ಸೂಕ್ಷ್ಮ ಸಂವೇದನೆಯ ಚಿತ್ರಗಳಿಂದಲೇ ಗುರುತಿಸಿಕೊಂಡಿರುವ ನಿರ್ದೇಶಕರೊಬ್ಬರು ‘ಮಾಸ್’ ಹಾದಿ ಹಿಡಿದಾಗ ಆಗುವ ಅಚ್ಚರಿಯೇ ಬೇರೆ. ‘ಕುಬೇರ’ ಅಂತಹದ್ದೊಂದು ಪ್ರಯತ್ನ. ಚಿತ್ರ ಅಲ್ಲಲ್ಲಿ ದಾರಿ ತಪ್ಪಿದರೂ, ನಿರ್ದೇಶಕರ ವಿವೇಕ ಮತ್ತು ತಾರಾಗಣದ ಪ್ರಾಮಾಣಿಕ ಅಭಿನಯದಿಂದಾಗಿ ಕೊನೆಯವರೆಗೂ ಗಟ್ಟಿಯಾಗಿ ನಿಲ್ಲುತ್ತದೆ.

ಸೌಮ್ಯ, ಸರಳ ಮತ್ತು ಮನಸ್ಸಿಗೆ ನಾಟುವಂತಹ ಚಿತ್ರಗಳ ಸರದಾರ ಎಂದೇ ಖ್ಯಾತರಾದವರು ನಿರ್ದೇಶಕ ಶೇಖರ್ ಕಮ್ಮುಲ, ‘ಕುಬೇರ’ ಮೂಲಕ ತಮ್ಮ ಎಂದಿನ ಶೈಲಿಯಿಂದ ಹೊರಬಂದು ಒಂದು ಬೃಹತ್ ಕ್ಯಾನ್ವಾಸ್ ಮೇಲೆ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ನಿರ್ಧಾರವೇ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಕುತೂಹಲ ಕೆರಳಿಸಿತ್ತು. ಕಾರ್ಪೊರೇಟ್ ಜಗತ್ತಿನ ಕ್ರೂರ ಅಧಿಕಾರದ ಆಟ, ಹಣದ ಅಹಂಕಾರ ಮತ್ತು ಅದರ ಹಿಂದಿನ ಸಂವೇದನಾರಹಿತ ಜಗತ್ತನ್ನು ಕಮ್ಮುಲ ತಮ್ಮ ಚೌಕಟ್ಟಿನಲ್ಲಿ ಹೇಗೆ ಹಿಡಿದಿಡುತ್ತಾರೆಂಬುದೇ ಎಲ್ಲರ ಮುಂದಿದ್ದ ಪ್ರಶ್ನೆ. ಆದರೆ, ಚಿತ್ರ ವೀಕ್ಷಿಸಿದಾಗ ತಿಳಿಯುವುದೇನೆಂದರೆ, ಕ್ಯಾನ್ವಾಸ್ ದೊಡ್ಡದಾದರೂ ಕಮ್ಮುಲರ ‘ಸಿಗ್ನೇಚರ್’ ಎಲ್ಲೂ ಮಾಸಿಲ್ಲ. ಸಾಮಾನ್ಯ ಜನರ ಸಹಜ ಬದುಕು, ಅವರ ಭಾವನೆಗಳಿಗೆ ಅವರು ಕೊಡುವ ಪ್ರಾಮುಖ್ಯತೆ ಮತ್ತು ಪ್ರೇಕ್ಷಕರ ಬುದ್ಧಿವಂತಿಕೆಯನ್ನು ಗೌರವಿಸುವ ಅವರ ಗುಣ ‘ಕುಬೇರ’ನಲ್ಲೂ ಜೀವಂತವಾಗಿದೆ.
ಬದುಕಿನ ಬೀದಿಯಲ್ಲಿ ಅನಾಥನಾದ ‘ದೇವ’ (ಧನುಷ್) ಎಂಬ ಪಾತ್ರದ ಮೂಲಕ ಕಥೆ ತೆರೆದುಕೊಳ್ಳುತ್ತದೆ. ದೀನ, ಬಹುತೇಕ ಅನಕ್ಷರಸ್ಥ, ಮತ್ತು ಜಗತ್ತಿನ ಕಪಟ ಅರಿಯದ ದೇವ, ವಿಧಿಯಾಟದಿಂದಾಗಿ ಅತಿ ಶ್ರೀಮಂತರ ಜಗತ್ತಿಗೆ ಸೆಳೆಯಲ್ಪಡುತ್ತಾನೆ. ಇಂತಹ ಪಾತ್ರಗಳು ಸಿನಿಮಾಗೆ ಹೊಸತಲ್ಲವಾದರೂ, ಕಮ್ಮುಲ ಇಲ್ಲಿ ಎಂದಿನಂತೆ ಜಾಣ್ಮೆ ಮೆರೆಯುತ್ತಾರೆ. ದೇವನ ಪಾತ್ರವನ್ನು ಹೀರೋಯಿಸಂನ ಅತಿರೇಕಕ್ಕೆ ತಳ್ಳದೆ, ಅವನ ದೌರ್ಬಲ್ಯಗಳೊಂದಿಗೇ ಅವನನ್ನು ಒಬ್ಬ ಅಸಾಮಾನ್ಯ ನಾಯಕನನ್ನಾಗಿ ರೂಪಿಸುತ್ತಾರೆ. ಧನುಷ್ ತಮ್ಮ ಅಳತೆಯುಕ್ತ, ಅದ್ಭುತ ನಟನೆಯಿಂದ ದೇವನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಮತ್ತೊಂದೆಡೆ, ಕಾರ್ಪೊರೇಟ್ ಜಗತ್ತಿನ ಸಮಸ್ಯೆಗಳನ್ನು ಬಗೆಹರಿಸುವ ಉನ್ನತ ಮಟ್ಟದ ಫಿಕ್ಸರ್ ಆಗಿ ನಾಗಾರ್ಜುನ ಮತ್ತು ಜೀವನದ ಸಣ್ಣಪುಟ್ಟ ಜಂಜಾಟಗಳನ್ನು ನಗುವಿನೊಂದಿಗೆ ಎದುರಿಸುವ ಸಾಮಾನ್ಯ ಹುಡುಗಿ ಸಮೀರಾ ಆಗಿ ರಶ್ಮಿಕಾ ಮಂದಣ್ಣ ಕಥೆಗೆ ಮತ್ತಷ್ಟು ಬಲ ತುಂಬುತ್ತಾರೆ. ಪ್ರತಿಯೊಂದು ಪಾತ್ರಕ್ಕೂ ಮಾನವೀಯ ಸ್ಪರ್ಶ ನೀಡಿ, ಪ್ರೇಕ್ಷಕರು ಅವರ ಜಗತ್ತಿನೊಂದಿಗೆ ಭಾವನಾತ್ಮಕವಾಗಿ ಬೆಸೆಯುವಂತೆ ಮಾಡುವುದರಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಮುಂಬೈನ ಸಹಜ ಪರಿಸರ, ಚೈತನ್ಯ ಪಿಂಗಲಿ ಅವರ ಚುರುಕಾದ ಸಂಭಾಷಣೆಗಳು ಚಿತ್ರದ ಆತ್ಮವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.
‘ಪ್ಯಾನ್-ಇಂಡಿಯನ್’ ಚಿತ್ರವೆಂಬ ಹಣೆಪಟ್ಟಿಯೊಂದಿಗೆ, ‘ಕುಬೇರ’ ಎರಡು ದೋಣಿಗಳ ಮೇಲೆ ಪಯಣ ಮಾಡಿದಂತೆ ಭಾಸವಾಗುತ್ತದೆ. ದೇವ ಮತ್ತು ಸಮೀರಾ ನಡುವಿನ ದೃಶ್ಯಗಳಲ್ಲಿ ಕಮ್ಮುಲರ ಎಂದಿನ ಭಾವನಾತ್ಮಕ ಸಾಮ್ಯತೆ ಇದ್ದರೆ, ಮತ್ತೊಂದೆಡೆ ಕಥೆಯ ಗತಿಯನ್ನು ವೇಗಗೊಳಿಸುವ ಪ್ರಯತ್ನ ಕೂಡಾ ನಡೆದಿದೆ. ದೇವಿ ಶ್ರೀ ಪ್ರಸಾದ್ ಅವರ ಹಿನ್ನೆಲೆ ಸಂಗೀತ, ಕಥೆಯ ಭಾವತೀವ್ರತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆಯಾದರೂ, ಕೆಲವೊಮ್ಮೆ ಅದು ಕಿವಿಗೆ ಕರ್ಕಶ ಎನಿಸಿ, ದೃಶ್ಯದ ಸಹಜತೆಯನ್ನು ಮರೆಮಾಚುತ್ತದೆ. ನಿಕೇತ್ ಬೊಮ್ಮಿರೆಡ್ಡಿಯವರ ಛಾಯಾಗ್ರಹಣ ಕಥೆಗೆ ಪೂರಕವಾಗಿದ್ದರೆ, ಕಾರ್ತಿಕ ಶ್ರೀನಿವಾಸ್ ಅವರ ಸಂಕಲನವು ದಟ್ಟವಾದ ಚಿತ್ರಕಥೆಯನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟಿದೆ. ಚಿತ್ರದ ಮೊದಲಾರ್ಧವು ವೇಗವಾಗಿ ಸಾಗಿ, ಕಥೆಯ ಸಂಕೀರ್ಣ ಜಗತ್ತನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಆದರೆ, ಎರಡನೇ ಭಾಗದಲ್ಲಿ ಕಥೆ ಒಂಚೂರು ಹಳಿ ತಪ್ಪುತ್ತದೆ. ಶೋಷಿತರ ಪರವಾದ ಕಾಳಜಿ ಮೆಚ್ಚುವಂತದ್ದೇ ಆದರೂ, ಅದೇ ಅಂಶವನ್ನು ಪದೇ ಪದೇ ಹೇಳುತ್ತಾ ಸಾಗುವುದು ಚಿತ್ರದ ವೇಗಕ್ಕೆ ಕಡಿವಾಣ ಹಾಕುತ್ತದೆ ಮತ್ತು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ.
ಕೆಲವು ಸಣ್ಣಪುಟ್ಟ ಕೊರತೆಗಳನ್ನು ಬದಿಗಿಟ್ಟರೆ, ‘ಕುಬೇರ’ ಇಂದಿನ ಗದ್ದಲದ ಚಿತ್ರಗಳ ನಡುವೆ ಒಂದು ವಿಶಿಷ್ಟವಾದ, ಚಿಂತನಶೀಲ ‘ಮಾಸ್’ ಅನುಭವ ನೀಡುತ್ತದೆ. ಇದು ಕೇವಲ ಒಂದು ಸಿನಿಮಾ ಅಲ್ಲ; ನಮ್ಮ ಸಮಾಜದ ಶಕ್ತಿಶಾಲಿ ವ್ಯವಸ್ಥೆಯತ್ತ ಬೆರಳು ತೋರಿ, ಕೆಲವು ಅಹಿತಕರ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ಪ್ರೇಕ್ಷಕರೆದೆಯಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿ ಸುಮ್ಮನಾಗುವುದು ನಿರ್ದೇಶಕರ ಜಾಣ್ಮೆಯ ಜೊತೆಗೆ ತಂತ್ರವೂ ಆಗಿದೆ.











































