ಮನ ಕಲಕುವ ಕುಲದಲ್ಲಿ ಕೀಳ್ಯಾವುದೋ!
ದಟ್ಟ ಕಾನನದ ನಡುವಿನ ಸಣ್ಣ ಕೇರಿ ಬಿದರುಬುಂಡೆ. ಸಿರಿ ಸಂಪತ್ತು, ಬಂಗಲೆಗಳ ಕನಸಿಲ್ಲದೆ ಗುಡಿಸಲುಗಳನ್ನೇ ಅರಮನೆ ಅಂದುಕೊಂಡು ಬದುಕೋ ಜನ. ಅವರನ್ನು ಕಾಯಲು ನಿಂತವನು ಊರ ದೇವರು ಹನುಮಂತ. ಅದೊಂದು ದಿನ ಸರ್ಕಾರ ಆ ಆದಿವಾಸಿ ಜೀವಗಳನ್ನು ಒಕ್ಕಲೆಬ್ಬಿಸಿ ಹೊರಕ್ಕೆ ಕಳಿಸುತ್ತದೆ. ಅಲ್ಲಿಂದ ಅವರು ತಮ್ಮ ಬಿಡಾರಗಳನ್ನು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಎತ್ತಂಗಡಿ ಮಾಡಿಕೊಂಡೇ ತಿರುಗುತ್ತಾರೆ. ವಾಸಿಸುವ ಜಾಗದ ಹಕ್ಕುಪತ್ರ ಕೂಡಾ ಇರದ ಈ ಮಂದಿ ಸತ್ತರೆ ಮಣ್ಣುಮಾಡಲು ಸ್ಮಶಾನ ಕೂಡಾ ಇರುವುದಿಲ್ಲ. ಹೊಟ್ಟೆಪಾಡಿಗೆ ಸಾವಿನ ಮನೆಯಲ್ಲಿ ಬ್ಯಾಡ್ ಸೆಟ್ ಬಾರಿಸುವ ಕಸುಬು ಮಾಡುತ್ತಿರುತ್ತಾರೆ.

ಈ ನೆಲದ ಗುಣವೋ, ಆದಿವಾಸಿ ಮಕ್ಕಳ ಹಣೇಬರಹವೋ ಗೊತ್ತಿಲ್ಲ. ಭೂಮಿಗಾಗಿ ಹೋರಾಡಿಯೇ ಇಲ್ಲಿ ಅಗಣಿತ ಜೀವಗಳು ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ನೆಲ-ಜಲದಂಥಾ ಮೂಲಭೂತ ಹಕ್ಕುಗಳನ್ನು ಪಡೆಯುವಲ್ಲಿ ಕಾಡುವಾಸಿಗಳು ಈವತ್ತಿಗೂ ಪ್ರಯಾಸ ಪಡುತ್ತಿದ್ದಾರೆ. ಒಂದು ಕಡೆ ಸರ್ಕಾರದ ಅವೈಜ್ಞಾನಿಕ ನೀತಿಗಳು, ಅರಣ್ಯಾಧಿಕಾರಿಗಳ ದಬ್ಬಾಳಿಕೆ, ಮತ್ತೊಂದೆಡೆ ಭೂಮಾಲೀಕರ ಶೋಷಣೆಯಿಂದ ಕಾಡಂಚಿನ ಜನ ತತ್ತರಿಸಿ ಹೋಗಿದ್ದಾರೆ.
ಇವೆಲ್ಲಾ ವಿಚಾರಗಳನ್ನಿಟ್ಟುಕೊಂಡು ರೂಪುಗೊಂಡಿರುವ ಚಿತ್ರ ಕುಲದಲ್ಲಿ ಕೀಳ್ಯಾವುದೋ.
ಜಾತಿ ವ್ಯವಸ್ಥೆಯ ನೇರ ಚಿತ್ರಣವನ್ನು ಇಲ್ಲಿ ಬಿಡಿಸಿಟ್ಟಿದ್ದಾರೆ. ಮೇಲ್ಜಾತಿಯ ಭೂಮಾಲೀಕನೊಬ್ಬ ಬಡವರನ್ನು ವಂಚಿಸಿ, ಹಿಂಸಿಸುತ್ತಾನೆ. ಅವರ ಬಿಡಾರಗಳಿಗೆ ಬೆಂಕಿ ಇಡಿಸಿ ಅಮಾನುಷವಾಗಿ ಹತ್ಯೆ ಮಾಡಿಸುತ್ತಾನೆ. ಹೇಗಾದರೂ ಮಾಡಿ ತನ್ನವರ ಬದುಕಿಗೆ ಆಶ್ರಯ ಕೊಡಿಸಬೇಕು ಅಂತಾ ಹೋರಾಟ ಮಾಡುವ ಹೀರೋ ಮುತ್ತರಸನಿಗೆ ಸಹಕರಿಸಲು ಜನಸ್ನೇಹಿ ಅಧಿಕಾರಿ ಜೊತೆಯಾಗುತ್ತಾರೆ.
ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ಭೂಮಾಲೀಕ ಕರಾಳ ಷಡ್ಯಂತ್ರ ರೂಪಿಸುತ್ತಾನೆ. ಇದರಿಂದ ಕಥೆಯಲ್ಲಾಗುವ ತಿರುವುಗಳೇನು ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಕುಲದಲ್ಲಿ ಕೀಳ್ಯಾವುದೋ ಚಿತ್ರವನ್ನೊಮ್ಮೆ ನೋಡಬೇಕು.
ವಾಸ್ತವಕ್ಕೆ ಹತ್ತಿರವಾದ ಅನೇಕ ವಿಚಾರಗಳನ್ನಿಟ್ಟು ಕಡೆಯದಾಗಿ ದುಷ್ಟ ಭೂಮಾಲೀಕ ಯಾರು ಎನ್ನುವ ಅಂಶವನ್ನು ಕಲ್ಪಿತ ಸತ್ಯವನ್ನಾಗಿಸಿದ್ದಾರೆ. ನಿಜಕ್ಕೂ ಮೇಲ್ಜಾತಿಯ ವ್ಯಕ್ತಿಯೇ ಇವೆಲ್ಲದಕ್ಕೂ ಕಾರಣ ಅಂತಾ ಹೇಳಲು ಹಿಂಜರಿಕೆಯಾ? ಭಯವಾ? ಅಥವಾ ಇಂಥದ್ದೊಂದು ನಿರ್ಧಾರದ ಹಿಂದೆ ಕೂಡಾ ಮೇಲ್ಜಾತಿಯ ಮನಸ್ಸುಗಳೇ ಕೆಲಸ ಮಾಡಿವೆಯಾ ಗೊತ್ತಿಲ್ಲ! ಒಟ್ಟಿನಲ್ಲಿ ಶರತ್ ಲೋಹಿತಾಶ್ವ ಅವರ ಪಾತ್ರಕ್ಕೆ ಅಂಥದ್ದೊಂದು ಹಿನ್ನೆಲೆಯನ್ನು ಇಡಬಾರದಿತ್ತು. ಅದಕ್ಕೆ ಬದಲಾಗಿ ಆತನನ್ನು ಹುಟ್ಟಾ ಭೂಮಾಲೀಕನಂತೆ ತೋರಿಸಿದ್ದಿದ್ದರೆ ಬಹುಶಃ ಚಿತ್ರಕ್ಕೆ ಇನ್ನಷ್ಟು ಪುಷ್ಟಿ ಸಿಗುತ್ತಿತ್ತು; ನೈಜತೆಗೆ ಹತ್ತಿರವಾಗಿರುವ ಈ ಚಿತ್ರದಲ್ಲಿ ಇತಿಹಾಸವನ್ನು ಇದ್ದಂತೆಯೇ ತೋರಿಸಿದ್ದಿದ್ದರೆ ಹೆಚ್ಚು ಸೂಕ್ತವಾಗಿರುತ್ತಿತ್ತು.
ಇದರ ಹೊರತಾಗಿ ಸಿನಿಮಾ ಈ ನೆಲದ ಘಮಲನ್ನು, ಇಲ್ಲಿ ನಡೆದಿರುವ ಹತ್ಯಾಕಾಂಡಗಳನ್ನು, ಜಮೀನ್ದಾರಿ ಪದ್ಧತಿಯ ವಿಕಾರಗಳನ್ನೆಲ್ಲಾ ಯಥಾವತ್ತಾಗಿ ತೆರೆದಿಟ್ಟಿದೆ. ಸಂಕೀರ್ಣವಾದ ಕಥಾವಸ್ತುವಿನ ಜೊತೆಗೆ ನೂರಾರು ಜನ ಕಲಾವಿದರನ್ನಿಟ್ಟುಕೊಂಡು ಸಿನಿಮಾ ಕಟ್ಟುವುದು ಸುಲಭವಲ್ಲ. ಈ ನಿಟ್ಟಿನಲ್ಲಿ ನಿರ್ದೇಶಕ ರಾಮ್ ನಾರಾಯಣ್ ಅಪಾರ ಶ್ರಮ ವಹಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಛಾಯಾಗ್ರಾಹಕ ಮನು ಕೂಡಾ ಅಷ್ಟೇ ಕಷ್ಟಪಟ್ಟು ದೃಶ್ಯಗಳನ್ನು ಸುಂದರವಾಗಿಸಿದ್ದಾರೆ. ನರಸಿಂಹ ಸಂಯೋಜಿಸಿರುವ ಸಾಹಸದೃಶ್ಯಗಳು ರೋಚಕವಾಗಿವೆ. ಮನೋಮೂರ್ತಿ ಸಂಗೀತದಲ್ಲಿ ವಿಶೇಷತೆಯಿಲ್ಲ. ಹಿನ್ನೆಲೆ ಸಂಗೀತ ಕೂಡಾ ಅಲ್ಲಲ್ಲಿ ಲಯ ಕಳೆದುಕೊಂಡಿದೆ.
ನಾಯಕ ಮಡೇನೂರು ಮನು ನಟನೆಯಲ್ಲಿ ಶ್ರದ್ಧೆಯಿದೆ. ನಾಯಕಿ ಮೌನ ಗುಡ್ಡೆಮನೆ ಕೂಡಾ ಚೆಂದಗೆ ಅಭಿನಯಿಸಿದ್ದಾರೆ. ಇಡೀ ಸಿನಿಮಾದಲ್ಲಿ ಎಲ್ಲರಿಗಿಂತಾ ಹೆಚ್ಚು ಸ್ಕೋರ್ ಮಾಡುವುದು ಪೋಷಕ ಕಲಾವಿದ ಕರಿಸುಬ್ಬು. ಸಿಕ್ಕಿದ್ದೇ ಛಾನ್ಸು ಅಂತಾ ಕರಿಸುಬ್ಬು ಪಾತ್ರವನ್ನು ತಿಂದುಹಾಕಿದ್ದಾರೆ. ತಬಲಾನಾಣಿ ತಮ್ಮ ಮಾಮೂಲಿ ವರಸೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಇಲ್ಲಿ ಬೇರೆ ರೀತಿಯಲ್ಲಿ ಪಾತ್ರಪೋಷಣೆ ಮಾಡಿದ್ದಾರೆ. ರಂಗಭೂಮಿ ನಟ ಮೈಸೂರು ಸುಧೀರ್ ಅವರಿಗೆ ಸ್ಪಷ್ಟವಾಗಿ ಗುರುತಿಸಿಕೊಳ್ಳುವ ಪಾತ್ರವೇ ದಕ್ಕಿದೆ. ಇಸ್ಲಾ ಪಾತ್ರದಲ್ಲಿ ನಟಿಸಿರುವ ಸೀನು ಭಾಯ್ ಎನ್ನುವ ಹೊಸ ನಟನನ್ನು ನಿರ್ದೇಶಕ ರಾಮ್ ನಾರಾಯಣ್ ಅದೆಲ್ಲಿಂದ ಹುಡುಕಿತಂದರೋ ಗೊತ್ತಿಲ್ಲ. ತೆರೆಮೇಲೆ ಈತ ಅಬ್ಬರಿಸಿರುವ ರೀತಿ ನಿಜಕ್ಕೂ ಭಯ ಹುಟ್ಟಿಸುತ್ತದೆ. ಈ ಮೂಲಕ ಕನ್ನಡಕ್ಕೆ ಒಬ್ಬ ಹೊಸ ವಿಲನ್ ಅನ್ನು ಪರಿಚಯಿಸಿದ ಕೀರ್ತಿ ಕೂಡಾ ನಿರ್ದೇಶಕರಿಗೆ ಸಲ್ಲುತ್ತದೆ! ಶರತ್ ಲೋಹಿತಾಶ್ವ ಎಂದಿನಂತೆ ಪಾತ್ರದೊಳಕ್ಕಿಳಿದು ನಟಿಸಿದ್ದಾರೆ. ಯೋಗರಾಜ್ ಭಟ್ ಅವರ ವಿಶೇಷ ಪಾತ್ರ ಕೂಡಾ ಚಿತ್ರಕ್ಕೆ ಪೂರಕವಾಗಿದೆ.
ಖಂಡಿತಾ ಎಲ್ಲರೂ ಒಂದು ಸಲ ನೋಡಬೇಕಾದ ಚಿತ್ರ ಕುಲದಲ್ಲಿ ಕೀಳ್ಯಾವುದೋ.











































