ಕಡೆಗೂ ಬರ್ತಾವ್ನೆ ನೋಡಿ ಕೆಂಪೇಗೌಡ!

Picture of Cinibuzz

Cinibuzz

Bureau Report

ಕೆಂಪೇಗೌಡ ಸುದೀಪ್‌ಗೆ ದೊಡ್ಡ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಚಿತ್ರ. ಆ ನಂತರದ ದಿನಗಳಲ್ಲಿ  ಸುದೀಪ್ ಅವರೇ ಕೆಂಪೇಗೌಡ 2 ಚಿತ್ರ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ನಿರ್ಮಾಪಕ ಶಂಕರೇಗೌಡ ತಾವೇ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತು, ಸುದೀಪ್ ಜಾಗಕ್ಕೆ ಕೋಮಲ್‌ರನ್ನು ಕರೆತಂದರು.  ಅಲ್ಲಿಗೆ ಕೋಮಲ್ ಕೆಂಪೇಗೌಡ ಆಗಲು  ತನ್ನೆಲ್ಲಾ  ಎಫರ್ಟ್ ಹಾಕತೊಡಗಿದರು. ಸತತವಾಗಿ ವರ್ಕೌಟ್ ಮಾಡಿ ಇನ್ಸ್ ಪೆಕ್ಟರ್  ಪಾತ್ರಕ್ಕೆ  ಫಿಟ್ ಆದರು. ಹಾಸ್ಯಕಲಾವಿದ ಬರೀ ಕಾಮಿಡಿ ಪಾತ್ರಗಳನ್ನೇ ಮಾಡಿಕೊಂಡು ಹೋಗಬೇಕೇ, ಆತನಲ್ಲೂ  ಒಬ್ಬ ಉತ್ತಮ ಕಲಾವಿದ ಇರಬಹುದಲ್ಲವೇ ಎಂಬ ಮಾತಿಗೆ ಕನ್ನಡ ಚಿತ್ರಂಗದ  ಹಲವಾರು ಹಿರಿಯ ಕಲಾವಿದರು ಕಣ್ಣಮುಂದೆ ಬರುತ್ತಾರೆ. ಈ ಮಾತಿಗೆ ಜಗ್ಗೇಶ್ ಕೂಡ ಹೊರತಾಗಿಲ್ಲ. ಈಗ ಅವರ ಸಹೋದರ ಕೋಮಲ್‌ಕುಮಾರ್ ಸರದಿ. ತನ್ನಲ್ಲೂ ಒಬ್ಬ ಕಲಾವಿದ ಇದ್ದಾನೆ  ಎಂದು ಕನ್ನಡಿಗರು ಗುರ್ತಿಸಬೇಕೆಂದು ಕಳೆದ ಮೂರು ವರ್ಷಗಳಿಂದಲೂ ಎಫರ್ಟ್ ಹಾಕಿದ್ದಾರೆ.  ಶಂಕರೇಗೌಡ ಅವರ ನಿರ್ದೇಶನದ ಕೆಂಪೇಗೌಡ-2 ಚಿತ್ರದಲ್ಲಿ ಒಬ್ಬ ಮಾಸ್ ಪೊಲೀಸ್  ಆಗಿ ಕೋಮಲ್ ಬಹಳ ದಿನಗಳ ನಂತರ ತೆರೆ ಮೇಲೆ ಬರುತ್ತಿದ್ದಾರೆ.

ಈ ಚಿತ್ರದ ಟ್ರೇಲರ್ ಹಾಗೂ  ಆಡಿಯೋ ಬಿಡುಗಡೆ ಸಮಾರಂಭ ಮೊನ್ನೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಪೊಲೀಸ್ ಅಧಿಕಾರಿಗಳಾದ ಸುನೀಲ್‌ ಕುಮಾರ್ ಐಪಿಎಸ್ ಹಾಗೂ ದೇವರಾಜ್ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರದ ಆಡಿಯೋ ಸಿಡಿ ಬಿಡುಗಡೆ  ಮಾಡಿದರು. ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಕೆಂಪೇಗೌಡ  ಈ ವರ್ಷದ ಬಿಗ್ ಬಜೆಟ್ ಚಿತ್ರಗಳಲ್ಲೊಂದು ಎನ್ನಬಹುದು. ಬೆಂಗಳೂರು, ಮೈಸೂರು,  ಬೆಳಗಾಂ, ಹೈದರಾಬಾದ್, ಕೇರಳ, ಕೊಚ್ಚಿನ್ ಸೇರಿ ಮೂರ್ನಾಲ್ಕು ರಾಜ್ಯಗಳಲ್ಲಿ  ಈ ಚಿತ್ರಕ್ಕೆ  ಚಿತ್ರೀಕರಣ ನಡೆಸಲಾಗಿದೆ. ಸಿಕ್ಕಿಂನ ಮಿಲಿಟರಿ ಕ್ಯಾಂಪ್‌ನಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆದಿದೆ. ರಷ್ಯದ ಅಜರ್ ಬೈಜಾನ್ ಹಾಗೂ ಕಾರವಾರದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಿಸಲಾಗಿದೆ. ತೆಲುಗು, ತಮಿಳು, ಹಿಂದಿ ಸೇರಿ ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಡಾ|| ಅಲಿ ಹಾಗೂ  ಕ್ರಿಕೆಟಿಗ ಶ್ರೀಶಾಂತ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂಬೈ ಮೂಲದ   ರಕ್ಷಿಕಾ ಶರ್ಮಾ ಇಲ್ಲಿ  ಕೋಮಲ್‌ಗೆ  ನಾಯಕಿ. ಕನ್ನಡದಲ್ಲಿ  ಅವರಿಗಿದು ಮೊದಲ ಚಿತ್ರ.

ತನ್ನ ಸಹೋದರನ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ನವರಸ ನಾಯಕ ಜಗ್ಗೇಶ್ ಮಾತನಾಡಿ, ಪೋಲೀಸ್ ಗೆಳೆಯರಾದ ಸುನೀಲ್‌ಕುಮಾರ್ ಹಾಗೂ ದೇವರಾಜ್ ಇಬ್ಬರೂ ಈ ಸಮಾರಂಭಕ್ಕೆ ಬಂದದ್ದೇ ಒಂದು ಕಳೆ. ಇದು ಪೋಲೀಸ್ ಕಥೆಯಾದ್ದರಿಂದ ಅವರ ಜಡ್ಜ್‌ಮೆಂಟ್ ತುಂಬಾ ಮುಖ್ಯ. ಹಿಂದೆ ಪೋಲೀಸ್ ಕಥೆಗಳೆಂದರೆ ನಮಗೆ ತೋಚಿದ್ದನ್ನು ಹೇಳಿ ನಂಬಿಸುತ್ತಿದ್ದೆವು. ಆದರೆ ಈಗ ಜನ ತುಂಬಾ ಬುದ್ಧಿವಂತರಾಗಿದ್ದಾರೆ. ಜೊತೆಗೆ  ನಿರ್ದೇಶಕರೂ ಬುದ್ಧಿವಂತರಾಗಿದ್ದಾರೆ.  ಚಿತ್ರದ ಪ್ರತಿ ದೃಶ್ಯವನ್ನು ಅವರು ವಿಮರ್ಶೆ ಮಾಡುತ್ತಾರೆ. ಎಲ್ಲಾ ಪೊಲೀಸರು ಗುಡ್ ಎಂದು ಖುಷಿಯಿಂದ  ಹೇಳುವಂಥ ಸಿನಿಮಾ  ಮಾಡಿದ್ದಾರೆ.  ನಾನು ಹಾನೆಸ್ಟಾಗಿ ಹೇಳುತ್ತೇನೆ. ಇದು ಯಾವುದೇ ಚಿತ್ರದ ರೀಮೇಕ್ ಅಲ್ಲ. ಸ್ಟ್ರೈಟ್ ಚಿತ್ರ. ಈ ಚಿತ್ರಕ್ಕೋಸ್ಕರ ಕೋಮಲ್ 3  ವರ್ಷಗಳನ್ನು ಮೀಸಲಿಟ್ಟು ಕೆಲಸ ಮಾಡಿದ್ದಾನೆ. ಕೋಮಲ್ ಫ್ಯಾಷನ್, ಗೌಡ್ರು ಡೈರೆಕ್ಷನ್  ಈ ಸಿನಿಮಾಗಿದ್ದು,  ನಿರ್ಮಾಪಕರು ತುಂಬಾ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದಾರೆ.  ವಿನೋದ್ ಅವರ ಸಹಕಾರದಿಂದ ಈ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ ಎಂದು ಹೇಳಿದರು.

ನಂತರ  ಕೋಮಲ್ ಮಾತನಾಡುತ್ತ  ಸರ್ಕಲ್ ಇನ್ಸ್‌ಪೆಕ್ಟರ್ ಪಾತ್ರ ಮಾಡಿದ್ದೇನೆ.  ಇದು  ಕೆಂಪೇಗೌಡ 2 ಅಂತ ಬಂದಾಗ ಟೆನ್ಶನ್ ಇತ್ತು.  ಯೋಗಾಸನದ ಮೂಲಕ ನನ್ನ ಇನ್‌ಫಿರಿಯಾರಿಟಿ ಕಡಿಮೆ ಮಾಡಿಕೊಂಡೆ. ನನಗೆ ಒಂದು ರೂಪ ಕೊಡಲು ನಂಜುಂಡ ಬಹಳ ಸಲಹೆ  ನೀಡಿದ್ದರು.  ಭಾರತೀಯ ತೆರೆಯ ಮೇಲೆ ಇದುವರೆಗೆ ಯಾರೂ ಹೇಳಿರದಂಥ ಒಂದು ವಿಷಯವನ್ನು  ಈ ಚಿತ್ರದಲ್ಲಿ ಹೇಳಿದ್ದೇವೆ. ರಾಜ ತಿರುಗಿಬಿದ್ದರೆ ಸೈನಿಕ ಉಳಿಯಲು ಸಾಧ್ಯವಿಲ್ಲ, ಆದರೆ ಒಬ್ಬ ಒಳ್ಳೇ  ಸೈನಿಕ  ರಾಜನನ್ನು ಕೂಡ ತಿದ್ದಬಹುದು  ಎಂದು ಈ ಚಿತ್ರದಲ್ಲಿ  ತೋರಿಸಿದ್ದೇವೆ.  ವರುಣ್ ನನ್ನ ಕಲ್ಪನೆಗೂ ಮೀರಿ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ.  ಅನ್ಬು ಅರಿವು  ಅವರನ್ನು  ಫೈಟ್‌ಗಾಗಿ ನಾವೇ ಮೊದಲು ಕರೆತಂದೆವು. ಆದರೆ ಕೆಜಿಎಫ್ ಮೊದಲು ಬಿಡುಗಡೆಯಾಯಿತು. ಶಂಕರ್ ನಮಗೆ  ತುಂಬಾ ಸಪೋರ್ಟ್ ಮಾಡಿದ್ದಾರೆ. ಕೊನೇ ಹಂತದಲ್ಲಿ  ನಿರ್ಮಾಪಕರಾಗಿ ಬಂದ ವಿನೋದ್ ಕೂಡ  ನಮಗೆ ಎಲ್ಲ  ವ್ಯವಸ್ಥೆಯನ್ನು  ಮಾಡಿಕೊಟ್ಟರು ಎಂದು ಹೇಳಿದರು.

ಲಹರಿ ಮ್ಯೂಸಿಕ್ ಚಿತ್ರದ ಆಡಿಯೋ ಜವಾಬ್ದಾರಿ ಹೊತ್ತಿದ್ದು,  ಲಹರಿ ವೇಲು ಮಾತನಾಡುತ್ತ   ನನ್ನ ತಮ್ಮನ ಸಿನಿಮಾ ಸಪೋರ್ಟ್ ಮಾಡಿ ಎಂದು  ಜಗ್ಗೇಶ್  ಕಾಲ್ ಮಾಡಿದ್ದರು. ನಂತರ ರಿಲೀಸಾದ ಈ  ಚಿತ್ರದ ಟೀಸರ್ ಒಂದು ಮಿಲಯನ್ ದಾಟಿ  ಹೋಯಿತು.  ಇನ್ನು ಚಿತ್ರದಲ್ಲಿ ಮೂರು  ಹಾಡುಗಳಿದ್ದು ಒಂದಕ್ಕಿಂತ ಒಂದು  ಅದ್ಭುತವಾಗಿ ಮೂಡಿ ಬಂದಿವೆ ಎಂದು ಹೇಳಿದರು.  ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಚಿತ್ರದ ಇಂಟ್ರಡಕ್ಷನ್ ಫೈಟ್ ಹಾಗೂ ಕ್ಲೈಮ್ಯಾಕ್ಸ್ ಸೇರಿ  ಎರಡು  ಆಕ್ಷನ್  ಕಂಪೋಜ್ ಮಾಡಿದ್ದಾರೆ.  ಜೊತೆಗೆ  ಪ್ರಮುಖ  ಪಾತ್ರದಲ್ಲೂ   ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top