತಿಹಾಸಕಾರನ ವೈಚಾರಿಕ ಪರಿಪ್ರೇಕ್ಷ್ಯವನ್ನು ಅನುಸರಿಸಿ ಬದಲಾಗುವ ಸಾಪೇಕ್ಷ ರಚನೆಗಳು. ಈ ಸಂದರ್ಭದಲ್ಲಿ ಗ್ರಹಿಸಬಹುದಾದ ಮತ್ತೊಂದು ಸತ್ಯ ಸಂಗತಿ ಎಂದರೆ ಮೇಲೆ ಹೆಸರಿಸಿದ ರಂಗ ನಿರ್ದೇಶಕರ ಹಾಗೂ ವಿಮರ್ಶಕರ ಅಭಿಪ್ರಾಯಗಳನ್ನು ಒಪ್ಪಬೇಕಾದ ವಿಚಾರ ಗಿರೀಶ್ ಕಾರ್ನಾಡರ ಮಾತಿನಿಂದಲೇ ಅರಿವಾಗುತ್ತದೆ.

“ನನ್ನ ತಲೆಮಾರಿನ ಅನಂತಮೂರ್ತಿ, ಲಂಕೇಶ ಅಥವಾ ತೇಜಸ್ವಿ ಕನ್ನಡ ಸಂಸ್ಕೃತಿಯೊಳಗೆ ಇನ್‍ವಾಲ್ವ್ ಆದ ಹಾಗೆ ನಾನು ಆಗಿಲ್ಲ. ಏಕೆ ಎಂದು ನನಗೆ ಗೊತ್ತಿಲ್ಲ ಆಗೋಕೆ ಸಾಧ್ಯವೂ ಆಗಿಲ್ಲ. ಪ್ರಾಯಶಃ ಅನಂತಮೂರ್ತಿ ಲಂಕೇಶ್  ಅವರೆಲ್ಲಾ  ಯೂನಿವರ್ಸಿಟಿಗಳಲ್ಲಿ ಕಳೆದರು ಅನ್ನುವುದು ಕಾರಣವಿರಬಹುದು”. ಎಂದು ಅಭಿಪ್ರಾಯಿಸುತ್ತಾರೆ. ಒಟ್ಟಿನಲ್ಲಿ ನಾಟಕ ಕಟ್ಟುವ ಕ್ರಿಯೆಯನ್ನು ಕಟ್ಟಡ ಕಟ್ಟುವ ಕ್ರಿಯೆಗೆ ಹೋಲಿಸುವ ಗಿರೀಶ ಕಾರ್ನಾಡರು ಕನ್ನಡ  ನಾಟಕ  ಜಗತ್ತಿನಲ್ಲಿ  ತಮ್ಮದೇ  ನೆಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆನೆ ನಡೆದದ್ದೇ ದಾರಿ ಅನ್ನುವ ಹಾಗೆ ನಾಟಕ ಕ್ಷೇತ್ರದಲ್ಲಿ ನಡೆದ  ಅದ್ಬುತ  ಪ್ರತಿಭಾವಂತ  ಅನ್ನುವುದು  ಮಾತ್ರ ಅತಿಶಯೋಕ್ತಿಯಲ್ಲ.

 

ತಲೆದಂಡ

ತುಘಲಕ್ ನಾಟಕದ ನಂತರ ಕಾರ್ನಾಡರು ಬರೆದ ಎರಡನೆಯ ಐತಿಹಾಸಿಕ  ನಾಟಕ  ತಲೆದಂಡ.  ಕಾರ್ನಾಡರಿಗೆ  ವಿಶೇಷ  ಗೌರವ, ಮನ್ನಣೆಯನ್ನು ತಂದುಕೊಟ್ಟ ಈ ಕೃತಿ ಪ್ರಕಟವಾದದ್ದು 1990ರಲ್ಲಿ. ತುಘಲಕ್ ಪಾತ್ರದಲ್ಲಿ ಅಸಾಧಾರಣ ಯಶಸ್ಸನ್ನು ಕಂಡಿದ್ದ ಸಿ.ಆರ್. ಸಿಂಹ ಈ ನಾಟಕದ ಬಿಜ್ಜಳನ ಪಾತ್ರದಲ್ಲೂ ಮಿಂಚಿದರು. ಕಾರ್ನಾಡರ ಶ್ರೇಷ್ಠ ನಾಟಕದಲ್ಲಿ ಒಂದಾದ ಇದರ ವೈಶಿಷ್ಟ್ಯವೆಂದರೆ ಅವರ ನಾಟಕಗಳಲ್ಲಿ ಇದೊಂದೆ ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಬರೆಯಲ್ಪಟ್ಟಿರುವುದು. 12ನೆಯ ಶತಮಾನದಲ್ಲಿ ಕರ್ನಾಟಕ ಕಂಡ ಅತ್ಯಂತ ಪ್ರಗತಿಪರ ಮತ್ತು ಮಾನವೀಯ ಧಾರ್ಮಿಕ -ಸಾಮಾಜಿಕ ಚಳವಳಿ. ಈ ಚಳವಳಿಯ ಮತ್ತು ಚಳವಳಿಯ ನಾಯಕರಾದ ಬಸವಣ್ಣನವರ ಸೋಲು ಮತ್ತು ಗೆಲುವುಗಳನ್ನು ಈ ನಾಟಕ ಅತ್ಯಂತ ಯಶಸ್ವಿಯಾಗಿ ಚಿತ್ರಿಸುತ್ತದೆ. ಈ ವಸ್ತು ಕನ್ನಡಕ್ಕೆ ಹೊಸತಲ್ಲ. ಬಸವಣ್ಣನವರನ್ನು ಹಾಗೂ ಈ ಚಳವಳಿಯ ಕುರಿತ ಅನೇಕ ನಾಟಕ ಹಾಗೂ ಕಾದಂಬರಿಗಳು ಕನ್ನಡದಲ್ಲಿ ಬಂದಿವೆ. ಕಂಪನಿ ನಾಟಕಗಳ ಜಗಜ್ಯೋತಿ ಬಸವೇಶ್ವರ, ಬಿ. ಪುಟ್ಟಸ್ವಾಮಯ್ಯ ಅವರ ಕ್ರಾಂತಿ ಕಲ್ಯಾಣ, ಲಂಕೇಶ ಅವರ ಸಂಕ್ರಾತಿ, ಕಲ್ಬುರ್ಗಿ ಅವರ ಕೆಟ್ಟಿತು ಕಲ್ಯಾಣ, ಎಚ್.ಎಸ್. ಶಿವಪ್ರಕಾಶ್ ಅವರ ಮಹಾಚೈತ್ರ, ಪಿ.ವಿ. ನಾರಾಯಣ ಅವರ ಧರ್ಮಕಾರಣ ಇತ್ಯಾದಿಗಳು.

ಹೀಗಿದ್ದರೂ ಮತ್ತೆ ಆ ವಸ್ತು ತಮ್ಮನ್ನೇಕೆ ಆಕರ್ಷಿಸಿತು ಎಂಬುದನ್ನು ಕಾರ್ನಾಡರೇ  ತಮ್ಮ  ಕಿರು  ಮುನ್ನಡಿಯಲ್ಲಿ  ಹೀಗೆ  ವಿವರಿಸುತ್ತಾರೆ. “ನೋಯುವ ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ ಹೊರಳುವಂತೆ ಪ್ರತಿಯೊಬ್ಬ ಕನ್ನಡಿಗ ಮತ್ತೆ ಮತ್ತೆ ಆ ಯುಗದ ಬೆರಗುಗೊಳಿಸುವ ಪ್ರತಿಭೆಗೆ, ಆ ಉತ್ಸಾಹಕ್ಕೆ ಮೌಲಿಕ ಪ್ರಶ್ನೆಗಳನ್ನು ಕೇಳುವ ಎದೆಗಾರಿಕೆಗೆ, ಗೆಲುವಿಗೆ, ನೋವಿಗೆ ಮರಳುವುದು, ಅದನ್ನು ಹೊಸ ಸಂದರ್ಭದಲ್ಲಿ ಅರ್ಥೈಸಲು ಯತ್ನಿಸುವುದು ಅನಿವಾರ್ಯ”. ಹದಿನಾರು ದೃಶ್ಯಗಳ ಈ ನಾಟಕ ಅತ್ಯಂತ ಕರ್ಮಠ ವೈದಿಕನಾದ  ಸಾಂಬಶಿವ  ಶಾಸ್ತ್ರಿಯ  ಸಾವಿನಿಂದ  ಪ್ರಾರಂಭವಾಗಿ, ಕಲ್ಯಾಣದುದ್ದಕ್ಕೂ ರಕ್ತಪಾತವಾಗುತ್ತಿರುವಾಗ ನಡೆಯುವ ಬಿಜ್ಜಳನ ಮಗ

ಸೋವಿದೇವನ ಪಟ್ಟಾಭಿಷೇಕದೊಂದಿಗೆ ಮುಗಿಯುತ್ತದೆ. ತುಘಲಕ್   ಸಂಪ್ರದಾಯದಲ್ಲಿ   ಬಂದ   ಈ   ನಾಟಕ ಬೆರಗುಗೊಳಿಸುವಷ್ಟು ಸ್ಪಷ್ಟತೆ ಮತ್ತು ಅಚ್ಚುಕಟ್ಟುತನ ಹೊಂದಿದ ನಾಟಕ. ನಾಟಕದಲ್ಲಿ ಮೊದಲು ಕಾಣುವ ಅಂಶವೆಂದರೆ ಬಿಜ್ಜಳನ ಪಾತ್ರವನ್ನು ರಾಜಸಿಂಹಾಸನ’ದ ಮಟ್ಟದಿಂದ ಜನಸಾಮಾನ್ಯನ ಮಟ್ಟಕ್ಕೆ ತಂದಿರುವುದು.

ಈ ನಾಟಕವು ಬಸವಣ್ಣನ ಪಾತ್ರಕ್ಕಿಂತ ಹೆಚ್ಚಾಗಿ ಬಿಜ್ಜಳನ ದುರಂತವನ್ನು ಚಿತ್ರಿಸುವಲ್ಲಿ ಕೇಂದ್ರೀಕೃತವಾಗಿದೆ. ಈ ಎರಡು ದೃಷ್ಟಿಯಿಂದ ‘ತಲೆದಂಡ’ ನಾಟಕವು ಲಂಕೇಶರ ‘ಸಂಕ್ರಾಂತಿ’ ನಾಟಕದಿಂದ ಭಿನ್ನವಾಗಿದೆ. ಬಿಜ್ಜಳನ ಕೊಲೆಗೆ ಐತಿಹಾಸಿಕ ಹಿನ್ನೆಲೆ ಏನೇ ಇರಲಿ ಈ ನಾಟಕದ ವಸ್ತುವು ನಾಟಕೀಯತೆ’ ಯನ್ನು ಸೂರೆಗೊಳ್ಳಲು ನಾಟಕಕಾರರಿಗೆ ಸಹಾಯಕವಾಗಿದೆ. ಈ ನಾಟಕದಲ್ಲಿ ಬಿಜ್ಜಳನಿಗೆ ದೊರೆತ ಪ್ರಾಮುಖ್ಯತೆಯನ್ನು ನೋಡಿದರೆ

ನಾಟಕವು  ವರ್ತಮಾನದತ್ತ  ನಿರ್ದೇಶಿಸುವಲ್ಲಿ  ಸಹಾಯ  ಮಾಡಿದೆ ಅನ್ನುವುದು  ಗೋಚರವಾಗುತ್ತದೆ.  ಬಿಜ್ಜಳನ  ಪಾತ್ರ  ಪರಿಚಯವನ್ನು ಕ್ಷತ್ರಿಯ’ನೆಂದು ಕೊಟ್ಟಿದ್ದರೂ ನಾಟಕದಲ್ಲಿ ಬಿಜ್ಜಳನೇ ತಿಳಿಸುವಂತೆ ಅವನು ‘ಕ್ಷೌರಿಕ’ ಜಾತಿಗೆ ಸೇರಿದವನಾಗಿದ್ದಾನೆ. ಕ್ರಾಂತಿಯ ಅಮಲಿನಲ್ಲಿರುವ ಬ್ರಾಹ್ಮಣ ತರುಣ ಶರಣ ಜಗದೇವನಿಂದ ಬಿಜ್ಜಳನ ಕೊಲೆಯಾಗುತ್ತದೆ.

ಬಿಜ್ಜಳನು ಈ ನಾಟಕದಲ್ಲಿ ಒರಟ, ವ್ಯವಹಾರ ಜ್ಞಾನಿ, ಕಾವ್ಯಕ್ಕೆ ಸ್ಪಂದಿಸಿ ಅದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲಾಗದ ರಾಜನೀತಿಜ್ಞ, ತನ್ನ ವ್ಯಕ್ತಿತ್ವದ ಇಬ್ಬಂದಿತನವನ್ನು ಗುರುತಿಸಿಯೂ ನಿರುಪಯನಾದ ವ್ಯಕ್ತಿ. ಹೀಗೆ ಹಲವಾರು   ದೃಷ್ಟಿಯಿಂದ   ‘ವರ್ತಮಾನ’ದ   ರಾಜಕಾರಣಿಗೆ ಸಂಕೇತವಾಗುತ್ತಾನೆ. ಬದಲಾವಣೆಯ ಮತ್ತು ಕ್ರಾಂತಿಯ ತತ್ವಗಳನ್ನು ಒಪ್ಪಿಕೊಂಡು ಮತಾಂತರವಾದಾಗಲೂ ಕೂಡ ಗಂಡು-ಹೆಣ್ಣುಗಳ ಮತ್ತು ಮನೆತನಗಳ ಸಂಬಂಧವನ್ನು ಜೋಡಿಸುವಾಗ ಅವರು ಮೂಲತಃ ಯಾವ ಜಾತಿಗೆ ಸೇರಿದವರೆಂಬ ಅಂಶವು ಪ್ರಮುಖವಾಗಿ ಪ್ರಸ್ತಾವಕ್ಕೆ ಬರುತ್ತದೆ. ಈ ಅಂಶವು ಶೀಲ ಮತ್ತು ಕಲಾವತಿಯ ಮದುವೆಯ ಪ್ರಸ್ತಾಪದಲ್ಲಿ ಬರುವ ಸಂಭಾಷಣೆಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಸಂಕ್ರಮಣ ಕಾಲವೊಂದರಲ್ಲಿ

ಸಿಲುಕಿರುವ ನಮ್ಮ ‘ವರ್ತಮಾನ’ದಲ್ಲಿ ಕೂಡ ಪ್ರತಿದಿನ ಈ ಅಂಶವು ನಮ್ಮ ಗಮನಕ್ಕೆ ಬರುತ್ತದೆ. ಬಿಜ್ಜಳನಿಗೆ ಬಸವಣ್ಣನಲ್ಲಿರುವ ಆಸಕ್ತಿಯಲ್ಲಿ ವ್ಯವಹಾರದ ಅಂಶವೆಷ್ಟು, ಕ್ರಾಂತಿಯ ಅಂಶವೆಷ್ಟು ಮತ್ತು ಆಧ್ಯಾತ್ಮದ ಅಂಶವೆಷ್ಟೆಂಬುದನ್ನು  ಪರೀಕ್ಷಿಸಿದಾಗ, ಅದರಲ್ಲಿ ವ್ಯವಹಾರದ ಅಂಶವೇ ಜಾಸ್ತಿ ಎಂದು ನಮಗೆ ನಾಟಕದಲ್ಲಿ ಗೊತ್ತಾಗುತ್ತದೆ. ಮಗನ ಮೇಲಿನ ವ್ಯಾಮೋಹದೊಂದಿಗೆ ಬಸವಣ್ಣನ ಮೇಲಿನ ನಂಬುಗೆಯೂ ಬಿಜ್ಜಳನ ದುರಂತಕ್ಕೆ ಕಾರಣವಾಗಿದೆ. ಬಿಜ್ಜಳನ ಮಗನಾದ ‘ಸೋವಿದೇವನ’ ಕುತಂತ್ರದಿಂದಾಗಿ ನಡೆಯುವ ಕಾರಸ್ಥಾನಕ್ಕೆ ಬಲಿಯಾದ ಬಿಜ್ಜಳನು ತನ್ನ ಅರಮನೆಯಲ್ಲಿ ಕೈದಿಯಾಗಿದ್ದಾನೆ. ತನ್ನನ್ನು ಈ ಗೃಹ ಕಾರಾಗೃಹದಿಂದ ಮುಕ್ತಗೊಳಿಸಲು ಬಸವಣ್ಣನು ಬರುತ್ತಾನೆಂಬ ನಂಬುಗೆ ಬಿಜ್ಜಳನಲ್ಲಿದೆ. ಬಸವಣ್ಣ ಬಿಜ್ಜಳನ ಬಿಡುಗಡೆಯಲ್ಲಿ ಆಸಕ್ತಿಯನ್ನು ತೋರುವುದಿಲ್ಲ. ಬಿಜ್ಜಳ ಮತ್ತು ಬಸವಣ್ಣನ ಮಧ್ಯೆ ನಡೆಯುವ ಕೊನೆಯ  ಭೇಟಿಯ  ಈ   ಕೊನೆಯ   ಸಂಭಾಷಣೆ   ಪರೀಕ್ಷೆಗೆ ಒಳಪಡುವಂಥದ್ದು.

ಬಸವಣ್ಣ – ನಾನು ಕಪ್ಪಡ ಸಂಗಮಕ್ಕೆ ಹೊರಟೀನಿ, ಧಣಿ. ಇನ್ನು ಯಾವತ್ತು ಭೆಟ್ಟಿನೋ ಗೊತ್ತಿಲ್ಲ. ಅದಕ$ ಹೇಳತೀನಿ. ನಮ್ಮ ಬಯಕೆ ಬೇಗುದಿಗೆ ಶಿವನ ಕರುಣೆಯನ್ನು ಒಗ್ಗಿಸೋದು ಬ್ಯಾಡ, ಧಣಿ. ಶಿವನಿಚ್ಛಾನ$ ನಮ್ಮ ಬಾಳಾಗಬೇಕು. ಅವ ಸೋಲನ್ನೊಡ್ಡಲಿ, ಗೋಳಾಡಿಸಲಿ. ನಮ್ಮ ಕಡೆಗೆ ಲಕ್ಷ್ಯ ಕೊಡತಾನಲ್ಲ. ಅದ$ ನಮ್ಮ ಗೆಲವು. ಬಿಜ್ಜಳ : (ಕಂಗೆಟ್ಟು) ನಿಂದು ಯಾವತ್ತು ಹೀಂಗ$. ನೀ ಮಾತಾಡಿದ್ದು ಅರ್ಧಕ್ಕರ್ಧ ತಿಳಿಯಾದ$ ಇಲ್ಲ. ಹೇಳೋದನ್ನ ಒಂದು ಸಾಲಿನ್ಯಾಗ ಹೇಳಬಾರದ? ನಂಬು. ಬಸವಣ್ಣ : (ನಕ್ಕು) ಹೇಳತೇನೆ, ಧಣಿ. ಏನಾದರೂ ಶಿವನನ್ನು$ ಬಿಜ್ಜಳ : (ತಡೆದು) ಇಲ್ಲ. ಭಾಳ ಕಠಿಣ ಐತ್ಯದು. ನನ್ನ ಕೈಲಾಗೂದಿಲ್ಲ. ಬಸವಣ್ಣ : ಆಗತದ ಧಣಿ. ನೀ ಮನಸ್ಸು ಮಾಡಿದರ ಸಾಕು, ಆಗತದ ಇದಾದ ನಂತರ ತನ್ನ ದುಃಖವನ್ನು ಮುಚ್ಚಿಡಲು ತನ್ನ ಮಡದಿ ರಂಭಾವತಿಯನ್ನು ಶರಣರು ಬಂದು ರಕ್ಷಿಸುತ್ತಾರೆ ಎಂದು ನಂಬಿಸಲು ಪ್ರಯತ್ನಿಸುತ್ತಾನೆ.  ಆ ಪ್ರಯತ್ನದಲ್ಲಿ ಬಿಜ್ಜಳನಿಗಾದ ವಿಶ್ವಾಸಘಾತದ ಸ್ಪಷ್ಟ ಚಿತ್ರಣವಿದೆ. ರಂಭಾವತಿಯು ಬಿಜ್ಜಳನ ಈ ಪ್ರಯತ್ನದಲ್ಲಿ ಪಾಲ್ಗೊಳಲು ನಿರಾಕರಿಸಿದವಳಂತೆ ಮೌನದಿಂದ ಇದ್ದಾಳೆ. ಅವಳು ಬಸವಣ್ಣ ಮತ್ತು ಆತನ ಶರಣರನ್ನು ಬಿಜ್ಜಳನಿಗಿಂತ ಚೆನ್ನಾಗಿ ಅರಿತಿದ್ದಾಳೆ ಎಂಬುದಕ್ಕೆ ಇದೊಂದು ನಿದರ್ಶನದಂತೆ ತೋರುತ್ತದೆ. ಬಿಜ್ಜಳ ತೋರುತ್ತಿರುವಂಥ ವ್ಯವಹಾರ ಜ್ಞಾನವನ್ನೇ ಬಸವಣ್ಣನೂ ತೋರುತ್ತಿರಬಹುದೆ ಎಂಬ ಗುಮಾನಿ ಬರಲು ನಾಟಕದಲ್ಲಿ ಕೆಲವು ಅಂಶಗಳಿವೆ.

ಬಸವಣ್ಣನ  ಮನೆಯಲ್ಲಿ  ನಡೆಯುವ  ದಾಸೋಹಕ್ಕೆ ವ್ಯಾಪಾರಸ್ಥರ ಬೆಂಬಲವಿದೆ. ಈ ಆರ್ಥಿಕ ಬೆಂಬಲವನ್ನು ಬಸವಣ್ಣನು ನಿರಾಕರಿಸಿಲ್ಲ. ಶರಣರ ಸಾಮ್ರಾಜ್ಯವಾದ ಕಲ್ಯಾಣ ನಗರವು ಒಂದು ಕ್ಷೇಮಕರ ಸ್ಥಳವಾದುದರಿಂದ ವ್ಯಾಪಾರಸ್ಥರ ಸ್ವರ್ಗವಾಗಿದೆ. ಈ ಕಾರಣಕ್ಕಾಗಿಯೇ ವ್ಯಾಪಾರಸ್ಥರಿಗೆ ಮತ್ತು ಬಿಜ್ಜಳನಿಗೆ ಬಸವಣ್ಣ ಬೇಕಾದ ವ್ಯಕ್ತಿಯಾಗಿದ್ದಾನೆ. ಬಸವಣ್ಣನ ಆಧ್ಯಾತ್ಮಿಕ ಮುನ್ನಡೆಗೆ ಇಂಥ ಒಂದು ಅನಿವಾರ್ಯ ಮತ್ತು ಅಲಿಖಿತ ಆರ್ಥಿಕ ತಳಹದಿ ಮತ್ತು ಕಾರಣವಿದೆ ಎಂಬುದು ನಾಟಕದಲ್ಲಿ ಮಾರ್ಮಿಕವಾಗಿ   ಮೂಡಿ   ಬಂದಿದೆ.   ಬಸವಣ್ಣನು   ಕಲ್ಯಾಣದ ‘ಭಂಡಾರಿ’ಯೂ ಆಗಿದುದರಿಂದ ಈ ಆರ್ಥಿಕ ಮತ್ತು ಪಾರಮರ್ಥಿಕದ ಬೆಸುಗೆ ನಾಟಕದಲ್ಲಿ ಅನಿವಾರ್ಯವೆಂದು ತೋರುತ್ತದೆ. ಮೂರು ಅಂಕ, ಹದಿನಾರು ದೃಶ್ಯಗಳಲ್ಲಿ ನಾಟಕವು ಅರಳುತ್ತದೆ. ತಲೆದಂಡ’ ನಾಟಕದಲ್ಲಿ ಗಿರೀಶ್ ಕಾರ್ನಾಡರ ಶರಣ ಕ್ರಾಂತಿಯ ತನ್ನ ಮೂಲ ಆಶಯಗಳಿಗೆ ವಿರುದ್ಧವಾದ ಹಿಂಸೆ, ಕ್ರೌರ್ಯಗಳಲ್ಲಿ ಅಂತ್ಯಗೊಳ್ಳುವ ಒಂದು  ವಿಷಾದಮಯ  ಘಟ್ಟವನ್ನು  ಬಿಂಬಿಸಿದ್ದಾರೆ.  ಕಾರ್ನಾಡರು ಯಾವುದೇ ಸಮಸ್ಯೆಯನ್ನು ಕೈಗೆತ್ತಿಕೊಂಡರೂ ಅದನ್ನು ಎಲ್ಲಾ ಸಂಕೀರ್ಣತೆ ಮತ್ತು  ವೈರುಧ್ಯಗಳೊಂದಿಗೆ  ವಿವೇಚಿಸುತ್ತಾರೆ.  ನಾಟಕದ  ಪಾತ್ರಗಳ ಮೇಲಾಗಲೀ, ಸಂದರ್ಭಗಳ ಮೇಲಾಗಲೀ ಅವರು ತಮ್ಮ ವ್ಯಕ್ತಿಗತ ನಿಲುವುಗಳನ್ನು ಹೊರೆಸುವುದಿಲ್ಲ. ಒಟ್ಟಿನಲ್ಲಿ  ಇವರ  ನಾಟಕಗಳಲ್ಲಿ  ಕಂಡುಬರುವ  ಜೀವನದೃಷ್ಟಿ ಪ್ರಗತಿಪರ ಮತ್ತು ಜೀವಪರವಾದುದು. ಶರಣಕ್ರಾಂತಿಯು ಸಮಾಜವನ್ನು ಅತ್ಯಂತ   ಆರೋಗ್ಯಕರವಾಗಿಯೂ,   ಸಮೃದ್ಧವಾಗಿಯೂ   ಮತ್ತು ಶಾಂತಿಪೂರ್ಣವಾದುದೂ   ಆಗುವಂತೆ   ಮಾಡಬಲ್ಲ   ಚೈತನ್ಯವನ್ನು ಹೊಂದಿದೆ.

ಅದರ ವೈಫಲ್ಯ ಅದರ ಲೋಪಗಳಿಂದ ಉಂಟಾಗಿರುವಂಥದ್ದಲ್ಲ. ಬದಲಿಗೆ  ಸಾಮಾಜಿಕ  ಪರಿಸ್ಥಿತಿಯಿಂದ  ಉಂಟಾದದ್ದು.  ಸಹಸ್ರಾರು ವರ್ಷಗಳಿಂದ ಬೇರುಬಿಟ್ಟ ಸನಾತನ ಧರ್ಮದ ಚಾತುರ್ವಗರ್ಣ ನೀತಿಗೆ ಪೂರ್ಣ ವಿರುದ್ಧವಾದುದು. ಹಾಗೂ    ಏಕದೇವೋಪಾಸನೆ, ಕಠಿಣ ಪರಿಶ್ರಮ, ಜಾತಿವರ್ಗ ರಹಿತವಾದ ವ್ಯವಸ್ಥೆಯನ್ನು ಪ್ರತಿಪಾದಿಸುವುದೇ, ಬಸವಧರ್ಮ. ಬಿಜ್ಜಳನಿಗೂ ಅಂತರಾಳದಲ್ಲಿ ಬಸವಣ್ಣನವರ ವೀರಶೈವ ಧರ್ಮದ ಬಗ್ಗೆ ಒಲವಿರುತ್ತದೆ. ಆದರೆ ರಾಜಕೀಯ ಭದ್ರತೆಗಾಗಿ ಬಿಜ್ಜಳನು ಅದನ್ನು ಮನಃಪೂರ್ವಕವಾಗಿ ಅಂಗೀಕರಿಸಿಕೊಳ್ಳಲಾಗದೇ ಹೋಗುತ್ತಾನೆ.

ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

– ಸಂ

ಇನ್ನಷ್ಟು ಓದಿರಿ

Scroll to Top