ಗಿರೀಶ್ ಕಾರ್ನಾಡರ ನಾಟಕಗಳ ಸಮೀಕ್ಷೆ: . ಅಗ್ನಿ ಮತ್ತು ಮಳೆ

Picture of Cinibuzz

Cinibuzz

Bureau Report

ಗಿರೀಶ್ ಕಾರ್ನಾಡರನ್ನು ಹೇಗೆ ಗ್ರಹಿಸಬೇಕು ಎಂಬುದೇ ಕನ್ನಡ ವಿಮರ್ಶಕರಿಗೆ ಪ್ರಶ್ನೆಯಾಗಿದೆ. ಏಕೆಂದರೆ ಅವರು ಅರ್ಧ ಶತಮಾನದ ಕಾಲ ಕನ್ನಡ ರಂಗಭೂಮಿಯಲ್ಲಿ ವಿಜೃಂಭಿಸಿದ ಕೈಲಾಸಂ-ಶ್ರೀರಂಗರ ವಾಸ್ತವವಾದಿ ಸಂಪ್ರದಾಯಕ್ಕೂ ಅವರು ಸೇರಿಲ್ಲ. ಹಾಗೆಯೇ ಐವತ್ತರ ದಶಕದಲ್ಲಿ ಸಾಕಷ್ಟು ಯಶಸ್ಸು ಗಳಿಸಿ ಪ್ರಭಾವಿಯಾಗಿದ್ದ  ‘ನವ್ಯ’ ಸಂಪ್ರದಾಯಕ್ಕೂ ಅವರು ಸೇರಿಲ್ಲ. ವಾಸ್ತವವಾದಿ ಪರಂಪರೆಯ ಕಾಲದಲ್ಲಿಯೂ ತನ್ನತನವನ್ನು ಹೇಗೋ ಉಳಿಸಿಕೊಂಡಿದ್ದ ವೃತ್ತಿಪರ(ಕಂಪನಿ) ನಾಟಕ ಪರಂಪರೆಗೂ ಅವರು ಹೊರತಾಗಿದ್ದಾರೆ. ಆದರೆ ಇವೆಲ್ಲಾ ಪರಂಪರೆಗಳ ಕೆಲವಂಶಗಳನ್ನು ಅವರ ನಾಟಕಕಗಳಲ್ಲಿ ನಾವು ಗುರುತಿಸಬಹುದು. ಬ್ರೆಕ್ಟ್ ಮತ್ತು ಆನ್ವಿ (Brecht-Anovilh) ಅವರ ಪ್ರಭಾವ ಅಲ್ಲಲ್ಲಿ ಕಂಡು ಬಂದರೂ ಬ್ರೆಕ್ಟ್‍ನ್ ಎಡಪಂಥೀಯ ಧೋರಣೆಗಳಾಗಲಿ ಆನ್ವಿಯ ನೈರಾಶ್ಯವಾಗಲಿ ಕಾರ್ನಾಡರಲ್ಲಿ ಇಲ್ಲ. ಹಾಗಾದರೆ ಕಾರ್ನಾಡರು ಎಂತಹ ನಾಟಕಕಾರರು.? ಅವರ ನಾಟಕಗಳ ಮೂಲ ಪ್ರೇರಣೆಗಳೇನು.? ಕಾರ್ನಾಡರ ಬೇರುಗಳು ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ಇಲ್ಲವೆಂದು  ಆಗಿಂದಾಗ್ಗೆ ಕನ್ನಡ ವಿಮರ್ಶಕರು ಮಂಡಿಸುತ್ತಿದ್ದಾರೆ. ‘ಕಾರ್ನಾಡರದ್ದು ಕೊಂಕಣಿ ಮನೋಧರ್ಮ. ಅವರು ನಿಜವಾದ ಅರ್ಥದಲ್ಲಿ ಕನ್ನಡಿಗರಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಕಾರ್ನಾಡರು ಆಲ್ ಇಂಡಿಯಾ ನಾಟಕಕಾರರೆಂದು ಅವರಲ್ಲಿ ‘ಕನ್ನಡತನ’ ಅಷ್ಟಾಗಿ ಇಲ್ಲವೆಂಬುದು ರಂಗ ನಿರ್ದೇಶಕರುಗಳಾದ ಪ್ರಸನ್ನ, ಅಕ್ಷರ ಹಾಗೂ ವಿಮರ್ಶಕರಾದ ಚಂಪಾ ಮುಂತಾದವರ ಅಭಿಪ್ರಾಯ.

“ಗಿರೀಶರು…..ಎಲ್ಲೋ ಕನ್ನಡದ ಜಾಯಮಾನದಿಂದ ಹೊರಗೆ ಉಳಿದುಬಿಡುತ್ತಾರೆ…ಇದು ಬರೀ ವ್ಯಕ್ತಿಯ ಸಮಸ್ಯೆ ಮಾತ್ರ ಅಲ್ಲ. ಇದು ಅವರ ಕೃತಿಯ ಸಮಸ್ಯೆಯೂ ಹೌದು” ಎಂದು ರಂಗ ನಿರ್ದೇಶಕ ಪ್ರಸನ್ನ ಅವರ ಅಭಿಮತವಾಗಿದೆ. ಅಂತೆಯೇ ಲಂಕೇಶರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ “…….ಈತ ಇದನ್ನೆಲ್ಲಾ ಮಂಗೋಲಿಯಾದಲ್ಲಿ ಮಾಡಿದ್ದರೂ ವ್ಯತ್ಯಾಸವಿರುತ್ತಿರಲಿಲ್ಲ; ಅಷ್ಟಿದೆ ಇವರ ಕನ್ನಡದ ಬೆಸುಗೆ” ಎಂದು ತೀರ್ಮಾನಿಸುತ್ತಾರೆ. ಕೆ.ವಿ. ಅಕ್ಷರ ಹಯವದನ ನಾಟಕ ಕುರಿತು ಮಾತನಾಡುವಾಗ “ಈ ನಾಟಕ ಎಲ್ಲ ಜಾನಪದ ಅಂಶಗಳನ್ನೂ ಆಯ್ಕೆಮಾಡಿ ಅಳವಡಿಸಿದ ದೃಷ್ಟಿ ಪಾಶ್ಚಾತ್ಯ ಧೋರಣೆಯುಳ್ಳದ್ದು….. ನಮ್ಮ ಸಾಂಪ್ರದಾಯಿಕ ರಂಗಭೂಮಿಯನ್ನು ಹೀಗೆ ಪಾಶ್ಚಾತ್ಯ ಕಣ್ಣುಗಳಿಂದ ನೋಡಿದ ಕಾರಣಕ್ಕಾಗಿಯೇ ಈ ಒಟ್ಟು ಕಟ್ಟಡಕ್ಕೆ ಒಂದು ‘ಫಾರಿನ್ ರಿಟರ್ನ್ಡ್ ಕಥೆಯೇ ಅಗತ್ಯವಾಗಿರಬೇಕು”. ಇಷ್ಟಲ್ಲದೆ ಚಂಪಾ ಸಂಕ್ರಮಣದ ಒಂದು ಸಂಚಿಕೆಯಲ್ಲಿ  “ಕಾರ್ನಾಡರ  ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕು” ಎಂದು ಗೇಲಿ ಮಾಡಿದ್ದನ್ನು ನೆನಪಿಸಬಹುದು. ಈ ಎಲ್ಲಾ ನಿಲುವುಗಳು ಸಮಾನವಾಗಿ ತೋರಿಸುವ ಒಂದು ಅಂಶವೆಂದರೆ ಕಾರ್ನಾಡರ ನಾಟಕಗಳ ಒಳಗೆ ಅವಿತಿರುವ ನಾವೀನ್ಯತೆ. ಇನ್ನು ‘ಪರಂಪರೆ’, ‘ಸಾತತ್ಯ’ ಇತ್ಯಾದಿ ಯಾವುವೂ ಸಿದ್ಧ ವಸ್ತುಗಳಲ್ಲ. ಅವುಗಳು ಆಯಾಯ ವಿಮರ್ಶಕನ ಮತ್ತು ಇತಿಹಾಸಕಾರನ ವೈಚಾರಿಕ ಪರಿಪ್ರೇಕ್ಷ್ಯವನ್ನು ಅನುಸರಿಸಿ ಬದಲಾಗುವ ಸಾಪೇಕ್ಷ ರಚನೆಗಳು. ಈ ಸಂದರ್ಭದಲ್ಲಿ ಗ್ರಹಿಸಬಹುದಾದ ಮತ್ತೊಂದು ಸತ್ಯ ಸಂಗತಿ ಎಂದರೆ ಮೇಲೆ ಹೆಸರಿಸಿದ ರಂಗ ನಿರ್ದೇಶಕರ ಹಾಗೂ ವಿಮರ್ಶಕರ ಅಭಿಪ್ರಾಯಗಳನ್ನು ಒಪ್ಪಬೇಕಾದ ವಿಚಾರ ಗಿರೀಶ್ ಕಾರ್ನಾಡರ ಮಾತಿನಿಂದಲೇ ಅರಿವಾಗುತ್ತದೆ.

“ನನ್ನ ತಲೆಮಾರಿನ ಅನಂತಮೂರ್ತಿ, ಲಂಕೇಶ ಅಥವಾ ತೇಜಸ್ವಿ ಕನ್ನಡ ಸಂಸ್ಕೃತಿಯೊಳಗೆ ಇನ್‍ವಾಲ್ವ್ ಆದ ಹಾಗೆ ನಾನು ಆಗಿಲ್ಲ. ಏಕೆ ಎಂದು ನನಗೆ ಗೊತ್ತಿಲ್ಲ ಆಗೋಕೆ ಸಾಧ್ಯವೂ ಆಗಿಲ್ಲ. ಪ್ರಾಯಶಃ ಅನಂತಮೂರ್ತಿ ಲಂಕೇಶ್  ಅವರೆಲ್ಲಾ  ಯೂನಿವರ್ಸಿಟಿಗಳಲ್ಲಿ ಕಳೆದರು ಅನ್ನುವುದು ಕಾರಣವಿರಬಹುದು”. ಎಂದು ಅಭಿಪ್ರಾಯಿಸುತ್ತಾರೆ. ಒಟ್ಟಿನಲ್ಲಿ ನಾಟಕ ಕಟ್ಟುವ ಕ್ರಿಯೆಯನ್ನು ಕಟ್ಟಡ ಕಟ್ಟುವ ಕ್ರಿಯೆಗೆ ಹೋಲಿಸುವ ಗಿರೀಶ ಕಾರ್ನಾಡರು ಕನ್ನಡ  ನಾಟಕ  ಜಗತ್ತಿನಲ್ಲಿ  ತಮ್ಮದೇ  ನೆಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆನೆ ನಡೆದದ್ದೇ ದಾರಿ ಅನ್ನುವ ಹಾಗೆ ನಾಟಕ ಕ್ಷೇತ್ರದಲ್ಲಿ ನಡೆದ  ಅದ್ಬುತ  ಪ್ರತಿಭಾವಂತ  ಅನ್ನುವುದು  ಮಾತ್ರ ಅತಿಶಯೋಕ್ತಿಯಲ್ಲ.

ಅಗ್ನಿ ಮತ್ತು ಮಳೆ

ಅಗ್ನಿ  ಮತ್ತು  ಮಳೆ  ಕಾರ್ನಾಡರು  ಇದುವರೆಗೆ  ಬರೆದ ನಾಟಕಗಳಲ್ಲಿಯೇ ಅತ್ಯಂತ ಮಹತ್ವಾಕಾಂಕ್ಷೆಯದು. ಈ ಮಾತು ನಾಟಕದ ವಸ್ತುವಿಗೆ   ಅನ್ವಯಿಸಿದಂತೆ   ಅದರ   ತಂತ್ರಕ್ಕೂ   ಅನ್ವಯಿಸುತ್ತದೆ. ಮಹಾಭಾರತದ ವನಪರ್ವದಲ್ಲಿ ಬರುವ ಲೋಮಶರು ಯುಧಿಷ್ಠರನಿಗೆ ಹೇಳಿದ ಯವಕ್ರೀತನ ಕಥೆ ನಾಟಕಕ್ಕೆ ಮುಖ್ಯ ವಸ್ತುವನ್ನು ಒದಗಿಸಿದೆ. ಆದರೆ ಇದರೊಡನೆ ಹಾಸುಹೊಕ್ಕಾಗಿ ನಾಟಕದೊಳಗಿನ ನಾಟಕವಾಗಿ ಬರುವ ಇಂದ್ರವಿಜಯದ  ಕಥೆ  ಹಾಗೂ  ಮಹಾಭಾರತದೊಡನೆ  ಯಾವ ಸಂಬಂಧವೂ ಇಲ್ಲದ ನಿಷಾದಕನ್ಯೆ ನಿತ್ತಿಲೆಯ ಕಥೆ ಹಾಗೂ ‘ಇಂದ್ರವಿಜಯ’ ನಾಟಕವನ್ನು ಆಡಿ ತೋರಿಸುವ ನಟರ ಕಥೆಗಳೂ ಸೇರಿವೆ. ಬ್ರಾಹ್ಮಣ-ಶೂದ್ರ ಈ ಪದಗಳ ಬಳಕೆ ನಮ್ಮ ಸಾಹಿತ್ಯದಲ್ಲಿ ಮತ್ತು ರಾಜಕೀಯದಲ್ಲಿ ಇತ್ತೀಚೆಗೆ ನಾನಾ ಬಗೆಯಿಂದ ಆಗುತ್ತಿದೆ. ಇಂಥ ಒಂದು ಸಂದರ್ಭದಲ್ಲಿ  ಇತಿಹಾಸ  ಪೂರ್ವಕಾಲದ  ಕತೆಯೊಂದನ್ನೆತ್ತಿಕೊಂಡು ಮನುಷ್ಯನ ಮೂಲಭೂತ ಪ್ರವೃತ್ತಿಗಳು ಎಲ್ಲಾ ಕಾಲದಲ್ಲೂ ಒಂದೇ ಎಂಬುದನ್ನು ಮೇಲ್ನೋಟಕ್ಕೆ ನಾಟಕ ತೋರಿಸುತ್ತದೆ. ಆದರೆ ನಾಟಕದ ಆಳವಾದ ಅಭ್ಯಾಸ ನಮ್ಮನ್ನು ಇನ್ನಿತರ ಎಷ್ಟೋ ವಿಷಯಗಳನ್ನು ಕುರಿತು ಯೋಚಿಸುವಂತೆ ಮಾಡುತ್ತದೆ.

ಪರಾವಸು ಯಜ್ಞದ ಅಧ್ವರ್ಯ. ಆತನೇ ಘಟನೆಗಳ ಕೇಂದ್ರ. ಆದರೆ ಆತ ನಾಟಕದ ನಾಯಕನಲ್ಲ. ಅರವಸು ಬ್ರಾಹ್ಮಣ್ಯವನ್ನು ತೊರೆದವನು. ನಾಟಕ ಬೆಳೆದಂತೆಲ್ಲ ಅರವಸು ನಾಟಕದ ನಾಯಕನಾಗಿ ಮಾರ್ಪಾಡಾಗುತ್ತಾ ಹೋಗುತ್ತಾನೆ. ಬ್ರಾಹ್ಮಣ್ಯವನ್ನು ಬಿಡುವುದರಿಂದ ಅರವಸು ಜೀವನದ ಮಾರ್ಪಾಡುಗಳಿಗೆ ತನ್ನನ್ನೇ ತೆರೆದುಕೊಳ್ಳತ್ತಾ ಹೋಗುತ್ತಾನೆ. ಇವರಿಬ್ಬರ ಮಧ್ಯೆ ಪರಾವಸುವಿನ ಚಿಕ್ಕಪ್ಪನ ಮಗ ಯುವಕ್ರೀತನ ಪಾತ್ರ ನಮಗೆ ಪರಾವಸು ಮತ್ತು ಅರವಸು ಇವರಿಬ್ಬರನ್ನು ತೂಗಿನೋಡುವ ದೃಷ್ಟಿ ಕೋನವನ್ನು ಒದಗಿಸುತ್ತದೆ. ಹತ್ತು ವರ್ಷಗಳಿಂದ ಮಳೆಬಾರದೆ ಜನರು ಪರಿತಪಿಸುತ್ತಿದ್ದಾರೆ. ಅದಕ್ಕಾಗಿ ಇಂದ್ರನನ್ನು ಒಲಿಸಿಕೊಂಡು ಮಳೆ ಬರಿಸಲು ಯಜ್ಞವೊಂದು ಸಾಗಿದೆ. ಆ ಯಜ್ಞದ ಅಧ್ಯರ್ಯು ಪರಾವಸು. ಆದರೆ ಪರಾವಸುವಿನ ಸಾಂಸಾರಿಕ ಜೀವನದಲ್ಲಿಯೇ ಕೆಲವೊಂದು ತೊಡಕುಗಳಿವೆ. ತನ್ನ ಚಿಕ್ಕಪ್ಪನ ಮಗ ಯುವಕ್ರೀತನೇ ತಪಸ್ಸಿಗೆ ಹೋದಾಗ ಪರಾವಸು ವಿಶಾಖಳನ್ನು ಮದುವೆಯಾಗಿದ್ದಾನೆ. ಆದರೆ ಮೊದಲು ವಿಶಾಖಾ ಮತ್ತು ಯವಕ್ರೀತ ಒಬ್ಬರನ್ನೊಬ್ಬರು ಪ್ರೀತಿಸಿದ್ದಾರೆ. ಆದರೆ ಯವಕ್ರೀತ ಬರುವುದರೊಳಗಾಗಿ ಪರಾವಸು ಮತ್ತು ವಿಶಾಖರ ಮದುವೆ ನಡೆದು ಹೋಗಿದೆ. ಯವಕ್ರೀತ ತಪಸ್ಸಿಗೆ ಹೋಗಿ ಏನನ್ನಾದರೂ ಸಾಧಿಸಿ ಬರಲು ಮುಖ್ಯ ಪ್ರೇರಣೆ ತನ್ನ ತಂದೆಗಾದ  ಅವಮಾನ.  ಆತನ  ತಂದೆ  ಕೂಡ  ತಪಸ್ವಿಯಾಗಿದ್ದರೂ ಯಾವುದೇ ಮನ್ನಣೆ ಇಲ್ಲದೆ ತುಳಿತಕ್ಕೊಳಗಾಗಿ ಮರಣ ಹೊಂದಿದ್ದಾನೆ. ಈ ಅನ್ಯಾಯವನ್ನು ಸರಿಪಡಿಸುವುದಕ್ಕೋಸ್ಕರ ಅವನು ತಪಸ್ವಿಯಾಗಿದ್ದಾನೆ. ಅಂಥ ತಪಸ್ಸಿನಿಂದ ಪಡೆದದ್ದೇನು ಎಂಬುದರ ಬಗ್ಗೆ ಅವನಿಗೆ ಖಚಿತವಾದ ಅರಿವಿಲ್ಲ. ದೇವರನ್ನು ಅಥವಾ ಇಂದ್ರನನ್ನು ಕಂಡ ಬಗೆಗೆ ಅವನಿಗೆ ಗುಮಾನಿಗಳಿವೆ. ಒಟ್ಟಿನಲ್ಲಿ ನಾಟಕದೊಳಗಿನ ನೈತಿಕ ಮಾನದಂಡಗಳು ನಮ್ಮ ಕಾಲಕ್ಕಿಂತ ಭಿನ್ನವಾದುವುಗಳಂತೆ ಚಿತ್ರಿಸಿರುವುದರಿಂದ ನಾಟಕವನ್ನು ಕುರಿತು ಓದುಗ ಕುತೂಹಲಿಯಾಗುತ್ತಾನೆ.

ನಾಟಕದ  ಶೀರ್ಷಿಕೆಯು  ಒಂದಕ್ಕೊಂದು  ತದ್ವಿರುದ್ಧ  ಎರಡು ಶಬ್ದಗಳನ್ನು ಸೂಚಿಸುತ್ತದೆ. ಯಜ್ಞ ಎಂಬ ಕ್ರಿಯೆ ಜೀವವಿರೋಧಿಯಾದುದು, ಅರ್ಥಹೀನವಾದುದು. ಇದಕ್ಕೆ ವಿರುದ್ಧವಾದುದು ಕರುಣೆ, ಪ್ರೀತಿ ಮತ್ತು ತ್ಯಾಗ. ಯಜ್ಞ ಮಾಡುವವರ ಜೀವ ವಿರೋಧಿ ನಿಲುವಿನಿಂದ, ಅವರ ಕ್ರಿಯೆಗಳಿಂದ ಮಳೆಬಾರದೆ, ಸಾಮಾನ್ಯರು ಎನಿಸಿಕೊಂಡವರ ಪ್ರಾಮಾಣಿಕತೆ, ಬಲಿದಾನಗಳಿಂದ ಮಳೆ ಸುರಿಯುತ್ತದೆ. ನಾಟಕದೊಳಗೆ ತಮ್ಮ ಅತಿಮಾನುಷ ಶಕ್ತಿ ಸಾಮಾಥ್ರ್ಯಗಳನ್ನು ದೇವ-ದಾನವರಿಬ್ಬರೂ ಈರ್ಷೆ ಸ್ವಾರ್ಥಗಳಿಗೆ ಉಪಯೋಗಿಸಿಕೊಳ್ಳುವರು. ಋಷಿಗಳು, ವೈದಿಕರು ಅರ್ಥಹೀನ ಕ್ರಿಯೆಗಳಲ್ಲಿ ತಪಸ್ಸಿನ ಹೆಸರಿನಲ್ಲಿ ನಿಷ್ಕ್ರಿಯರಾಗುವಂಥವರು.   ಯಾವುದೇ ಜ್ಞಾನ, ಸಿದ್ಧಿ, ಅತಿಮಾನುಷ ಶಕ್ತಿಗಳಿಲ್ಲದ  ಬೇಡರು,  ಜಾತಿಗಾರರು  ತಮ್ಮ  ಮುಗ್ಧತೆಯಿಂದಲೇ ಜೀವಪರವಾದ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ. ಮೇಲು ವರ್ಗ ಮತ್ತು ಕೆಳವರ್ಗಗಳನ್ನು ಕುರಿತು ಗಂಭೀರವಾದ ಚರ್ಚೆ ನಡೆಯುತ್ತಿರುವ ಈ ಕಾಲದಲ್ಲಿ ‘ಅಗ್ನಿ ಮತ್ತು ಮಳೆ’ ನಾಟಕವು ಸಾಂಕೇತಿಕ  ಅರ್ಥಗಳನ್ನು  ಧ್ವನಿಸುತ್ತ  ಸರಳ  ಸಮೀಕರಣಗಳನ್ನು ನಿರಾಕರಿಸುತ್ತದೆ. ನಮ್ಮ ಹೆಚ್ಚಿನ ಲೇಖಕರು ಈ ವಿಷಯದಲ್ಲಿ ತೋರಿದ ಸರಳತೆಯನ್ನು ಈ ನಾಟಕ ಮೀರುತ್ತ ನಮ್ಮ ಬದುಕಿನ ಮೂಲ ಐತಿಹಾಸಿಕ ಸೆಲೆಗಳ ನಾಡಿ ಬಡಿತವನ್ನು ನಮ್ಮ ಗಮನಕ್ಕೆ ಯಶಸ್ವಿಯಾಗಿ ತರುತ್ತದೆ.

ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

– ಸಂ

ಇನ್ನಷ್ಟು ಓದಿರಿ

Scroll to Top