ಹಫ್ತಾ ವಸೂಲಿ ಅಡ್ಡ ಬಂದೋರು ನಿಖಾಲಿ!

Picture of Cinibuzz

Cinibuzz

Bureau Report

ತಂತ್ರಜ್ಞಾನದ ಪರಿಣಿತಿ ಹೊಂದಿರುವ ಒಬ್ಬ ಹುಡುಗ ಅಂಡರ್ ವರ್ಲ್ಡ್ ಅನ್ನು ಆಳಲು ಬರುತ್ತಾನೆ. ಇನ್ನೊಬ್ಬ ಹುಡುಗ ತಾನಾಯಿತು ತನ್ನ ಪಾಡಾಯಿತು ಅಂತಾ ಹೊಟ್ಟೆ ಪಾಡಿಗಾಗಿ ನೀರಿನ ಕ್ಯಾನ್ ಮಾರಿಕೊಂಡಿರುತ್ತಾನೆ. ಇಬ್ಬರೂ ಬಾಲ್ಯ ಸ್ನೇಹಿತರು. ನೀರು ವ್ಯಾಪಾರ ಮಾಡಿಕೊಂಡಿದ್ದವನ ಕಣ್ಣಿಗೆ ಬೀಳುವ ಭರತನಾಟ್ಯ ವಿದ್ಯಾರ್ಥಿನಿ. ಆಕೆಯ ಮೇಲೆ ಈತನಿಗೆ ಮನಸ್ಸು. ಅದೇ ಹುಡುಗಿಯ ಮೇಲೆ ನೃತ್ಯ ಗುರುವಿನ ಕೆಂಗಣ್ಣು. ತನ್ನ ಹುಡುಗಿಯೊಂದಿಗೆ ಕೆಟ್ಟ ವರ್ತನೆ ತೋರಿದವನಿಗೆ ಈತ ಕರುಣಿಸುವುದು ನರಕದ ದಾರಿ. ಆ ಮೂಲಕ ಈತ ಕೂಡಾ ಅಂಡರ್ ವರ್ಲ್ಡ್ ನ ಭಾಗವಾಗಿ ಹೋಗುತ್ತಾನೆ. ದುನಿಯಾದಲ್ಲಿ ಇವರು ಶಾರ್ಪ್  ಶೂಟರ್ಸ್ ಎಂಬ ಬಿರುದೂ ದಕ್ಕುತ್ತದೆ. ಈ ನಡುವೆ ಮತ್ತೊಬ್ಬ ಕೇಡುಗ ಯಾವುದೋ ತಪ್ಪನ್ನು ಇವರಿಬ್ಬರ ಮೇಲೆ ಹೊರಿಸುತ್ತಾನೆ. ಅದರ ವಿರುದ್ಧ ಸಮರ ಸಾರಿದ ಹೀರೋಗಳಿಬ್ಬರಲ್ಲಿ ಒಬ್ಬನನ್ನು ಎಳೆದೊಯ್ದು ಲಿಂಗಪರಿವರ್ತನೆ ಮಾಡಿಬಿಡುತ್ತಾನೆ. ಹೀಗೆ ಅಮಾಯಕ ಹುಡುಗರನ್ನು ಮಂಗಳಮುಖಿಯರನ್ನಾಗಿಸೋ ಕಸುಬು ಆತನದ್ದು. ಇಷ್ಟೆಲ್ಲಾ ಆದಮೇಲೆ ಪ್ರೀತಿಸಿದ ಹುಡುಗಿಯನ್ನು ಆತ ಹೇಗೆ ತಾನೆ ವರಿಸಲು ಸಾಧ್ಯ? ತನ್ನನ್ನು ಈ ಸ್ಥಿತಿಗೆ ತಂದ ದುಷ್ಟನನ್ನು ತನ್ನ ಸ್ನೇಹಿತನ ಜೊತೆ ಸೇರಿ ಹೇಗೆ  ಮಟ್ಟ ಹಾಕುತ್ತಾನೆ? ಈ ಮಧ್ಯೆ ಸ್ನೇಹಿತರ ನಡುವೆಯೇ ಏರ್ಪಡುವ ತಪ್ಪು ತಿಳಿವಳಿಕೆ ಅನಾಹುತಕ್ಕೆ ಕಾರಣವಾಗುತ್ತಾ? ಇಂಥ ಸಾಕಷ್ಟು ಪ್ರಶ್ನೆಗಳು ಹಂತ ಹಂತವಾಗಿ ಉದ್ಭವಿಸಿ ಕ್ಲೈಮ್ಯಾಕ್ಸಿನಲ್ಲಿ ಊಹಿಸಲು ಅಸಾಧ್ಯವಾದ ಉತ್ತರದೊಂದಿಗೆ ಮುಕ್ತಾಯ ಕಾಣುತ್ತದೆ.

ಇದು ಈ ವಾರ ತೆರೆಕಂಡಿರುವ ಹಫ್ತಾ ಚಿತ್ರದ ಸಣ್ಣ ಸಾರಾಂಶ. ಇವೆಲ್ಲ ಅಲ್ಲದೇ, ಈ ಚಿತ್ರದಲ್ಲಿ ಇನ್ನೂ ಸಾಕಷ್ಟು ಎಲಿಮೆಂಟುಗಳಿವೆ. ನಿರ್ದೇಶಕ ಪ್ರಕಾಶ್ ಹೆಬ್ಬಾಳ್ ಈ ವರೆಗೆ ಯಾರೂ ಹೇಳದ ಕತೆಯನ್ನು ಇಲ್ಲಿ ತೆರೆಗೆ ತಂದಿದ್ದಾರೆ. ವೈಷಮ್ಯವಿದ್ದಲ್ಲಿ ಸ್ಕೆಚ್ಚು ಹಾಕಿ ಫಿನಿಶ್ ಮಾಡೋದು ಮಾಮೂಲಿ ಸಿನಿಮಾಗಳಲ್ಲಿ ಬರುವ ಸಾಮಾನ್ಯ ಅಂಶ. ಆದರಿಲ್ಲಿ ತನ್ನ ವಿರುದ್ಧ ನಿಂತವನ ಲಿಂಗಪರಿವರ್ತನೆ ಮಾಡಿಬಿಡುವ ಹೊಸಾ ರೀತಿಯನ್ನು ಪ್ರಕಾಶ್ ಪರಿಚಯಿಸಿದ್ದಾರೆ!

ಸಿನಿಮಾದ ಬಹುಪಾಲು ಭಾಗ ಕರಾವಳಿಯಲ್ಲೇ ಚಿತ್ರೀಕರಣಗೊಂಡಿದೆ. ಯಾರೂ ತೋರಿಸದ ಜಾಗವನ್ನು ಕಣ್ಣೆದುರು ತಂದಿಟ್ಟಿರುದು ಖುಷಿಯ ವಿಚಾರವಾದರೆ ಅಗತ್ಯಕ್ಕಿಂತಾ ಹೆಚ್ಚು ಬಳಕೆಯಾಗಿರುವ ಡ್ರೋನ್ ಶಾಟ್‍ಗಳು ಕಿರಿಕಿರಿ ಉಂಟುಮಾಡುತ್ತವೆ. ಬಿಲ್ಡಪ್ ಡೈಲಾಗುಗಳಿಗೆ ಕತ್ತರಿ ಹಾಕಿ ಸಹಜ ಮಾತುಗಳನ್ನು ಸಂಭಾಷಣೆಯನ್ನಾಗಿಸಿದ್ದಿದ್ದರೆ ಸಿನಿಮಾ ಮತ್ತಷ್ಟು ಆಪ್ತವೆನಿಸಿಕೊಳ್ಳುತ್ತಿತ್ತು. ಹಾಗೆಯೇ ಚಿತ್ರಕತೆಯನ್ನು ಕೂಡಾ ಗೊಂದಲವಿಲ್ಲದಂತೆ ರೂಪಿಸುವ ಸಾಧ್ಯತೆಯಿತ್ತು. ತಮ್ಮೆಲ್ಲಾ ಟ್ಯಾಲೆಂಟನ್ನು ಒಂದೇ ಗುಕ್ಕಿಗೆ ಪ್ರದರ್ಶನಕ್ಕಿಡುವ ಭರದಲ್ಲಿ ನಿರ್ದೇಶಕ ಪ್ರಕಾಶ್ ಅಲ್ಲಲ್ಲಿ ಸಣ್ಣದಾಗಿ ಎಡವಿದ್ದಾರೆ. ಸಿನಿಮಾದುದ್ದಕ್ಕೂ ಅಷ್ಟೊಂದು ಪ್ರಮಾಣದಲ್ಲಿ ಪಿಸ್ತೂಲಿಗೆ ಕೆಲಸ ಕೊಡಬೇಕಿತ್ತಾ ಅನ್ನೋ ಪ್ರಶ್ನೆಯೂ ಮೂಡುತ್ತದೆ.

ಈ ಸಿನಿಮಾದ ಮೂಲಕ ವರ್ಧನ್ ತೀರ್ಥಹಳ್ಳಿ ಪೂರ್ಣಪ್ರಮಾಣದ ನಾಯಕನಟನಾಗಿ ಹೊರಹೊಮ್ಮಿದ್ದಾರೆ. ಬರೀ ಹೀರೋ ಕ್ಯಾರೆಕ್ಟರಿನಲ್ಲಿ ಮಾತ್ರವಲ್ಲದೆ ಮಂಗಳ ಮುಖಿಯ ಪಾತ್ರದಲ್ಲೂ ವರ್ಧನ್ ಅನುಭವಿಸಿ ನಟಿಸಿದ್ದಾರೆ. ರಾಘವ್ ನಾಗ್ ಕೂಡಾ ಅಚ್ಚುಕಟ್ಟಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ನಾಯಕಿ ಬಿಂಬಶ್ರೀ ರಂಗಭೂಮಿಯ ನಟನೆಗೂ ಸಿನಿಮಾ ನಟನೆಗೂ ವ್ಯತ್ಯಾಸ ತಿಳಿದುಕೊಂಡು ಸ್ವಲ್ಪ ಮುಖ ಸಡಿಸಿಲಿದರೆ ಚೆಂದದ ನಟಿ ಅನ್ನಿಸಿಕೊಳ್ಳುತ್ತಾರೆ. ಇನ್ನು ಬಾಲರಾಜ್ ವಾಡಿಯವರ ನಟನೆಯ ಬಗ್ಗೆ ಕೆಮ್ಮಂಗಿಲ್ಲ. ಒಟ್ಟಾರೆಯಾಗಿ ಇದು ರೌಡಿಸಂ ಅನ್ನು ಹೊಸ ಬಗೆಯಲ್ಲಿ ದಾಖಲಿಸಿರುವ, ಮಾಸ್ ಪ್ರೇಕ್ಷಕರಿಗಾಗೇ ಸೃಷ್ಟಿಸಿರುವ ಸಿನಿಮಾ.

ಇನ್ನಷ್ಟು ಓದಿರಿ

Scroll to Top